ADVERTISEMENT

PV Web Exclusive: ಬುಡ್ಗ ಜಂಗಮ ಮಕ್ಕಳ ಜ್ಞಾನದೇಗುಲ ಈ ‘ಟೆಂಟ್ ಶಾಲೆ’

ಅ. 5 ವಿಶ್ವ ಶಿಕ್ಷಕರ ದಿನ

ಮಂಜುಶ್ರೀ ಎಂ.ಕಡಕೋಳ
Published 5 ಅಕ್ಟೋಬರ್ 2020, 10:16 IST
Last Updated 5 ಅಕ್ಟೋಬರ್ 2020, 10:16 IST
ಯಾದಗಿರಿ ಜಿಲ್ಲೆಯ ಗುರುಮಠಕಲ್ ಪಟ್ಟಣದ ಪುರಸಭೆಯ ಎದುರಿನ ಬಯಲಿನಲ್ಲಿ ಬುಡ್ಗ ಜಂಗಮ ಸಮುದಾಯದ ಮಕ್ಕಳು ಓದುತ್ತಿರುವುದು.
ಯಾದಗಿರಿ ಜಿಲ್ಲೆಯ ಗುರುಮಠಕಲ್ ಪಟ್ಟಣದ ಪುರಸಭೆಯ ಎದುರಿನ ಬಯಲಿನಲ್ಲಿ ಬುಡ್ಗ ಜಂಗಮ ಸಮುದಾಯದ ಮಕ್ಕಳು ಓದುತ್ತಿರುವುದು.   
""
""

ಅ. 5 ವಿಶ್ವ ಶಿಕ್ಷಕರ ದಿನ,‘ಶಿಕ್ಷಕರುಬಿಕ್ಕಟ್ಟಿನಲ್ಲಿ ಮುನ್ನಡೆಸುವವರು, ಭವಿಷ್ಯವನ್ನು ಮರುರೂಪಿಸುವವರು’ ಅನ್ನುವುದು ಈ ಬಾರಿ ವಿಶ್ವ ಶಿಕ್ಷಕರ ದಿನದ ಸಂದೇಶ. ವಿಶ್ವಸಂಸ್ಥೆ ನೀಡಿರುವ ಈ ಸಂದೇಶವು ಕೊರೊನಾ ಸಂಕಷ್ಟದಲ್ಲೂ ಶಿಕ್ಷಕ ಶಾಂತಪ್ಪ ಅವರಂಥವರು ತಮ್ಮ ಕ್ಷೇತ್ರದಲ್ಲಿ ನಿಭಾಯಿಸುತ್ತಿರುವ ಪಾತ್ರದ ಮಹತ್ವವನ್ನು ಮನಗಾಣಿಸುವಂತಿದೆ.

***

ಹಗಲಿಡೀ ಭಿಕ್ಷಾಟನೆ ಮಾಡಿ ಅಂದಿನ ತುತ್ತಿಗಾಗಿ ಕಾಳುಕಡಿ ಸಂಗ್ರಹಿಸುವ ಆ ಪೋರರು ಸಂಜೆಯಾಗುವುದನ್ನೇ ಕಾಯುತ್ತಾರೆ. ಬಾನಲ್ಲಿ ಅತ್ತ ಸೂರ್ಯ ಮುಳುಗುತ್ತಲೇ ಅಂದಿನ ಭಿಕ್ಷೆಯನ್ನು ಪೋಷಕರಿಗೆ ಒಪ್ಪಿಸಿ, ಕೈಕಾಲು ಮುಖತೊಳೆದು, ತಲೆ ಬಾಚಿಕೊಂಡು ಸೀದಾ ಟೆಂಟ್ ಶಾಲೆಯತ್ತ ಓಡುತ್ತಾರೆ...

ADVERTISEMENT

ಮೇಲೊಂದು ತಗಡು, ಸುತ್ತಲೂ ಸೀರೆಗಳಿಂದ ಆವರಿಸಿಕೊಂಡಿರುವ ಆ ಟೆಂಟೇ ಈ ಅಲೆಮಾರಿ ಚಿಣ್ಣರ ಪಾಲಿಗೆ ಜ್ಞಾನದೇಗುಲ. ಅಲ್ಲಿನ ಸಣ್ಣ ಬಲ್ಬ್‌ನ ಬೆಳಕಲ್ಲೇ ಕಲಿಯುವ ಈ ಚಿಣ್ಣರ ಮನದಲ್ಲೀಗ ತಮ್ಮ ಭವಿಷ್ಯದ ಕುರಿತು ಬಣ್ಣಬಣ್ಣದ ಕನಸುಗಳು ಮೂಡಿವೆ.

–ಇದು ಯಾದಗಿರಿ ಜಿಲ್ಲೆಯ ಗುರುಮಠಕಲ್ ಪಟ್ಟಣದ ಟೆಂಟ್ ಶಾಲೆಯ ಕಥೆ.

ಇಲ್ಲಿನ ಪುರಸಭೆಯ ಮುಂದೆ–ಹಿಂದೆ ಹಾಗೂ ಎಪಿಎಂಸಿಯ ಅಕ್ಕಪಕ್ಕ ಸುಮಾರು 30 ಟೆಂಟ್‌ಗಳಲ್ಲಿ ವಾಸವಿರುವ ಬುಡ್ಗಜಂಗಮ ಅಲೆಮಾರಿ ಮಕ್ಕಳಿಗೆ ಸದ್ಯಕ್ಕೆ ಈ ಟೆಂಟ್ ಶಾಲೆಯೇ ಭವಿಷ್ಯದ ದೀವಟಿಗೆ.

ಯಾದಗಿರಿ ಜಿಲ್ಲೆಯ ಯಲಸತ್ತಿ ಸರ್ಕಾರಿ ಶಾಲೆಯ ಶಿಕ್ಷಕ ಶಾಂತಪ್ಪ ಯಾಳಗಿ ಅವರ ಆಸಕ್ತಿ ಮತ್ತು ಶ್ರಮದಿಂದ ರೂಪುಗೊಂಡಿರುವ ಈ ಟೆಂಟ್ ಶಾಲೆಯಲ್ಲೀಗ 32 ಮಕ್ಕಳು ಕಲಿಯುತ್ತಿದ್ದಾರೆ.

ಸಮುದಾಯದ ಮಕ್ಕಳ ಜೊತೆ ಶಿಕ್ಷಕ ಶಾಂತಪ್ಪ ಯಾಳಗಿ

ಸರ್ಕಾರಿ ಶಾಲೆಯ ಕೆಲಸ ಮುಗಿಸಿಕೊಂಡು, ಸಂಜೆ ಟೆಂಟ್ ಶಾಲೆಗೆ ಬರುವ ಶಾಂತಪ್ಪ ಅವರು, ಇಲ್ಲಿನ ಮಕ್ಕಳಿಗೆ ಅಕ್ಷರಾಭ್ಯಾಸ ಮಾಡಿಸುತ್ತಿದ್ದಾರೆ. ಶಾಂತಪ್ಪ ಅವರೊಂದಿಗೆ ಅವರ ಶಿಷ್ಯಂದಿರಾದ ಪದವಿ ಓದುವ ಭೀಮಾಶಂಕರ ಹಾಗೂ ಪಿಯುಸಿ ಓದುವ ಭೀಮಪ್ಪ ಕೂಡಾ ಕೈಜೋಡಿಸಿದ್ದಾರೆ.

ಆರು ವರ್ಷಗಳ ಹಿಂದೆ ಖಾಸಗಿ ಶಾಲೆಯಲ್ಲಿ ಶಿಕ್ಷಕರಾಗಿದ್ದಾಗ ಶಾಂತಪ್ಪ, ಗುರುಮಠಕಲ್‌ನ ಮತ್ತೊಂದು ಪ್ರದೇಶದಲ್ಲಿದ್ದ ಅಲೆಮಾರಿಗಳ ಮಕ್ಕಳಿಗೂ ಬೋಧಿಸುತ್ತಿದ್ದರು. ಸರ್ಕಾರಿ ನೌಕರಿ ದೊರೆತ ಮೇಲೆ ಜೋಯಿಡಾದ ಶಾಲೆಯಲ್ಲಿ ಕೆಲಸ ಮಾಡಿದ್ದ ಅವರು, ಅಲ್ಲಿ ಮನಸು ನಿಲ್ಲದೇ ಶಿಕ್ಷಕ ವೃತ್ತಿಗೆ ರಾಜೀನಾಮೆ ನೀಡಿದ್ದರು. ಒಂದೂವರೆ ವರ್ಷದ ಹಿಂದೆ ಪುನಃ ಶಿಕ್ಷಕರ ಪರೀಕ್ಷೆ ಬರೆದ ಅವರಿಗೆ ಯಾದಗಿರಿ ಜಿಲ್ಲೆಯಲ್ಲೇ ಶಿಕ್ಷಕ ನೌಕರಿ ದೊರೆಯಿತು.

ಆರು ವರ್ಷದ ಹಿಂದೆ ಆರಂಭಿಸಿದ್ದ ಆ ಕೆಲಸವನ್ನು ಮತ್ತೆ ಮುಂದುವರಿಸಿದ ಶಾಂತಪ್ಪ, ಈ ಬಾರಿ ಪುರಸಭೆಯ ಸುತ್ತಮುತ್ತಲಿನ ಬುಡ್ಗ ಜಂಗಮ ಮಕ್ಕಳಿಗೆ ಅಕ್ಷರ ಕಲಿಸುತ್ತಿದ್ದಾರೆ.

‘ನನ್ನವ್ವನಿಗೆ ಈಗ 87 ವರ್ಷ. ಈಗಷ್ಟೇ ಕೊರೊನಾದಿಂದ ಚೇತರಿಸಿಕೊಂಡಿದ್ಧಾಳೆ. ಮನೆಯಲ್ಲಿ ಒಬ್ಬಳನ್ನೇ ಬಿಟ್ಟು ಹೋಗಲಾಗದು. ಹಾಗಾಗಿ, ಮನೆಯಿಂದ ಮೂರ್ನಾಲ್ಕು ನಿಮಿಷ ದೂರವಿರುವ ಈ ಟೆಂಟ್‌ಗಳ ಮಕ್ಕಳಿಗೆ ಕಲಿಸುವ ನಿರ್ಧಾರ ಕೈಗೊಂಡೆ. ಆರಂಭದಲ್ಲಿ ಬುಡ್ಗ ಜಂಗಮ ಸಮುದಾಯವಿರುವ ಟೆಂಟ್‌ಗಳಿಗೆ ಹೋಗಿ ಅವರ ಪೋಷಕರ ಮನವೊಲಿಸಿದೆ. ನಿಮ್ಮ ಮಕ್ಕಳಿಗೆ ಸಂಜೆ ಪಾಠ ಮಾಡುತ್ತೇನೆ ಕಳಿಸಿಕೊಡಿ ಎಂದೆ. ಮಕ್ಕಳೂ ಆಸಕ್ತಿ ತೋರಿಸಿದರು. ಸೆ. 13ರಿಂದ ಪುರಸಭೆಯ ಎದುರಿನ ಬಯಲಿನಲ್ಲೇ ಮಕ್ಕಳಿಗೆ ಪಾಠ ಹೇಳಿಕೊಡಲು ಶುರುಮಾಡಿದೆ’ ಎನ್ನುತ್ತಾರೆ ಶಾಂತಪ್ಪ.

‘ಮಳೆ ಬಂದಾಗ ಮಕ್ಕಳಿಗೆ ಓದಿಸುವುದು ಕಷ್ಟವಾಗುತ್ತೆ ಅಂತ ನಾನೂ ಸ್ವಲ್ಪ ದುಡ್ಡುಹಾಕಿ ಸ್ನೇಹಿತರ ನೆರವಿನಿಂದ ಟೆಂಟ್ ಶಾಲೆ ಕಟ್ಟಿದೆವು. ಶಾಲೆಗೆ ಹೆಸರು, ಲೋಗೊ ಕೊಟ್ಟರೆ ಅನುಮತಿ ಪಡೆಯಬೇಕೆಂಬ ನಿಯಮವಿದೆ. ಅದಕ್ಕೆ ವ್ಯಯಿಸುವಷ್ಟು ಹಣ ನನ್ನಲ್ಲಿ ಇಲ್ಲ. ಹಾಗಾಗಿ, ಹೆಸರು, ಲೋಗೊ ಇಡಲಿಲ್ಲ’ ಎನ್ನುತ್ತಾರೆ ಅವರು.

ಶಾಲೆ ಆರಂಭಿಸಿದ ಬಗ್ಗೆ ಫೇಸ್‌ಬುಕ್‌ನಲ್ಲಿ ಶಾಂತಪ್ಪ ಅವರು ಪೋಸ್ಟ್ ಹಾಕಿದ್ದನ್ನು ನೋಡಿ ಹಲವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅಷ್ಟೇ ಅಲ್ಲ, ಅವರ ಕೆಲ ಸ್ನೇಹಿತರು ಹಾಗೂ ದಾನಿಗಳು ಮಕ್ಕಳಿಗೆ ಮಾಸ್ಕ್, ಮ್ಯಾಟ್, ಕಾಂಪಸ್ ಬಾಕ್ಸ್, ಅಂಕಲಿಪಿ ಪುಸ್ತಕ ಮತ್ತು ಶಾಲಾ ಬ್ಯಾಗ್ ಕೊಡಿಸಿದ್ದಾರೆ.

ಪಕ್ಕದ ಹೈದರಾಬಾದ್, ತೆಲಂಗಾಣ ಸೇರಿದಂತೆ ಇನ್ನಿತರ ಕಡೆ ವಲಸೆ ಹೋಗುವ ಬುಡ್ಗ ಜಂಗಮ ಸಮುದಾಯವು, ಒಮ್ಮೊಮ್ಮೆ ವಾಪಸ್ ಬರುತ್ತದೆ. ಆದರೂ, ಇಲ್ಲಿರುವ 32 ಮಕ್ಕಳು ಒಂದೆಡೆ ಸೇರಿ ಕಲಿಯುತ್ತಿರುವುದು ಪೋಷಕರಲ್ಲಿ ಸಂತಸ ತಂದಿದೆ. ಟೆಂಟ್ ಶಾಲೆಗೆ ಬರುವ ಮಕ್ಕಳ ಸಂಖ್ಯೆಯಲ್ಲಿ ಅರ್ಧಕ್ಕಿಂತಲೂ ಹೆಚ್ಚು ಹೆಣ್ಣುಮಕ್ಕಳಿದ್ದಾರೆ. ಈಚೆಗಷ್ಟೇ ಅದರಲ್ಲಿ ಒಂದು ಮಗುವಿನ ಕುಟುಂಬ ವಲಸೆ ಹೋಗಿದೆ. ಬುಡ್ಗ ಜಂಗಮ ಮಕ್ಕಳ ಜೊತೆಗೆ ಇತ್ತೀಚೆಗೆ ಬೈಲುಕಂಬಾರ ಸಮುದಾಯದ ಮೂರು ಮಕ್ಕಳು ಟೆಂಟ್ ಶಾಲೆಗೆ ಪ್ರವೇಶ ಪಡೆದಿದ್ದಾರೆ. ಮಹಾರಾಷ್ಟ್ರದಿಂದ ವಲಸೆ ಬಂದಿರುವ ಈ ಸಮುದಾಯ ಸದ್ಯಕ್ಕೆ ಗುರುಮಠಕಲ್‌ನಲ್ಲಿ ನೆಲೆಸಿದೆ.

ಬಡತನ ಮತ್ತು ಕುಲಕಸುಬಿನ ಕಾರಣಗಳಿಗಾಗಿ ಬುಡ್ಗ ಜಂಗಮ ಮತ್ತು ಬೈಲು ಕುಂಬಾರ ಸಮುದಾಯಗಳು ತಮ್ಮ ಮಕ್ಕಳನ್ನು ಶಾಲೆಗೆ ಸೇರಿಸಲು ಹಿಂದೇಟು ಹಾಕುತ್ತಾರೆ. ಅವರ ನಿತ್ಯದ ಬದುಕಿಗೆ ತೊಂದರೆಯಾಗದಂತೆ ಬೆಳಿಗ್ಗೆ ಅಥವಾ ಸಂಜೆ ಯಾರಾದರೂ ಶಿಕ್ಷಕರು ಅವರಿದ್ದಲ್ಲಿಯೇ ಬಂದು ಪಾಠ ಮಾಡಿದರೆ ಈ ಮಕ್ಕಳು ಶಿಕ್ಷಣ ಪಡೆಯಲು ಸಾಧ್ಯ ಎನ್ನುತ್ತಾರೆ ಸಮುದಾಯದ ಮುಖಂಡರು.

ಟೆಂಟ್ ಶಾಲೆಯ ಒಳಗಿನ ದೃಶ್ಯ

‘ಟೆಂಟ್‌ ಶಾಲೆಯಲ್ಲಿ 10, 12, 13 ವರ್ಷ ವಯೋಮಾನದ ಮಕ್ಕಳಿದ್ದಾರೆ. ಇವರಲ್ಲಿ 8 ಮಂದಿ ಮಾತ್ರ ಶಾಲೆಯಲ್ಲಿ ದಾಖಲಾತಿ ಪಡೆದಿದ್ದಾರೆ. ಆದರೆ, ಅವರಿಗೆ ಅಕ್ಷರ ಜ್ಞಾನ ಅಷ್ಟಿಲ್ಲ. ಕಲಿತದ್ದನ್ನು ಮರೆತಿದ್ದಾರೆ. ಮತ್ತೆ ಕೆಲವರು ಶಾಲೆಯ ಮುಖವನ್ನೇ ನೋಡಿಲ್ಲ. ಅವರಿಗೆ ಬೇಸಿಕ್ಸ್ ಕಲಿಸಿಕೊಡಲಾಗುತ್ತಿದೆ. ಬುಡ್ಗಜಂಗಮದಲ್ಲಿರುವ ಕೆಲ ಕುಟುಂಬಗಳು ಮಾತ್ರ ಭಿಕ್ಷೆ ಬೇಡುತ್ತಿವೆ. ಕೆಲ ಕುಟುಂಬಗಳು ಸೋಪು ಸೇರಿದಂತೆ ಸಣ್ಣಪುಟ್ಟ ಸಾಮಾನು ಮಾರುತ್ತಾರೆ. ಮೂಲತಃ ಇವರು ಹಗಲುವೇಷಗಾರರು. ಬುಡ್ಗ ಜಂಗಮ ಮಕ್ಕಳು ಅಪೌಷ್ಟಿಕತೆಯಿಂದ ಬಳಲುತ್ತಿದ್ದಾರೆ’ ಎಂದು ಮಾಹಿತಿ ನೀಡುತ್ತಾರೆ ಶಾಂತಪ್ಪ.

‘ಈಗಾಗಲೇ ಶಾಲೆಗೆ ಹೋಗುತ್ತಿದ್ದ ಕೆಲ ಮಕ್ಕಳನ್ನು ತರಗತಿವಾರು ಗುಂಪು ಮಾಡಿದ್ದೇವೆ. ಅದರಲ್ಲಿಯೇ ಹಿರಿಯ ಮಕ್ಕಳನ್ನು ಗುಂಪಿನ ಲೀಡರ್‌ಗಳನ್ನಾಗಿ ಮಾಡಿದ್ದೇವೆ. ಅವರೇ ತಮ್ಮ ಗುಂಪುಗಳ ಇತರ ಮಕ್ಕಳಿಗೆ ಮನೆಗೆಲಸ ಹಾಕಿಕೊಡುತ್ತಾರೆ ತಿದ್ದುತ್ತಾರೆ. ತೆಲುಗು ಮಾತೃಭಾಷೆಯ ಬುಡ್ಗ ಜಂಗಮ ಮಕ್ಕಳಿಗೆ ಕನ್ನಡ ಅರ್ಥವಾಗುತ್ತೆ. ಆದರೆ, ಮಾತನಾಡುವುದು ತುಸು ಕಷ್ಟ. ಹಾಗಾಗಿ, ನಾನು ತೆಲುಗು ಕಲಿಯಲು ಯತ್ನಿಸುತ್ತಿರುವೆ’ ಎನ್ನುತ್ತಾರೆ ಅವರು.

ಅ. 5 ವಿಶ್ವ ಶಿಕ್ಷಕರ ದಿನ: ‘ಶಿಕ್ಷಕರು: ಬಿಕ್ಕಟ್ಟಿನಲ್ಲಿ ಮುನ್ನಡೆಸುವವರು, ಭವಿಷ್ಯವನ್ನು ಮರುರೂಪಿಸುವವರು’ ಅನ್ನುವುದು ಈ ಬಾರಿ ವಿಶ್ವ ಶಿಕ್ಷಕರ ದಿನದ ಸಂದೇಶ. ವಿಶ್ವಸಂಸ್ಥೆ ನೀಡಿರುವ ಈ ಸಂದೇಶವು ಕೊರೊನಾ ಸಂಕಷ್ಟದಲ್ಲೂ ಶಿಕ್ಷಕ ಶಾಂತಪ್ಪ ಅವರಂಥವರು ತಮ್ಮ ಕ್ಷೇತ್ರದಲ್ಲಿ ನಿಭಾಯಿಸುತ್ತಿರುವ ಪಾತ್ರದ ಮಹತ್ವವನ್ನು ಮನಗಾಣಿಸುವಂತಿದೆ.

ಬುಡ್ಗ ಜಂಗಮ ಸಮುದಾಯ ಪರಿಚಯ:ಅಲೆಮಾರಿಯಾಗಿರುವ ಬುಡ್ಗ ಜಂಗಮ ಸಮುದಾಯವು ಸಾಂಸ್ಕೃತಿಕ ಶ್ರೀಮಂತಿಕೆ ಹೊಂದಿದೆ. ಆದರೆ, ಶೈಕ್ಷಣಿಕ, ಆರ್ಥಿಕ ಹಾಗೂ ಸಾಮಾಜಿಕವಾಗಿ ಈ ಸಮುದಾಯ ಹಿಂದುಳಿದಿದೆ. ಹಗಲು ವೇಷ, ಬುರ‍್ರಾ ಕಥೆಗಳ ಕಾರಣಕ್ಕಾಗಿ ಈ ಸಮುದಾಯ ಪ್ರಸಿದ್ಧಿ. ರಾಮ, ಲಕ್ಷ್ಮಣ, ಆಂಜನೇಯನ ವೇಷ ಧರಿಸಿ ಊರೂರು ಸುತ್ತಿ ಭಿಕ್ಷೆ ಬೇಡುತ್ತಾರೆ ಎಂದು ಮಾಹಿತಿ ನೀಡುತ್ತಾರೆ ಹಿಂದುಳಿದ ವರ್ಗಗಳ ಆಯೋಗದ ಮಾಜಿ ಅಧ್ಯಕ್ಷ ಡಾ.ಸಿ.ಎಸ್. ದ್ವಾರಕನಾಥ್.

ಬೈಲು ಕಂಬಾರ ಸಮುದಾಯ ಪರಿಚಯ:ಊರಿನಾಚೆ ಟೆಂಟ್ ಹಾಕಿಕೊಂಡು ಸಣ್ಣಪುಟ್ಟ ಹಿತ್ತಾಳೆ ಇಲ್ಲವೇ ಕಬ್ಬಿಣದ ಉಂಗುರ, ಬಳೆ ಇತ್ಯಾದಿಗಳನ್ನು ಮಾಡಿ, ಮಾರುತ್ತಾರೆ. ಬಯಲಿನಲ್ಲಿ ಕಮ್ಮಾರಿಕೆ ಮಾಡುವುದರಿಂದ ಬೈಲು ಕಂಬಾರ ಎನ್ನುವ ಹೆಸರು ಬಂದಿದೆ.

ಸಂಪರ್ಕ ಸಂಖ್ಯೆ: 70227 36800.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.