ಬೆಂಗಳೂರು: ರಾಜ್ಯದ ಅನುದಾನಿತ ಪದವಿ ಪೂರ್ವ ಕಾಲೇಜುಗಳಲ್ಲಿ 2008ರ ನಂತರ ನೇಮಕಗೊಂಡ 2500ಕ್ಕೂ ಹೆಚ್ಚು ಉಪನ್ಯಾಸಕರಿಗೆ ಬಿ.ಇಡಿ ಕೋರ್ಸ್ ಮಾಡಿಕೊಳ್ಳಬೇಕಾದ ಅನಿವಾರ್ಯತೆ ಎದುರಾಗಿದ್ದು, ಅವರನ್ನು ಚಿಂತೆಗೀಡು ಮಾಡಿದೆ.
ಕರ್ತವ್ಯ ನಿರ್ವಹಿಸುವಾಗ ಪೂರಕ ಅವಕಾಶಗಳು ದೊರೆಯದ ಕಾರಣ ಬಿ.ಇಡಿ ಕೋರ್ಸ್ ಮಾಡಿಕೊಳ್ಳಲು ಅವರಿಗೆ ಇಲ್ಲಿಯವರೆಗೆ ಸಾಧ್ಯವಾಗಿಲ್ಲ. ಇವರಲ್ಲಿ ಸಹಸ್ರಾರು ಉಪನ್ಯಾಸಕರು ಸೇವೆಗೆ ಸೇರಿ 10 ವರ್ಷಗಳು ಮೀರಿವೆ. ಸತತ 10 ವರ್ಷಗಳವರೆಗೆ ಒಂದೇ ಹುದ್ದೆಯಲ್ಲಿ ಸೇವೆ ಸಲ್ಲಿಸಿದವರಿಗೆ ಸರ್ಕಾರದ ನಿಯಮದ ಪ್ರಕಾರ ದೊರೆಯಬೇಕಾದ ‘ಟೈಮ್ ಬಾಂಡ್ ಇನ್‌ಕ್ರಿಮೆಂಟ್’ ಕೂಡ ಅವರಿಗೆ ದೊರೆತಿಲ್ಲ.
ಬಿ.ಇಡಿ ಕೋರ್ಸ್ ಪೂರ್ಣಗೊಳಿಸಿಕೊಂಡಿಲ್ಲದ ಕಾರಣ ‘ಟೈಮ್ ಬಾಂಡ್ ಇನ್‌ಕ್ರಿಮೆಂಟ್’ ನೀಡಲು ಸಾಧ್ಯವಿಲ್ಲ ಎಂದು ಸರ್ಕಾರ ಅವರ ಕಡತಗಳನ್ನು ಹಿಂದಕ್ಕೆ ಕಳಿಸಿದೆ. ಅಲ್ಲದೆ ಭವಿಷ್ಯದಲ್ಲಿ ವಾರ್ಷಿಕ ವೇತನ ಬಡ್ತಿ ಮತ್ತು ಇತರ ಸೇವಾ ಬಡ್ತಿಗಳಿಗೂ ತೊಂದರೆ ಆಗುವ ಸಾಧ್ಯತೆಗಳಿವೆ. ಹೀಗಾಗಿ ದಿಕ್ಕು ತೋಚದಂತಾಗಿರುವ ಈ ಉಪನ್ಯಾಸಕರು ಪರ್ಯಾಯ ವ್ಯವಸ್ಥೆ ಕಲ್ಪಿಸಿ, ಸಮಸ್ಯೆ ಬಗೆಹರಿಸುವಂತೆ ಸರ್ಕಾರವನ್ನು ಕೋರಿದ್ದಾರೆ.
ಅನುದಾನಿತ ಕಾಲೇಜುಗಳಲ್ಲಿ 1996, 1998, 2000, 2006ರಲ್ಲಿ ನೇಮಕಗೊಂಡಿದ್ದ ಹಲವು ಉಪನ್ಯಾಸಕರ ಹುದ್ದೆಗಳು ಸರ್ಕಾರದಿಂದ 2008ರಲ್ಲಿ ಅನುದಾನಕ್ಕೆ ಒಳಪಟ್ಟಿದ್ದರೆ ಇನ್ನೂ ಕೆಲವರದ್ದು 2012ರಲ್ಲಿ ಅನುದಾನಕ್ಕೆ ಒಳಪಟ್ಟಿವೆ. ಅಂದರೆ 15, 20 ಮತ್ತು 25 ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಈ ಉಪನ್ಯಾಸಕರೂ ಬಿ.ಇಡಿ ಕೋರ್ಸ್ ಮಾಡಿಕೊಳ್ಳಬೇಕಾದ ಅನಿವಾರ್ಯತೆ ಬಂದೆರಗಿದೆ. ಇಲ್ಲದಿದ್ದರೆ ಅವರಿಗೂ ಬಡ್ತಿ ವಿಷಯದಲ್ಲಿ ತೊಡಕುಗಳು ಎದುರಾಗಬಹುದು ಎಂಬ ಆತಂಕ ಆವರಿಸಿದೆ.
ಏನೀ ಸಮಸ್ಯೆ
ರಾಜ್ಯದಲ್ಲಿ 2007ಕ್ಕೂ ಮುನ್ನ ಸರ್ಕಾರಿ ಮತ್ತು ಅನುದಾನಿತ ಪಿ.ಯು ಕಾಲೇಜುಗಳಲ್ಲಿ ಎಂ.ಎ ಪದವೀಧರರಿಗೆ ಉಪನ್ಯಾಸಕರಾಗಲು ಅವಕಾಶ ಇತ್ತು. ರಾಜ್ಯ ಸರ್ಕಾರ ಪದವಿ ಪೂರ್ವ ಕಾಲೇಜುಗಳ ಉಪನ್ಯಾಸಕರ ವೃಂದ ಮತ್ತು ನೇಮಕಾತಿ ನಿಯಮಾವಳಿಗೆ 2007–08ನೇ ಸಾಲಿನಲ್ಲಿ ತಿದ್ದುಪಡಿ ತಂದು, ಎಂ.ಎ ಜತೆಗೆ ಬಿ.ಇಡಿ ಕೋರ್ಸ್ ಕಡ್ಡಾಯ ಮಾಡಿತು.
ಆದರೆ, ಈ ತಿದ್ದುಪಡಿ ನಿಯಮ ಜಾರಿಗೂ ಕೆಲ ತಿಂಗಳ ಮುನ್ನ ಸರ್ಕಾರಿ ಪಿ.ಯು ಕಾಲೇಜಿನ ಉಪನ್ಯಾಸಕರ ನೇಮಕಾತಿಗೆ ಹಳೆ ನಿಯಮದ ಪ್ರಕಾರ ಅಧಿಸೂಚನೆ ಪ್ರಕಟವಾಗಿತ್ತು. ಹೊಸ ನಿಯಮವೂ ಆ ಕೂಡಲೇ ಜಾರಿಯಾದ್ದರಿಂದ ಪರಿಷ್ಕೃತ ಅಧಿಸೂಚನೆ ಹೊರಡಿಸಿದ ಸರ್ಕಾರವು, ಉಪನ್ಯಾಸಕರಾಗಿ ನೇಮಕಗೊಂಡ ನಾಲ್ಕು ವರ್ಷಗಳಲ್ಲಿ ಬಿ.ಇಡಿ ಪೂರ್ಣಗೊಳಿಸಿಕೊಳ್ಳಬೇಕು ಎಂಬ ಷರತ್ತನ್ನು ಅಭ್ಯರ್ಥಿಗಳಿಗೆ ವಿಧಿಸಿತು. ಅದಕ್ಕಾಗಿ ವೇತನ ಸಹಿತ ರಜೆಯನ್ನೂ ಮಂಜೂರು ಮಾಡಿತು. ಆ ಸಮಯದಲ್ಲಿ ಬಿ.ಇಡಿ ಕೋರ್ಸ್‌ನ ಕಾಲಾವಧಿ 10 ತಿಂಗಳದ್ದಾಗಿತ್ತು.
ಸರ್ಕಾರಿ ಪಿ.ಯು ಕಾಲೇಜಿಗೆ ಉಪನ್ಯಾಸಕರಾಗಿ ನೇಮಕಗೊಂಡಿದ್ದವರ ಪೈಕಿ ಬಿ.ಇಡಿ ಆಗಿಲ್ಲದ ಸುಮಾರು 1350 ಉಪನ್ಯಾಸಕರಿಗೆ 10 ತಿಂಗಳ ವೇತನ ಸಹಿತ ರಜೆ ಅವಧಿಯಲ್ಲಿ ಬಿ.ಇಡಿ ಪೂರ್ಣಗೊಳಿಸಿಕೊಳ್ಳುವ ಅವಕಾಶ ದೊರೆಯಿತು. ನಂತರ 2013–14ನೇ ಸಾಲಿನ ನೇಮಕಾತಿಯಲ್ಲಿ ಸರ್ಕಾರಿ ಪಿ.ಯು ಕಾಲೇಜುಗಳಿಗೆ ನೇಮಕಾತಿಗೊಂಡ ಉಪನ್ಯಾಸಕರಿಗೂ ಬಿ.ಇಡಿ ಕೋರ್ಸ್ ಮಾಡಿಕೊಳ್ಳಲು ಅವಕಾಶ ನೀಡಿದ ಸರ್ಕಾರ, ವೇತನ ಸಹಿತ ರಜೆ ಕೊಡುವುದಿಲ್ಲ ಎಂದು ಹೇಳಿತು.
ಈ ವೇಳೆಗಾಗಲೇ ಬಿ.ಇಡಿ ಕೋರ್ಸ್ ಅವಧಿ ಎರಡು ವರ್ಷಗಳದ್ದಾಗಿ ಪರಿವರ್ತನೆಯಾಗಿತ್ತು. ಕೊನೆಗೆ ಅಭ್ಯರ್ಥಿಗಳ ಒತ್ತಡಕ್ಕೆ ಮಣಿದ ಸರ್ಕಾರ ಎರಡು ವರ್ಷಗಳವರೆಗೆ ಶೈಕ್ಷಣಿಕ ಕಲಿಕಾ ರಜೆ ನೀಡಿ ಈ ಅವಧಿಯಲ್ಲಿ ಶಿಷ್ಯವೇತನವಾಗಿ ತಿಂಗಳಿಗೆ ತಲಾ ₹24,000 ಮಂಜೂರು ಮಾಡಿತು. ಆಗ ನೇಮಕಗೊಂಡಿದ್ದ ಬಿ.ಇಡಿ ಆಗದ 740 ಉಪನ್ಯಾಸಕರು ಇದರ ಲಾಭ ಪಡೆದುಕೊಂಡರು.
ನಂತರ ಎಚ್ಚೆತ್ತುಕೊಂಡ ಸರ್ಕಾರ 2015ರಲ್ಲಿ ಹೊರಡಿಸಿದ ಮತ್ತೊಂದು ನೇಮಕಾತಿ ಅಧಿಸೂಚನೆಯಲ್ಲಿ ಸ್ಪಷ್ಟವಾಗಿ ಎಂ.ಎ ಜತೆಗೆ ಬಿ.ಇಡಿ ಪದವಿ ಹೊಂದಿರುವವರಿಗೆ ಮಾತ್ರ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಿತು.
ಅನುದಾನಿತ ಉಪನ್ಯಾಸಕರಿಗೆ ದೊರೆಯದ ಸೌಲಭ್ಯ
ಆದರೆ, ಅನುದಾನಿತ ಕಾಲೇಜುಗಳಲ್ಲಿ 2008ರಲ್ಲಿ ಅನುದಾನಕ್ಕೆ ಒಳಪಟ್ಟ ಮತ್ತು 2008ರ ನಂತರ ನೇಮಕವಾದ ಉಪನ್ಯಾಸಕರಿಗೆ ಸರ್ಕಾರ ಈ ರೀತಿಯ ಅವಕಾಶ ಮತ್ತು ಸೌಲಭ್ಯಗಳನ್ನು ಕಲ್ಪಿಸಲಿಲ್ಲ. ಬದಲಿಗೆ 2009ರಲ್ಲಿ ಈ ಉಪನ್ಯಾಸಕರಿಗೆ ನಾಲ್ಕು ವರ್ಷಗಳಲ್ಲಿ ಸ್ವಂತ ಖರ್ಚಿನಲ್ಲಿ ಬಿ.ಇಡಿ ಕೋರ್ಸ್ ಮಾಡಿಕೊಳ್ಳಬೇಕು ಎಂದು ಹೇಳಿತು. ನಂತರ 2013ರಲ್ಲಿ ಏಳು ವರ್ಷಗಳಲ್ಲಿ ಸ್ವಂತ ಖರ್ಚಿನಲ್ಲಿ ಬಿ.ಇಡಿ ಕೋರ್ಸ್ ಮಾಡಿಕೊಳ್ಳಬೇಕು ಎಂದು ಸೂಚಿಸಿತು. ಆದರೆ ಕಾಲೇಜಿನಲ್ಲಿ ಕರ್ತವ್ಯ ನಿರ್ವಹಿಸಿಕೊಂಡು, ಬಿ.ಇಡಿ ಕೋರ್ಸ್ ಮಾಡಿಕೊಳ್ಳಲು ಈ ಉಪನ್ಯಾಸಕರಿಗೆ ಸಾಧ್ಯವಾಗಲಿಲ್ಲ ಎಂದು ಕರ್ನಾಟಕ ರಾಜ್ಯ ಪದವಿ ಪೂರ್ವ ಕಾಲೇಜುಗಳ ಉಪನ್ಯಾಸಕರ ಸಂಘದ ಅಧ್ಯಕ್ಷ ಎ.ಎಚ್ ನಿಂಗೇಗೌಡ ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.
ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯ (ಕೆಎಸ್‌ಒಯು) ಮತ್ತು ಇಂದಿರಾಗಾಂಧಿ ರಾಷ್ಟ್ರೀಯ ಮುಕ್ತ ವಿಶ್ವವಿದ್ಯಾಲಯದಲ್ಲಿ ಮಾತ್ರ ದೂರ ಶಿಕ್ಷಣದ ಮೂಲಕ ಬಿ.ಇಡಿ ಕೋರ್ಸ್ ಮಾಡಲು ಅವಕಾಶ ಇದೆ. ಆದರೆ ಇಲ್ಲಿ ಪ್ರವೇಶ ಪಡೆಯಲು ಸ್ಪರ್ಧಾತ್ಮಕ ಪರೀಕ್ಷೆ ಬರೆಯಬೇಕು. ಅಲ್ಲದೆ ಲಭ್ಯವಿರುವ ಸೀಟುಗಳ ಸಂಖ್ಯೆಯೂ ಕಡಿಮೆ. ಹೀಗಿರುವಾಗ ಅನುದಾನಿತ ಕಾಲೇಜುಗಳ ಸಹಸ್ರಾರು ಉಪನ್ಯಾಸಕರು ಹೇಗೆ ತಾನೆ ಬಿ.ಇಡಿ ಮಾಡಲು ಸಾಧ್ಯ ಎಂದು ಅವರು ಪ್ರಶ್ನಿಸುತ್ತಾರೆ.
ಸರ್ಕಾರ ಮನಸ್ಸು ಮಾಡಿದರೆ, ಕೆಎಸ್‌ಒಯುನಲ್ಲಿರುವ 500 ಬಿ.ಇಡಿ ಸೀಟುಗಳ ಸಂಖ್ಯೆಯನ್ನು ಹೆಚ್ಚಿಸಬಹುದು. ಒಂದು ಬಾರಿಗೆ ಅನುದಾನಿತ ಕಾಲೇಜುಗಳ ಎಲ್ಲ ಉಪನ್ಯಾಸಕರಿಗೆ ಇಲ್ಲಿ ಬಿ.ಇಡಿ ಮಾಡಲು ಅನುವು ಮಾಡಿಕೊಟ್ಟರೆ ಉಪಯೋಗವಾಗುತ್ತದೆ. ಈಗಾಗಲೇ 10ಕ್ಕೂ ಹೆಚ್ಚು ವರ್ಷಗಳ ಬೋಧನಾ ಅನುಭವ ಹೊಂದಿರುವ ಈ ಉಪನ್ಯಾಸಕರಿಗೆ ವೇತನ ಬಡ್ತಿ, ಸೇವಾ ಬಡ್ತಿಗಳನ್ನು ಪಡೆಯಲು ಸರ್ಕಾರ ಈ ಮೂಲಕ ಅನುಕೂಲ ಮಾಡಿಕೊಡಬೇಕು ಎಂದು ಅವರು ಮನವಿ ಮಾಡುತ್ತಾರೆ. ಈ ಕುರಿತು ಶಿಕ್ಷಣ ಸಚಿವರಿಗೆ ಕೋರಿಕೆ ಪತ್ರವನ್ನೂ ನೀಡಿದ್ದೇವೆ ಎಂದು ಅವರು ಮಾಹಿತಿ ನೀಡಿದರು.
ಕೆಲವೇ ವರ್ಷಗಳಲ್ಲಿ ಬಿ.ಇಡಿ ಕೋರ್ಸ್‌ನ ಅವಧಿ ನಾಲ್ಕು ವರ್ಷಗಳಿಗೆ ವಿಸ್ತರಣೆಯಾಗಲಿದೆ. ಆಗ ಈ ಉಪನ್ಯಾಸಕರ ಸಮಸ್ಯೆ ಇನ್ನಷ್ಟು ಕಗ್ಗಂಟಾಗುತ್ತದೆ. ಹಾಗಾಗಿ ಸರ್ಕಾರ ತುರ್ತಾಗಿ ಈ ಸಮಸ್ಯೆ ಬಗೆಹರಿಸುವುದು ಒಳಿತು ಎಂಬುದು ಅವರ ಅಗ್ರಹ.
ವೇತನ ಸಹಿತ ರಜೆ, ವಿನಾಯಿತಿಗೆ ಒತ್ತಾಯ
ಸರ್ಕಾರಿ ಕಾಲೇಜಿನ ಉಪನ್ಯಾಸಕರಿಗೆ ನೀಡಿದಂತೆ ಅನುದಾನಿತ ಕಾಲೇಜಿನ ಉಪನ್ಯಾಸಕರಿಗೂ ಬಿ.ಇಡಿ ಮಾಡಿಕೊಳ್ಳಲು ವೇತನ ಸಹಿತ ರಜೆಯನ್ನು ಸರ್ಕಾರ ಮಂಜೂರು ಮಾಡಬೇಕು. ಈ ಕಾಲೇಜುಗಳಲ್ಲಿ ಎಂ.ಫಿಲ್ ಮತ್ತು ಪಿ.ಎಚ್ ಡಿ ಪದವಿ ಆಗಿರುವ ಉಪನ್ಯಾಸಕರೂ ಇದ್ದಾರೆ. ಅವರಿಗೆ ಬಿ.ಇಡಿಯಿಂದ ವಿನಾಯಿತಿ ನೀಡಬೇಕು. ಹಾಗೆಯೇ ವಯಸ್ಸು 50 ವರ್ಷ ಮೀರಿದ ಹಾಗೂ ನಿವೃತ್ತಿಗೆ 10 ವರ್ಷಗಳವರೆಗೆ ಸೇವಾವಧಿ ಇರುವ ಉಪನ್ಯಾಸಕರಿಗೂ ಇದರಿಂದ ವಿನಾಯಿತಿ ನೀಡಬೇಕು ಎಂದು ಒತ್ತಾಯಿಸುತ್ತಾರೆ ರಾಮನಗರದ ಅನುದಾನಿತ ಪದವಿ ಪೂರ್ವ ಕಾಲೇಜುಗಳ ನೌಕರರ ಸಂಘ ಅಧ್ಯಕ್ಷ ಜಿ.ಶಿವಣ್ಣ.
ಅನುದಾನಿತ ಕಾಲೇಜುಗಳಲ್ಲಿ ಇರುವ ಉಪನ್ಯಾಸಕರು ಏಕಕಾಲದಲ್ಲಿ ಕರ್ತವ್ಯದ ಜತೆ ಜತೆಗೆ ಬಿ.ಇಡಿ ಕೋರ್ಸ್ ಮಾಡಿಕೊಳ್ಳುವುದು ಕಷ್ಟಸಾಧ್ಯ. ಹಾಗಾಗಿ ಅವರಿಗೆ ಸರ್ಕಾರವೇ ಗರಿಷ್ಠ ಮೂರು ತಿಂಗಳ ವಿಶೇಷ ತರಬೇತಿ ಒದಗಿಸಿ, ಪ್ರಮಾಣ ಪತ್ರ ನೀಡಿ ವೇತನ ಬಡ್ತಿಗಳನ್ನು ಮಂಜೂರು ಮಾಡಬೇಕು ಎಂದು ಆಗ್ರಹಿಸುತ್ತಾರೆ ಉಪನ್ಯಾಸಕ ನಾಗರಾಜ್.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.