ನಾನು ದ್ವಿತೀಯ ಪಿಯುಸಿ ಪಾಸ್ ಮಾಡಿದ್ದೇನೆ. ಪದವಿಯಲ್ಲಿ ಬ್ಯುಸಿನೆಸ್ ಅನಾಲಿಟಿಕ್ಸ್ ಆಯ್ಕೆ ಮಾಡಿಕೊಂಡಿದ್ದೇನೆ. ಈ ಕೋರ್ಸ್ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನೀಡಿ. ಹಾಗೆಯೇ ಉದ್ಯೋಗಾವಕಾಶಗಳ ಬಗ್ಗೆಯೂ ತಿಳಿಸಿ.
- ಸುಮಾ ಮಾದೇಶ್, ಊರು ಇಲ್ಲ
ಸುಮಾ, ಬ್ಯುಸಿನೆಸ್ ಅನಾಲಿಟಿಕ್ಸ್ ಅಥವಾ ವ್ಯವಹಾರ ವಿಶ್ಲೇಷಣೆ ಸದ್ಯ ಬಹಳ ಬೇಡಿಕೆ ಇರುವಂತಹ ಕ್ಷೇತ್ರಗಳಲ್ಲಿ ಒಂದು. ವ್ಯವಹಾರ, ಬ್ಯಾಂಕಿಂಗ್ ಮತ್ತು ಇತರ ಕ್ಷೇತ್ರಗಳಲ್ಲಿ ಡೇಟಾ (ಮಾಹಿತಿ) ಆಧಾರಿತವಾದ ವಿಶ್ಲೇಷಣೆ ಮತ್ತು ವರದಿ ನೀಡುವುದು ಬ್ಯುಸಿನೆಸ್ ಅನಾಲಿಸ್ಟ್‌ಗಳ ಕೆಲಸ. ಹೆಚ್ಚು ಕಡಿಮೆ ಎಲ್ಲಾ ಪ್ರತಿಷ್ಠಿತ ಕಂಪನಿಗಳಲ್ಲಿ ಉದ್ಯೋಗದ ಅವಕಾಶಗಳಿರುತ್ತವೆ. ಎಲ್ಲಾ ಸರಿಯಾಗಿದ್ದರೆ ನೀವು ಪದವಿ ಮುಗಿಸುವ ಹೊತ್ತಿಗೆ ಇದು ಇನ್ನೂ ಹೆಚ್ಚು ಬೇಡಿಕೆಯ ಮತ್ತು ಹೆಚ್ಚಿನ ಎಲ್ಲಾ ಕಂಪನಿಗಳು ಇಂಥವರನ್ನು ಬಳಸಿಕೊಳ್ಳುವ ಕ್ಷೇತ್ರವಾಗಲಿದೆ.ಬ್ಯುಸಿನೆಸ್ ಅನಾಲಿಸ್ಟ್ ಆಗಲು ಅಲ್ಲಿ ಬಳಸುವ ಸಾಫ್ಟ್‌ವೇರ್ ಜ್ಞಾನ, ಬ್ಯುಸಿನೆಸ್ ಕ್ಷೇತ್ರದ ಜ್ಞಾನ, ಸಂಖ್ಯಾಶಾಸ್ತ್ರ, ವರದಿ ಮಾಡಲು ಉತ್ತಮ ಸಂವಹನ ಇತ್ಯಾದಿ ಬಹುವಿಧದ ಕೌಶಲಗಳು ಬೇಕು. ಹಾಗಾಗಿ ನೀವು ಪದವಿ ಓದುವ ಸಂದರ್ಭದಲ್ಲಿ ಈ ಬಗ್ಗೆ ಕಲಿತುಕೊಳ್ಳಿ. ಅದರ ಜೊತೆಗೆ ಇಂಗ್ಲಿಷ್ ಭಾಷೆಯ ಉತ್ತಮ ಕೌಶಲವನ್ನು ಗಳಿಸಿಕೊಳ್ಳಿ. ಶುಭಾಶಯ.
***
ನನ್ನದು ಬಿ.ಕಾಂ ಮುಗಿದಿದೆ. ನಾನು ನಮ್ಮ ಸಂಬಂಧಿಕರ ಅಂಗಡಿಯಲ್ಲಿ ಕಂಪ್ಯೂಟರ್ ಹಾರ್ಡ್‌ವೇರ್ ಕೆಲಸ ಮಾಡುತ್ತೇನೆ. ಆದರೆ ನನಗೆ ಸ್ಪರ್ಧಾತ್ಮಕ ಪರೀಕ್ಷೆ ಓದುವ ಆಸೆ. ಆದರೆ ಓದಲು ಆಗುತ್ತಿಲ್ಲ. ಏನು ಮಾಡಬೇಕು ಸರ್.
- ಶಿವ ಪಿ., ಊರು ಇಲ್ಲ.
ಶಿವ, ಓದಲು ಆಗುತ್ತಿಲ್ಲ ಎಂದು ನೀವು ಹೇಳಿದ್ದೀರಿ. ಆದರೆ ಯಾಕಾಗಿ ಎಂದು ವಿವರವಾಗಿ ಹೇಳಿಲ್ಲ. ಸಮಯದ ಅಭಾವದಿಂದಲೆ? ಅಥವಾ ಓದುವ ವಿಧಾನಗಳ ಬಗ್ಗೆ ಗೊತ್ತಿಲ್ಲವೆ? ಯಾವ ಪರೀಕ್ಷೆಗೆ ಹೇಗೆ ಓದಬೇಕು ಎಂದು ತಿಳಿಯದೇ ಇರುವುದರಿಂದಲೇ ಎಂದು ನೀವು ತಿಳಿಸಲಿಲ್ಲ. ಇರಲಿ. ಸಮಯದ ಅಭಾವದಿಂದಾದರೆ ಅದಕ್ಕೆ ನೀವು ನಿಮ್ಮ ಪರಿಸ್ಥಿತಿಗೆ ಅನುಗುಣವಾಗಿ ಹೇಗೆ ಹೊಂದಿಸಿಕೊಳ್ಳಬಹುದು ಎಂದು ನೋಡಬೇಕು. ಹೊಂದಿಸಿಕೊಳ್ಳಲು ಆಗದಿದ್ದರೆ ಪರ್ಯಾಯ ಏನು ಎಂದು ನೋಡಿ. ಇನ್ನು ಓದುವ ಮತ್ತು ಪಠ್ಯವಸ್ತುಗಳ ಕುರಿತು ಗೊಂದಲಗಳಿದ್ದರೆ ನಿಮ್ಮ ಶಿಕ್ಷಕರು ಅಥವಾ ಹತ್ತಿರದ ಕೋಚಿಂಗ್ ಸೆಂಟರ್ ಸಂಪರ್ಕಿಸಿ.
ಆಸೆ, ಕನಸುಗಳು ನಮ್ಮಲ್ಲಿ ಇರುತ್ತವೆ. ಆದರೆ ಅದನ್ನು ಕೈಗೂಡಿಸಿಕೊಳ್ಳಲು ಅಷ್ಟೇ ಪರಿಶ್ರಮ, ತಂತ್ರಗಳನ್ನು ರೂಪಿಸಿ
ಕೊಳ್ಳಬೇಕು. ಕನಸನ್ನು ಈಡೇರಿಸಿಕೊಳ್ಳುವ ನಿರ್ಧಾರ ದೃಢವಾಗಿ ಮಾಡಿದ್ದಲ್ಲಿ ಯೋಚಿಸಿ. ಮಾರ್ಗಗಳು ಹೊಳೆಯುತ್ತವೆ. ಶುಭಾಶಯ.
***
ನಾನು ಪದವಿ ಪೂರ್ಣಗೊಳಿಸಿದ್ದೇನೆ. ಬಿ.ಎ ಓದಿದ್ದೇನೆ. ಕಂಪ್ಯೂಟರ್ ಹಾರ್ಡ್‌ವೇರ್ ಕೋರ್ಸ್ ಮಾಡಿದ್ದೇನೆ. ಆದರೆ ಕೆಲಸದ ಅಭ್ಯಾಸವಿಲ್ಲ. ಅನುಭವ ಪಡೆದುಕೊಳ್ಳಲು ಒಂದು ಅವಕಾಶಕ್ಕಾಗಿ ಕಾಯುತ್ತಿರುವೆ. ದಯವಿಟ್ಟು ನನಗೆ ಮಾರ್ಗದರ್ಶನ ನೀಡಿ.
- ವಿನಯ್ ಕುಮಾರ್, ಊರು ಇಲ್ಲ.
ನಿಮ್ಮ ವೈಯಕ್ತಿಕ ಸಂಪರ್ಕ, ಅಂತರ್ಜಾಲ ಇತ್ಯಾದಿ ಬಳಸಿ ನೇರವಾಗಿ ಕೆಲಸ ಮಾಡಲು ನಿಮ್ಮ ಹತ್ತಿರದಲ್ಲಿ ಎಲ್ಲಾದರೂ ಅವಕಾಶ ಇದ್ದರೆ ಮಾಡಿ. ನೇರವಾಗಿ ಕೆಲಸ ಸಿಗದಿದ್ದರೆ ಕೋರ್ಸ್ ಮಾಡಿದ ನಂತರ ಕೆಲಸದ ಮುನ್ನ ಪ್ರಾಯೋಗಿಕ ಅನುಭವ ಪಡೆಯುವುದು ಬಹಳ ಮುಖ್ಯ. ಕೆಲಸ ಹುಡುಕುತ್ತ ಇದ್ದರೆ ಆ ಸಮಯ ಖಾಲಿಯಾಗಿ ಹೊರಟು ಹೋಗುತ್ತದೆ. ಅದಕ್ಕಿರುವ ಉಪಾಯವೆಂದರೆ ಎಲ್ಲಾದರೂ ಕಂಪ್ಯೂಟರ್ ಹಾರ್ಡ್‌ವೇರ್ ಕ್ಷೇತ್ರದಲ್ಲಿ ಇಂಟರ್ನ್‌ಶಿಪ್ ಮಾಡುವುದು ಅಥವಾ ಆ ಕಂಪನಿ ಅಥವಾ ಉದ್ದಿಮೆದಾರರ ಜೊತೆ ಕೆಲಸ ಕಲಿಯುವುದು. ಆ ಸಂದರ್ಭದಲ್ಲಿ ನಿಮಗೆ ಸರಿಯಾದ ವೇತನ ಸಿಗಬಹುದು ಅಥವಾ ಸಿಗದೇ ಇರಬಹುದು. ಆದರೆ ಆ ಬಗ್ಗೆ ಹೆಚ್ಚು ಆಲೋಚಿಸದೆ, ಆರೇಳು ತಿಂಗಳ ತನಕ ಕೆಲಸ ಕಲಿಯಲು ಪ್ರಯತ್ನಿಸಿ. ಅದಾದ ನಂತರ ಈ ಅನುಭವ ಬಳಸಿಕೊಂಡು ನೀವು ಬೇರೆ ಕಡೆ ಕೆಲಸ ಮಾಡಬಹುದು ಅಥವಾ ಮುಂದೆ ಸ್ವಂತ ಉದ್ಯೋಗವನ್ನು ಕೂಡ ಮಾಡಬಹುದು. ಶುಭಾಶಯ.
***
ನಾನು ಬಿ.ಕಾಂ ನಂತರ ಎಂ.ಬಿ.ಎ ಪದವಿ ಮುಗಿಸಿ ಈಗ ಫೈನಾನ್ಸ್ ಕಂಪನಿಯಲ್ಲಿ ಕೆಲಸ ಮಾಡ್ತಾ ಇದ್ದೇನೆ. ಒಂದು ಬಾರಿ ಯುಪಿಎಸ್‌ಸಿ ಪರೀಕ್ಷೆ ಬರೆದಿದ್ದೆ. ಆದರೆ ಪಾಸ್ ಆಗಲಿಲ್ಲ. ಅದಕ್ಕೆ ಕೋಚಿಂಗ್ ಪಡೆದು ಬರೆಯೋಣ ಎಂದು ನಿರ್ಧಾರ ಮಾಡಿದ್ದೇನೆ. ಆದರೆ ಒಂದೊಂದು ಸಲ ನಾನು ಕಾಣುವ ಕನಸಿಗೂ, ಮಾಡುತ್ತಿರುವ ಕೆಲಸಕ್ಕೂ ಸಂಬಂಧವಿಲ್ಲ ಅನಿಸುತ್ತದೆ . ನನಗೆ ಈಗ ತುಂಬಾ ಗೊಂದಲವಾಗುತ್ತಿದೆ.
- ಸಚಿನ್ ಗೌತಮ್, ಊರು ಇಲ್ಲ.
ಸಚಿನ್, ಮಧ್ಯಮ ವರ್ಗದ, ಒತ್ತಡದ ಜೀವನ ಮಾಡುವ ಅನೇಕರ ಪರಿಸ್ಥಿತಿ ಹೀಗೆಯೇ ಇರುತ್ತದೆ. ನಿಮಗೂ ಹೀಗೆ ಅನ್ನಿಸುವುದು ಸಾಮಾನ್ಯ. ಆ ಬಗ್ಗೆ ಹೆಚ್ಚು ಆಲೋಚಿಸದೆ, ಮುಂದೆ ಏನು ಮಾಡಬಹುದು ಎನ್ನುವುದರ ಬಗ್ಗೆ ಯೋಚಿಸಿ, ಯೋಜನೆ ರೂಪಿಸಿ. ನಿಮ್ಮ ಕನಸು ಯುಪಿಎಸ್‌ಸಿ ಪರೀಕ್ಷೆಯನ್ನು ತೇರ್ಗಡೆ ಮಾಡಿಕೊಂಡು ನಾಗರಿಕ ಸೇವೆಯನ್ನು ಸೇರುವುದು ಎಂದಿದ್ದರೆ, ಆ ಬಗ್ಗೆ ಹೇಗೆ ತಯಾರಿ ಮಾಡಿಕೊಳ್ಳಬಹುದು ಎಂದು ಯೋಜನೆ ರೂಪಿಸಿಕೊಳ್ಳಿ. ಕೋಚಿಂಗ್ ಪಡೆಯುವುದರ ಜೊತೆಗೆ ನಿಮ್ಮದೆ ಆದ ಓದಿನ ಕುರಿತು ಯೋಜನೆ ಮಾಡಿಕೊಳ್ಳಿ.ಕೋಚಿಂಗ್ ಪಡೆಯುವ ಸಂದರ್ಭದಲ್ಲಿ ಕೆಲಸ ಮಾಡುವ ಅನಿರ್ವಾರ್ಯತೆ ಇಲ್ಲದಿದ್ದಲ್ಲಿ ಸಂಪೂರ್ಣ
ವಾಗಿ ಓದಿನಲ್ಲೆ ತೊಡಗಿಕೊಳ್ಳಬಹುದು. ಒಂದು ವೇಳೆ ಕೆಲಸ ಮಾಡುವ ಅನಿವಾರ್ಯತೆ ಇದ್ದಲ್ಲಿ ನೀವು ಫೈನಾನ್ಸ್ ಕ್ಷೇತ್ರದಲ್ಲಿ ಮುಂದುವರಿಯಬಹುದು. ಈ ಕೆಲಸ ಪೂರಕವಾಗಿಲ್ಲ ಅಂತ ನಿಮಗೆ ಅನ್ನಿಸಿದರೆ ಬೇರೆ ಏನು ಕೆಲಸ ಮಾಡಬಹುದು ಎಂದು ಆಲೋಚಿಸಿ. ಯುಪಿಎಸ್‌ಸಿಗೆ ಪೂರಕವಾದಂತಹ ಕೆಲಸ ಅಂತ ಖಾಸಗಿ ಕ್ಷೇತ್ರದಲ್ಲಿ ಯಾವುದೂ ಇಲ್ಲ. ಯಾಕೆಂದರೆ ಯುಪಿಎಸ್‌ಸಿ ನಂತರ ಮಾಡುವ ಕೆಲಸ ಸಾರ್ವಜನಿಕ ಆಡಳಿತ. ಸಾರ್ವಜನಿಕ ಆಡಳಿತ ಅಥವಾ ಸಾಮಾಜಿಕ ಕ್ಷೇತ್ರದಲ್ಲಿ ಉದ್ಯೋಗ ಮಾಡಬೇಕಾದರೆ ಆ ಬಗ್ಗೆ ಕೆಲಸ ಮಾಡುವ ಎನ್.ಜಿ.ಒ.ಗಳಲ್ಲಿ ಅವಕಾಶಗಳನ್ನು ಪಡೆಯಬಹುದು. ಆದರೆ ಅದರಲ್ಲೂ ಅನೇಕ ಕ್ಷೇತ್ರಗಳಿವೆ ಮತ್ತು ಅದಕ್ಕೆ ಬೇಕಾದ ಪರಿಣತಿ ಬೇರೆ ಇರುತ್ತದೆ. ಆ ಬಗ್ಗೆ ತಿಳಿದು ಪ್ರಯತ್ನಿಸಿ. ಸದ್ಯ ಯುಪಿಎಸ್‌ಸಿ ಪರೀಕ್ಷೆಯ ತಯಾರಿ ನಡೆಸಿ ಮುಂದಿನ ವಿಚಾರ ಯೋಚಿಸಬಹುದು. ಶುಭಾಶಯ.
(ಅಂಕಣಕಾರರು ವೃತ್ತಿ ಮಾರ್ಗದರ್ಶಕರು,ಕೇಂದ್ರ ಉದ್ಯೋಗ ಮತ್ತು ಕಾರ್ಮಿಕ ಇಲಾಖೆ)
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.