ರಾಜ್ಯದ ಶಾಲಾ ಶಿಕ್ಷಣದಲ್ಲಿ ವಿಜ್ಞಾನ ಮತ್ತು ಗಣಿತ ವಿಷಯಗಳ ಬೋಧನಾ ಗುಣಮಟ್ಟ ಹೆಚ್ಚಿಸಲು ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರ (ಜಿಪಿಟಿ) ಹುದ್ದೆಗಳಿಗೆ ಎಂಜಿನಿಯರಿಂಗ್ ಪದವೀಧರರಿಗೂ ಅವಕಾಶ ಕಲ್ಪಿಸಿದರೆ, ಅದು ರಾಜ್ಯದಲ್ಲಿರುವ ಬಿ.ಇಡಿ ಮತ್ತು ಡಿ.ಇಡಿ ಕಾಲೇಜುಗಳಿಗೆ ವರವಾಗಿ ಪರಿಣಮಿಸಲಿದೆ.
ವಿದ್ಯಾರ್ಥಿಗಳ ಕೊರತೆಯಿಂದ ರಾಜ್ಯದಲ್ಲಿ ಹಲವು ಬಿ.ಇಡಿ ಮತ್ತು ಡಿ.ಇಡಿ ಕಾಲೇಜುಗಳು ಸಂಕಷ್ಟಕ್ಕೆ ಸಿಲುಕಿವೆ. ಕೆಲವು ಮುಚ್ಚಿವೆ, ಇನ್ನೂ ಕೆಲವು ಮುಚ್ಚುವ ಹಂತದಲ್ಲಿವೆ. ಸರ್ಕಾರದ ಈ ಹೆಜ್ಜೆಯಿಂದ ಇವುಗಳಿಗೆ ಜೀವದಾನ ದೊರೆಯಬಹುದು.
ತಾಂತ್ರಿಕ ಶಿಕ್ಷಣ ಇಲಾಖೆಯ ಮಾಹಿತಿ ಪ್ರಕಾರ ರಾಜ್ಯದಲ್ಲಿ ಪ್ರತಿ ವರ್ಷ ಸುಮಾರು 65 ಸಾವಿರ ಎಂಜಿನಿಯರಿಂಗ್ ಪದವೀಧರರು ಸೃಷ್ಟಿಯಾಗುತ್ತಿದ್ದಾರೆ. ಕೆಲವರು ನಿರುದ್ಯೋಗಿಗಳಾಗಿದ್ದರೆ, ಇನ್ನೂ ಕೆಲವರು ಕಡಿಮೆ ವೇತನಕ್ಕೆ ಪರ್ಯಾಯ ಕೆಲಸಗಳಲ್ಲಿ ದುಡಿಯುತ್ತಿದ್ದಾರೆ. ಬಿ.ಇ ಪದವೀಧರರಿಗೆ ಶಿಕ್ಷಕರಾಗಲು ಸರ್ಕಾರ ಅವಕಾಶ ಕಲ್ಪಿಸಿದರೆ ಅವರಿಗೆ ಪರ್ಯಾಯ ಉದ್ಯೋಗಾವಕಾಶದ ಬಾಗಿಲು ತೆರೆದಂತಾಗುತ್ತದೆ.
ಎಂಜಿನಿಯರಿಂಗ್ ಪದವೀಧರರು ಶಿಕ್ಷಕರಾಗಲು ಸದ್ಯಕ್ಕೆ ಎರಡು ವರ್ಷಗಳ ಬಿ.ಇಡಿ ಅಥವಾ ಡಿ.ಇಡಿ ಕೋರ್ಸ್ ಮಾಡಿಕೊಳ್ಳಬೇಕು. ಇದರಿಂದ ಸಹಜವಾಗಿಯೇ ಈ ಕಾಲೇಜುಗಳಲ್ಲಿ ಪ್ರವೇಶ ಹೆಚ್ಚುತ್ತದೆ. ಮುಚ್ಚುವ ಭೀತಿಯಲ್ಲಿರುವ ಕಾಲೇಜುಗಳ ಸ್ಥಿತಿಗತಿ ಬದಲಾಗುತ್ತದೆ ಎನ್ನುತ್ತಾರೆ ಬಿ.ಇಡಿ ಕಾಲೇಜುಗಳ ಪ್ರಾಂಶುಪಾಲರು.
ಕಾಲೇಜುಗಳ ಏರಿಳಿತ: ರಾಜ್ಯದಲ್ಲಿ 2001ರಲ್ಲಿ 68 ಬಿ.ಇಡಿ ಕಾಲೇಜುಗಳಿದ್ದವು. ಅದರ ಸಂಖ್ಯೆ 2012ರ ವೇಳೆಗೆ 417ಕ್ಕೆ ಏರಿತ್ತು. ವಿದ್ಯಾರ್ಥಿಗಳ ಕೊರತೆಯಿಂದ ಈಗ ಅವುಗಳ ಸಂಖ್ಯೆ 372ಕ್ಕೆ ಇಳಿದಿದೆ. 10 ತಿಂಗಳಿದ್ದ ಬಿ.ಇಡಿ ಕೋರ್ಸ್ ಅವಧಿಯನ್ನು 2 ವರ್ಷಕ್ಕೆ ಏರಿಸಿದ್ದರಿಂದ ದಾಖಲಾತಿಯಲ್ಲಿ ಕುಸಿತವಾಯಿತು ಎಂದು ಹೇಳುತ್ತಾರೆ ಅಲ್ ಅಮೀನ್ ಶಿಕ್ಷಕ ಕಾಲೇಜಿನ ಪ್ರಾಂಶುಪಾಲರೂ ಆಗಿರುವ ಕರ್ನಾಟಕ ಅನುದಾನಿತ ಬಿ.ಇಡಿ ಕಾಲೇಜುಗಳ ಶಿಕ್ಷಕರ ಸಂಘದ ಅಧ್ಯಕ್ಷ ಡಾ. ಕೆ. ರಮೇಶ್.
ರಾಜ್ಯದಲ್ಲಿ ಕೆಲ ಪ್ರತಿಷ್ಠಿತ ಕಾಲೇಜುಗಳನ್ನು ಹೊರತುಪಡಿಸಿ, ಬಹುತೇಕ ಕಾಲೇಜುಗಳಲ್ಲಿ ಸರ್ಕಾರಿ ಕೋಟಾದ (ಅಂದಾಜು 30 ಸಾವಿರದಲ್ಲಿ) ಶೇ 50ರಷ್ಟು ಸೀಟುಗಳೂ ಭರ್ತಿಯಾಗುತ್ತಿಲ್ಲ. ಇನ್ನು ಮ್ಯಾನೇಜ್‌ಮೆಂಟ್ ಕೋಟಾದ ಸೀಟುಗಳ ಬಗ್ಗೆ ಹೇಳುವಂತೆಯೇ ಇಲ್ಲ. ಹೀಗಿರುವಾಗ ಎಂಜಿನಿಯರಿಂಗ್ ಪದವೀಧರರು ಬಿ.ಇಡಿ ಪ್ರವೇಶಿಸಿದರೆ ಈ ಕಾಲೇಜುಗಳಿಗೆ ಹೆಚ್ಚಿನ ಅನುಕೂಲವಾಗುತ್ತದೆ ಎಂಬುದು ಅವರ ಪ್ರತಿಪಾದನೆ.
ಮೊದಲು ಬಿ.ಎ ಮತ್ತು ಬಿ.ಎಸ್ಸಿ ಪದವೀಧರರಿಗೆ ಮಾತ್ರ ಬಿ.ಇಡಿ ಮಾಡಲು ಅವಕಾಶವಿತ್ತು. 2015ರಿಂದ ಬಿ.ಕಾಂ, ಬಿ.ಬಿ.ಎಂ, ಬಿ.ಟೆಕ್, ಬಿ.ಇ, ಎಂ.ಬಿ.ಬಿ.ಎಸ್ ಪದವೀಧರರಿಗೂ ಅವಕಾಶ ಕಲ್ಪಿಸಲಾಗಿದೆ. ರಾಜ್ಯದಲ್ಲಿ ಈಗಾಗಲೇ ಕೆಲ ಬಿ.ಇ ಪದವೀಧರರು ಬಿ.ಇಡಿ ಪೂರೈಸಿ, ಖಾಸಗಿ ಶಾಲೆಗಳಲ್ಲಿ ಶಿಕ್ಷಕ ವೃತ್ತಿ ಕೈಗೊಂಡಿದ್ದಾರೆ ಎನ್ನುತ್ತಾರೆ ಬೆಂಗಳೂರಿನ ವಿವೇಕಾನಂದ ಬಿ.ಇಡಿ ಕಾಲೇಜಿನ ಪ್ರಾಂಶುಪಾಲ ಶ್ರೀನಿವಾಸಮೂರ್ತಿ.
ಬಿ.ಇಡಿ ಕೋರ್ಸ್‌ಗೆ ಮೊದಲಿನಿಂದಲೂ ಬೇಡಿಕೆ ಇದೆ. ಮೊದಲು ಪ್ರೌಢಶಾಲಾ ಶಿಕ್ಷಕರಾಗಲು ಬಿ.ಇಡಿ ಪದವಿ ಪಡೆಯಬೇಕಿತ್ತು. ಆದರೆ ಈಗ ಪಿ.ಯು ಕಾಲೇಜಿನ ಉಪನ್ಯಾಸಕರಾಗಲೂ ಬಿ.ಇಡಿ ಕಡ್ಡಾಯವಾಗಿದೆ. ಅಲ್ಲದೆ 6ರಿಂದ 8ನೇ ತರಗತಿಯ ಶಿಕ್ಷಕರಾಗಲು ಬಿ.ಇಡಿ ಅಥವಾ ಡಿ.ಇಡಿ ಓದಿರಬೇಕು. ಸೇವಾ ಬಡ್ತಿಗೂ ಬಿ.ಇಡಿ ಉಪಯುಕ್ತ. ಹಾಗಾಗಿ ಹೆಚ್ಚಿನ ವಿದ್ಯಾರ್ಥಿಗಳು ಬಿ.ಇಡಿ ಕೋರ್ಸ್‌ಗೆ ಒಲವು ತೋರುತ್ತಾರೆ ಎನ್ನುತ್ತಾರೆ ತುಮಕೂರಿನ ಶಿಕ್ಷಕ ತರಬೇತಿ ಕಾಲೇಜಿನ ಉಪನ್ಯಾಸಕರೊಬ್ಬರು.
ಎಂಜಿನಿಯರಿಂಗ್ ಕಾಲೇಜುಗಳಿಗೂ ಅನುಕೂಲ: ಸರ್ಕಾರದ ಈ ನಿರ್ಧಾರ ಖಾಸಗಿ ಎಂಜಿನಿಯರಿಂಗ್ ಕಾಲೇಜುಗಳಿಗೂ ವರದಾನವಾಗಲಿದೆ. ಪಿ.ಯು (ವಿಜ್ಞಾನ) ನಂತರ ವಿದ್ಯಾರ್ಥಿಗಳು ಬಿ.ಎಸ್ಸಿ ಬದಲಿಗೆ ಎಂಜಿನಿಯರಿಂಗ್‌ನತ್ತಲೇ ಹೆಚ್ಚು ಒಲವು ತೋರಬಹುದು. ಈಗಾಗಲೇ ವಿದ್ಯಾರ್ಥಿಗಳ ಕೊರತೆ ಎದುರಿಸುತ್ತಿರುವ ಬಿ.ಎಸ್ಸಿ ಕೋರ್ಸ್ ಇನ್ನಷ್ಟು ಆಕರ್ಷಣೆ ಕಳೆದುಕೊಳ್ಳಬಹುದು ಎನ್ನುತ್ತಾರೆ ಸರ್ಕಾರಿ ಪದವಿ ಕಾಲೇಜೊಂದರ ವಿಜ್ಞಾನ ಬೋಧಕರು.
**
ಬರುತ್ತಿದೆ ಇಂಟಿಗ್ರೇಟೆಡ್ ಬಿ.ಇಡಿ ಕೋರ್ಸ್
ರಾಷ್ಟ್ರೀಯ ಶಿಕ್ಷಕರ ತರಬೇತಿ ಪರಿಷತ್ (ಎನ್‌ಸಿಟಿಇ) ನಾಲ್ಕು ವರ್ಷಗಳ ಇಂಟಿಗ್ರೇಟೆಡ್ ಬಿ.ಇಡಿ ಕೋರ್ಸ್‌ಗಳನ್ನು ಆರಂಭಿಸುವಂತೆ ಬಿ.ಇಡಿ ಕಾಲೇಜುಗಳಿಗೆ ನಿರ್ದೇಶಿಸಿದೆ. ಈಗಾಗಲೇ ರಾಜ್ಯದಲ್ಲಿ ಎರಡು ಕಾಲೇಜುಗಳಲ್ಲಿ ಈ ಕೋರ್ಸ್ ಜಾರಿಗೆ ಬಂದಿದೆ. ಕ್ರಮೇಣ ಇತರ ಕಾಲೇಜುಗಳಲ್ಲಿ ಬರಲಿದೆ. ಹೊಸ ಶಿಕ್ಷಣ ನೀತಿಯ ಪ್ರಕಾರ 4 ವರ್ಷದ ಇಂಟಿಗ್ರೇಟೆಡ್ ಬಿ.ಇಡಿ ಕೋರ್ಸ್ ಮಾಡಿದವರು ಮಾತ್ರ 2030ರಿಂದ ಶಿಕ್ಷಕರಾಗಲು ಅರ್ಹರಾಗುತ್ತಾರೆ. ಹಾಗಾಗಿ ಎಂಜಿನಿಯರಿಂಗ್ ಪದವೀಧರರಿಗೆ ದೀರ್ಘ ಕಾಲದವರೆಗೂ ಬಿ.ಇಡಿ ಮಾಡಲು ಮುಕ್ತ ಅವಕಾಶ ದೊರೆಯುವುದಿಲ್ಲ ಎಂದು ಕರ್ನಾಟಕ ಅನುದಾನಿತ ಬಿ.ಇಡಿ ಕಾಲೇಜುಗಳ ಶಿಕ್ಷಕರ ಸಂಘದ ಅಧ್ಯಕ್ಷ ಡಾ. ಕೆ. ರಮೇಶ್ ವಿಶ್ಲೇಷಿಸುತ್ತಾರೆ.
**
ಖಾಸಗಿ ಶಾಲೆಗೂ ಅನುಕೂಲ
ಇಂಗ್ಲಿಷ್ ಮಾಧ್ಯಮದಲ್ಲಿ ಪರಿಣಾಮಕಾರಿಯಾಗಿ ಬೋಧಿಸುವ ಶಿಕ್ಷಕರ ಕೊರತೆಯನ್ನು ಖಾಸಗಿ ಶಾಲೆಗಳು ಎದುರಿಸುತ್ತಿವೆ. ಎಂಜಿನಿಯರಿಂಗ್ ಪದವೀಧರರು ಬಿ.ಇಡಿ ಪಡೆದು ಶಿಕ್ಷಕ ವೃತ್ತಿಗೆ ಬಂದರೆ ಖಾಸಗಿ ಶಾಲೆಗಳಿಗೆ ಹೆಚ್ಚಿನ ಅನುಕೂಲವಾಗುತ್ತದೆ. ನಮ್ಮ ವಿದ್ಯಾರ್ಥಿಗಳಿಗೆ ಇನ್ನಷ್ಟು ಗುಣಾತ್ಮಕ ಶಿಕ್ಷಣ ದೊರೆಯುತ್ತದೆ ಎಂದು ಕರ್ನಾಟಕ ಖಾಸಗಿ ಇಂಗ್ಲಿಷ್ ಮಾಧ್ಯಮ ಶಾಲೆಗಳ ಆಡಳಿತ ಮಂಡಳಿಗಳ ಒಕ್ಕೂಟದ (ಕಾಮ್ಸ್) ಪ್ರಧಾನ ಕಾರ್ಯದರ್ಶಿ ಡಿ.ಶಶಿಕುಮಾರ್ ಹೇಳುತ್ತಾರೆ.
***
ಪ್ರತಿಕ್ರಿಯೆಗಳು
ಸರ್ಕಾರದ ತೀರ್ಮಾನಕ್ಕೆ ನಮ್ಮ ಅಭ್ಯಂತರವಿಲ್ಲ. ಪದವಿಗಳೆಲ್ಲ ಸಮಾನ. ಆದರೆ ಅದಕ್ಕೆ ಪೂರಕವಾಗಿ ಬಿ.ಇಡಿ ಮುಖಾಂತರ ಶಿಕ್ಷಕರು ತರಬೇತಿಯನ್ನು ಹೊಂದುವುದು ಅಷ್ಟೇ ಮುಖ್ಯ. ಪಿ.ಯು ಕಾಲೇಜು ಉಪನ್ಯಾಸಕರಿಗೂ ಈ ತರಬೇತಿ ಕಡ್ಡಾಯಗೊಳಿಸಲಾಗಿದೆ. ಈ ತರಬೇತಿಯಿಂದಷ್ಟೇ ಬೋಧನಾ ಕೌಶಲ ಸಿಗಲು ಸಾಧ್ಯ. ಎಂಜಿನಿಯರಿಂಗ್‌ನಂಥ ಪದವಿ ಪಡೆದರೂ ಈ ಕೌಶಲ ಮುಖ್ಯ. ಜೊತೆಗೆ ಟಿಇಟಿ ಪರೀಕ್ಷೆಯನ್ನೂ ಸ್ವಲ್ಪ ಸರಳಗೊಳಿಸಿದರೆ, ಮತ್ತಷ್ಟು ಪದವೀಧರರು ಶಿಕ್ಷಕ ವೃತ್ತಿಗೆ ಸೇರುವುದು ಸಾಧ್ಯವಾಗಲಿದೆ.
–ಎಚ್.ಕೆ.ಮಂಜುನಾಥ್, ಅಧ್ಯಕ್ಷ, ಕರ್ನಾಟಕ ರಾಜ್ಯ ಪ್ರೌಢಶಾಲಾ ಸಹಶಿಕ್ಷಕರ ಸಂಘ
*
ಕರ್ನಾಟಕದಲ್ಲಿ ಪ್ರತಿ ವರ್ಷ ಸಹಸ್ರಾರು ವಿದ್ಯಾರ್ಥಿಗಳು ಎಂಜಿನಿಯರಿಂಗ್ ಪದವಿ ಪಡೆಯುತ್ತಾರೆ. ಅವರಲ್ಲಿ ಹಲವರಿಗೆ ಉದ್ಯೋಗ ಸಿಗುವುದಿಲ್ಲ. ಈ ಹೊಸ ನಿಯಮ ಇವರಿಗೆ ಇನ್ನೊಂದು ಅವಕಾಶದ ಬಾಗಿಲು ತೆರೆದಿದೆ. ಎಂಜಿನಿಯರಿಂಗ್ ಪದವಿ ಅಂದರೆ ವಿಜ್ಞಾನ ಮತ್ತು ಗಣಿತದ ಪ್ರಾಯೋಗಿಕ ಅಧ್ಯಯನ. ಇದರಿಂದ ಶಾಲಾ ಪಠ್ಯಕ್ರಮವನ್ನು ಪರಿಣಾಮಕಾರಿ ಆಗಿ ವಿದ್ಯಾರ್ಥಿಗೆ ತಲುಪಿಸುವಲ್ಲಿ ಇವರು ಯಶಸ್ವಿ ಆಗುತ್ತಾರೆ.
–ಶ್ಯಾಮ ತೇಜಸ್ವಿ, ಕಂಪ್ಯೂಟರ್ ಸೈನ್ಸ್ ಪದವೀಧರ, ವಿವೇಕಾನಂದ ಎಂಜಿನಿಯರಿಂಗ್ ಕಾಲೇಜು, ಪುತ್ತೂರು
*
ಎಂಜಿನಿಯರಿಂಗ್ ಪದವೀಧರರು ಶಿಕ್ಷಕ ವೃತ್ತಿ ಆರಿಸಿದರೆ ಅಧ್ಯಯನ ವಿಷಯಗಳನ್ನು ಮಕ್ಕಳಿಗೆಪ್ರಾಯೋಗಿಕವಾಗಿ ಹೇಳಿಕೊಡಲು ಸಾಧ್ಯ. ಆದರೆ ಬಹುತೇಕರು ಈ ವೃತ್ತಿಯನ್ನು ಆರಿಸಿಕೊಳ್ಳುವುದು ಅನುಮಾನ. ನಿರುದ್ಯೋಗ ಸಮಸ್ಯೆ ಕಾಡಿದಾಗ, ಕೆಲಸವೊಂದಿದ್ದರೆ ಸಾಕು ಎನ್ನುವವರು ಆರಿಸಿಕೊಳ್ಳುವ ಸಾಧ್ಯತೆಯೇ ಹೆಚ್ಚು.
–ಶ್ಯಮಂತ್ ಆರ್.ಎಚ್, ಆರ್.ವಿ. ಎಂಜಿನಿಯರಿಂಗ್ ಕಾಲೇಜು, ಎಲೆಕ್ಟ್ರಾನಿಕ್ಸ್ ಆ್ಯಂಡ್ ಕಮ್ಯುನಿಕೇಷನ್ಸ್ ವಿದ್ಯಾರ್ಥಿ
*
ಇಂದಿನ ಯುಗದಲ್ಲಿ, ತಂತ್ರಜ್ಞಾನವನ್ನು ಶಿಕ್ಷಣದೊಂದಿಗೆ ಬೆರೆಸಿ ಶಿಕ್ಷಣ ಕ್ಷೇತ್ರವನ್ನು ಬಹಳ ಎತ್ತರಕ್ಕೆ ಕೊಂಡೊಯ್ಯಲು ಎಂಜಿನಿಯರಿಂಗ್ ಪದವೀಧರರಿಗೆ ಖಂಡಿತವಾಗಿಯೂ ಸಾಧ್ಯವಿದೆ. ಎಂಜಿನಿಯರಿಂಗ್ ಪದವೀಧರರಿಗೆ ಇನ್ನಷ್ಟು ಕ್ಷೇತ್ರಗಳಲ್ಲಿ ಉದ್ಯೋಗ ಆಯ್ಕೆಗೆ ಅವಕಾಶ ಲಭಿಸಿದಂತಾಗುತ್ತದೆ.
–ಕೇಶವ ಪ್ರಸಾದ್ ಸುರುಡೇಲು, ಎಲೆಕ್ಟ್ರಾನಿಕ್ಸ್ ಆ್ಯಂಡ್ ಕಮ್ಯುನಿಕೇಷನ್ಸ್ ಪದವೀಧರ
*
ಇದು ಒಳ್ಳೆಯ ನಿರ್ಧಾರ. ಆದರೆ ಇದನ್ನು ಕಾರ್ಯರೂಪಕ್ಕೆ ತರುವಾಗ ಎಂಜಿನಿಯರಿಂಗ್ ಪದವೀಧರರಿಗೆ ಶಿಕ್ಷಕ ತರಬೇತಿ ಅವಶ್ಯಕ. ಏಕೆಂದರೆ ವಿದ್ಯಾರ್ಥಿ ಹಾಗೂ ಶಿಕ್ಷಕರ ನಡುವಿನ ಪರಿಣಾಮಕಾರಿ ಸಂವಹನಕ್ಕೆ ಇದು ಅತ್ಯಗತ್ಯ.
–ಪ್ರಜ್ವಲ್ ಹೆಗಡೆ, ಬಿಎಂಎಸ್ ಎಂಜಿನಿಯರಿಂಗ್ ಕಾಲೇಜು
*
ಎಂಜಿನಿಯರಿಂಗ್ ಪದವೀಧರರಿಗೆ ಅಥವಾ ಪ್ರಸ್ತುತ ಎಂಜಿನಿಯರಿಂಗ್ ಅಧ್ಯಯನ ನಡೆಸುತ್ತಿರುವ ಕೆಲ ವಿದ್ಯಾರ್ಥಿಗಳಿಗೆ ಶಿಕ್ಷಕರಾಗುವ ಕನಸಿದ್ದಿರಬಹುದು. ಶಿಕ್ಷಕ ವೃತ್ತಿಗೆ ಹೋಗಲು ಮನಸ್ಸಿರುವ ಪದವೀಧರರಿಗೆ ಸರ್ಕಾರವು ಅವಕಾಶ ನೀಡಿದಂತಾಗಿದೆ. ಇದು ಅತ್ಯುತ್ತಮ ನಿರ್ಧಾರ.
–ವಿಂಧ್ಯಾ ಕೆ., ಕೆಎಲ್‌ಇ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ಹುಬ್ಬಳ್ಳಿ
ಅಭಿಪ್ರಾಯ ಸಂಗ್ರಹ: ಅಭಿಲಾಷ್ .ಪಿ.ಎಸ್.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.