ADVERTISEMENT

ಕೃಷಿ ಸಂಬಂಧಿತ ಪದವಿಗಳಿಗೆ ಪ್ರವೇಶಾವಕಾಶ: ಸಿಇಟಿ ಪ್ರಾಯೋಗಿಕ ಪರೀಕ್ಷೆ

ಜುಲೈ 12ರಂದು ರಾಜ್ಯದ ಎಲ್ಲ ಕೃಷಿ ಸಂಬಂಧಿತ ವಿಶ್ವವಿದ್ಯಾಲಯಗಳ 16 ಕೇಂದ್ರಗಳಲ್ಲಿ ಸಿಇಟಿ ಪ್ರಾಯೋಗಿಕ ಪರೀಕ್ಷೆ

ನಾಗೇಂದ್ರ ಟಿ.ಸಿ
Published 4 ಜುಲೈ 2022, 2:10 IST
Last Updated 4 ಜುಲೈ 2022, 2:10 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶ ಪ್ರಕಟವಾಗಿದೆ. ಎಂಜಿನಿಯರಿಂಗ್, ಮೆಡಿಕಲ್ ಮತ್ತಿತರ ಪದವಿ ತರಗತಿಗಳಿಗೆ ಪ್ರವೇಶ ಬಯಸುವವರು ‘ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ)’ ಬರೆದಾಗಿದೆ. ಫಲಿತಾಂಶದ ನಿರೀಕ್ಷೆಯಲ್ಲಿದ್ದಾರೆ. ಈ ನಡುವೆ ಜುಲೈ 12ರಂದು ಬೆಳಿಗ್ಗೆ 9 ಗಂಟೆಗೆ, ರಾಜ್ಯದ ಎಲ್ಲ ಕೃಷಿ ಸಂಬಂಧಿತ ವಿಶ್ವವಿದ್ಯಾಲಯಗಳ 16 ಕೇಂದ್ರಗಳಲ್ಲಿ ಮತ್ತೊಂದು ಸಿಇಟಿ ಪ್ರಾಯೋಗಿಕ ಪರೀಕ್ಷೆ ನಡೆಯಲಿದೆ.

ಕೃಷಿ ಸಂಬಂಧಿತ ಪದವಿ ಮತ್ತು ಸ್ನಾತಕೋತ್ತರ ಪದವಿ ಪ್ರವೇಶಿಸಲು ಬಯಸುವ ರೈತರ ಮಕ್ಕಳಿಗೆ ಶೇ 50ರಷ್ಟು ಸೀಟುಗಳನ್ನು ಮೀಸಲಿರಿಸಲಾಗಿದೆ. ಈ ಕೋಟಾದಡಿ ಪ್ರವೇಶ ಬಯಸುವ ವಿದ್ಯಾರ್ಥಿಗಳು ಕರ್ನಾಟಕ ಪರೀಕ್ಷಾ ಮಂಡಳಿ ನಡೆಸುವ ಈ ಸಿಇಟಿ ಪ್ರಾಯೋಗಿಕ ಪರೀಕ್ಷೆ ಬರೆಯಬೇಕು.

ಈ ಪರೀಕ್ಷೆಯು 50 ಪ್ರಶ್ನೆಗಳ 200 ಅಂಕಗಳಿಗೆ ವಿನ್ಯಾಸಗೊಂಡಿದ್ದು, ಕೃಷಿಕರು ಮತ್ತು ಕೃಷಿ ಕೂಲಿ ಕಾರ್ಮಿಕರ ಮಕ್ಕಳಿಗೆ ಮಾತ್ರ ಅವಕಾಶವಿರುತ್ತದೆ. ಉತ್ತಮ ಪ್ರದರ್ಶನ ನೀಡುವ ವಿದ್ಯಾರ್ಥಿಗಳಿಗೆ ಕೃಷಿ ವಿಜ್ಞಾನ ಪದವಿಗಳಿಗೆ ಸಿಇಟಿ ಅಂಕಪಟ್ಟಿಯಲ್ಲಿ ಪ್ರತ್ಯೇಕ ರ‍್ಯಾಂಕ್ ನೀಡಲಾಗುತ್ತದೆ. ಈ ರ‍್ಯಾಂಕ್‌ಗಳ ಸಹಾಯದಿಂದ ವಿದ್ಯಾರ್ಥಿಗಳು ರಾಜ್ಯದ ಸರ್ಕಾರಿ ಕೃಷಿ ವಿಶ್ವವಿದ್ಯಾಲಯಗಳಲ್ಲಿನ ಅಗ್ರಿಕಲ್ಚರ್ (ಕೃಷಿ), ಹಾರ್ಟಿಕಲ್ಚರ್ (ತೋಟಗಾರಿಕೆ), ಸೆರಿಕಲ್ಚರ್ (ರೇಷ್ಮೆ), ವೆಟರ್ನರಿ ಸೈನ್ಸ್ (ಪಶುವೈದ್ಯಕೀಯ), ಫುಡ್ ಟೆಕ್ನಾಲಜಿ (ಆಹಾರ ತಂತ್ರಜ್ಞಾನ), ಫಾರೆಸ್ಟ್ರಿ (ಅರಣ್ಯ ವಿಜ್ಞಾನ), ಫಿಷರೀಸ್‌ (ಮೀನುಗಾರಿಕೆ), ಹೋಮ್ ಸೈನ್ಸ್ (ಗೃಹ ವಿಜ್ಞಾನ), ಅಗ್ರಿಕಲ್ಚರ್ ಎಂಜಿನಿಯರಿಂಗ್, ಡೇರಿ ಟೆಕ್ನಾಲಜಿ (ಪಶುಸಂಗೋಪನೆ ತಂತ್ರಜ್ಞಾನ), ಬಯೋ ಟೆಕ್ನಾಲಜಿ ಹಾಗೂ ಅಗ್ರಿಕಲ್ಚರಲ್ ಮಾರ್ಕೆಟಿಂಗ್ ವಿಭಾಗಗಳಲ್ಲಿ ಪದವಿ ಪಡೆಯಲು ಅರ್ಹರಾಗುತ್ತಾರೆ.

ADVERTISEMENT

ಬೆಂಗಳೂರಿನ ಕೃಷಿ ವಿಶ್ವವಿದ್ಯಾನಿಲಯ, ಧಾರವಾಡ ಕೃಷಿ ವಿಶ್ವವಿದ್ಯಾನಿಲಯ, ಬಾಗಲಕೋಟೆ ತೋಟಗಾರಿಕಾ ವಿಶ್ವವಿದ್ಯಾನಿಲಯ, ಶಿವಮೊಗ್ಗ ಹಾಗೂ ಬೀದರ್‌ನ ಪಶುಸಂಗೋಪನಾ ವಿಶ್ವವಿದ್ಯಾನಿಲಯ, ರಾಯಚೂರಿನ ಕೃಷಿ ವಿಶ್ವವಿದ್ಯಾನಿಲಯಗಳಲ್ಲಿ ವಿಶೇಷ ಪದವಿಗಳಿಗೆ ಪ್ರವೇಶಾವಕಾಶದ ಜೊತೆಗೆ ಈ ವಿಶ್ವವಿದ್ಯಾನಿಲಯಗಳ ಸಬ್ ಕ್ಯಾಂಪಸ್ಸುಗಳಲ್ಲಿ (ಮಂಡ್ಯ, ಹಾಸನ, ಹಿರಿಯೂರು, ಕೋಲಾರ, ಹೊಸಪೇಟೆ, ಗಂಗಾವತಿ, ಕಲಬುರಗಿ, ಶಿರಸಿ, ಮೂಡಿಗೆರೆ, ಚಿಂತಾಮಣಿ, ಬೆಳಗಾವಿ, ಇಲವಾಲ (ಮೈಸೂರು), ಕೊಪ್ಪಳ, ಪೊನ್ನಂಪೇಟೆ, ವಿಜಯಪುರ, ಹಾವೇರಿ ಹಾಗೂ ಭೀಮರಾಯನಗುಡಿ) ಪ್ರವೇಶಾವಕಾಶವಿದೆ.

ಈ ಪದವಿಗಳನ್ನು ಪಡೆಯುವ ವಿದ್ಯಾರ್ಥಿಗಳು ರಾಜ್ಯ ಹಾಗೂ ಕೇಂದ್ರ ಸರ್ಕಾರಗಳ ಹುದ್ದೆಗಳ ಜೊತೆಗೆ ಬ್ಯಾಂಕಿನಲ್ಲಿ ಫೀಲ್ಡ್ ಆಫೀಸರ್ಸ್‌, ಪಶುವೈದ್ಯರು, ಕೃಷಿ ವಿಜ್ಞಾನಿಗಳು, ಬೀಜ-ಗೊಬ್ಬರ-ಕೀಟನಾಶಕ ಕಂಪನಿಗಳಲ್ಲಿ ತಂತ್ರಜ್ಞರು, ಖಾದ್ಯ ವಲಯಗಳಲ್ಲಿ ಅಧಿಕಾರಿಗಳಾಗಿ ಸೇವೆ ಸಲ್ಲಿಸುವ ಅವಕಾಶ ಪಡೆಯುತ್ತಾರೆ.

ಪರೀಕ್ಷೆಗೆ ಅಗತ್ಯವಿರುವ ಎಲ್ಲ ದಾಖಲಾತಿಗಳನ್ನು ಆನ್‌ಲೈನ್‌ ಮೂಲಕ ಅಪ್‌ಲೋಡ್‌ ಮಾಡುವ ಪ್ರಕ್ರಿಯೆ ಜು.1ರಿಂದ ಆರಂಭವಾಗಿದೆ. ಜುಲೈ 5 (ಮಧ್ಯರಾತ್ರಿ 12 ಗಂಟೆಯೊಳಗೆ) ದಾಖಲಾತಿ ಸಲ್ಲಿಕೆಗೆ ಕೊನೆ ದಿನವಾಗಿದೆ. ಕೃಷಿ ಕೋಟಾದಡಿ ಅರ್ಹ / ಅರ್ಹರಲ್ಲದ ವಿದ್ಯಾರ್ಥಿಗಳ ಪಟ್ಟಿಯನ್ನು ಎಲ್ಲಾ ಕೃಷಿ ಮತ್ತು ಕೃಷಿ ಸಂಬಂಧಿತ ವಿಶ್ವ ವಿದ್ಯಾಲಯಗಳು ಹಾಗೂ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಅಧಿಕೃತ ಅಂರ್ತಜಾಲದಲ್ಲಿ ಜುಲೈ 8ರಂದು ಪ್ರಕಟಿಸಲಾಗುತ್ತದೆ.

ಆನ್‌ಲೈನ್ ಪರಿಶೀಲನೆಗೆ ಸಲ್ಲಿಸಬೇಕಾದ ದಾಖಲೆಗಳು

1. ಸಿಇಟಿ ಪರೀಕ್ಷಾ ಪ್ರವೇಶ ಪತ್ರ

2. ವ್ಯವಸಾಯಗಾರರ ಪ್ರಮಾಣ ಪತ್ರ - ಕಂದಾಯ ಇಲಾಖೆ ಆರ್‌ಡಿ ಸಂಖ್ಯೆಯೊಂದಿಗೆ ನೀಡುವ ಪತ್ರ

3. ಅವಿಭಾಜ್ಯ ಕುಟುಂಬವಾದಲ್ಲಿ ಪೂರಕವಾಗಿ ವಂಶವೃಕ್ಷ ಪ್ರಮಾಣ ಪತ್ರ ಕಡ್ಡಾಯವಾಗಿ

4. ಆದಾಯ ಪ್ರಮಾಣ ಪತ್ರ - ಕಂದಾಯ ಇಲಾಖೆ ಆರ್‌ಡಿ ಸಂಖ್ಯೆ ಹಾಗೂ ಕ್ಯೂಆರ್ ಕೋಡ್‌ನೊಂದಿಗೆ ನೀಡುವ ಪತ್ರ

5. ಅಫಿಡವಿಟ್ - 1, ಆದಾಯ ಪ್ರಮಾಣ ಪತ್ರದೊಂದಿಗೆ, ಅಭ್ಯರ್ಥಿ / ಪೋಷಕರು ಕಡ್ಡಾಯವಾಗಿ ಕೇವಲ ಕೃಷಿಯೊಂದೇ ಆದಾಯ ಮೂಲವೆಂದು ಸ್ವಯಂಘೋಷಣೆಯೊಂದಿಗೆ ಕಡ್ಡಾಯವಾಗಿ ಲಗತ್ತಿಸಬೇಕು

6. ವೇತನ ದೃಢೀಕರಣ ಪತ್ರ (ನೌಕರಿಯಿದ್ದಲ್ಲಿ)

7. ಖಾಸಗಿ ವೃತ್ತಿಯಿಂದ ಆದಾಯ ಪತ್ರ

8. ಅಫಿಡವಿಟ್ - 2 ಆದಾಯ ಪ್ರಮಾಣ (ಕೃಷಿ ಮತ್ತು ನೌಕರಿಯಿಂದ ಒಟ್ಟು ಆದಾಯ)

ಅಭ್ಯರ್ಥಿಗಳು ಆನ್‌ಲೈನ್ ಪರಿಶೀಲನೆಗೆ ಸಲ್ಲಿಸಬೇಕಾದ ಶುಲ್ಕ ₹1000 (ಸಾಮಾನ್ಯ ವರ್ಗ) ಹಾಗೂ ಇತರೆ ₹ 500 (ಪ.ಜಾ/ಪ.ವ) ಶುಲ್ಕವನ್ನು ಕೃಷಿವಿಶ್ವವಿದ್ಯಾನಿಲಯಗಳ ಅಧಿಕೃತ ಜಾಲತಾಣಗಳಲ್ಲಿ ನೀಡಲಾಗುವ ಆನ್‌ಲೈನ್ ಸೌಲಭ್ಯದ ಮೂಲಕ ಪಾವತಿಸಬಹುದು. ಶುಲ್ಕ ಪಾವತಿಸಿದ ನಂತರವೇ ರಶೀದಿ ಹಾಗೂ ದಾಖಲೆಗಳನ್ನು ಸಲ್ಲಿಸಿದ ಮಾಹಿತಿಯನ್ನು ಅಭ್ಯರ್ಥಿಗಳು ಡೌನ್‌ಲೋಡ್ ಮಾಡಿಕೊಳ್ಳಲು ಸಾಧ್ಯ.

ಹೆಚ್ಚಿನ ಮಾಹಿತಿಗೆ ಈ ಮೇಲ್‌ ಮೂಲಕ ಸಂಪರ್ಕಿಸಬಹುದು: nagendra.tc@pranavasya.in

(ಲೇಖಕರು: ಸಂಸ್ಥಾಪಕರು ಹಾಗೂ ಕಾರ್ಯನಿರ್ವಾಹಕ ಅಧಿಕಾರಿ, ಪ್ರಣವಸ್ಯ ಅಕಾಡೆಮಿ, ತುಮಕೂರು)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.