ನಮ್ಮ ಬಾಲ್ಯದಲ್ಲಿ ನಮಗೆ ಮನರಂಜನೆಯ ಮಾಧ್ಯಮಗಳು ಈಗಿನಷ್ಟು ಇರಲಿಲ್ಲ. ನಾವು ಬೆಳೆದುದು ಹಳ್ಳಿಯಲ್ಲಿ. ಆದರೆ, ಅಜ್ಜನಿಗೂ, ಅಪ್ಪನಿಗೂ ಪುಸ್ತಕ ಓದುವ ಮತ್ತು ಸಂಗ್ರಹಿಸುವ ಹವ್ಯಾಸವಿತ್ತು. ಹಾಗಾಗಿ, ನಮಗೆ ಓದಿಗೆ ಬೇಕಾದಷ್ಟು ಪುಸ್ತಕಗಳಿದ್ದವು. ಜೊತೆಗೆ ವಾರಕ್ಕೊಮ್ಮೆ ಪೇಟೆಗೆ ಹೋಗುವ ಅಪ್ಪ ಅಲ್ಲಿಯ ಗ್ರಂಥಾಲಯದ ಸದಸ್ಯತ್ವ ಪಡೆದು ವಾರಕ್ಕೆ ಮೂರು ಕಾದಂಬರಿಗಳು (ಅಮ್ಮನಿಗಾಗಿ, ಅಮ್ಮ ಓದಿದ ನಂತರ ಅವು ಪಕ್ಕದ ಎರಡು ಮೂರು ಮನೆಗಳಲ್ಲಿ ಒಂದು ಸುತ್ತು ಹೊಡೆದೇ ಮರಳುತ್ತಿದ್ದವು) ಮತ್ತು ಎರಡು ವಾರಪತ್ರಿಕೆಗಳನ್ನು ಕಡ್ಡಾಯವಾಗಿ ತರುತ್ತಿದ್ದರು.
ಈಗಿನ ಮಕ್ಕಳು ಚಾನೆಲ್ಲಿಗಾಗಿ ಕಿತ್ತಾಡುವಂತೆ ನಾವು ಪತ್ರಿಕೆಗಳಿಗಾಗಿ ಜಗಳವಾಡುತ್ತಿದ್ದೆವು. ಶಾಲೆಗೆ ದೊಡ್ಡ ರಜೆ ಬಂತೆಂದರೆ ನಮಗೆ ಮನೆಯಲ್ಲಿದ್ದ ಪುಸ್ತಕಗಳು ಸಾಲದಾಗುತ್ತಿದ್ದವು. ಓದಿದ ಕಥೆ, ಕಾದಂಬರಿಗಳನ್ನೇ ಮತ್ತೆ ಮತ್ತೆ ಹೊಸದೆಂಬಂತೆ ಓದುತ್ತಿದ್ದೆವು. ಯಾವುದೇ ಕೆಲಸಕ್ಕೆ ನೆರವಾಗುವುದಿಲ್ಲವೆಂದು ಅಮ್ಮ ಬೈಯುವವರೆಗೆ!
ಈಗ ನಮ್ಮ ಮಕ್ಕಳೊಂದಿಗೆ ನಮಗೆ ಬಾಲ್ಯ ಮರುಕಳಿಸುವ ಸಮಯ. ಮಕ್ಕಳೆದುರಿಗೆ ಟಿ.ವಿ, ಮೊಬೈಲ್, ಕಂಪ್ಯೂಟರ್, ಟ್ಯಾಬ್, ಲ್ಯಾಪ್‌ಟಾಪ್‌ಗಳಿವೆ. ಕಾಲದ ಓಘದಲ್ಲಿ ಅದರ ಭಾಗವಾಗಿ ಓಡುತ್ತಿರುವ ನಾವು ನಮ್ಮ ಮನೆಯಲ್ಲಿ ಅದ್ಯಾವುದೂ ಬೇಡವೇ ಬೇಡ ಎಂಬ ನಿರ್ಧಾರ ತೆಗೆದುಕೊಳ್ಳುವುದು ಸಾಧ್ಯವಿಲ್ಲ. ನಮ್ಮ ಉದ್ಯೋಗ, ಹವ್ಯಾಸಗಳು ನಿರೀಕ್ಷಿಸುವಂತೆ ಅವೆಲ್ಲವೂ ಬೇಕಾದುವೇ. ಸಾಮಾಜಿಕ ಮಾಧ್ಯಮಗಳು, ಜಾಲತಾಣಗಳು ಅಂಗೈಯೊಳಗಿನ ವಿಶ್ವವೇ. ಇವೆಲ್ಲವುಗಳ ನಡುವೆಯೂ ನಮ್ಮ ಮಕ್ಕಳು ಓದುವ ಹವ್ಯಾಸ ಬೆಳೆಸಿಕೊಳ್ಳಬೇಕೆಂಬುದು ನಮ್ಮ ಛಲ. ಐದನೇ ತರಗತಿಯಲ್ಲಿ ಓದುವ ಮಗಳು, ಎರಡನೇ ತರಗತಿಯಲ್ಲಿ ಓದುವ ಮಗ ಇಬ್ಬರಿಗೂ ಅವರ ಓದಿನ ಮಿತಿಯಲ್ಲಿ ಬೇಕಾದ ಪುಸ್ತಕಗಳನ್ನು ಆಗೀಗ ಕೊಂಡುಕೊಳ್ಳುತ್ತೇವೆ. ಇಲ್ಲವೇ ಅವರಾಗಿ ಪುಸ್ತಕಗಳನ್ನು ಬಯಸುತ್ತಾರೆ. ಮಗಳ ಮೊದಲನೆಯ ಹುಟ್ಟುಹಬ್ಬಕ್ಕೆಂದು ಅವಳಿಗೆ ಬಣ್ಣಬಣ್ಣದ ಚಿತ್ರಗಳಿದ್ದ ದಪ್ಪ ಬೈಂಡಿನ ಪುಸ್ತಕಗಳನ್ನೇ ಉಡುಗೊರೆಯಾಗಿ ತಂದಿದ್ದೆವು. ಅವಳಿಗೆ ಆ ಪುಸ್ತಕಗಳ ಕುರಿತು ಬಹಳ ಪ್ರೀತಿ. ಅವಳದೇ ಬಾಲಭಾಷೆಯಲ್ಲಿ ಏನೇನೋ ಹೇಳಿದಂತೆ ಅಭಿನಯಿಸುತ್ತಿದ್ದಳು. ಗೋಡೆಗಳ ತುಂಬ ವಿವಿಧ ಚಾರ್ಟ್‌ಗಳನ್ನೂ ಹಾಕಿ ದಿನದಲ್ಲೊಂದಿಷ್ಟು ಹೊತ್ತು ಅವಳ ಜೊತೆಗೆ ಆ ಚಾರ್ಟ್‌ಗಳೆದುರು ಕುಳಿತಿರುತ್ತಿದ್ದೆವು. ಸಹಜವಾಗಿಯೇ ಅವಳ ಕಲಿಕೆಗೂ ಅದು ನೆರವಾಯಿತು ಮಾತ್ರವಲ್ಲ, ದಿನದಿನ ಹೊಸತನ್ನು ನೋಡುವ, ಗ್ರಹಿಸುವ ಆಸಕ್ತಿಯೂ ಅವಳಲ್ಲಿ ಮೊಳೆಯುತ್ತಾ ಬಂತು. ಅಲ್ಲಿಂದ ನಂತರದ ಎಲ್ಲ ಹುಟ್ಟುಹಬ್ಬಗಳಿಗೂ ಹೊಸ ಬಟ್ಟೆಯ ಜತೆಗೆ ಪುಸ್ತಕಗಳ ಉಡುಗೊರೆ ಮಾಮೂಲಿಯಾಗಿದೆ. ದೊಡ್ಡ ಚಿತ್ರಗಳ, ಕಡಿಮೆ ವಾಕ್ಯಗಳ ಕಥೆ ಪುಸ್ತಕಗಳು ಅವಳ ಮೆಚ್ಚಿನವೇ ಆಗಿದ್ದವು.
ನಂತರದ ದಿನಗಳಲ್ಲಿ ಅನುಪಮಾ ನಿರಂಜನರ ದಿನಕ್ಕೊಂದು ಕಥೆಗಳ ಸಂಗ್ರಹವೂ ಅವಳ ಪುಸ್ತಕಗಳ ಜೊತೆ ಸೇರಿದವು. ಆಗೆಲ್ಲ ಸ್ವತಃ ಅವಳಿಗೆ ಓದುವುದು ಕಷ್ಟವಾಗಿದ್ದರೂ ಪ್ರತಿರಾತ್ರಿ ನಿದ್ದೆ ಹೋಗುವ ಮೊದಲು ಆ ಸಂಗ್ರಹದಿಂದ ಯಾವುದಾದರೂ ಕಥೆಯನ್ನು ಹೇಳಿದ ಮೇಲೆಯೇ ಅವಳು ಮಲಗುತ್ತಿದ್ದುದು. ಆ ಅಭ್ಯಾಸ ಈಗಲೂ ಇದೆ. ಆದರೆ ಕಾಗಕ್ಕ ಗುಬ್ಬಕ್ಕನಂತಹ ಕಥೆಗಳ ಬದಲಾಗಿ ಹೆಚ್ಚಿನ ಸತ್ವವುಳ್ಳ ರಾಮಾಯಣ, ಮಹಾಭಾರತ, ಭಾಗವತದ ಕಥೆಗಳು ಅಥವಾ ಯಾವುದಾದರೂ ಸಾಧಕರ ಕಥೆಗಳನ್ನು ಅವಳಿಗೆ ಹೇಳುವುದು ಕಡ್ಡಾಯ. ಕೆಲವೊಮ್ಮೆ ನಮ್ಮ ಕೆಲಸದ ಒತ್ತಡದ ನಡುವೆ ಹೊಸ ಕಥೆಗಳನ್ನು ಹೇಳಲಾಗದೇ ಯಾವುದಾದರೂ ಹೇಳಿದ ಕಥೆಯನ್ನೇ ಹೇಳೋಣವೆಂದರೆ ಅವಳು ಸುತರಾಂ ಒಲ್ಲಳು. ‘ಅದು ನನಗೆ ಗೊತ್ತು, ಆ ಕಥೆ ಹೀಗೇ ಮುಕ್ತಾಯವಾಗುತ್ತದೆ’ ಎಂದು ಕಡ್ಡಿ ಮುರಿದಂತೆ ಹೇಳುವವಳೇ ಅವಳು.
ಈ ಕಥೆಗಳ ಆಸಕ್ತಿಗಾದರೂ ದಿನಕ್ಕೆರಡು ಪುಟವಾದರೂ ನೀನೇ ಓದಬೇಕು ಎಂಬುದು ಅವಳಿಗೆ ನಮ್ಮ ತಾಕೀತು. ಕೆಲವೊಮ್ಮೆ ಅದು ಬಲವಂತದ ಓದು ಎನಿಸುವುದೂ ಇದೆ. ಆದರೆ ಅವಳೆಷ್ಟೇ ಓದಿರಲಿ, ಅಷ್ಟನ್ನು ಸರಿಯಾಗಿ ಗ್ರಹಿಸುತ್ತಾಳೆ ಮಾತ್ರವಲ್ಲ, ಅವಳು ಓದಿದ ಕಥೆಗಳನ್ನೇ ಒಂದಿಷ್ಟು ಬದಲಾಯಿಸಿ ಇಂಗ್ಲಿಷ್‌ನಲ್ಲಿ ಬರೆಯುವ ಪ್ರಯತ್ನವನ್ನೂ ಮಾಡುತ್ತಾಳೆ. ಓದು ಬರಹಗಳೆರಡೂ ಒಂದೇ ನಾಣ್ಯದ ಎರಡು ಮುಖಗಳು ತಾನೇ? ಇವಳ ಪುಸ್ತಕದ ಆಸಕ್ತಿಯ ಗುಂಗು ತಮ್ಮನನ್ನು ಸಹಜವಾಗಿಯೇ ಆವರಿಸಿಕೊಂಡಿದೆ. ಇತರೆ ಪುಸ್ತಕಗಳನ್ನು ಓದುವುದಕ್ಕಿಂತಲೂ ಅಕ್ಕ ಬರೆದ ಕಥೆಗಳನ್ನು ಓದುವುದೆಂದರೆ ಅವನಿಗೆ ಬಲುಪ್ರೀತಿ. ಜೊತೆಗೆ ಪುಸ್ತಕ ಸಂಗ್ರಹದಲ್ಲಿ ಅವನದೇ ಆದ ಕೆಲವು ಪುಸ್ತಕಗಳಿವೆ. ಮಲಗಬೇಕಾದರೆ ತನಗಿಷ್ಟವಾದ ಪುಸ್ತಕದ ಚಿತ್ರಗಳನ್ನು ನೋಡುತ್ತಾ ಒಂದೆರಡು ಪುಟಗಳನ್ನು ಓದುವ ಪ್ರಯತ್ನ ಮಾಡುತ್ತಾ ನಿದ್ದೆ ಹೋಗುವುದು ಅವನಿಗೆ ಅಭ್ಯಾಸವೇ ಆಗಿ ಹೋಗಿದೆ. ಈಗಾಗಲೇ ತನಗೆ ತಿಳಿದಿರುವ ಕೃಷ್ಣನ ಕಥಾ ಭಾಗವೋ ಅಥವಾ ಪುರಾಣಗಳೋ ಎಂದರೆ ಅವನಿಗೆ ಮತ್ತೂ ಇಷ್ಟವಾಗುತ್ತವೆ.
ಯಾವುದಾದರೂ ಮದುವೆ ಸಮಾರಂಭಗಳಲ್ಲೋ ಸಾಹಿತ್ಯಿಕ ಸಮಾರಂಭಗಳಲ್ಲೋ ಪುಸ್ತಕ ಪ್ರದರ್ಶನವಿದ್ದರೆ ಇಬ್ಬರೂ ಅದರ ಮುಂದೆ ಹಾಜರ್. ತಮಗಿಷ್ಟವಾದ ಪುಸ್ತಕಗಳನ್ನು ಆಯ್ಕೆ ಮಾಡಿಕೊಂಡು, ‘ತಮಗಿವು ಬೇಕು’ ಎಂದು ಕೊಂಡುಕೊಳ್ಳುತ್ತಾರೆ. ಒರಿಗೆಮಿ, ಕ್ರಾಫ್ಟ್ ಇತ್ಯಾದಿಗಳನ್ನು ಮಾಡಲು ಕಲಿತಿದ್ದೂ ಇಂತಹ ಪುಸ್ತಕಗಳಿಂದಲೇ. ಜೊತೆಗೆ ನಮ್ಮ ಮನೆಯಲ್ಲಿ ಯಕ್ಷಗಾನವು ನಿರಂತರ ಚಟುವಟಿಗೆಯಾಗಿರುವುದರಿಂದ ಕನ್ನಡ ಕಲಿಕೆ, ಕನ್ನಡ ಓದು ಪ್ರಾಮುಖ್ಯ ಪಡೆದಿದೆ. ಮಕ್ಕಳ ಯಕ್ಷಗಾನ ಏರ್ಪಡಿಸಿದಾಗೆಲ್ಲ ಬಹುಮಾನ ರೂಪವಾಗಿ ಪುರಾಣಗಳ ಪುಸ್ತಕಗಳನ್ನೇ ಕೊಡುವ ಅಭ್ಯಾಸ ಮಾಡಿಕೊಂಡಿದ್ದೇವೆ. ಈ ಮೂಲಕವೂ ಮಕ್ಕಳಲ್ಲಿ ಓದಿನ ಹವ್ಯಾಸ ಹೆಚ್ಚಲಿ ಎಂಬ ಆಸೆ. ಅವರ ಶಾಲೆಯಲ್ಲೂ ವರ್ಷದಲ್ಲಿ ಎರಡು ಬಾರಿ ಪುಸ್ತಕ ಪ್ರದರ್ಶನ ಆಯೋಜಿಸುವುದು, ಗ್ರಂಥಾಲಯದಿಂದ ಪುಸ್ತಕ ತೆಗೆದುಕೊಳ್ಳುವುದು ಕಡ್ಡಾಯವೇ ಆಗಿರುವುದರಿಂದ ಅಲ್ಲೂ ಬೇಕಾದ ಉತ್ತೇಜನ ಮಕ್ಕಳಿಗೆ ದೊರೆತಿದೆ. ಬರಿ ಓದಿದರೆ ಸಾಲದು, ಓದಿದ ಕಥೆಯ ಬಗ್ಗೆ ಒಂದು ಪುಟ ಬರೆದು ತರಬೇಕು ಎಂಬ ನಿಯಮ ಶಾಲೆಯಲ್ಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.