ADVERTISEMENT

ಆಸ್ಪತ್ರೆಗೆ ಬಂದವರಿಗೆ ‘ಸಾಹಿತ್ಯ ಸೊಗಡು’

ಸ್ವರೂಪಾನಂದ ಎಂ.ಕೊಟ್ಟೂರು
Published 14 ಡಿಸೆಂಬರ್ 2020, 20:26 IST
Last Updated 14 ಡಿಸೆಂಬರ್ 2020, 20:26 IST
ಕನ್ನಡ ಪುಸ್ತಕಗಳ ಪ್ರೀತಿ ಹಂಚುತ್ತಿರುವ ಶಿವಣ್ಣ
ಕನ್ನಡ ಪುಸ್ತಕಗಳ ಪ್ರೀತಿ ಹಂಚುತ್ತಿರುವ ಶಿವಣ್ಣ   

ಆರೋಗ್ಯದ ಸಮಸ್ಯೆ ಹೊತ್ತು ಸರ್ಕಾರಿ ಆಸ್ಪತ್ರೆಗೆ ಹೋದರೆ ಚಿಕಿತ್ಸೆ ದೊರೆಯುತ್ತದೆ. ಆದರೆ ಬಳ್ಳಾರಿ ಜಿಲ್ಲೆ ಕೂಡ್ಲಿಗಿಯ ಸಾರ್ವಜನಿಕ ಆಸ್ಪತ್ರೆಯಲ್ಲಿ, ರೋಗಕ್ಕೆ ಚಿಕಿತ್ಸೆ ಸಿಗುವ ಜತೆಗೆ, ಓದುವ ಹವ್ಯಾಸವಿದ್ದವರಿಗೆ ಉಚಿತವಾಗಿ ಪುಸ್ತಕಗಳೂ ಸಿಗಲಿವೆ..!

ಹೌದು. ಇಲ್ಲಿನ ತಾಲ್ಲೂಕು ಆರೋಗ್ಯ ಕೇಂದ್ರದಲ್ಲಿರುವ ‘ಡಿ‘ ಗ್ರೂಪ್ ನೌಕರ ಎಸ್. ಶಿವಣ್ಣ, ಆಸ್ಪತ್ರೆಗೆ ಬರುವ ‘ಪುಸ್ತಕ ಓದುವ ಆಸಕ್ತರಿಗೆ‘ ಉಚಿತವಾಗಿ ಕನ್ನಡ ಪುಸ್ತಕಗಳನ್ನು ಹಂಚುತ್ತಾ, ಓದಿನ ಹವ್ಯಾಸ ಬೆಳೆಸುತ್ತಾರೆ. ಅವರಲ್ಲಿರುವ ಈ ಸಾಹಿತ್ಯಾಭಿಮಾನ ಇಂಥದ್ದೊಂದು ‘ಪುಸ್ತಕ ದಾಸೋಹ‘ಕ್ಕೆ ಕಾರಣವಾಗಿದೆ. ಇದು ಆಸ್ಪತ್ರೆಗೆ ಬರುವ ಹಲವರಲ್ಲಿ ಪುಸ್ತಕ ಓದುವ ಅಭಿರುಚಿ ಬೆಳೆಸಿದೆ.

ಶಿವಣ್ಣ ಅವರ ಈ ಸಾಹಿತ್ಯ ಸೇವೆ ಎರಡು ದಶಕಗಳಿಂದ ನಡೆಯುತ್ತಿದೆ. ಆಗಿನಿಂದಲೂ ತಾವು ಕೆಲಸ ಮಾಡುವ ಸ್ಥಳದಲ್ಲೆಲ್ಲಾ ಇಂಥ ಪುಸ್ತಕ ಓದುವ ಅಭಿರುಚಿ ಬೆಳೆಸುತ್ತಾ ಬಂದಿದ್ದಾರೆ. ಈಗಲೂ ತಾವು ಕೆಲಸ ಮಾಡುವ ಜಾಗದ ಕಪಾಟಿನಲ್ಲಿ ಕನ್ನಡದ ಖ್ಯಾತ ಲೇಖಕರ ಪುಸ್ತಕಗಳನ್ನು ಜೋಡಿಸಿಡುತ್ತಾರೆ.

ADVERTISEMENT

ಬಾಲ್ಯದಿಂದ ಬೆಳೆದ ಹವ್ಯಾಸ
ಶಿವಣ್ಣ ಅವರು ಬಾಲ್ಯದಿಂದಲೇ ಓದಿನ ಹವ್ಯಾಸ ಬೆಳೆಸಿಕೊಂಡಿದ್ದಾರೆ. ಕೂಡ್ಲಿಗಿಯ ಮೇನ್‌ ಬಾಯ್ಸ್‌ ಸ್ಕೂಲ್‌ ಆವರಣದಲ್ಲಿದ್ದ ಸಾರ್ವಜನಿಕ ಗ್ರಂಥಾಲಯ ಇವರ ಓದುವ ಹವ್ಯಾಸಕ್ಕೆ ವೇದಿಕೆ ಒದಗಿಸಿತು. ಪ್ರೌಢಶಾಲೆಯ ದಿನಗಳಲ್ಲಿ ನಾಲ್ಕಾರು ಮನೆಗಳಿಗೆ ನೀರು ಹಾಕಿ ಗಳಿಸಿದ ಅಲ್ಪಹಣದಲ್ಲಿಯೇ ಪುಸ್ತಕಗಳನ್ನು ಖರೀದಿಸಿ ಓದುತ್ತಿದ್ದರು. ಹೀಗೆ ಓದಿದ ಪುಸ್ತಕಗಳನ್ನು ಪರಿಚಯಸ್ಥರಿಗೆ ಓದಲು ಕೊಟ್ಟು ‘ಹೊತ್ತಿಗೆ ಗೆಳೆತನ’ ಬೆಳೆಸುತ್ತಿದ್ದರು. ‘ಈ ಪುಸ್ತಕ ವಿನಿಮಯದಿಂದ, ಸ್ನೇಹ ಬಳಗದ ಜತೆಗೆ, ಜ್ಞಾನ ದಿಗಂತವನ್ನು ವಿಸ್ತರಿಸುತ್ತಿತ್ತು’ ಎಂಬುದು ಶಿವಣ್ಣ ಅವರ ಅನುಭವದ ನುಡಿ.

ಶಿವಣ್ಣ 1984 ರಲ್ಲಿ ಅರಣ್ಯ ಇಲಾಖೆಯಲ್ಲಿ ದಿನಗೂಲಿ ನೌಕರರಾಗಿ (ವಾಚರ್) ಸೇರಿದರು. ಆಗ ಬರುತ್ತಿದ್ದದು ಅಲ್ಪ ವೇತನ. ಆದರೆ, ಅದರಲ್ಲೇ ಸ್ವಲ್ಪ ಹಣವನ್ನು ಪುಸ್ತಕ ಖರೀದಿಗೆ ಮೀಸಲಿಡುತ್ತಿದ್ದರು. ನಂತರ ನೌಕರಿ ಕಾಯಂ ಆಯ್ತು. 2000ನೇ ಇಸವಿಯಲ್ಲಿ ಆರೋಗ್ಯ ಇಲಾಖೆಗೆ ಬಂದರು. ವೇತನ ಹೆಚ್ಚಾಯಿತು. ಪುಸ್ತಕ ಖರೀದಿಸುವ ಹಾಗೂ ಹಂಚುವ ಪ್ರಮಾಣವನ್ನೂ ಹೆಚ್ಚಿಸಿದರು.

ಶಿವಣ್ಣ ಪ್ರತಿ ವರ್ಷ ನೂರಕ್ಕೂ ಹೆಚ್ಚು ಪುಸ್ತಕಗಳನ್ನು ಖರೀದಿಸಿ ಹಂಚುತ್ತಾರೆ. ‘ನಮ್ಮ ತಿಳಿವಳಿಕೆ ಮಟ್ಟ ಹೆಚ್ಚಿಸಲಿಕ್ಕೆ, ಹೊತ್ತು, ಬೇಸರ ಕಳೆಯಲು ಪುಸ್ತಕಗಳೇ ಅತ್ಯುತ್ತಮ ಸಂಗಾತಿ’ ಎಂಬ ಕಿವಿಮಾತು ಹೇಳುತ್ತಲೇ ಪುಸ್ತಕಗಳನ್ನು ಹಂಚುವ ಶಿವಣ್ಣ, ‘ಬೇರೆಯವರಿಗೂ ಈ ಪುಸ್ತಕಗಳನ್ನು ದಾಟಿಸಿ, ಓದುವ ಹವ್ಯಾಸವನ್ನು ವಿಸ್ತರಿಸಿ’ ಎಂದು ಮನವಿ ಮಾಡುತ್ತಾರೆ.

‘ಪುಸ್ತಕ ಓದುವ ಆಸಕ್ತಿ ಬೆಳೆಸಿದ ಶಿವಣ್ಣ’
ಶಿವಣ್ಣ ಅವರ ಪುಸ್ತಕ ಸೇವೆಯಿಂದ ಆರೋಗ್ಯ ಇಲಾಖೆಯ ಸಿಬ್ಬಂದಿಯೂ ಪ್ರಭಾವಿತರಾಗಿದ್ದಾರೆ. ‘ಒಮ್ಮೊಮ್ಮೆ ಕೆಲಸದ ಒತ್ತಡ ಹೆಚ್ಚಾಗಿ ಮನಸ್ಸು ಅಶಾಂತ ಆಗುತ್ತಿತ್ತು. ರಾತ್ರಿ ಪಾಳಿಯಲ್ಲಿ ಕೆಲಸ ಮಾಡುವಾಗ ಹೊತ್ತು ಕಳೆಯುವುದು ಕಷ್ಟವಾಗುತ್ತಿತ್ತು. ಆಗ ಶಿವಣ್ಣ ಅವರು ಕೊಟ್ಟಿದ್ದ ಪುಸ್ತಕ ಬೇಸರ ಕಳೆಯಿತು. ನನಗೆ ಗೊತ್ತಿಲ್ಲದಂತೆ ಪುಸ್ತಕ ಓದುವ ಆಸಕ್ತಿ ಹೆಚ್ಚಾಯಿತು’ ಎನ್ನುತ್ತಾರೆ ಇಲಾಖೆಯ ಸಿಬ್ಬಂದಿ ಕೃಷ್ಣವೇಣಿ . ‘ನನಗೆ ಓದುವ ಹವ್ಯಾಸ ಇತ್ತು. ಆದರೆ ಇತ್ತೀಚೆಗೆ ಕಡಿಮೆಯಾಗಿತ್ತು. ಶಿವಣ್ಣನ ಪ್ರೇರಣೆಯಿಂದಾಗಿ ಪುನಃ ಪುಸ್ತಕ ಓದುವ ಹವ್ಯಾಸ ಬೆಳೆದಿದೆ’ ಎನ್ನುತ್ತಾರೆ ಬಿ.ಎಂ. ಬಸವರಾಜಯ್ಯ.

ತಮಗೆ ಸಿಗುತ್ತಿರುವ ಪ್ರತಿಕ್ರಿಯೆಯಿಂದ ಉತ್ಸಾಹಗೊಂಡಿದ್ದಾರೆ. ಕೆಲವು ತಿಂಗಳಿಂದ ಶಿವಣ್ಣ ಪುಸ್ತಕ ಸೇವೆ ಹವ್ಯಾಸವನ್ನು ಇನ್ನಷ್ಟು ಬೆಳೆಸಿದ್ದಾರೆ. ಅದಕ್ಕೆ ಪ್ರಮುಖ ಕಾರಣ ‌‘ಕೊರೊನಾ ಲಾಕ್‌ಡೌನ್‌’. ಈ ಅವಧಿಯಲ್ಲಿ ಬಹುತೇಕ ಜನರು ಅನಿವಾರ್ಯವಾಗಿ ಮನೆಯಲ್ಲೇ ‘ಕ್ವಾರಂಟೈನ್’ ಆಗಿದ್ದರು. ಕೊರೊನಾ ಸೋಂಕಿಗೆ ಒಳಗಾದವರಿಗೆ ಕಟ್ಟುನಿಟ್ಟಿನ ‘ಏಕಾಂತ’. ಮನೆಯಲ್ಲಿ ಕುಳಿತು ಕೊರೊನಾವೈರಸ್ ಸೋಂಕು ನಿವಾರಿಸಿಕೊಳ್ಳುವ ಅನೇಕರಿಗೆ ಶಿವಣ್ಣ ‘ಪುಸ್ತಕ ಓದುವ ಆಸಕ್ತಿ’ಯನ್ನು ಬೆಳೆಸಿದ್ದಾರೆ.

‘ಸೋಂಕಿನ ಕಾರಣಕ್ಕೆ ಮನೆಯಲ್ಲೇ ಲಾಕ್ ಆಗಿದ್ದೆ. ಪರಿಚಯಸ್ಥರು ಶಿವಣ್ಣ ಪುಸ್ತಕ ಕೊಡುವ ವಿಚಾರ ತಿಳಿಸಿದರು. ಅವರಿಂದ ಪುಸ್ತಕ ತರಿಸಿಕೊಂಡೆ. ಪುಸ್ತಕ ಓದುವುದರಲ್ಲಿ ಇರುವ ಖುಷಿ, ಸಿಗುವ ನೆಮ್ಮದಿ ಮತ್ತೆಲ್ಲೂ ಸಿಗುವುದಿಲ್ಲ ಎನ್ನುವುದು ಮನವರಿಕೆಯಾಯಿತು‘ ಎನ್ನುತ್ತಾರೆ ಕೆ.ಕೆ ಹಟ್ಟಿಯ ನಾಗರಾಜ.

‘ನಾನು ಇದುವರೆಗೆ ಖರೀದಿಸಿರುವ ಪುಸ್ತಕಗಳ ಲೆಕ್ಕ ಇಟ್ಟುಕೊಂಡಿಲ್ಲ. ಹೊಸ ಪುಸ್ತಕಗಳನ್ನು ಕೊಂಡು ಓದಿದ ಮೇಲೆ ಅದನ್ನು ಇತರರಿಗೆ ನೀಡುವುದು ಹವ್ಯಾಸ. ಮೊಬೈಲ್‌ ಹಾವಳಿಯ ಕಾಲದಲ್ಲೂ ಓದಿನ ಹವ್ಯಾಸ ಕಡಿಮೆಯಾಗಬಾರದು’ ಎನ್ನುವುದು ನನ್ನ ಕಳಕಳಿ ಎನ್ನುತ್ತಾರೆ ಶಿವಣ್ಣ.

ಒಮ್ಮೊಮ್ಮೆ ಪುಸ್ತಕ ಓದಿದವರು ಪುನಃ ಮರಳಿಸಲು ಬಂದಾಗ ‘ನೀವು ನಿಮ್ಮ ಪ್ರೀತಿ ಪಾತ್ರರಿಗೆ, ಓದುವವರಿಗೆ ಇವುಗಳನ್ನು ನೀಡಿ, ಅವರಲ್ಲಿಯೂ ನಿಮ್ಮಂತೆ ಓದುವ ಅಭಿರುಚಿ ಬೆಳೆಸಿ..’ ಎಂದು ಶಿವಣ್ಣ ವಿನಂತಿಸುತ್ತಾರೆ. ಹೀಗೆ ತಮ್ಮ ಪರಿಸರದಲ್ಲಿ ಸದ್ದಿಲ್ಲದೇ ಪುಸ್ತಕಗಳನ್ನು ಓದುವ ಒಂದು ವರ್ಗವನ್ನು ಸೃಷ್ಟಿಸುತ್ತಾ, ಕನ್ನಡ ಸಾಹಿತ್ಯ ಲೋಕಕ್ಕೆ ಕೊಡುಗೆ ನೀಡುತ್ತಿದ್ದಾರೆ.

ಪುಸ್ತಕ ಪ್ರೀತಿಯ ಶಿವಣ್ಣ ಅವರ ಸಂಪರ್ಕ ಸಂಖ್ಯೆ: 9945253284

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.