ADVERTISEMENT

ಕೋವಿಡ್‌ನಿಂದ ಸಹಜತೆಗೆ ಒಗ್ಗದ ಮಕ್ಕಳ ಮನಸ್ಸು: ಭಯ ನಿವಾರಿಸುವುದು ಹೇಗೆ?

ಸುಕೃತ ಎಸ್.
Published 8 ಅಕ್ಟೋಬರ್ 2021, 19:30 IST
Last Updated 8 ಅಕ್ಟೋಬರ್ 2021, 19:30 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

‘ಪುಟ್ಟಿ... ನೋಡು ನಿನ್ನ ಫ್ರೆಂಡ್‌ ಶ್ರೇಯಾ ಹೊರಗೆ ಆಟ ಆಡ್ತಾ ಇದಾಳೆ. ನೀನೂ, ಹೋಗು ಸ್ವಲ್ಪ ಹೊತ್ತು ಆಟ ಆಡಿಕೊಂಡು ಬಾ. ಮಾಸ್ಕ್‌ನ ಮರೀದೆ ಹಾಕಿಕೊಂಡು ಹೋಗು’ ಎಂದಳು ಅಮ್ಮ. ಮಗಳ ಸಂತೋಷಕ್ಕೆ ಪಾರವೇ ಇಲ್ಲ. ಮೊಬೈಲ್‌ ಹಿಡಿದು ಕೂತಿದ್ದ ಎಂಟು ವರ್ಷದ ನವ್ಯಾ ಮಾಸ್ಕ್‌ ಧರಿಸಿ ಮನೆಯಿಂದ ಹೊರಬಿದ್ದಳು. ಹೋಗಿ 10 ನಿಮಿಷ ಕೂಡ ಆಗಿರಲಿಲ್ಲ, ನವ್ಯಾ ವಾಪಸಾದಳು. ಅಲ್ಲೇ ಲಿವಿಂಗ್‌ ರೂಮ್‌ನಲ್ಲಿ ಕೆಲಸ ಮಾಡುತ್ತಿದ್ದ ಅಪ್ಪ ಯಾಕೆಂದು ವಿಚಾರಿಸಿದರೆ ‘ಇಲ್ಲಪ್ಪಾ, ಕೆಳಗಡೆ ತುಂಬಾ ಜನ ಇದ್ದರು. ಅದಕ್ಕೆ ವಾಪಸು ಬಂದೆ’ ಎಂದಳು ನವ್ಯಾ.

ಈ ರೀತಿ ಆಗುತ್ತಿರುವುದು ಇದೇ ಮೊದಲಲ್ಲ. ಬೆಂಗಳೂರಿನ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುವ ಆರತಿ ಮತ್ತು ಹರ್ಷ ದಂಪತಿ ಪುಟ್ಟ ನವ್ಯಾಳನ್ನು ಜನರೊಂದಿಗೆ, ಆಕೆಯ ಸ್ನೇಹಿತರೊಂದಿಗೆ ಬೆರೆಯುವಂತೆ ಮಾಡಲು ಈ ಹಿಂದೆಯೂ ಬಹಳ ಪ್ರಯತ್ನ ಮಾಡಿದ್ದರು.

‘ಕೋವಿಡ್‌ ಶುರುವಾದಾಗಿನಿಂದ ಹೆಚ್ಚು ಜನರನ್ನು ಕಂಡರೆ ನವ್ಯಾ ಭಯ ಬೀಳುತ್ತಾಳೆ. ಮೂರೂ ಹೊತ್ತು ಮೊಬೈಲ್‌ನಲ್ಲೇ ಮುಳುಗಿರುತ್ತಾಳೆ. ಈ ಅಭ್ಯಾಸವನ್ನು ತಪ್ಪಿಸಲು ಎಷ್ಟು ಪ್ರಯತ್ನಪಟ್ಟರೂ ಸಾಧ್ಯವಾಗಿಲ್ಲ. ಒಂಟಿಯಾಗಿರಲು ಇಷ್ಟಪಡುತ್ತಾಳೆ. ಜನರೊಂದಿಗೆ ಬೆರೆಯಲು ಇಷ್ಟಪಡುತ್ತಿಲ್ಲ’ ಎಂದು ಬೇಸರಿಸುತ್ತಾರೆ ಆರತಿ.

ADVERTISEMENT

ಇದು ಕೇವಲ ನವ್ಯಾಳ ಸಮಸ್ಯೆ ಅಲ್ಲ; ಬಹುತೇಕ ಮಕ್ಕಳನ್ನು ಈ ಒಂಟಿತನವೆಂಬುದು ಹೈರಾಣಾಗಿಸಿದೆ. ಶಾಲೆ, ಸ್ನೇಹಿತರು, ಆಟ, ಮತ್ತೆ ಮನೆಗೆ ಬಂದ ಮೇಲೆ ಹೋಂವರ್ಕ್‌ ಮುಗಿಸಿ ಅಕ್ಕಪಕ್ಕದ ಮನೆಯ ಮಕ್ಕಳೊಂದಿಗೆ ಆಟವಾಡಿಕೊಂಡು ಸದಾ ಚಟುವಟಿಕೆಯಿಂದ ಕೂಡಿದ್ದ ಮಕ್ಕಳು ಕೋವಿಡ್‌ ಕಾರಣದಿಂದ ಮನೆಯಲ್ಲಿಯೇ ಉಳಿಯಬೇಕಾಯಿತು. ಕಳೆದ ಒಂದೂವರೆ ವರ್ಷದಿಂದ ಮನೆಯಲ್ಲಿಯೇ ಬಂದಿಯಾಗಿರುವ ಮಕ್ಕಳು ಸಹಜತೆಗೆ ಹೊಂದಿಕೊಳ್ಳಲು ಹೆಣಗಾಡುವುದು ಸಾಮಾನ್ಯ. ಈಗ ಎಲ್ಲವೂ ಹಿಂದಿನ ಸಾಮಾನ್ಯ ಪರಿಸ್ಥಿತಿ ನಿಧಾನವಾಗಿ ಮರಳುತ್ತಿದೆ. ಆದರೆ, ಮಕ್ಕಳು ಮಾತ್ರ ಜನರೊಂದಿಗೆ ಬೆರೆಯಲು ಹೆದರುತ್ತಿದ್ದಾರೆ.

ಟಿ.ವಿಯಲ್ಲಿ ಪದೇ ಪದೇ ನೋಡಿದ, ಕೇಳಿದ ಸಾವಿನ ಸುದ್ದಿ. ಹೊರಗೆ ಅಡಿ ಇಟ್ಟರೆ ಸಾಕು ಸಾವು ಬಂದುಬಿಡುತ್ತದೆ ಎಂದು ಸತತವಾಗಿ ತೋರಿಸಿದ ರೀತಿ ಹೆಚ್ಚಿನ ಸಂಖ್ಯೆಯ ಮಕ್ಕಳ ಮೇಲೆ ಗಂಭೀರ ಪರಿಣಾಮ ಬೀರಿದೆ. ಇದರ ಜೊತೆಗೆ, ಮುಂಜಾಗ್ರತೆಗಾಗಿ ಪೋಷಕರೇ ಮಕ್ಕಳನ್ನು ತುಸು ಮಟ್ಟಿಗೆ ಹೆದರಿಸಿದ್ದಾರೆ. ಇನ್ನು ಕೋವಿಡ್‌ ಕಾರಣದಿಂದ ಅಪ್ಪ ಅಥವಾ ಅಮ್ಮನನ್ನು ಕಳೆದುಕೊಂಡ ಮಕ್ಕಳು, ಲಾಕ್‌ಡೌನ್ ಕಾರಣ ಕೆಲಸ ಕಳೆದುಕೊಂಡು, ಒದ್ದಾಡುತ್ತಿರುವ ಪೋಷಕರು– ಹೀಗೆ ನಾನಾ ಕಾರಣಗಳಿಂದ ಮಕ್ಕಳು ಭಯಬೀತರಾಗಿದ್ದಾರೆ. ಈ ಎಲ್ಲಾ ಆಘಾತಗಳಿಂದ ಹೊರಬರಲು ಅವರಿಗೆ ಸಾಧ್ಯವಾಗುತ್ತಿಲ್ಲ; ಸಹಜ ಸ್ಥಿತಿಗೆ ಒಗ್ಗಿಕೊಳ್ಳಲು ತೊಡಕಾಗಿದೆ.

ಮಕ್ಕಳ ಈ ಭಯವನ್ನು ಹೋಗಲಾಡಿಸುವುದು ಹೇಗೆ?

ಮಕ್ಕಳಲ್ಲಿ ಹುದುಗಿರುವ ಭಯವನ್ನು ಹೋಗಲಾಡಿಸುವುದು ಸ್ವಲ್ಪ ಕಷ್ಟವಾದರೂ ಅಸಾಧ್ಯವೇನಲ್ಲ. ಮಕ್ಕಳ ಮೇಲೆ ಪೋಷಕರು ಹೆಚ್ಚಿನ ಗಮನ ಇಡಬೇಕಾಗಿದೆ. ಕೋವಿಡ್‌ ಕುರಿತ ಮುನ್ನೆಚ್ಚರಿಕೆಯೊಂದಿಗೆಯೇ ಮಕ್ಕಳನ್ನು ಮತ್ತೆ ಜನರೊಂದಿಗೆ ಬೆರೆಯುವಂತೆ ತಯಾರು ಮಾಡಬೇಕಿದೆ.

lಮಕ್ಕಳು ನಿಮ್ಮೊಂದಿಗೆ ಅಂಟಿಕೊಂಡೇ ಇರುತ್ತಾರಾ, ಹೊರಗೆ ಹೋಗಲು ಭಯ ಪಡುತ್ತಾರಾ ಎನ್ನುವುದನ್ನು ಗಮನಿಸಿ. ಹಾಗಿದ್ದರೆ, ಮಕ್ಕಳೊಂದಿಗೆ ಹೆಚ್ಚು ಸಮಯ ಕಳೆಯಿರಿ.ಆ ಘಳಿಗೆಗಳು ಆದಷ್ಟು ಆತ್ಮೀಯವಾಗಿರಲಿ. ಅವರಿಗೆ ಏನು ಅನಿಸುತ್ತಿದೆ ಕೇಳಿ, ಅವರ ಮಾತುಗಳಿಗೆ ಕಿವಿಯಾಗಿ.

lಸ್ನೇಹಿತರೊಂದಿಗೆ, ಕುಟುಂಬ ಸದಸ್ಯರೊಂದಿಗೆ ಮಕ್ಕಳು ಹೆಚ್ಚು ಸಮಯ ಕಳೆಯುವಂತೆ ಮಾಡಬೇಕು. ಅದು ವರ್ಚುವಲ್‌ ಭೇಟಿ ಆಗಿದ್ದರೂ ಸರಿ.

l ಮನೆಯ ಕಷ್ಟಗಳನ್ನು ಮಕ್ಕಳಿಂದ ಮುಚ್ಚಿಡಬೇಡಿ. ಏನೂ ಆಗಿಲ್ಲ, ಎಲ್ಲವೂ ಚೆನ್ನಾಗಿಯೇ ಇದೆ ಎನ್ನುವ ಸುಳ್ಳು ಭರವಸೆಗಳನ್ನು ನೀಡಬೇಡಿ. ಅವರಿಗೆ ಅರ್ಥವಾಗುವ ರೀತಿಯಲ್ಲಿ ಎಲ್ಲವನ್ನೂ ಅವರೊಂದಿಗೆ ಹಂಚಿಕೊಳ್ಳಿ. ಅವರಿಗೆ ಮಾತ್ರ ಕಷ್ಟ ಇದೆ ಎಂದೆಲ್ಲಾ ಮಕ್ಕಳು ಅಂದುಕೊಂಡಿರುವ ಸಂಭವ ಇದೆ. ನಿಮ್ಮ ಕಷ್ಟಗಳನ್ನು ಹೇಳುವ ಮೂಲಕ ತನಗೊಂದೇ ಸಮಸ್ಯೆ ಅಲ್ಲ ಎನ್ನುವ ಸತ್ಯ ಅವರಿಗೆ ಅರಿವಾಗಲಿ.

l ಭಯ ಪಡುತ್ತಾರೆ ಎನ್ನುವ ಕಾರಣಕ್ಕೆ ಅವರನ್ನು ಹೊರಗೆ ಕರೆದುಕೊಂಡು ಹೋಗದೇ ಇರುವುದು ಸರಿಯಾದ ಮಾರ್ಗವಲ್ಲ. ಅವರು ನಿಧಾನವಾಗಿ ಹೊಂದಿಕೊಳ್ಳುತ್ತಾರೆ. ಆದ್ದರಿಂದ ಪಾರ್ಕ್‌ ಅಥವಾ ಅಜ್ಜಿಮನೆ ಹೀಗೆ ಎಲ್ಲ ಕಡೆಗಳಿಗೂ ಕರೆದುಕೊಂಡು ಹೋಗಿ.

l ಮನೆ ಕೆಲಸ ಮಾಡುವಾಗ, ಹೂದೋಟದ ಕೆಲಸ ಮಾಡುವಾಗ, ಅಡುಗೆ ಮನೆಯಲ್ಲಿ ಇರುವಾಗ.. ಹೀಗೆ ಪ್ರತಿಯೊಂದು ಕೆಲಸದಲ್ಲೂ ಮಕ್ಕಳು ಪಾಲ್ಗೊಳ್ಳುವಂತೆ ಮಾಡಿ. ಮೊಬೈಲ್‌ ಅನ್ನು ಅವರ ಕೈಗೆ ಕೊಟ್ಟು ನಿಮ್ಮ ಕೆಲಸದಲ್ಲಿ ಬ್ಯುಸಿ ಆಗದೇ,ಆದಷ್ಟು ಅವರನ್ನು ಚಟುವಟಿಕೆಯಿಂದ ಇರುವಂತೆ ಮಾಡಿ.

ಮನೆಯಲ್ಲಿ ತಂದೆ–ತಾಯಿಯರೊಂದಿಗೆ ಮಾತ್ರ ಇದ್ದ ಮಕ್ಕಳು ಈಗ ಮತ್ತೆ ಹೊರ ಪ್ರಪಂಚಕ್ಕೆ ತೆರೆದುಕೊಳ್ಳುತ್ತಿದ್ದಾರೆ. ಆದ್ದರಿಂದ, ಮಕ್ಕಳುಮತ್ತೆ ಜನರೊಂದಿಗೆ ಬೆರೆಯುವಂತೆ ಮಾಡಲು, ಅವರ ಒಂಟಿತನವನ್ನು ದೂರ ಮಾಡಲು ಬೇರೆ ರೀತಿಯ ಪಠ್ಯವನ್ನು, ಚಟುವಟಿಕೆಯನ್ನು ವಿದೇಶಗಳಲ್ಲಿ ರೂಪಿಸಿದ್ದಾರೆ.ಶಾಲೆ ಪ್ರಾರಂಭವಾದ ಮೂರು ತಿಂಗಳುಗಳು ಕೇವಲ ಇದೇ ಚಟುವಟಿಕೆಯನ್ನು ಮಕ್ಕಳಿಂದ ಮಾಡಿಸಲಿದ್ದಾರೆ. ನಮ್ಮಲ್ಲೂ ಈ ರೀತಿಯ ಚಿಂತನೆ ನಡೆಸುವ ಅಗತ್ಯ ಇದೆ.

ಕವಿತಾರತ್ನ, ‘ದಿ–ಕನ್ಸರ್ನ್ಡ್‌ ಫಾರ್‌ ವರ್ಕಿಂಗ್‌ ಚಿಲ್ಡ್ರನ್‌’ನ ನಿರ್ದೇಶಕಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.