‘ಭರತ್ ಈಗ ಪಿಯುಸಿ ಎರಡನೆಯ ವರ್ಷದಲ್ಲಿ ಓದುತ್ತಿದ್ದಾನೆ. ಇತ್ತೀಚಿಗೆ ಅವನಿಗೆ ಓದಿನಲ್ಲಿ ಆಸಕ್ತಿ ಕಡಿಮೆಯಾಗುತ್ತಿದೆ. ಏಕಾಗ್ರತೆ ಇಲ್ಲ. ಸುಮ್ಮಸುಮ್ಮನೇ ಕೋಪಿಸಿಕೊಳ್ಳುತ್ತಾನೆ. ಪಾಲಕರು ಏನೇ ಬುದ್ಧಿಮಾತು ಹೇಳಿದರೂ ಎದುರು ವಾದಿಸುತ್ತಾನೆ. ಹಟ ಮಾಡುತ್ತನೆ. ಯೂಟ್ಯೂಬ್ ವಿಡಿಯೊ ನೋಡುತ್ತಾನೆ. ಮೊಬೈಲಿನ ಗೀಳು ಹೆಚ್ಚಾಗಿದೆ. ರಾತ್ರಿ ತಡವಾಗಿ ಮಲಗುತ್ತಾನೆ. ಬೆಳಿಗ್ಗೆ ತಡವಾಗಿ ಏಳುತ್ತಾನೆ. ಕಾಲೇಜಿಗೂ ಸರಿಯಾಗಿ ಹೋಗುತ್ತಿಲ್ಲ. ಸಮಯಕ್ಕೆ ಸರಿಯಾಗಿ ತಿಂಡಿ, ಊಟ ಮಾಡುವುದಿಲ್ಲ. ಪಾಲಕರ ಮಾತಿಗೆ ಕಾಸಿನ ಬೆಲೆಕೊಡುವುದಿಲ್ಲ. ಆಗಾಗ ತನಗೆ ಅಶಕ್ತತೆಯಾಗಿದೆ ಎನ್ನುತ್ತಿರುತ್ತಾನೆ. ಹದಿಹರೆಯದಲ್ಲಿ ಬೆಳೆಯುತ್ತಿರುವ ಭರತ್‌ನಿಗೆ ಸಡನ್ನಾಗಿ ಏನಾಗಿದೆ, ಅವನು ಇಷ್ಟೆಲ್ಲ ವಿಚಿತ್ರವಾಗಿ ಏಕೆ ವರ್ತಿಸುತ್ತಾನೆ ಎನ್ನುವುದು ತಿಳಿಯುತ್ತಿಲ್ಲ’ ಎನ್ನುತ್ತ ಭಾವುಕಳಾದರು ಭರತ್‌ನ ತಾಯಿ.
ಎಸ್ಸೆಸ್ಸೆಲ್ಸಿಯ ತನಕ ಭರತ್ ಬಹಳ ಒಳ್ಳೆಯ ಹುಡುಗನಾಗಿದ್ದ. ಒಳ್ಳೆಯ ಹೈಸ್ಕೂಲಲ್ಲಿ ಚೆನ್ನಾಗಿಯೇ ಓದುತ್ತಿದ್ದ. ಮನೆಯಲ್ಲಿಯಾಗಲೀ ಶಾಲೆಯಲ್ಲಿಯಾಗಲೀ ಸಭ್ಯನಾಗಿದ್ದ. ಅವನುಎಸ್ಸೆಸ್ಸೆಲ್ಸಿಯಲ್ಲಿ ಭರತ್ ಶೇ 98 ಅಂಕಗಳನ್ನು ಗಳಿಸಿದ್ದ. ಪಿಯು ಮೊದಲನೆಯ ವರ್ಷದಲ್ಲಿ ಅಂತೂ ಇಂತೂ ಶೇ 40 ಹತ್ತಿರ ಅಂಕಗಳನ್ನು ಗಳಿಸಿಕೊಂಡು ಪಾಸಾಗಿದ್ದಾನೆ! ಅದರ ಬಗ್ಗೆ ಕೇಳಿದರೆ ಭರತ್ ಉಡಾಫೆಯಾಗಿ ಮಾತನಾಡುತ್ತಾನೆ.
ಭರತ್‌ನ ತಾಯಿ ಸಾಫ್ಟ್‌ವೇರ್ ಎಂಜಿನಿಯರ್. ಒಂದು ಎಂಎನ್‌ಸಿ ಕಂಪನಿಯಲ್ಲಿ ಒಳ್ಳೆಯ ಕೆಲಸದಲ್ಲಿದ್ದಾರೆ. ಅವನ ತಂದೆ ಕೂಡ ಎಂಜಿನಿಯರ್. ಅವರದ್ದೇ ಬಿಸಿನೆಸ್ಸ್ ಇದೆ.ಶ್ರೀಮಂತರು. ಆದರೆ ಮಗನಿಗೆ ಮೊಬೈಲು ಕೊಡಿಸಲಿಲ್ಲ. ಪಿಯು ಮುಗಿದ ನಂತರ ಕೊಡಿಸುವುದಾಗಿ ಹೇಳಿದ್ದಾರೆ. ಅದಕ್ಕೂ ತಕರಾರಿಲ್ಲದೇ ಮಗ ಒಪ್ಪಿದ್ದಾನೆ. ಕಳೆದೊಂದು ವರ್ಷದಿಂದ ಆತ ಅಮ್ಮನ ಮೊಬೈಲನ್ನು ಉಪಯೋಗಿಸುತ್ತಿದ್ದಾನೆ. ಮಗ ಪಿಯೂಸಿ ಎರಡನೆಯ ವರ್ಷಕ್ಕೆ ಬರುತ್ತಿದ್ದಂತೆಯೇ ಅವನ ತಾಯಿ ಕೆಲಸಕ್ಕೆ ಹೋಗುತ್ತಿಲ್ಲ.
ಮಗನನ್ನು ಸರಿಯಾಗಿ ನೋಡಿಕೊಳ್ಳಲಿಕ್ಕಾಗಿ, ಚೆನ್ನಾಗಿ ಓದಿಸಲಿಕ್ಕಾಗಿ ದೀರ್ಘಾವಧಿಯ ರಜೆಯನ್ನು ತೆಗೆದುಕೊಂಡಿದ್ದಾರೆ. ಇಷ್ಟೆಲ್ಲ ಕಾಳಜಿ, ಸವಲತ್ತುಗಳಿವೆಯಾದರೂ ಹುಡುಗ ಮಾತ್ರ ದಿನದಿಂದ ದಿನಕ್ಕೆ ಕುಸಿಯುತ್ತಿದ್ದಾನೆ. ಅವನ ವರ್ತನೆಯಲ್ಲಿ ಋಣಾತ್ಮಕವಾದ ಬದಲಾವಣೆಗಳಾಗಿವೆ. ಅದರಿಂದ ಮನೆಯವರಿಗೆ ಆತಂಕವಾಗಿದೆ.
ಪಾಲಕರು ಹೇಳಿದಷ್ಟನ್ನು ಕೇಳಿಕೊಂಡೆ. ನಂತರ ಭರತ್‌ನನ್ನು ಮಾತನಾಡಿಸಿದೆ.
‘ಎಸ್ಸೆಸ್ಸೆಲ್ಸಿಯಲ್ಲಿ ಅಷೆಲ್ಲಾ ಅಂಕಗಳನ್ನು ಗಳಿಸಿದ್ದು ಯಾರು?’ ಎಂದು ಅವನನ್ನು ಕೇಳಿದೆ.
’ನಾನು!’ ಎಂದ
‘ಮತ್ತೆ, ನೀನು ಪಿಯೂಸಿಯಲ್ಲಿ ಏಕೆ ಇಷ್ಟೇ ಅಂಕಗಳನ್ನು ಗಳಿಸಿದೆ? ನಿನಗೆ ಸೈನ್ಸ್‌ಗೆ ಸೇರಲು ಇಷ್ಟ ಇರಲಿಲ್ವ? ಅಥವಾ ಕಾಲೇಜು ಇಷ್ಟ ಇರಲಿಲ್ವೇ?’ ಕೇಳಿದೆ.
‘ಕಾಲೇಜು ಇಷ್ಟ ಇತ್ತು. ಸೈನ್ಸು ಇಷ್ಟವಿದೆ’ ಎಂದ ಭರತ್, ಮೈ ಸಡಿಲಿಸುತ್ತ ಸರಿಯಾಗಿ ಕುಳಿತುಕೊಂಡ.
‘ನಿನ್ನ ಪ್ರಕಾರ ಕಡಿಮೆ ಅಂಕಗಳಿಗೆ ಮತ್ತಿನ್ನೇನು ಕಾರಣ? ಸರಿಯಾಗಿ ಓದಲಿಲ್ಲವೆ?’ ಎಂದೆ.
‘ಹೌದು. ನನಗೆ ಓದೋಕೆ ಮನಸ್ಸಿಲ್ಲ!’ ಎಂದ
‘ಅದೇ, ಯಾಕೆ ಮನಸ್ಸಿಲ್ಲ. ಅಷ್ಟು ಜಾಣನಾಗಿದ್ದ ಭರತ್‌ನಿಗೆ ಈಗ ಏನಾಯಿತೂಂತ?’ ಮತ್ತೆ ಕೇಳಿದೆ.
‘ಎಸ್ಸೆಸ್ಸೆಲ್ಸಿಯಲ್ಲಿ ಸ್ಕೋರ್ ಮಾಡಿದ್ದು ನಾನೇ! ಆಗ ನನಗೂ ನನ್ನ ಅಪ್ಪಂಗೂ ಒಂದು ಕರಾರರಿತ್ತು. ಅದಕ್ಕೆ ಅಮ್ಮನೂ ಒಪ್ಪಿದ್ದರು’ ಎನ್ನುತ್ತ ಭರತ್ ತನ್ನ ಪಕ್ಕದಲ್ಲಿ ಕುಳಿತಿದ್ದ ಪಾಲಕರ ಮುಖವನ್ನು ನೋಡಿದ. ಅವರು ಅವನನ್ನು ಪ್ರಶ್ನಾರ್ಥಕವಾಗಿ ನೋಡಿದರು.
ಭರತ್ ಮಾತನ್ನು ಮುಂದುವರೆಸಿದ, ‘ನಾನು ಎಸ್ಸೆಸ್ಸೆಲ್ಸಿಯಲ್ಲಿ ತೊಂಭತ್ತಕ್ಕಿಂತ ಹೆಚ್ಚು ಸ್ಕೋರ್ ಮಾಡಿದರೆ ನನಗೆ ಒಂದು ಬೈಕು ಕೊಡಿಸ್ತೇನೆ ಎಂದಿದ್ದರು. ನಾನು ಅಪ್ಪನ ಮಾತನ್ನು ನಂಬಿದ್ದೆ. ಅದಕ್ಕಾಗಿಯೇ ತೊಂಬತ್ತೇ ಏಕೆ ತಗೊಳ್ಳಿ ಎಂದು ಶೇಕಡ ತೊಂಬತ್ತೆಂಟನ್ನು ಗಳಿಸಿ ಕೊಟ್ಟೆ! ನಾನು ನನ್ನ ಮಾತನ್ನು ಉಳಿಸಿಕೊಂಡೆ. ಆದರೆ, ಅವರು ಅವರ ಮಾತನ್ನು ಉಳಿಸಿಕೊಳ್ಳಲಿಲ್ಲ! ನನಗೆ ಬೈಕನ್ನು ಕೊಡಿಸಲಿಲ್ಲ.’ ಆತ ಮಾತನ್ನು ಮುಗಿಸಿದ.
ನಾನು ಪಾಲಕರ ಮುಖವನ್ನು ನೋಡಿದೆ. ‘ಅದೇನ್ರಿ ಅಗ್ರಿಮೆಂಟಿನ ವಿಚಾರ? ಭರತ್ ಹೇಳಿದೆಲ್ಲವೂ ಸತ್ಯವೆ?’ ಅವರನ್ನು ಕೇಳಿದೆ
‘ಅದು ಹಾಗಲ್ಲ. ಅವನಿಗೆ ಹದಿನೆಂಟು ವರ್ಷವಾದ ನಂತರ ಕೊಡಿಸುತ್ತೇನೆ...’ ಎನ್ನುತ್ತಿದ್ದ ಅವನ ತಂದೆಯ ಮಾತನ್ನು ಅರ್ಧಕ್ಕೆ ತಡೆದು ಭರತ್ ಜೋರು ಧ್ವನಿಯಲ್ಲಿ, ‘ಹಾಗಂತೇನೂ ಹೇಳಿರಲಿಲ್ಲ...’ ಎಂದು ಕಿರುಚಿದ. ನಾನು ಎಲ್ಲರಿಗೂ ಸುಮ್ಮನಿರುವಂತೆ ಹೇಳಿದೆ.
ಭರತ್ ಹೇಳಿದ್ದು ಸತ್ಯವಾಗಿತ್ತು. ಪಾಲಕರು ಮಾತಿಗೆ ತಪ್ಪಿದ್ದರು. ಅದರಿಂದ ಹುಡುಗನಿಗೆ ಆಘಾತವಾಗಿತ್ತು. ನಿರಾಸೆಯಾಗಿತ್ತು. ಅದರ ಪರಿಣಾಮವಾಗಿಯೇ ಆತ ಓದಿನಲ್ಲಿ ಅಸಕ್ತಿಯನ್ನು ಕಳೆದುಕೊಂಡಿದ್ದ. ತಾನು ಮೆಡಿಕಲ್ ಸೀಟು ಗಳಿಸುವಷ್ಟು ಶಕ್ತನಲ್ಲ ಎಂದುಕೊಂಡಿದ್ದ. ಡೊನೇಶನ್ ಕೊಟ್ಟು ಮೆಡಿಕಲ್ ಓದುವುದು ಸರಿಯಲ್ಲ. ಅಷ್ಟೆಲ್ಲಾ ಹಣವನ್ನು ತನಗಾಗಿ ಐ ಮೀನ್ ತನ್ನನ್ನು ಡಾಕ್ಟರನ್ನಾಗಿ ಮಾಡಲಿಕ್ಕೆ ಪಾಲಕರು ಅಷ್ಟೆಲ್ಲ ಹಣವನ್ನು ಖರ್ಚು ಮಾಡುವುದು ಬೇಡ ಎಂದ.
ತಾನು ಮೆಡಿಕಲ್ ಓದಬೇಕು. ತಮ್ಮ ಮಗ ಡಾಕ್ಟರಾಗಬೇಕು ಎನ್ನುವುದು ಪಾಲಕರ ಆಸೆಯಾಗಿತ್ತು. ಮೊದಲಿನಿಂದಲೂ ತಮ್ಮ ಮಗ ಡಾಕ್ಟರಾಗುತ್ತಾನೇಂತ ಅವರು ಪದೇ ಪದೇ ಹೇಳಿಕೊಂಡಿದ್ದರು. ಪಿಯೂಸಿ ಸೇರಿದ ನಂತರ ಭರತ್‌ಗೆ ಮಾತ್ರ ತಾನು ವೈದ್ಯಕೀಯವನ್ನು ಓದುವುದು ಇಷ್ಟವಿರಲಿಲ್ಲ. ತಾನು ಡಾಕ್ಟರಾದರೆ, ತನಗಿಂತಲೂ ತನ್ನ ಪಾಲಕರಿಗೆ ಸಂತೋಷವಾಗುತ್ತದೆ. ಹೆಮ್ಮೆ ಪಡುತ್ತಾರೆ. ಸಂಬಂಧಿಕರ ಮುಂದೆ, ಅವರಿವರ ಮುಂದೆ ಪ್ರತಿಷ್ಠೆ ಮಾಡುತ್ತಾರೆ. ಎನ್ನುವುದೆಲ್ಲವೂ ಅವನ ಮನಸ್ಸಿಗೆ ಅರ್ಥವಾಗಿತ್ತು. ಹಾಗಾಗಿ ಮನಸ್ಸಿನಲ್ಲಿ ತಾನು ಮೆಡಿಕಲ್ ಓದಬಾರದು ಎಂದುಕೊಂಡಿದ್ದ. ಆ ಮೂಲಕ ತನ್ನ ಪಾಲಕರಿಗೆ ನಿರಾಸೆಯನ್ನು ಮಾಡಬೇಕೂಂತ ನಿರ್ಧರಿಸಿದ್ದ. ಮಾತಿಗೆ ತಪ್ಪುವ ಪಾಲಕರನ್ನು ಹೀಗೆಯೇ ಸೋಲಿಸಬೇಕೆಂದುಕೊಂಡಿದ್ದ.
ತನ್ನ ಸೋಲಿನಿಂದ ಪಾಲಕರಿಗೆ ನೋವಾಗುತ್ತದೆ ಎನ್ನುವುದಕ್ಕಾಗಿ ಆತ ಹಾಗೆ ಮಾಡಲಾರಂಭಿಸಿದ್ದ. ಆದರೆ ಅವನ ಇವೆಲ್ಲ ನಿರ್ಧಾರಗಳನ್ನು ಆತ ಗೊತ್ತಿದ್ದೇ ಮಾಡಿರಲಿಲ್ಲ. ಅವೆಲ್ಲವೂ ಅವನ ಅರಿವಿಗೆ ಬರದೇ, ಅವನ ಸುಪ್ತಮನಸ್ಸಿನಲ್ಲಿ ಆಗಿದ್ದವು. ಅಂತರಂಗದಲ್ಲಿ ಹುಟ್ಟಿಕೊಂಡಿದ್ದವು. ಹಾಗಾಗಿಯೇ ಅವನಿಗೆ ಅವನ ಸೋಲಿನಿಂದ (ಕಡಿಮೆ ಅಂಕಗಳನ್ನು ಪಡೆದಿದ್ದರಿಂದ) ಅವಮಾನವಾಗುತ್ತಿರಲಿಲ್ಲ! ಸಕಾರಣವಿಲ್ಲದೇ ದಿನದಿಂದ ದಿನಕ್ಕೆ ಕುಸಿಯುತ್ತಿರುವ ಮಗನಿಂದಾಗಿ ಪಾಲಕರು ಕಂಗಾಲಾಗಿದ್ದರು. (ಅವನನ್ನು ಸಂಮೋಹನ ಥೆರಪಿಯಿಂದ ಸರಿಪಡಿಸುವುದು ಸಾಧ್ಯವಿದೆ - ಲೇಖಕ)
ಇಲ್ಲೊಂದು ವಿಚಾರವನ್ನು ಗಮನಿಸಬೇಕು. ತಮ್ಮ ಮಕ್ಕಳ ಹತ್ತಿರ ಪಾಲಕರು ಹೀಗೆಲ್ಲ ಕರಾರು ಮಾಡಿಕೊಳ್ಳುವುದು ಎಷ್ಟು ಸರಿ? ಅಕಸ್ಮಾತ್ ಮಾಡಿಕೊಂಡ ಕರಾರಿಗೆ ತಪ್ಪಿದರೆ ಸರಿಯೇ? ಮುಂದೆ ಮಕ್ಕಳೂ ಬಹಳಷ್ಟು ಕರಾರುಗಳಿಗೆ ತಪ್ಪಬಹುದಷ್ಟೇ? ಆಗ ಮಕ್ಕಳ ತಪ್ಪು ಮಾಡಿದ್ದಾರೆ ಎನ್ನಬಹುದೇ?
ಮಕ್ಕಳು ಚಿಕ್ಕವರಿರುವಾಗಿನಿಂದಲೇ ಮಕ್ಕಳಿಗೆ ಪಾಲಕರು ರ‍್ಯಾಂಕು ಬಂದರೆ ಬಟ್ಟೆ ಕೊಡಿಸುತ್ತೇನೆ. ಹೇಳಿದಂತೆ ಕೇಳಿದರೆ ಐಸ್‌ಕ್ರೀಂ ಕೊಡಿಸುತ್ತೇನೆ. ತಾನು ಹೇಳಿದಂತೆ ಕೇಳಿದರೆ ಸೈಕಲ್ ಕೊಡಿಸುತ್ತೇನೆ. ಹೈಸ್ಕೂಲು ಮುಗಿದ ಮೇಲೆ ಮೊಬೈಲು ಕೊಡಿಸುತ್ತೇನೆ ಎಂದೆಲ್ಲ ಭರವಸೆ ಕೊಡುತ್ತಾರೆ. ಮೊದಲೆಲ್ಲ ಹಾಗೆಯೇ ಮಾಡುತ್ತಾರೆ. ಅದು ಮಕ್ಕಳಿಗೆ ರೂಢಿಯಾಗುತ್ತದೆ. ಪಾಲಕರು ಹೇಳಿದಂತೆ ಕೇಳಿದರೆ ತನಗೆ ವಿಶೇಷವಾದ ಲಾಭವಾಗುತ್ತದೆ ಎನ್ನುವುದನ್ನು ಮಕ್ಕಳು ಅನುಭವಿಸಿರುತ್ತಾರೆ. ಅದನ್ನೇ ರೂಢಿಸಿಕೊಂಡಿರುತ್ತಾರೆ.
ಇಲ್ಲಿ ಮಗುವಿಗೆ ತಾನು ಮಾಡಬೇಕಾದ ಕೆಲಸವನ್ನು ತಾನು ಮಾಡಬೇಕು. ಅದು ತನ್ನ ಕೆಲಸ ಎನ್ನುವುದನ್ನು ಸರಿಯಗಿ ಪಾಲಕರು ಕಲಿಸಬೇಕು. ಸಾಧ್ಯವಾದಷ್ಟು ಚೆನ್ನಾಗಿ ಓದುವುದು ಮಗುವಿನ ಕೆಲಸ. ಅದನ್ನು ಮಾಡಿ ಅದರಿಂದ ಸಿಗುವ ಸಂತೋಷವನ್ನು, ಯಶಸ್ಸನ್ನು ಮಗು ಅನುಭವಿಸಬೇಕು. ಅದನ್ನು ಮಾಡಿದ್ದಕ್ಕಾಗಿ ಪಾಲಕರು ವಿಶೇಷವಾದ ಟಿಪ್ಸ್ ಕೊಡುವ ಅಗತ್ಯವಿಲ್ಲ. ಪಾಲಕರು ತಮ್ಮ ಮಗುವನ್ನು ಪ್ರೀತಿಸುವುದಕ್ಕೂ ಮಗುವಿನ ಬೇಕು ಬೇಡಗಳನ್ನು ನೋಡಿಕೊಳ್ಳುವುದಕ್ಕೂ ಮಗು ತನ್ನ ಕೆಲಸವನ್ನು ಸರಿಯಾಗಿ, ಶ್ರದ್ಧೆಯಿಂದ ಮಾಡುವುದಕ್ಕೂ ಅಥವಾ ಮಾಡದಿರುವುದಕ್ಕೂ ಸಂಬಂಧವನ್ನು ಕಲ್ಪಿಸಬಾರದು. ಮಗು ಸ್ವತಂತ್ರವಾಗಿ ತನ್ನ ಶಕ್ತಿ-ಸಾಮರ್ಥ್ಯಕ್ಕನುಗುಣವಾಗಿ ಬೆಳೆಯುವುದಕ್ಕೆ ಪಾಲಕರು ಆಸರೆಯಾಗಿರಬೇಕು. ಆದರೆ ಮಗುವಿನ ಮನಸ್ಸನ್ನು ಋಣಾತ್ಮಕವಾಗಿ ಕಂಡೀಶನಿಂಗ್ ಮಾಡಬಾರದು. ಮುಂದೆ ಕಾಲಕಳೆದಂತೆ ಮಕ್ಕಳು ಬೆಳೆದು ದೊಡ್ಡವರಾಗುತ್ತಾರೆ. ನೌಕರಿ ಸೇರುತ್ತಾರೆ. ಅಲ್ಲಿಯೂ ತಾನು ತನ್ನ ಕೆಲಸವನ್ನು ಮಾಡಿದ್ದಕ್ಕಾಗಿ ರುಶುವತ್ತನ್ನು ನಿರೀಕ್ಷಿಸುತ್ತಾರೆ. ಹೀಗೇ ಭ್ರಷ್ಟರಾಗುತ್ತಾರೆ.
ಪಾಲಕರು ಮಗುವಿನ ಜೊತೆಗೆ ಮಾಡಿಕೊಂಡ ಕರಾರನ್ನು ಪಾಲಿಸಿದರೂ, ಪಾಲಿಸದಿದ್ದರೂ ಅಂಥ ಕರಾರಿನಿಂದಾಗಿ ಮಗುವಿನ ಮಾನಸಿಕ ಬೆಳವಣಿಗೆಯಲ್ಲಿ ದೋಷವಾಗುತ್ತದೆ. ತಾನು ಮಾಡಬೇಕಾದ ತನ್ನ ಕೆಲಸವನ್ನು ಮಾಡಿದ್ದಕ್ಕೆ ಉಳಿದವರಿಂದ ವಿಶೇಷವಾಗಿ ಏನನ್ನೋ ಅಪೇಕ್ಷಿಸುವುದು ಚಟವಾಗಿ ಬೆಳೆಯುತ್ತದೆ. ಹಾಗಾಗುವುದು ಸರಿಯಲ್ಲ. ಅಲ್ಲವೇ?!
**
ಆಮಿಷಕ್ಕೆ ನೂಕದಿರಿ
ಮಕ್ಕಳಲ್ಲಿ ಅವರು ಅವರು ಮಾಡಬೇಕಾದ ಅವರ ಕೆಲಸವನ್ನು (ಓದುವುದನ್ನು /ಆಡುವುದನ್ನು) ಸರಿಯಾಗಿ ಮಾಡಿದರೆ ವಿಶೇಷವಾದ ಸೌಲಭ್ಯವನ್ನು ಕೊಡುವುದನ್ನು ಪಾಲಕರು ಕಲಿಸಬಾರದು. ಮಗು ತಾನು ಮಾಬೇಕಾದ ತನ್ನ ಕೆಲಸವನ್ನು ತನ್ನಷ್ಟಕ್ಕೆ ಸರಿಯಾಗಿ ಮಾಡಬೇಕು.
ಅದರಿಂದ ಸಿಗುವ ಸುಖವನ್ನು, ಹೆಮ್ಮೆಯನ್ನು ಮಗು ಅನುಭವಿಸಬೇಕು. ಮಗು ಬೆಳೆದು ಪ್ರೌಢವ್ಯಕ್ತಿಯಾಗಿ ಸ್ವತಂತ್ರವಾಗಿ ಬದುಕನ್ನು ರೂಪಿಸಿಕೊಳ್ಳುವಷ್ಟು ಸಶಕ್ತನನ್ನಾಗಿ ಮಾಡಲಿಕ್ಕೆ ಪ್ರಯತ್ನಿಸಬೇಕು. ಮಗುವಿನ ಯಶಸ್ಸಿಗೆ ಸಹಾಯಕರಾಗಿ ಮಾಡುವುದು ಪಾಲಕರ ಕೆಲಸ. ಅವರಿಗೆ ಆಮಿಷವನ್ನು ಕೊಡುವದನ್ನು ರೂಢಿ ಮಾಡುವುದು ಸರಿಯಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.