ADVERTISEMENT

ಬಂಧಿತರಿಗೆ ‘ಪುಸ್ತಕದ ಮದ್ದು’

ಎಸ್‌.ಸಂಪತ್‌
Published 25 ಅಕ್ಟೋಬರ್ 2018, 19:45 IST
Last Updated 25 ಅಕ್ಟೋಬರ್ 2018, 19:45 IST
   

ವಿವಿಧ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿ ಸೆರೆಮನೆಯಲ್ಲಿ ಬಂಧಿಯಾಗಿರುವವರ ಮನಸುಗಳಿಗೆ ‘ಅರಿವಿನ ಬೆಳಕು’ ನೀಡಲು ಕನ್ನಡ ಪುಸ್ತಕ ಪ್ರಾಧಿಕಾರ ಮುಂದಾಗಿದೆ.

ಜೀವಾವಧಿ ಸೇರಿದಂತೆ ಹಲವು ವರ್ಷಗಳ ಶಿಕ್ಷೆಗಳಿಗೆ ತುತ್ತಾಗಿರುವ ಕೈದಿಗಳು ಜೈಲಿನಲ್ಲಿ ವರ್ಷಾನುಗಟ್ಟಲೆ ಬಂಧಿತರಾಗಿ ಮಾನಸಿಕವಾಗಿ ನೊಂದಿರುತ್ತಾರೆ. ಅಪರಾಧಿ ಪ್ರಜ್ಞೆಯ ಜತೆಗೆ ವರ್ಷಗಟ್ಟಲೆ ಕುಟುಂಬದಿಂದ ದೂರ ಇರುವುದರಿಂದ ಹಲವರು ಖಿನ್ನತೆಗೂ ಒಳಗಾಗಿರುತ್ತಾರೆ. ಅವರನ್ನು ಪುಸ್ತಕ ಪ್ರೇಮಿಗಳನ್ನಾಗಿಸಿ, ಅವರ ಮನಸನ್ನು ಹಗುರ ಮಾಡುವುದು ಪ್ರಾಧಿಕಾರದ ಉದ್ದೇಶ.

ಬಂಧಿತರ ಮಾನಸಿಕ ಖಿನ್ನತೆಗೆ ‘ಪುಸ್ತಕದ ಮದ್ದು’ ನೀಡುವುದು ಹಾಗೂ ಜೈಲಿನಿಂದ ಬಿಡುಗಡೆಯಾದ ನಂತರ ಸಮಾಜದಲ್ಲಿ ಎಲ್ಲರಂತೆ ಜೀವಿಸಲು ಅವರ ಮನೋಬಲ ಹೆಚ್ಚಿಸುವುದು ಈ ಕಾರ್ಯಕ್ರಮದ ಮತ್ತೊಂದು ಉದ್ದೇಶ.

ADVERTISEMENT

ಕನ್ನಡ ಪುಸ್ತಕ ಪ್ರಾಧಿಕಾರ ರಚನೆಯಾಗಿ 25ನೇ ವರ್ಷವಾಗಿದೆ. ಬೆಳ್ಳಿಹಬ್ಬದ ಅಂಗವಾಗಿ ಈಗಾಗಲೇ ‘ನಿಮ್ಮ ಮನೆಗೆ ನಮ್ಮ ಪುಸ್ತಕ’ ಕಾರ್ಯಕ್ರಮ ಜಾರಿಗೊಳಿಸಲಾಗಿದೆ. ಅದರ 10ನೇ ಕಾರ್ಯಕ್ರಮ ಇದೇ 26ರಂದು (ಶುಕ್ರವಾರ) ಪರಪ್ಪನ ಅಗ್ರಹಾರದ ಕೇಂದ್ರ ಕಾರಾಗೃಹದಲ್ಲಿ ನಡೆಯಲಿದೆ. ಈ ಮೂಲಕ ‘ಬಂಧನದ ಮೈಮನಸುಗಳಿಗೆ ಅರಿವಿನ ಬೆಳಕನ್ನು’ ಪ್ರಾಧಿಕಾರ ಹರಿಸಲಿದೆ.

ಮಾನಸಿಕ ಖಿನ್ನತೆ, ಒತ್ತಡಗಳನ್ನು ನಿರ್ವಹಿಸುವುದು ಹೇಗೆ ಎಂಬುದರ ಬಗ್ಗೆ ಮಾಹಿತಿ ನೀಡುವ ‘ಮಾನಸಿಕ ಆರೋಗ್ಯ’ ಕುರಿತ ಒಂದು ಪುಸ್ತಕ ಹಾಗೂ ಕಥೆ ಅಥವಾ ಕಾದಂಬರಿ ಅಥವಾ ಕಾವ್ಯಕ್ಕೆ ಸಂಬಂಧಿಸಿದ ಎರಡು ಪುಸ್ತಕಗಳು ಬಂಧಿತರಿಗೆ ಉಚಿತವಾಗಿ ದೊರೆಯಲಿವೆ. ಜತೆಗೆ ಸಾಹಿತಿಗಳಾದ ಡಾ.ದೊಡ್ಡರಂಗೇಗೌಡ, ಡಾ.ಸಿದ್ಧಲಿಂಗಯ್ಯ, ಮನೋವೈದ್ಯ ಡಾ. ಸಿ.ಆರ್‌. ಚಂದ್ರಶೇಖರ್‌ ಅವರಿಂದ ಉಪನ್ಯಾಸವೂ ಇರಲಿದೆ. ಇದೇ ವೇಳೆ ಬಂಧಿಗಳು ಮತ್ತು ಸಂಪನ್ಮೂಲ ವ್ಯಕ್ತಿಗಳ ಜತೆಗೆ ಸಂವಾದವೂ ನಡೆಯಲಿದೆ.

ಓದುವ ಸಂಸ್ಕೃತಿ ಬೆಳೆಸಲು

ಈ ಕುರಿತು ಮಾಹಿತಿ ನೀಡಿದ ಪ್ರಾಧಿಕಾರದ ಅಧ್ಯಕ್ಷ ಡಾ.ವಸುಂಧರಾ ಭೂಪತಿ, ‘ಇದೊಂದು ಅತ್ಯುತ್ತಮ ಕಾರ್ಯಕ್ರಮ. ಪುಸ್ತಕಗಳು ಮನುಷ್ಯನ ಅತ್ಯಾಪ್ತ ಸ್ನೇಹಿತ. ಮನಸ್ಸಿನ ತೊಳಲಾಟಗಳನ್ನು ಹೋಗಲಾಡಿಸಿ, ನೆಮ್ಮದಿ ನೀಡುವ ಶಕ್ತಿ ಇದಕ್ಕಿದೆ. ಜ್ಞಾನಾರ್ಜನೆಯ ಜತೆಗೆ ತನ್ನ ಜವಾಬ್ದಾರಿಯನ್ನೂ ಅರಿತುಕೊಳ್ಳುವಂತೆ ಅದು ಮಾಡುತ್ತದೆ. ಟಿ.ವಿ., ಮೊಬೈಲ್‌, ಫೇಸ್‌ಬುಕ್‌, ವಾಟ್ಸ್‌ಆ್ಯಪ್‌ಗಳಿಗಿಂತಲೂ ಪುಸ್ತಕಗಳು ಪ್ರಭಾವಿ. ಅಂಥ ಪುಸ್ತಕಗಳನ್ನು ಬಂಧಿತರಿಗೆ ನೀಡುವುದರ ಮೂಲಕ ಅವರಲ್ಲಿ ಪುಸ್ತಕ ಓದುವ ಸಂಸ್ಕೃತಿ ಬೆಳೆಸುವುದು ಮತ್ತು ಅವರ ಮನಸನ್ನು ಹಗುರ ಮಾಡಿ, ಅಪರಾಧಿ ಮನೋಭಾವದಿಂದ ಹೊರ ಬರುವಂತೆ ಮಾಡುವುದಕ್ಕೆ ಈ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ’ ಎನ್ನುತ್ತಾರೆ.

ಬೆಳ್ಳಿಹಬ್ಬದ ಪ್ರಯುಕ್ತ 25 ಮನೆಗಳಲ್ಲಿ ‘ನಿಮ್ಮ ಮನೆಗೆ ನಮ್ಮ ಪುಸ್ತಕ’ ಕಾರ್ಯಕ್ರಮವನ್ನು ಪ್ರಾಧಿಕಾರ ರೂಪಿಸಿದೆ. ಸಾಹಿತಿಗಳ, ಚಿಂತಕರ ಮನೆಗಳನ್ನು ಗುರುತಿಸಿ ಅವರ ಅಕ್ಕಪಕ್ಕದ 25ರಿಂದ 30 ಮನೆಯವರನ್ನು ಆಹ್ವಾನಿಸಿ, ಉಪನ್ಯಾಸದ ಜತೆಗೆ ಉಚಿತವಾಗಿ ಪುಸ್ತಕಗಳನ್ನು ಅವರಿಗೆ ಕೊಟ್ಟು ಪುಸ್ತಕ ಓದುವ ಸಂಸ್ಕೃತಿಯನ್ನು ಬೆಳೆಸುವಂತೆ ಮಾಡುವ ವಿನೂತನ ಯೋಜನೆ ಇದು. ಅದರ ಭಾಗವಾಗಿಯೇ ಪರಪ್ಪನ ಅಗ್ರಹಾರದಲ್ಲೂ ಕಾರ್ಯಕ್ರಮ ಆಯೋಜನೆಗೊಂಡಿದೆ ಎನ್ನುತ್ತಾರೆ ಅವರು.

ಈ ಪ್ರಯೋಗ ಯಶಸ್ವಿಯಾದರೆ ರಾಜ್ಯದ ಇತರ ಕಾರಾಗೃಹಗಳಲ್ಲಿಯೂ ಇದೇ ರೀತಿ ಪುಸ್ತಕ ಸಂಸ್ಕೃತಿ ಬೆಳೆಸುವ ಕಾರ್ಯಕ್ರಮವನ್ನು ಪ್ರಾಧಿಕಾರ ರೂಪಿಸಲಿದೆ.

ಪುಸ್ತಕ ಪ್ರೀತಿ ಬೆಳೆಯುತ್ತಿದೆ

ಪರಪ್ಪನ ಅಗ್ರಹಾರದಲ್ಲಿರುವ ಬಂಧಿತರು ಪುಸ್ತಕಗಳನ್ನು ಓದುವುದಕ್ಕೆ ಆಸಕ್ತಿ ತೋರುತ್ತಿದ್ದಾರೆ. ಇಲ್ಲಿ ಒಟ್ಟು ಮೂರು ಗ್ರಂಥಾಲಯಗಳಿದ್ದು, ಮಹಿಳಾ ವಿಭಾಗಕ್ಕೆ ಪ್ರತ್ಯೇಕ ಗ್ರಂಥಾಲಯವಿದೆ. ಸುಮಾರು 35 ಸಾವಿರ ಪುಸ್ತಕಗಳಿವೆ. ನಿತ್ಯ 30ರಿಂದ 40 ಪತ್ರಿಕೆಗಳು ಬರುತ್ತವೆ. ಕನ್ನಡ, ಹಿಂದಿ, ಇಂಗ್ಲಿಷ್‌ ಭಾಷೆಯ ವಾರ ಪತ್ರಿಕೆ ಮತ್ತು ಮಾಸಿಕಗಳು ಬರುತ್ತವೆ. ಬಂಧಿತರು 300ರಿಂದ 400 ಪುಸ್ತಕಗಳನ್ನು ಓದಲೆಂದು ತೆಗೆದುಕೊಂಡಿದ್ದಾರೆ. ಇದು ಅವರಲ್ಲಿ ಪುಸ್ತಕ ಪ್ರೀತಿ ಬೆಳೆಯುತ್ತಿರುವುದನ್ನು ತೋರಿಸುತ್ತದೆ ಎನ್ನುತ್ತಾರೆ ಪರಪ್ಪನ ಅಗ್ರಹಾರದ ಕೇಂದ್ರ ಕಾರಾಗೃಹದ ಅಧೀಕ್ಷಕ ಪಿ.ಎಸ್‌.ರಮೇಶ್‌.

ಜೀವಾವಧಿ ಮತ್ತಿತರ ದೀರ್ಘಾವಧಿ ಶಿಕ್ಷೆಗೆ ಒಳಪಟ್ಟು ಜೈಲಿಗೆ ಬರುವವವರಲ್ಲಿ ಮೊದಲ ಒಂದೆರಡು ವರ್ಷ ಮಾನಸಿಕ ತೊಳಲಾಟ ಹೆಚ್ಚಿರುತ್ತದೆ. ಅವರಲ್ಲಿ ಬಹುತೇಕರು ಅಪರಾಧಿ ಪ್ರಜ್ಞೆಯಿಂದಾಗಿ ಮಾನಸಿಕ ಖಿನ್ನತೆಗೆ ಒಳಗಾಗಿರುತ್ತಾರೆ.

ಪೆರೋಲ್‌ ಮೇಲೆ ಹೊರಗೆ ಹೋಗಿ ಬರುವ, ವಿವಿಧ ಉತ್ಪನ್ನಗಳ ತಯಾರಿಯಲ್ಲಿ ತೊಡಗುವ, ಕೌಶಲ ವೃದ್ಧಿ ಚಟುವಟಿಕೆಯಲ್ಲಿ ಭಾಗಿಯಾಗುವವರು ಮಾನಸಿಕವಾಗಿ ಸದೃಢರಾಗುತ್ತಾ ಸಾಗುತ್ತಾರೆ. ಇನ್ನೂ ಕೆಲವರಿಗೆ ಮನೋ ಚಿಕಿತ್ಸೆ, ಆಪ್ತ ಸಮಾಲೋಚನೆ ಕೊಡಿಸುತ್ತೇವೆ. ಅದರ ಜತೆಗೆ ಅವರಲ್ಲಿ ಓದುವ ಹವ್ಯಾಸ ಮೂಡಿಸಿ ಮನಸನ್ನು ಹಗುರವಾಗಿಸಲು ಕನ್ನಡ ಪುಸ್ತಕ ಪ್ರಾಧಿಕಾರ ಮುಂದಾಗಿರುವುದು ಅಭಿನಂದನೀಯ ಎನ್ನುತ್ತಾರೆ ಅವರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.