ADVERTISEMENT

ತಕೋ ಕೈ, ಇಕೋ ಕೈ ನಮಗಿಂದು ಜನ್ಮದಿನ!

ಪ್ರಜಾವಾಣಿ ವಿಶೇಷ
Published 13 ನವೆಂಬರ್ 2019, 19:45 IST
Last Updated 13 ನವೆಂಬರ್ 2019, 19:45 IST
ಮಕ್ಕಳ ದಿನಾಚರಣೆ
ಮಕ್ಕಳ ದಿನಾಚರಣೆ   

ನವೆಂಬರ್‌ 14 ಮಕ್ಕಳಿಗೆಂದೇ ಮೀಸಲಾದ ದಿನ. ಸದಾ ಚೆಂಡಿನಂತೆ ಪುಟಿಯುವ ಮಕ್ಕಳು ದೇಶದ ಭವಿಷ್ಯವನ್ನು ಪ್ರತಿನಿಧಿಸುವ ಅಪೂರ್ವ ಸಂಪತ್ತು. ಇದಕ್ಕೆ ಒಂದಿಷ್ಟು ಮುಕ್ಕಾಗದಂತೆ ಕಾಪಿಡಬೇಕಾದ ಜರೂರತ್ತಿದೆ. ಎಲ್ಲೆಡೆ ‘ಮಕ್ಕಳಸ್ನೇಹಿ’ ವಾತಾವರಣ ರೂಪುಗೊಳ್ಳಲು ಈ ಮಕ್ಕಳ ದಿನಾಚರಣೆ ಬುನಾದಿಯಾಗಲಿ.

ಮಕ್ಕಳೆಲ್ಲರಿಂದ ಚಾಚಾ ನೆಹರೂ ಎಂದೇ ಕರೆಸಿಕೊಳ್ಳುತ್ತಿದ್ದ ದೇಶದ ಮೊದಲ ಪ್ರಧಾನಿ ಪಂಡಿತ್‌ ಜವಾಹರ್‌ಲಾಲ್‌ ನೆಹರೂ ಅವರ ಜನ್ಮದಿನವನ್ನೇ ಮಕ್ಕಳ ದಿನಾಚರಣೆಯಾಗಿ ಆಚರಿಸಲಾಗುತ್ತದೆ. ನೆಹರೂ ಅವರು ಕಾಶ್ಮೀರಿ ಪಂಡಿತ ಕುಟುಂಬದಲ್ಲಿ 1889, ನವೆಂಬರ್‌ 14ರಂದು ಅಲಹಾಬಾದ್‌ನಲ್ಲಿ ಜನಿಸಿದರು. ಅವರ ತಂದೆ ಪ್ರಸಿದ್ಧ ವಕೀಲ ಮೋತಿಲಾಲ್‌ ನೆಹರೂ ಮತ್ತು ತಾಯಿ ಸ್ವರೂಪಾ ರಾಣಿ.ಬಿಡುವಿಲ್ಲದ ಕೆಲಸದ ನಡುವೆಯೂ ಮಕ್ಕಳೊಂದಿಗೆ ಬೆರೆಯಲು ಇಷ್ಟಪಡುತ್ತಿದ್ದರು ನೆಹರೂ. ಅವರ ಕುರಿತಾದ ಅಪರೂಪದ ಸಂಗತಿಗಳೂ ಇಲ್ಲಿವೆ:

* 15ನೇ ವಯಸ್ಸಿನವರೆಗೆ ಮನೆಯಲ್ಲಿ ಶಿಕ್ಷಣ ಕಲಿತರು. ಸ್ವಾತಂತ್ರ್ಯ ಹೋರಾಟದಲ್ಲಿ ಜೈಲುವಾಸ ಅನುಭವಿಸಿದರು. 1930ರ ಸಂದರ್ಭದಲ್ಲಿ ಸೆರೆವಾಸದ ಸಂದರ್ಭದಲ್ಲಿ ತಮ್ಮ ಜೀವನಚರಿತ್ರೆ ‘ಟುವರ್ಡ್‌ ಫ್ರೀಡಂ’ ಬರೆದರು.

ADVERTISEMENT

* 1950ರಿಂದ 1955ರ ಅವಧಿಯಲ್ಲಿ ನೊಬೆಲ್‌ ಶಾಂತಿ ಪ್ರಶಸ್ತಿಗೆ ಹಲವು ಬಾರಿ ನೆಹರೂ ಹೆಸರನ್ನು ಸೂಚಿಸಲಾಗಿತ್ತು. ಪಾಶಿಮಾತ್ಯ ಸಂಸ್ಕೃತಿಯ ಜತೆಯಲ್ಲಿ ಕುರ್ತಾ ಹಾಗೂ ಶೆರ್ವಾನಿ ತೊಡುವುದರ ಬಗ್ಗೆ ಆಸಕ್ತಿ ಇತ್ತು. ನೆಹರೂ ಟೋಪಿ, ಜಾಕೆಟ್‌ನಲ್ಲಿ ಕಾಣಿಸಿಕೊಳ್ಳುತ್ತಿದ್ದರು. ಅದರಲ್ಲಿ ಪುಟಾಣಿಯೊಂದು ಇಟ್ಟ ಕೆಂಗುಲಾಬಿಯೂ ಇತ್ತು.

ಮಕ್ಕಳ ರಕ್ಷಣೆಗೆ ಕಾನೂನುಗಳು

ಶೋಷಣೆ ಮತ್ತು ದರೋಡೆಯಿಂದ ರಕ್ಷಿಸಲು 1933ರ ಕಾನೂನು

ಬಾಲಕಾರ್ಮಿಕ ಪದ್ಧತಿ ನಿಷೇಧಿಸುವ 1938ರ ಕಾನೂನು

ಕಾರ್ಖಾನೆಗಳಲ್ಲಿ ಮಕ್ಕಳ ದುಡಿಮೆ ನಿಷೇಧಿಸುವ 1949ರ ಕಾನೂನು

ಈ ಬೇಡಿಕೆಗಳು ಈಡೇರಿಸಿ

* ಯಾವುದೇ ಭೇದ–ಭಾವವಿಲ್ಲದ ಸಮಾನ ಶಿಕ್ಷಣ ನೀತಿಯೊಂದು ಜಾರಿಯಾಗಲಿ.

* ಮಕ್ಕಳು ಇಚ್ಛಿಸುವ ಭಾಷೆಯನ್ನು ಕಲಿಯುವ ಸ್ವಾತಂತ್ರ್ಯ ದೊರೆಯಲಿ.

* ಸಾಮರ್ಥ್ಯದ ಅನುಸಾರ ಶಿಕ್ಷಣ ದೊರೆಯಲಿ. ಕಲಿಕೆಯಲ್ಲಿ ಹಿಂದುಳಿದ ಕಾರಣಕ್ಕೆ ದಡ್ಡ/ ದಡ್ಡಿ ಎಂದು ಮೂದಲಿಸಬೇಡಿ.

* ಗ್ರಾಮೀಣ ಭಾಗದಲ್ಲಿರುವ ಸರ್ಕಾರಿ ಶಾಲೆಗಳನ್ನು ಪುನಶ್ಚೇತನಗೊಳಿಸಿ, ಗುಣಮಟ್ಟದ ಶಿಕ್ಷಣಕ್ಕೆ ಆದ್ಯತೆ ನೀಡಿ. ಜತೆಗೆ ಕುಡಿಯುವ ನೀರು, ಶೌಚಾಲಯ, ಪ್ರಯೋಗಶಾಲೆಗಳಂಥ ಮೂಲಸೌಕರ್ಯಗಳನ್ನು ಪೂರೈಸಿ.

* ಬಸ್ಸುಗಳಲ್ಲಿ, ರೈಲುಗಳಲ್ಲಿ ಅರ್ಧ ಟಿಕೆಟ್ ಇದೆ. ಆದರೆ ಸೀಟು ಕೂಡ ಅರ್ಧವೇ. ಇಳಿಯುವ ಪ್ರದೇಶ ಬರುವವರೆಗೂ ದೊಡ್ಡವರ ಮಧ್ಯದಲ್ಲಿ, ಇಕ್ಕಟ್ಟಿನಲ್ಲಿ ಕೂರಬೇಕು. ಮಕ್ಕಳಿಗೆ ಅಂತ ಪುಟ್ಟ ಆಸನಗಳು ಇರಲಿ.

* ನಾಳಿನ ಪೌರರಷ್ಟೆ ಅಲ್ಲ, ಮತದಾರರೂ ಹೌದು. ಹಾಗಾಗಿ ಇದನ್ನು ಗಮನದಲ್ಲಿಟ್ಟುಕೊಂಡು ಮಕ್ಕಳ ಏಳಿಗೆಗೆ ನೆರವಾಗುವಂತೆ ಯೋಜನೆಗಳನ್ನು ರೂಪಿಸಿ.

ವಿಶ್ವದ ಹಲವೆಡೆ ದಿನಾಚರಣೆ

ಮೇ-5 – ದಕ್ಷಿಣ ಕೊರಿಯಾ

ಜೂನ್-1 ಚೀನಾ

ಏಪ್ರಿಲ್-23 ಟರ್ಕಿ

ಅಕ್ಟೋಬರ್-1 ಶ್ರೀಲಂಕಾ

ಅಕ್ಟೋಬರ್-1 ಸಿಂಗಪುರ

ಮೇ-5 ಜಪಾನ್

ನವೆಂಬರ್‌ 20– ಪಾಕಿಸ್ತಾನ

ಆಗಸ್ಟ್‌ 30– ಬ್ರಿಟನ್

ಜೂನ್‌ 2ನೇ ಭಾನುವಾರ– ಅಮೆರಿಕ

ಮಕ್ಕಳ ಪರ ಕಾನೂನು

* ಶಿಕ್ಷಣ ಎಲ್ಲರಿಗೂ ಸಿಗಬೇಕು. ಇದು ಸಂವಿಧಾನ ನೀಡಿರುವ ಮೂಲಭೂತ ಹಕ್ಕು. ಬಾಲಕಿಯರು, ಹಿಂದುಳಿದ ವರ್ಗದವರು, ಅಂಗವಿಕಲರು, ಬಾಲಕಾರ್ಮಿಕರನ್ನು ಒಳಗೊಳ್ಳಬೇಕು ಎಂದು 2009ರ ಆಗಸ್ಟ್‌ 29ರ ಕಾನೂನು ಹೇಳುತ್ತದೆ.

* 1989ರಲ್ಲಿ ವಿಶ್ವಸಂಸ್ಥೆ ಮುಂದಿಟ್ಟ ಅಂತರರಾಷ್ಟ್ರೀಯ ಮಕ್ಕಳ ಹಕ್ಕುಗಳ ಒಪ್ಪಂದಕ್ಕೆ ಹಲವು ದೇಶಗಳು ಸಹಿ ಹಾಕಿವೆ. ಇದು ಮಕ್ಕಳ ಆರ್ಥಿಕ, ರಾಜಕೀಯ, ಸಾಮಾಜಿಕ, ನಾಗರಿಕ ಮತ್ತು ಸಾಂಸ್ಕೃತಿಕ ಹಕ್ಕುಗಳನ್ನು ಕಾಪಾಡುವ ಮತ್ತು ಎಲ್ಲ ದೇಶಗಳ ಮಕ್ಕಳಿಗೂ ಅನ್ವಯಿಸುವ ಒಪ್ಪಂದ. 1992 ಡಿಸೆಂಬರ್ 11ರಂದು ಈ ಒಪ್ಪಂದಕ್ಕೆ ಭಾರತ ಸರ್ಕಾರವೂ ಸಹಿ ಹಾಕಿದೆ.

* ಸ್ವತಂತ್ರವಾಗಿ ಜೀವಿಸುವ ಹಕ್ಕು, ಭಾವನೆಗಳನ್ನು ಮುಕ್ತವಾಗಿ ವ್ಯಕ್ತಪಡಿಸುವ ಹಕ್ಕು, ಅಪಾಯದ ಸಂದರ್ಭಗಳಲ್ಲಿ ರಕ್ಷಿಸಿಕೊಳ್ಳುವ ಹಕ್ಕು ಇವುಗಳಲ್ಲಿ ಕೆಲವು. ಈ ಹಕ್ಕುಗಳ ರಕ್ಷಣೆಗಾಗಿಯೇ ರಾಷ್ಟ್ರೀಯ ಬಾಲಕರ ಹಕ್ಕುಗಳ ಆಯೋಗವನ್ನೂ ರಚಿಸಲಾಗಿದೆ.

ದೊಡ್ಡವರು ಏನು ಮಾಡಬಹುದು?

* ಮಕ್ಕಳ ನಡುವೆ ಹೋಲಿಕೆ ಬೇಡ. ಮೃದು ಧೋರಣೆಯಿಂದಲೇ ತಿದ್ದಿ. ಹಾಗೆಂದು ಶಿಕ್ಷೆ ಕೊಡಲೇಬಾರದು ಎಂದಲ್ಲ. ಶಿಕ್ಷೆಯೂ ಶಿಕ್ಷಣದ ಭಾಗ. ಏನೇ ವಿಷಯವಿದ್ದರೂ ಸೂಕ್ಷ್ಮವಾಗಿ ತಿಳಿಸಿ ಹೇಳಿ.

* ಶಾಲೆಯಿರಲಿ, ಮನೆಯೇ ಇರಲಿ; ಎಂತಹುದೇ ಪರಿಸ್ಥಿತಿಯಲ್ಲಿ ಮಕ್ಕಳ ಎದುರು ಕೆಟ್ಟ ಪದಗಳನ್ನು ಪ್ರಯೋಗಿಸಬೇಡಿ. ಹಾಗೊಮ್ಮೆ ಪ್ರಯೋಗಿಸಿದರೆ ಮುಂದೊಮ್ಮೆ ಇದೇ ಪದಗಳು ನಿಮ್ಮನ್ನು ಬೆನ್ನಟ್ಟುವುದು ನಿಶ್ಚಿತ.

* ಪಠ್ಯದ ನಡುವೆ ಸೃಜನಶೀಲತೆಗೆ ಒತ್ತು ಕೊಡಿ. ಹಾಗಂತ ತಮಗಿರುವ ಕನಸುಗಳನ್ನು ಮಕ್ಕಳ ತಲೆಗೆ ತುಂಬಬೇಡಿ. ತಾವು ಎಣಿಸಿದಂತೆ ಆಗಬೇಕು ಎಂದು ಹಠ ಮಾಡಬೇಡಿ. ಮಗುವಿನ ಆಸಕ್ತಿಯನ್ನು ಅರಿತು ಅದಕ್ಕೆ ಪೂರಕ ವಾತಾವರಣ ಕಲ್ಪಿಸಿ.

* ಮಕ್ಕಳಿಗಾಗಿ ಸ್ವಲ್ಪ ಸಮಯ ಮೀಸಲಿಡಿ. ಸಾಧ್ಯವಾದರೆ ಸ್ವಲ್ಪ ಕಾಲ ಗ್ಯಾಜೆಟ್‌ಗಳಿಂದ ದೂರವಿಟ್ಟು, ಕಥೆ ಹೇಳಿ. ಇದು ಮಕ್ಕಳ ಕಲ್ಪನಾಶಕ್ತಿಯನ್ನು ಹೆಚ್ಚಿಸುವುದಲ್ಲದೇ, ಮನೋವಿಕಾಸಕ್ಕೆ ಸಹಕರಿಸುತ್ತದೆ.

* ಎಲ್ಲರನ್ನು ಗೌರವದಿಂದ ಕಾಣುವುದೇ ನಿಜವಾದ ಸಂಸ್ಕಾರ. ದೃಷ್ಟಿಕೋನ, ಭಾಷೆ, ಸಂಸ್ಕೃತಿ, ಧರ್ಮ, ಜನಾಂಗ, ವಿಚಾರ ಎಲ್ಲವೂ ಭಿನ್ನವಾಗಿದ್ದಾಗಲೂ ಪರಸ್ಪರ ಗೌರವಿಸುವುದನ್ನು ಹೇಳಿಕೊಡಿ.

1098 ಸಹಾಯವಾಣಿ

ಮಕ್ಕಳನ್ನು ಶೋಷಣೆ ಮಾಡುವವರು, ಮಾನಸಿಕ ಹಿಂಸೆ ನೀಡುವವರು, ಮಕ್ಕಳ ಹಕ್ಕುಗಳನ್ನು ಕಸಿಯುವಂತಹ ಕೆಲಸಗಳನ್ನು ಮಾಡುತ್ತಿದ್ದರೆ ಅಂಥವರ ವಿರುದ್ಧ 1098 ಸಂಖ್ಯೆಗೆ ಕರೆ ಮಾಡಿ ಮಾಹಿತಿ ನೀಡಬಹುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.