ADVERTISEMENT

ಸಿಇಟಿ: ಪಠ್ಯ ಹೊರತಾದ ಪ್ರಶ್ನೆಗಳು 59

ಪಿಯು ಇಲಾಖೆ–ಪರೀಕ್ಷಾ ಪ್ರಾಧಿಕಾರ ಮಧ್ಯೆ ಆರೋಪ, ಪ್ರತ್ಯಾರೋ‍ಪ

​ಪ್ರಜಾವಾಣಿ ವಾರ್ತೆ
Published 20 ಏಪ್ರಿಲ್ 2024, 0:10 IST
Last Updated 20 ಏಪ್ರಿಲ್ 2024, 0:10 IST
   

ಬೆಂಗಳೂರು: ಎಂಜಿನಿಯರಿಂಗ್‌ ಸೇರಿದಂತೆ ವಿವಿಧ ವೃತ್ತಿಪರ ಕೋರ್ಸ್‌ಗಳ ಪ್ರವೇಶಕ್ಕಾಗಿ ನಡೆದ ಸಾಮಾನ್ಯ ಪ್ರವೇಶ ಪರೀಕ್ಷೆಯಲ್ಲಿ (ಸಿಇಟಿ) ಪಠ್ಯ ಹೊರತಾದ ಒಟ್ಟು 59 ಪ್ರಶ್ನೆಗಳನ್ನು ಕೇಳಿರುವುದಕ್ಕೆ ವಿದ್ಯಾರ್ಥಿಗಳಿಂದ ವ್ಯಾಪಕ ವಿರೋಧ ವ್ಯಕ್ತವಾಗಿದೆ.

ಏ. 18ರಂದು ನಡೆದ ಜೀವ ವಿಜ್ಞಾನ ಪ್ರಶ್ನೆ ಪತ್ರಿಕೆಯಲ್ಲಿ 13, ಗಣಿತದಲ್ಲಿ 16, 19ರಂದು ನಡೆದ ಭೌತ ವಿಜ್ಞಾನದಲ್ಲಿ 9 ಹಾಗೂ ರಸಾಯನ ವಿಜ್ಞಾನದಲ್ಲಿ 21 ಪ್ರಶ್ನೆಗಳು ಕಳೆದ ವರ್ಷ ಪಠ್ಯಕ್ರಮದಿಂದ ಕೈಬಿಟ್ಟಿದ್ದ ಪಾಠಗಳಿಗೆ ಸಂಬಂಧಿಸಿವೆ. ಜತೆಗೆ, ಭೌತವಿಜ್ಞಾನದಲ್ಲಿ ಅಸಮರ್ಪಕ ಮಾಹಿತಿಯ ಎರಡು ಪ್ರಶ್ನೆಗಳಿವೆ. ಈ ಪ್ರಮಾದ ಪರೀಕ್ಷೆ ನಡೆಸುವ ಹೊಣೆ ಹೊತ್ತ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಹಾಗೂ ಪದವಿಪೂರ್ವ ಶಿಕ್ಷಣ ಇಲಾಖೆ ಮಧ್ಯೆ ಪತ್ರ ಸಮರಕ್ಕೆ ದಾರಿ ಮಾಡಿಕೊಟ್ಟಿದೆ.

ಪ್ರಮಾದದ ನಂತರ ಎಚ್ಚೆತ್ತುಕೊಂಡ ಕೆಇಎ, ಪದವಿ ಪೂರ್ಣ ಶಿಕ್ಷಣ ಇಲಾಖೆಗೆ ಪತ್ರ ಬರೆದು, ವಿಜ್ಞಾನ ವಿಷಯಗಳ ಪಠ್ಯಕ್ರಮ ಕುರಿತು ವಿವರ ನೀಡುವಂತೆ ಕೋರಿತ್ತು. ಅದಕ್ಕೆ ಪ್ರತಿಕ್ರಿಯಿಸಿರುವ ಇಲಾಖೆ ನಿರ್ದೇಶಕಿ ಸಿಂಧು ರೂಪೇಶ್‌, ‘ಎನ್‌ಸಿಇಆರ್‌ಟಿ ಕಾಲಕಾಲಕ್ಕೆ ಪರಿಷ್ಕರಿಸುವ ವಿಜ್ಞಾನ ವಿಷಯಗಳ ಪಠ್ಯಗಳನ್ನೇ ಅಳವಡಿಸಿಕೊಳ್ಳಲಾಗಿದೆ. ಈ ಪ್ರಕಾರವೇ 2024ನೇ ಸಾಲಿನ ಸಿಇಟಿ ನಡೆಸಲಾಗುತ್ತದೆ ಎಂಬ ಪ್ರಾಧಿಕಾರದ ಸ್ಪಷ್ಟನೆಯ ನಂತರವೇ ಆದೇಶ ಹೊರಡಿಸಲಾಗಿತ್ತು. ಈ ವಿಷಯದಲ್ಲಿ ಇಲಾಖೆ ಪ್ರಮಾದ ಎಸಗಿಲ್ಲ’ ಎಂದಿದ್ದಾರೆ. 

ADVERTISEMENT

‘ಕಡಿತಗೊಂಡ ಪಠ್ಯಕ್ರಮ ಹೊರತುಪಡಿಸಿ, ಹೊಸ ಪಠ್ಯಕ್ರಮದ ಪ್ರಕಾರವೇ ಸಿಇಟಿ ಪರೀಕ್ಷೆಗಳು ನಡೆಯುತ್ತವೆ ಎಂದು ಪಿಯು ಮಂಡಳಿ ವೆಬ್‌ಸೈಟ್‌ನಲ್ಲಿ ಪ್ರಕಟಿಸಿದ್ದರೂ, ಹಳೆಯ ಪಠ್ಯಕ್ರಮದ ಆಧಾರದಲ್ಲೇ ವಿಷಯ ತಜ್ಞರು ಪ್ರಶ್ನೆಗಳನ್ನು ಸಿದ್ಧಪಡಿಸಿದ್ದಾರೆ. ಇದರಿಂದ ಪ್ರಮಾದವಾಗಿದೆ’ ಎನ್ನುತ್ತಾರೆ ಹೆಸರು ಹೇಳಲು ಇಚ್ಚಿಸದ ಕೆಇಎ ಅಧಿಕಾರಿಯೊಬ್ಬರು.  

‘ಪ್ರತಿ ವಿಷಯದಲ್ಲೂ 60 ಪ್ರಶ್ನೆಗಳು ಇರುತ್ತವೆ. ಪ್ರತಿ ವಿಷಯದಲ್ಲೂ ಸರಾಸರಿ ಶೇ 25ರಷ್ಟು ಪ್ರಶ್ನೆಗಳು ಪಠ್ಯ ಹೊರತಾಗಿ ಬಂದಿದ್ದರಿಂದ ವಿದ್ಯಾರ್ಥಿಗಳು ಗೊಂದಲಕ್ಕೆ ಒಳಗಾಗಿದ್ದಾರೆ. ಹಲವರು ಗೊಂದಲ ಮಾಡಿಕೊಂಡು ಉಳಿದ ಪ್ರಶ್ನೆಗಳಿಗೂ ಉತ್ತರಿಸಿಲ್ಲ. ಇಂತಹ ತಪ್ಪುಗಳು ವಿದ್ಯಾರ್ಥಿಗಳ ಭವಿಷ್ಯಕ್ಕೆ ಅಡ್ಡಿಯಾಗುತ್ತದೆ’ ಎನ್ನುತ್ತಾರೆ  ಶಿವಮೊಗ್ಗ ಆದಿಚುಂಚನಗಿರಿ ಪಿಯು ಕಾಲೇಜು ಪ್ರಾಂಶುಪಾಲ ಗುರುರಾಜ್.

‘ಕೆಇಎ ಏ. 20ರಿಂದ ಆಕ್ಷೇಪಣೆ ಸಲ್ಲಿಸಲು ಹೇಳಿದೆ. ಪ್ರಾಧಿಕಾರ ತಪ್ಪು ಒಪ್ಪಿಕೊಂಡು ಗ್ರೇಸ್‌ ಅಂಕಗಳನ್ನು ನೀಡಿದರೂ, ಎಲ್ಲರಿಗೂ ಸಮಾನವಾಗಿ ದೊರಕುತ್ತವೆ. ಇದರಿಂದ ಪ್ರತಿಭಾವಂತರಿಗೆ ಅನ್ಯಾಯವಾಗುತ್ತದೆ. ಮರು ಪರೀಕ್ಷೆ ನಡೆಸಿದರೆ ಬಹಳಷ್ಟು ವಿದ್ಯಾರ್ಥಿಗಳಿಗೆ ಮೊದಲಿದ್ದ ಆಸಕ್ತಿ ಇರವುದಿಲ್ಲ’ ಎಂದು ಬೆಂಗಳೂರಿನ ವಿದ್ಯಾರ್ಥಿ ವಿಶ್ವಜಿತ್ ಪ್ರತಿಕ್ರಿಯಿಸಿದರು.

‘ಸಿಇಟಿ ಗೊಂದಲಕ್ಕೆ ಸಂಬಂಧಿಸಿ ಕೆಇಎಗೆ ಪತ್ರ ಬರೆಯಲಾಗುತ್ತದೆ. ಇದು ಗಂಭೀರವಾದ ಲೋಪ. ಕೆಇಎ ನಡೆ ಆಧರಿಸಿ ನಾವು ಮುಂದಿನ ನಿರ್ಧಾರ ಕೈಗೊಳ್ಳುತ್ತೇವೆ’ ಎಂದು ಕರ್ನಾಟಕ ರಾಜ್ಯ ಅನುದಾನರಹಿತ ಪದವಿಪೂರ್ವ ಕಾಲೇಜುಗಳ ಒಕ್ಕೂಟದ ಅಧ್ಯಕ್ಷ  ಮೋಹನ ಆಳ್ವ ಹಾಗೂ ಕಾರ್ಯದರ್ಶಿ ನರೇಂದ್ರ ನಾಯಕ್ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

‘ಮರು ಪರೀಕ್ಷೆ ನಡೆಸಬೇಕು ಇಲ್ಲವೇ ಪಿಯು ಅಂಕಗಳ ಆಧಾರದ ಮೇಲೆ ವೃತ್ತಿಪರ ಕೋರ್ಸ್‌ಗಳಿಗೆ ಪ್ರವೇಶ ನೀಡಬೇಕು’ ಎಂದು ಕರ್ನಾಟಕ ಖಾಸಗಿ ಶಾಲಾ–ಕಾಲೇಜುಗಳ ಪೋಷಕರ ಸಂಘದ ಅಧ್ಯಕ್ಷ ಬಿ.ಎನ್.ಯೋಗಾನಂದ ಶಾಲಾ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿಗೆ ಮನವಿ ಸಲ್ಲಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.