ವರ್ಷಗಳ ನಂತರ ಶಾಲೆಗೆ ಮರಳುವ ಕಾತರ, ಸ್ನೇಹಿತರೊಟ್ಟಿಗೆ ಹರಟುವ ಆಸೆಯ ಜೊತೆ ಹೊಸತೊಂದು ಹುರುಪಿನಲ್ಲಿ ಬೆಳಗ್ಗೆ ಶಾಲೆಗೆ ಹೋದ ಸುಮಂತ್ ಮುಖ ಸಂಜೆ ಮನೆಗೆ ವಾಪಸ್ಸಾದಾಗ ಬಾಡಿತ್ತು. ಅಮ್ಮನಿಗೂ ಆಶ್ಚರ್ಯ! ಅರೆ, ಅಷ್ಟು ಖುಷಿಯಾಗಿ ಹೋದ ಮಗ ಈಗ ಯಾಕೆ ಹೀಗಿದ್ದಾನೆ ಏನಾಯಿತೊ ಎನ್ನುವ ತಳಮಳ. ಆದರೂ ಬಂದ ತಕ್ಷಣ ಕೇಳುವುದು ಸರಿಯಲ್ಲವೆಂದು ರಾತ್ರಿ ಊಟವಾದ ಬಳಿಕ ಪಕ್ಕದಲ್ಲಿ ಕೂರಿಸಿ ತಲೆ ಸವರುತ್ತಾ ಮಾತು ಪ್ರಾರಂಭಿಸಿದಳು. ‘ಸುಮಂತ್ ಶಾಲೆ ಇವತ್ತು ಹೇಗಿತ್ತು? ಸ್ನೇಹಿತರನ್ನೆಲ್ಲ ಭೇಟಿಯಾದೆಯಾ?’ ಎಂಬ ಪ್ರಶ್ನೆಗಳಿಗೆ ಸುಮಂತ್‌ನಿಂದ ಬಂದ ಉತ್ತರ ಅಷ್ಟಕ್ಕಷ್ಟೆ. ಒಂದಿಷ್ಟು ಸಮಯದ ನಂತರ ತಾನಾಗಿಯೇ ‘ಅಮ್ಮಾ, ಇವತ್ತು ಶಾಲೆಯಲ್ಲಿ ಟೀಚರ್ ಕೇಳಿದ ಸುಲಭದ ಪ್ರಶ್ನೆಗೆ ಉತ್ತರ ಕೊಡೋಕೆ ಆಗ್ಲಿಲ್ಲ, ಹಾಗಾಗಿ ಎಲ್ಲರ ಮುಂದೆ ನನ್ನನ್ನು ವರ್ಸ್ಟ್ ಫೆಲೋ, ಲಾಕ್‌ಡೌನ್‌ನಲ್ಲಿ ಕುದುರೆ ಹೋಗಿ ಕತ್ತೆಯಾದ ಹಾಗಾಯಿತು ಎಂದುಬಿಟ್ಟರು.’ ಅಂದವನೆ ಜೋರಾಗಿ ಅಳಲಾರಂಭಿಸಿದ.
ಸದ್ಯದ ಪರಿಸ್ಥಿತಿಯಲ್ಲಿ ಈ ಸಮಸ್ಯೆ ಸುಮಂತ್‌ನಂತಹ ಒಂದು ಮಗುವಿನದ್ದಲ್ಲ. ಕೊರೊನಾ ರಜೆ ಮುಗಿಸಿ ಶಾಲೆಗೆ ಮರಳಿರುವ ಸಾವಿರಾರು ವಿದ್ಯಾರ್ಥಿಗಳದ್ದು. ಹೌದು, ಸಾಕಷ್ಟು ಗೊಂದಲ, ಆತಂಕದ ಮತ್ತು ಕಾತರದ ನಡುವೆಯೇ ಶಾಲೆಗಳು ಪುನಃ ಆರಂಭಗೊಂಡಿವೆ. ನಿರೀಕ್ಷೆಯಂತೆಯೇ ಎಲ್ಲವೂ ನಡೆದರೆ ಒಳ್ಳೆಯದೆ. ಆದರೆ ಶಾಲೆ ಮತ್ತೆ ಪ್ರಾರಂಭವಾಗಿರುವ ಸಮಾಧಾನದ ನಡುವೆಯೇ ಒಂದಿಷ್ಟು ವಿಚಾರಗಳಲ್ಲಿ ಪೋಷಕರು ಮತ್ತು ಶಿಕ್ಷಕರು ಗಮನ ಹರಿಸುವ ಅವಶ್ಯಕತೆ ಇದೆ. ಶುಚಿತ್ವ, ಸಾಮಾಜಿಕ ಅಂತರ ಕಾಪಾಡಿಕೊಳ್ಳುವ ಹಾಗೂ ಸರಿಯಾದ ರೀತಿಯಲ್ಲಿ ಮಾಸ್ಕ್ ಧರಿಸುವ ವಿಚಾರಗಳಿಗೆ ಎಷ್ಟು ಮಹತ್ವವನ್ನು ಕೊಡುತ್ತಿದ್ದೇವೆಯೋ ಹಾಗೆಯೇ ಮಗುವಿನ ಮಾನಸಿಕ ಸ್ಥಿಮಿತದ ಬಗ್ಗೆಯೂ ಗಮನ ಹರಿಸುವುದು ಒಳಿತು. ಈ ನಿಟ್ಟಿನಲ್ಲಿ ಪೋಷಕರ ಹಾಗೂ ಶಿಕ್ಷಕರ ಪಾತ್ರ ಬಹಳ ಪ್ರಮುಖವಾದದ್ದು.
ಒಂದೇ ಅಳತೆಯ ಶೂ ಎಲ್ಲರ ಕಾಲಿಗೂ ಆಗುವುದುಂಟೇ? ಹಾಗೆಯೇ ಎಲ್ಲ ಮಕ್ಕಳ ಮನಸ್ಥಿತಿಯೂ ಒಂದೇ ಸಮನಾಗಿರುವುದಿಲ್ಲ. ಒಂದೊಂದು ಮಗುವಿನ ಮನಸ್ಥಿತಿ ಮತ್ತು ಪರಿಸ್ಥಿತಿಯನ್ನು ನಿಭಾಯಿಸುವ ಕೌಶಲಗಳು ಬೇರೆ ಬೇರೆಯಾಗಿರುತ್ತವೆ. ಅದನ್ನು ಅರಿತು ಮಕ್ಕಳೊಟ್ಟಿಗೆ ವರ್ತಿಸುವುದು ಒಳ್ಳೆಯದು. ನಿಧಾನವಿರುವ ಮಕ್ಕಳಿಗೆ ಹೆಚ್ಚು ಸಮಯ ನೀಡಿ, ಉತ್ತೇಜಿಸಿ.
ವರ್ಷದಿಂದ ಇರುವ ಪರಿಸ್ಥಿತಿ ಬೇರೆಯದ್ದೇ ಆಗಿರುವುದರಿಂದ ಮಕ್ಕಳಲ್ಲಿ ಭಾವನಾತ್ಮಕವಾಗಿಯೂ ಸಾಕಷ್ಟು ಬದಲಾವಣೆಗಳಾಗಿರುತ್ತವೆ. ಮೊದಲು ಅದನ್ನು ಗುರುತಿಸಿ, ನಂತರ ಅದಕ್ಕೆ ತಕ್ಕಂತೆ ವರ್ತಿಸಿ.
ಆನ್‌ಲೈನ್ ತರಗತಿಗಳು ಎಷ್ಟೇ ಪರಿಣಾಮಾತ್ಮಕವಾಗಿ ಇದ್ದರೂ ಮಕ್ಕಳನ್ನು ಆಫ್‌ಲೈನ್ ತರಗತಿಗಳಂತೆ ತಲುಪಲು ಸಾಧ್ಯವಿಲ್ಲ. ಕಲಿತದ್ದು ಸ್ವಲ್ಪವಾದರೆ, ಮರೆತದ್ದು ಬಹುಪಾಲು. ಸಾಕಷ್ಟು ಮಕ್ಕಳು ಮೂಲಭೂತ ವಿಚಾರಗಳನ್ನೆ ಮರೆತಿರುತ್ತಾರೆ. ಹಾಗಾಗಿ ಪುನರಾವರ್ತನೆ ಮಾಡಿ ಪಕ್ವವಾದ ನಂತರ ಮುಂದಿನ ಕಲಿಕೆಗೆ ಹೋಗುವುದು ಒಳ್ಳೆಯದು.
‘ಲಾಕ್‌ಡೌನ್‌ಗಿಂತ ಮುಂಚೆ ಚೂಟಿ ಇದ್ದ ನೀನು ಮನೆಯಲ್ಲೆ ಇದ್ದು ಸೋಮಾರಿಯಾಗಿದ್ದೀಯಾ’ ಎಂದು ಬೈಯುವುದು ಸಾಮಾನ್ಯ. ಇದಕ್ಕೆ ಕಾರಣ ಏಕಾಗ್ರತೆ. ಕಲಿಕಾ ವಿಧಾನದಲ್ಲಿ ಆದ ಬದಲಾವಣೆ, ಅದರ ಪ್ರಭಾವ ಏಕಾಗ್ರತೆಯ ಮೇಲೂ ಬೀರಿರುತ್ತದೆ. ಹಾಗಾಗಿ ಮೊದಲಿದ್ದ ಏಕಾಗ್ರತೆಯನ್ನು ತಕ್ಷಣ ಆಪೇಕ್ಷಿಸುವುದು ಸರಿಯಲ್ಲ. ಒಂದಿಷ್ಟು ಕಾಲಾವಕಾಶ ಬೇಕು.
ವಿದ್ಯಾರ್ಥಿಗಳ ಹಾಗೂ ಶಿಕ್ಷಕರ ನಡುವಿನ ಬಾಂಧವ್ಯ ಮತ್ತು ಸಂಬಂಧದ ಕೊಂಡಿ ಕೊರೊನಾ ಕಾರಣದಿಂದ ಕೊಂಚ ಸಡಿಲಗೊಂಡಿದೆ. ಅದನ್ನು ಪುನಃ ಜೋಡಿಸುವ ಕೆಲಸವೂ ಆಗಬೇಕಿದೆ. ಉತ್ತಮ ಬಾಂಧವ್ಯ ಏರ್ಪಾಟಾಗದ ಹೊರತು ಕಲಿಕೆ ಅಪೂರ್ಣ.
ಇಷ್ಟು ದಿನದ ಅಂತರದಲ್ಲಿ ಸಾಕಷ್ಟು ಮಕ್ಕಳು ಎಲ್ಲವನ್ನೂ ಮರೆತಿದ್ದಾರೆ, ಅದನ್ನೂ ಕಲಿಸಬೇಕು, ಸಿಲಬಸ್ ಕೂಡ ಮುಗಿಸಬೇಕು ಎನ್ನುವ ಧಾವಂತ ಶಿಕ್ಷಕರಲ್ಲಿ ಬೇಡ. ಮೊದಲು ಮಕ್ಕಳು ಶಾಲೆಗೆ ಹೊಂದಿಕೊಳ್ಳಲಿ ನಂತರ ಕಲಿಕೆ ಪ್ರಾರಂಭವಾಗಲಿ. ಇದು ನಿಮ್ಮ ಒಬ್ಬರದ್ದಲ್ಲ, ಎಲ್ಲ ಶಿಕ್ಷಕರ ವಿದ್ಯಾರ್ಥಿಗಳ ಸಮಸ್ಯೆಯೂ ಆಗಿರುವುದರಿಂದ ತಾಳ್ಮೆ ಇರಲಿ.
ಏನೂ ಕಲಿತಿಲ್ಲ ಎಂದು ದೂರುವುದನ್ನು ಪೋಷಕರೂ ಬಿಡಬೇಕು. ಕಲಿಕೆಯ ಪ್ರಮಾಣದಲ್ಲಿ ಕುಂಠಿತವಾಗಿರಬಹುದು ಅಷ್ಟೆ ಅದರೆ ಅಪೂರ್ಣವಲ್ಲ. ಶಾಲೆಯಲ್ಲಿ ಶಿಕ್ಷಕರು ವಹಿಸುವ ಪಾತ್ರವನ್ನು ಮನೆಯಲ್ಲಿ ಪೋಷಕರು ವಹಿಸಬೇಕು.
ಶಾಲೆಗೆ ಕೊರೊನಾ ಬಗೆಗಿನ ಗೊಂದಲ, ಮುಂಜಾಗ್ರತಾ ಕ್ರಮಗಳು ಹೀಗೆ ಸಾಕಷ್ಟು ವಿಚಾರಗಳನ್ನು ತಲೆಯಲ್ಲಿ ಹೊತ್ತು ಬರುವ ಮಕ್ಕಳು ಕಲಿಕೆಯಲ್ಲಿ ಗಮನ ಕೇಂದ್ರೀಕರಿಸಲು ಸ್ವಲ್ಪ ಕಷ್ಟವಾಗುತ್ತದೆ. ಹಾಗಾಗಿ ವೈರಸ್ ಬಗ್ಗೆ ಮಕ್ಕಳಲ್ಲಿ ಭಯ ತುಂಬುವುದು ಬೇಡ. ಹಾಗಂತ ನಿರ್ಲಕ್ಷ್ಯ ಮಾಡಬಾರದು, ಜಾಗೃತಿಯಿದ್ದರೆ ಸಾಕು.
ಸಂಗೀತ, ಚಿತ್ರಕಲೆ, ನೃತ್ಯ, ನಾಟಕ ಹಾಗೂ ಆಟೋಟಗಳನ್ನು ಮಾಡಿಸುವ ಮುಖಾಂತರವೂ ಮಕ್ಕಳನ್ನು ಮುಕ್ತವಾಗಿ ಮಾತಾಡಲು ಮತ್ತು ಬೆರೆಯಲು ಅವಕಾಶ ನೀಡಬಹುದು.
ಈಗಿನ ಪರಿಸ್ಥಿತಿಯನ್ನೂ ಒಂದು ಸವಾಲಾಗಿ ಸ್ವೀಕರಿಸಿ ಅದನ್ನು ಗೆದ್ದು ಬರುವ ಅನಿವಾರ್ಯ ಶಿಕ್ಷಕರು ಮತ್ತು ಪೋಷಕರು ಇಬ್ಬರಲ್ಲಿಯೂ ಇದೆ. ಮಕ್ಕಳ ಭವಿಷ್ಯದ ದೃಷ್ಠಿಯಿಂದ ಇದು ಅವಶ್ಯಕ ಕೂಡ.
***
ಶುರುವಿನ ಒಂದೆರಡು ತರಗತಿಗಳನ್ನು ಮಕ್ಕಳಿಗಾಗೆ ಮೀಸಲಿಡಿ. ಅವರ ಅನಿಸಿಕೆ, ಅಭಿಪ್ರಾಯ ಮತ್ತು ಅನುಮಾನಗಳನ್ನು ಹಂಚಿಕೊಳ್ಳಲು ಹೇಳಿ. ಇದರಿಂದ ಅವರ ಮನಸ್ಸಿನ ಗೊಂದಲಗಳು ದೂರವಾಗುತ್ತವೆ ಮತ್ತು ಎಲ್ಲರೊಟ್ಟಿಗೆ ಮುಕ್ತವಾಗಿ ಬೆರೆಯಲು ಅವಕಾಶ ಕೊಟ್ಟಂತಾಗುತ್ತದೆ. ಮಾತನಾಡಲು ಸಾಧ್ಯವಾಗದಿದ್ದರೆ, ಒಂದು ಚೀಟಿಯಲ್ಲಿ ಬರೆದು ಮೊದಲೆ ಇಟ್ಟ ಬಾಕ್ಸ್‌ನಲ್ಲಿ ಹಾಕುವಂತೆಯೂ ಸೂಚಿಸಬಹುದು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.