ವೇಗದ ಬದುಕಿನಲ್ಲಿ ಉದ್ಯಮಲೋಕ ಹೊಸತನಗಳನ್ನು ಅಳವಡಿಸಿಕೊಳ್ಳುತ್ತಿದೆ. ಉದ್ಯೋಗ ನೀಡುವ ಸಂಸ್ಥೆಗಳ ನಿರೀಕ್ಷೆಗೆ ತಕ್ಕಂತೆ ವಿದ್ಯಾರ್ಥಿಗಳ ಕೌಶಲವಿದೆಯೇ?. ಬಿ–ಸ್ಕೂಲ್ ಸೇರುವ ಮೊದಲು ಯೋಚಿಸಬೇಕಾದ ಅಂಶಗಳನ್ನು ಪಟ್ಟಿ ಮಾಡಲಾಗಿದೆ.
ಒಂದು ಅತ್ಯುತ್ತಮ ಬಿಸಿನೆಸ್ ಸ್ಕೂಲ್‌ನಲ್ಲಿ (ಬಿ–ಸ್ಕೂಲ್) ಪಿಜಿಡಿಎಂ ಅಥವಾ ಎಂಬಿಎ ಪದವಿ ಪಡೆಯುವುದು ಬಹುತೇಕ ವಿದ್ಯಾರ್ಥಿಗಳ ಕನಸು. ಆದರೆ, ಇಂಥ ಸ್ಕೂಲ್‌ಗಳಲ್ಲಿ ಪ್ರವೇಶ ಪಡೆಯುವುದು ಅಷ್ಟು ಸುಲಭದ ಮಾತಲ್ಲ.ಇಂಥ ಸ್ಕೂಲ್‌ಗಳು ವಿಧಿಸುವ ಶುಲ್ಕ ಬೇರೆ ಸಂಸ್ಥೆಗಳಿಗೆ ಹೋಲಿಸಿದರೆ ತುಸು ದುಬಾರಿ. ಜತೆಗೆ ವಿದ್ಯಾರ್ಥಿಗಳ ಆಯ್ಕೆ ಪ್ರಕ್ರಿಯೆ ಕಠಿಣವಾಗಿರುತ್ತದೆ.
ಆದರೆ, ಬಿ–ಸ್ಕೂಲ್‌ಗಳು ವಿದ್ಯಾರ್ಥಿಗಳ ನಿರೀಕ್ಷೆಗೂ ಮೀರಿದ ಅವಕಾಶಗಳನ್ನು ನೀಡುತ್ತವೆ. ಕಾರ್ಪೋರೇಟ್ ವೃತ್ತಿ ಬದುಕಿಗೆ ಅಗತ್ಯವಿರುವ ಪಟ್ಟುಗಳನ್ನು ಕಲಿಸುವುದಲ್ಲದೇ ಉತ್ತಮ ನಾಯಕರನ್ನಾಗಿ ರೂಪಿಸುವಲ್ಲಿ ಯಶಸ್ವಿಯಾಗುತ್ತವೆ. ಹಾಗಾಗಿ ಬಿ–ಸ್ಕೂಲ್‌ಗಳನ್ನು ಆಯ್ಕೆ ಮಾಡುವಾಗ ಕೆಳಕಂಡ ಮಾನದಂಡಗಳನ್ನು ಅನುಸರಿಸಿ.
ರ್‍ಯಾಂಕಿಂಗ್: ಉನ್ನತ ಶ್ರೇಣಿಯ ಬಿ-ಸ್ಕೂಲ್‌ಗಳು ವಿಶ್ವ ದರ್ಜೆಯ ಗುಣಮಟ್ಟದ ಬೋಧನೆ ನೀಡುತ್ತವೆ. ಹಾಗಾಗಿ ಅರ್ಹ ಮೂಲಗಳಿಂದ ಬಿ–ಸ್ಕೂಲ್‌ಗಳ ರ್‍ಯಾಂಕಿಂಗ್‌ಗಳನ್ನು ಖಚಿತಪಡಿಸಿಕೊಳ್ಳಿ.
ಮಾನ್ಯತೆ: ಬಿ-ಸ್ಕೂಲ್ ಸರ್ಕಾರದಿಂದ ಮಾನ್ಯತೆ ಪಡೆದಿದೆಯೇ ಪರೀಕ್ಷಿಸಿ. ಮಾನ್ಯತೆ ಪಡೆದ ಬಿ–ಸ್ಕೂಲ್ ವಿದ್ಯಾರ್ಥಿಗಳಿಗೆ ಮಾತ್ರ ಉದ್ಯೋಗ ನೀಡಲು ಸಂಸ್ಥೆಗಳು ಮುಂದಾಗುತ್ತವೆ. ಹಾಗಾಗಿ ಬಿ–ಸ್ಕೂಲ್ ಎಎಸಿಎಸ್‌ಬಿ (AACSB) ಎ.ಎಂ.ಬಿ.ಎ, (AMBA)) ಇಕ್ವಿಸ್ ((EQUIS), ಎನ್‌ಬಿಎ (NBA)ಏಜೆನ್ಸಿಗಳಿಂದ ಮಾನ್ಯತೆ ಪಡೆದಿದೆಯೇ ಎಂದು ಅರಿತುಕೊಳ್ಳಿ.
ಪಠ್ಯಕ್ರಮ: ವಿಸ್ತರಣೆಯಾಗುತ್ತಿರುವ ಉದ್ಯಮಗಳ ಬೇಡಿಕೆಗಳನ್ನು ಪೂರೈಸುವಷ್ಟು ಬಿ–ಸ್ಕೂಲ್‌ನ ಪಠ್ಯ ಕ್ರಮಬದ್ಧವಾಗಿದೆಯೇ? ಎಂದು ಪರೀಕ್ಷಿಸಿಕೊಳ್ಳಿ. ಕೌಶಲ ಹಾಗೂ ಕ್ರಿಯಾತ್ಮಕವಾಗಿರುವುದನ್ನು ಕಲಿಸುವ ಜತೆಗೆ ಹೊಸ ತಂತ್ರಜ್ಞಾನಗಳ ಬಳಕೆ ಸಾಧ್ಯತೆಯನ್ನು ಹೇಳುವ ಪಠ್ಯಕ್ರಮವಿದ್ದರೆ ಒಳ್ಳೆಯದು.
ನಿರಂತರ ಸಂಪರ್ಕ: ಅತ್ಯುತ್ತಮ ಬಿ–ಸ್ಕೂಲ್‌ಗಳು ವಿದ್ಯಾರ್ಥಿಗಳು ಉದ್ಯಮಗಳ ಜತೆ ನಿರಂತರ ಸಂಪರ್ಕದಲ್ಲಿರುವಂತೆ ಪ್ರೇರೇಪಿಸುತ್ತವೆ. ಇದಕ್ಕೆ ಪೂರಕವಾದ ವಾತಾವರಣವನ್ನು ಸೃಷ್ಟಿಸುತ್ತವೆ. ಇದರಿಂದ ಉದ್ಯಮಗಳ ಬಗ್ಗೆ ಅಳವಾದ ಪ್ರಾಯೋಗಿಕ ಜ್ಞಾನ ಬೆಳೆಯುತ್ತದೆ. ಕೈಗಾರಿಕೆಗಳು ಹೇಗೆ ವ್ಯವಹಾರ ನಡೆಸುತ್ತವೆ? ಎಂಥ ಸವಾಲುಗಳನ್ನು ಎದುರಿಸುತ್ತಿವೆ? ಎಂಬುದರ ಕುರಿತ ವಿಚಾರಸಂಕಿರಣಗಳನ್ನು ಬಿ–ಸ್ಕೂಲ್‌ಗಳು ಆಯೋಜಿಸುತ್ತಿವೆಯೇ? ಎಂಬುದನ್ನು ಖಾತ್ರಿಪಡಿಸಿಕೊಳ್ಳಿ.
ಬೋಧಕ ವರ್ಗ: ಎಷ್ಟು ಮಂದಿ ಬೋಧಕರಿದ್ದಾರೆ. ಅದರಲ್ಲಿಯೂ ಕಾಯಂ ಬೋಧಕರೆಷ್ಟು? ಬೋಧಕರೆಲ್ಲ ನಿರಂತರ ಸಂಶೋಧನೆಯಲ್ಲಿ ತೊಡಗಿಕೊಂಡಿದ್ದಾರ ಎಂಬುದನ್ನು ಅರಿತುಕೊಳ್ಳಿ. ಬೋಧಕರ ಸಮಗ್ರ ಮಾಹಿತಿಯನ್ನು ಬಿ–ಸ್ಕೂಲ್ ವೆಬ್‌ಸೈಟ್‌ಗೆ ಭೇಟಿ ಕೊಟ್ಟು ಸಂಗ್ರಹಿಸಿ. ಪ್ರಾಯೋಗಿಕ ಆಧಾರಿತ ಕೇಸ್‌ಸ್ಟಡಿಗಳ ಮೂಲಕ ಬೋಧನಾ ಅಭ್ಯಾಸಗಳು ಚಾಲ್ತಿಯಲ್ಲಿವೆಯೇ ಎಂಬುದನ್ನು ಅರ್ಥಮಾಡಿಕೊಳ್ಳಿ.
ನೇಮಕಾತಿ: ಕೋರ್ಸ್ ಪೂರ್ಣಗೊಳಿಸಿದ ನಂತರ ಉದ್ಯೋಗ ದೊರಕುವ ಖಾತ್ರಿಯಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಿ. ಬಿ–ಸ್ಕೂಲ್‌ಗಳಿಗೆ ಯಾವ ಕಂಪನಿಗಳು ನೇಮಕಾತಿಗಾಗಿ ಭೇಟಿ ನೀಡಿದ್ದವು, ಈ ಮುಂಚೆ ಎಷ್ಟು ವಿದ್ಯಾರ್ಥಿಗಳು ನೇಮಕವಾಗಿದ್ದರು, ಎಂಥ ಹುದ್ದೆಗಳಿಗೆ ಆಯ್ಕೆಯಾಗಿದ್ದಾರೆ. ಕಂಪನಿಗಳು ನೀಡುವ ವೇತನ, ಇತರೆ ಸೌಲಭ್ಯಗಳ ಬಗ್ಗೆ ಸ್ಪಷ್ಟ ಮಾಹಿತಿ ಇರಲಿ. ವಿದ್ಯಾರ್ಥಿಗಳ ನಿಯೋಜನೆಗೆ ಪೂರ್ಣಾವಧಿಯ ‘ಪ್ಲೇಸ್‌ಮೆಂಟ್’ ಅಧಿಕಾರಿ ಇದ್ದಾರೆಯೇ ಎಂಬುದನ್ನು ತಿಳಿದುಕೊಳ್ಳಿ.
ಗೊಂದಲಬೇಡ: ದೊಡ್ಡ ನಗರಗಳಲ್ಲಿರುವ ಸಂಸ್ಥೆಗಳು ಮಾತ್ರ ಗುಣಮಟ್ಟದ ಶಿಕ್ಷಣ ಹಾಗೂ ಉದ್ಯೋಗಾವಕಾಶ ನೀಡುತ್ತದೆ ಎಂದು ತಿಳಿಯಬೇಡಿ. ಕೆಲವು ಅತ್ಯುತ್ತಮ ಬಿ–ಸ್ಕೂಲ್‌ಗಳು ತಾಲ್ಲೂಕು ಪ್ರದೇಶಗಳಲ್ಲಿಯೂ ಇವೆ.
ಗ್ರಂಥಾಲಯ: ಪುಸ್ತಕ ಹಾಗೂ ದಿನಪತ್ರಿಕೆಗಳು ಸಂವಹನವನ್ನು ಸಶಕ್ತಗೊಳಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಜ್ಞಾನವನ್ನು ಹೆಚ್ಚಿಸುವುದಲ್ಲದೇ, ಅದನ್ನು ಸರಿಯಾದ ರೀತಿಯಲ್ಲಿ ಬಳಕೆ ಮಾಡಿಕೊಳ್ಳಲು ಇವುಗಳ ಅವಶ್ಯಕತೆ ಇವೆ. ಹಾಗಾಗಿ ಗ್ರಂಥಾಲಯದಲ್ಲಿ ಹಣಕಾಸು, ಮಾರ್ಕೆಟಿಂಗ್, ಮಾನವ ಸಂಪನ್ಮೂಲ, ಅನಾಲಿಟಿಕ್ಸ್, ಆಪರೇಷನ್ ಸಿಸ್ಟಮ್ಸ್ ಸೇರಿ ಎಂಥ ಪುಸ್ತಕಗಳಿವೆ, ಎಷ್ಟು ನಿಯತಕಾಲಿಕೆಗಳಿವೆ ಎಂಬುದರ ಕಡೆ ಗಮನವಿರಲಿ. ಡಿಜಿಟಲ್ ಪುಸ್ತಕಗಳು ಲಭ್ಯವಿರುವುದನ್ನು ಖಚಿತಪಡಿಸಿಕೊಳ್ಳಿ. ನಿತ್ಯ ಪತ್ರಿಕೆಗಳನ್ನು ಓದಿಯೇ ಪರೀಕ್ಷೆಗೆ ತಯಾರು ಮಾಡುವ ಕೋರ್ಸ್ಅನ್ನು ಪಠ್ಯಕ್ರಮದ ಭಾಗವಾಗಿ ಇರಿಸಿದೆಯೇ ಎಂದು ಪರಿಶೀಲಿಸಿ.
ಭಾಷಾ ಪ್ರಯೋಗಾಲಯ: ಕೋರ್ಸ್‌ನ ಅವಧಿಯಲ್ಲಿ ನಂತರ ಉತ್ತಮ ಉದ್ಯೋಗ ಪಡೆಯಲು ಸಂವಹನ ಕಲೆ ಮಹತ್ತರ ಪಾತ್ರ ವಹಿಸುತ್ತದೆ. ವಿದ್ಯಾರ್ಥಿಗಳ ಸಂವಹನ ಕಲೆಯನ್ನು ನಿರಂತರವಾಗಿ ತೀಡುವಲ್ಲಿ ನುರಿತ ಭಾಷಾತಜ್ಞರಿರುವ ಪ್ರತ್ಯೇಕ ಭಾಷಾ ಪ್ರಯೋಗಾಲಯವನ್ನು ಬಿ–ಸ್ಕೂಲ್ ರೂಪಿಸಿದೆಯೇ ಎಂಬುದನ್ನು ಖಾತರಿಪಡಿಸಿಕೊಳ್ಳಿ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.