ADVERTISEMENT

ಸ್ಪರ್ಧಾ ವಾಣಿ: ಪ್ರಿಲಿಮ್ಸ್‌ ಬೂಸ್ಟರ್‌

ಯು.ಟಿ. ಆಯಿಷಾ ಫರ್ಝಾನ
Published 12 ಜೂನ್ 2024, 22:45 IST
Last Updated 12 ಜೂನ್ 2024, 22:45 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

1.ದೇವಿಕಾ ನದಿ ರಾಷ್ಟ್ರೀಯ ಯೋಜನೆ

ಫೆಬ್ರುವರಿ 2019ರಲ್ಲಿ ಪ್ರಾರಂಭವಾದ ಈ ಯೋಜನೆಯು ‘ನಮಾಮಿ ಗಂಗಾ’ ಉಪಕ್ರಮದ ಮಾದರಿಯಲ್ಲಿದ್ದು, ಜಮ್ಮು ಮತ್ತು ಕಾಶ್ಮೀರದಲ್ಲಿ ಹರಿಯುತ್ತಿರುವ ದೇವಿಕಾ ನದಿಯ ಪುನರುಜ್ಜೀವನ ಯೋಜನೆಯಾಗಿದೆ. ಇದು ಉತ್ತರ ಭಾರತದ ಮೊದಲ ನದಿ ಪುನರುಜ್ಜೀವನ ಯೋಜನೆಯಾಗಿದೆ. 190 ಕೋಟಿ ವೆಚ್ಚದ ಈ ಯೋಜನೆಯು ಕೇಂದ್ರ ಅನುದಾನಿತ ಯೋಜನೆಯಾಗಿದ್ದು ರಾಷ್ಟ್ರೀಯ ನದಿ ಸಂರಕ್ಷಣಾ ಯೋಜನೆ (ಎನ್‌ಆರ್‌ಸಿಪಿ) ದೇವಿಕಾ ಯೋಜನೆಯಡಿ, ದೇವಿಕಾ ನದಿಯ ದಡದಲ್ಲಿರುವ ಸ್ನಾನದ ‘ಘಾಟ್‌ಗಳನ್ನು’(ಸ್ಥಳಗಳು) ಅಭಿವೃದ್ಧಿಪಡಿಸುವಿಕೆ, ಅತಿಕ್ರಮಣಗಳನ್ನು ತೆಗೆದುಹಾಕುವುದು, ನೈಸರ್ಗಿಕ ಜಲಮೂಲಗಳನ್ನು ಪುನಃಸ್ಥಾಪಿಸುವುದು ಮತ್ತು ಜಲಾನಯನ ಪ್ರದೇಶಗಳನ್ನು ಅಭಿವೃದ್ಧಿಪಡಿಸುವುದು ಈ ಯೋಜನೆಯ ಮುಖ್ಯ ಗುರಿಗಳಾಗಿವೆ. ಈ ಯೋಜನೆಯು 8 MLD, 4 MLD ಮತ್ತು 1.6 MLD ಸಾಮರ್ಥ್ಯದ ಮೂರು ಒಳಚರಂಡಿ ಸಂಸ್ಕರಣಾ ಘಟಕಗಳ ನಿರ್ಮಾಣ, 129.27 ಕಿಮೀ ಒಳಚರಂಡಿ ಜಾಲ, ಎರಡು ಸ್ಮಶಾನ ಘಾಟ್‌ಗಳ ಅಭಿವೃದ್ಧಿ, ರಕ್ಷಣಾ ಬೇಲಿಗಳು, ಸಣ್ಣ ಜಲವಿದ್ಯುತ್ ಸ್ಥಾವರಗಳು ಮತ್ತು ಮೂರು ಸೌರ ವಿದ್ಯುತ್ ಸ್ಥಾವರಗಳನ್ನು ಒಳಗೊಂಡಿದೆ. ಯೋಜನೆ ಪೂರ್ಣಗೊಂಡ ನಂತರ, ನದಿಯ ಮಾಲಿನ್ಯದಲ್ಲಿ ಇಳಿಕೆ ಮತ್ತು ನೀರಿನ ಗುಣಮಟ್ಟದಲ್ಲಿ ಸುಧಾರಣೆ ಕಾಣುತ್ತದೆ ಎಂದು ಅಂದಾಜಿಸಲಾಗಿದೆ.

ADVERTISEMENT

ದೇವಿಕಾ ನದಿ

ಜಮ್ಮು ಮತ್ತು ಕಾಶ್ಮೀರದ ಉಧಂಪುರ್ ಜಿಲ್ಲೆಯಲ್ಲಿ ನೆಲೆಸಿರುವ ಪವಿತ್ರ ಸುದ್ಧ ಮಹಾದೇವ ದೇವಸ್ಥಾನದ ತಟದಲ್ಲಿ ಹುಟ್ಟುವ ದೇವಿಕಾ ನದಿಯು ಪಶ್ಚಿಮ ಪಂಜಾಬ್ ಕಡೆಗೆ ಹರಿಯುತ್ತಾ ಅಂತಿಮವಾಗಿ ರಾವಿ ನದಿಯೊಂದಿಗೆ ಸಂಗಮಿಸುತ್ತದೆ.

ಸಾಂಸ್ಕೃತಿಕ ಪ್ರಾಮುಖ್ಯತೆಯ ದೃಷ್ಟಿಯಿಂದ ನೋಡುವುದಾದರೆ ಈ ನದಿಯನ್ನು ಪವಿತ್ರ ಗಂಗಾ ನದಿಯ ಸಹೋದರಿ ನದಿ ಎಂದು ಪರಿಗಣಿಸಲಾಗುತ್ತದೆ. ಹಿಂದೂ ಸಂಸ್ಕೃತಿಯಲ್ಲಿ ದೇವಿಕಾ ನದಿಯನ್ನು ಕೂಡಾ ಪವಿತ್ರ ನದಿ ಎಂದು ಪೂಜಿಸುತ್ತಾರೆ. ದಂತಕಥೆಯ ಪ್ರಕಾರ, ದೇವಿಕಾ ನದಿಯು ದೇವಿ ಪಾರ್ವತಿಯ ಭೌತಿಕ ಅಭಿವ್ಯಕ್ತಿಯಾಗಿದ್ದು ಪಾರ್ವತಿಯೇ ನದಿಯಾಗಿ ಹರಿಯುತ್ತಾಳೆ. ಇದು ರಾವಿ ಮತ್ತು ಚೆನಾಬ್ ನದಿಗಳ ನಡುವಿನ ಪ್ರದೇಶಗಳನ್ನು ಒಳಗೊಂಡಿರುವ ಮದರ್ ದೇಶ ಪ್ರದೇಶದ ನಿವಾಸಿಗಳ ಕಲ್ಯಾಣ ಮತ್ತು ಸಮೃದ್ಧಿಗಾಗಿ ದೇವರು ನೀಡಿದ ವರ ಎಂಬ ಪ್ರತೀತಿಯಿದೆ. ಇದನ್ನು ಗುಪ್ತ ಗಂಗಾ ಎಂದೂ ಕರೆಯುತ್ತಾರೆ.

2.ಬ್ಲೂ ಓಷನ್‌ ಈವೆಂಟ್‌

ಇಂಗಾಲದ ಹೊರಸೂಸುವಿಕೆಯನ್ನು ಕಡಿಮೆ ಮಾಡಲು ಜಗತ್ತಿನಾದ್ಯಂತ ಸಾಕಷ್ಟು ಪ್ರಯತ್ನಗಳ ಹೊರತಾಗಿಯೂ, 2030ರ ದಶಕದ ಆರಂಭದಲ್ಲಿ, ಬೇಸಿಗೆಯ ತಿಂಗಳುಗಳಲ್ಲಿ ಆರ್ಕ್ಟಿಕ್ ಮಹಾಸಾಗರವು ಮಂಜುಗಡ್ಡೆಯಿಲ್ಲದೇ ಇರುವ ಸಂದರ್ಭವನ್ನು ಎದುರಿಸುವ ಸಾಧ್ಯತೆಯಿದೆ ಎಂದು ನೇಚರ್ ಕಮ್ಯುನಿಕೇಷನ್ಸ್‌ ತನ್ನ ಇತ್ತೀಚಿನ ಪ್ರಕಟಣೆಯ ಮೂಲಕ ಎಚ್ಚರಿಸಿದೆ.

‘ಬ್ಲೂ ಓಷನ್ ಈವೆಂಟ್’ಎಂಬ ಪದವು ಬೇಸಿಗೆಯ ತಿಂಗಳಲ್ಲಿ ಆರ್ಕ್ಟಿಕ್ ಮಹಾಸಾಗರವು ಮಂಜುಗಡ್ಡೆಯಿಂದ ಮುಕ್ತವಾಗುವ ಒಂದು ಕಾಲ್ಪನಿಕ ಸನ್ನಿವೇಶವನ್ನು ಸೂಚಿಸುತ್ತದೆ. ಇದು ಹವಾಮಾನ ಬದಲಾವಣೆ ಮತ್ತು ಧ್ರುವಪ್ರದೇಶದ ಹಿಮ ಕರಗುವಿಕೆಯಲ್ಲಿ ಮಹತ್ವದ ಹಾಗೂ ಅಪಾಯಕಾರಿ ಬದಲಾವಣೆಯನ್ನು ಸೂಚಿಸುತ್ತದೆ. ತನ್ನ ಹುಟ್ಟಿನಿಂದಲೂ ಆರ್ಕ್ಟಿಕ್ ಸಮುದ್ರವು ಮಂಜುಗಡ್ಡೆಯ ಪದರದಿಂದ ಆವರಿಸಲ್ಪಟ್ಟಿದೆ. ಬೇಸಿಗೆಯಲ್ಲಿ ಯಥಾಸ್ಥಿತಿಯನ್ನು ಕಾಯ್ದುಕೊಳ್ಳುತ್ತಿತ್ತು.

ಜಾಗತಿಕ ತಾಪಮಾನ ಏರಿಕೆಯಿಂದಾಗಿ ಧ್ರುವೀಯ ಮಂಜುಗಡ್ಡೆಗಳು ವೇಗವಾಗಿ ಕರಗುತ್ತಾ ಆರ್ಕ್ಟಿಕ್ ಮಹಾಸಾಗರವು ಮುಂದೊಂದು ದಿನ ಸಮುದ್ರದ ಮಂಜುಗಡ್ಡೆಯೇ ಇಲ್ಲದ ಪರಿಸ್ಥಿತಿಯನ್ನು ಅನುಭವಿಸುವ ಸಮಯ ಬರಬಹುದು ಎಂದು ವಿಜ್ಞಾನಿಗಳು ಊಹಿಸಿದ್ದಾರೆ.

‘ಬ್ಲೂ ಓಷನ್ ಈವೆಂಟ್’ ಎಂಬ ಪದವು ಹವಾಮಾನ ಬದಲಾವಣೆಯಿಂದಾಗಿ ಆರ್ಕ್ಟಿಕ್‌ನಲ್ಲಿ ಸಂಭವಿಸುವ ಒಂದು ರೂಪಾಂತರ ಸ್ಥಿತಿಯನ್ನು ಎತ್ತಿ ತೋರಿಸುತ್ತದೆ. ಸಮುದ್ರದ ಮಂಜುಗಡ್ಡೆಯ ನಷ್ಟವಾಗುವುದರಿಂದ ಆರ್ಕ್ಟಿಕ್ ಪರಿಸರ ವ್ಯವಸ್ಥೆಗಳು ಮತ್ತು ವನ್ಯಜೀವಿಗಳಿಗೆ ಹಾನಿಯಾಗುವಂಥ ಪರಿಸರ ಪರಿಣಾಮಗಳನ್ನು ಮಾತ್ರವಲ್ಲದೆ, ಜಾಗತಿಕ ಹವಾಮಾನ ಮಾದರಿಗಳು ಮತ್ತು ಜಗತ್ತಿನ ಸಮುದ್ರ ಮಟ್ಟಗಳಲ್ಲಿ ಕೂಡಾ ವ್ಯಾಪಕ ಪರಿಣಾಮಗಳನ್ನು ಹೊಂದಿದೆ. ಈ ಮೂಲಕ ಸಾಗರಗಳು ಹೆಚ್ಚುಹೆಚ್ಚು ಸೌರ ವಿಕಿರಣವನ್ನು ಹೀರಿಕೊಳ್ಳಲು ಕಾರಣವಾಗುತ್ತಾ ಇನ್ನಷ್ಟು ತಾಪಮಾನ ಏರಿಕೆಯಾಗಬಹುದು. ಹವಾಮಾನ ಪ್ರವೃತ್ತಿಗಳನ್ನು ಬದಲಾಯಿಸಬಹುದು ಮತ್ತು ಅಂತಿಮವಾಗಿ ಜಾಗತಿಕ ಸಾಗರ ಪರಿಚಲನೆಯ ಮೇಲೆ ಪರಿಣಾಮ ಬೀರಬಹುದು ಎಂದು ಪರಿಸರತಜ್ಞರು ಆತಂಕ ವ್ಯಕ್ತಪಡಿಸುತ್ತಿದ್ದಾರೆ.

ಸಂಶೋಧಕರು ಮತ್ತು ನೀತಿ ನಿರೂಪಕರಿಗೆ ಈ ಬ್ಲೂ ಓಷನ್ ಈವೆಂಟ್‌ನ ಪರಿಕಲ್ಪನೆಯು ಆರ್ಕ್ಟಿಕ್‌ನಲ್ಲಿ ಸಂಭವಿಸುವ ಕ್ಷಿಪ್ರ ಬದಲಾವಣೆಗಳ ಎಚ್ಚರಿಕೆಯ ಸಂಕೇತ ಎನ್ನಲಾಗುತ್ತದೆ ಮತ್ತು ಸ್ಥಳೀಯ ಮತ್ತು ಜಾಗತಿಕ ಮಾಪಕಗಳ ಮೇಲೆ ಅದರ ಪರಿಣಾಮಗಳನ್ನು ತಗ್ಗಿಸಲು ಹವಾಮಾನ ಬದಲಾವಣೆಯನ್ನು ಪರಿಹರಿಸುವ ತುರ್ತುಸ್ಥಿತಿಯನ್ನು ಒತ್ತಿಹೇಳುತ್ತದೆ.

3. ಕೆಲ್ಪ್ ಅರಣ್ಯಗಳು

ಕೆಲ್ಪ್ ಕಾಡುಗಳು ನೀರೊಳಗಿನ ಪರಿಸರ ವ್ಯವಸ್ಥೆಗಳಾಗಿದ್ದು, ಕೆಲ್ಪ್ ಎಂದು ಕರೆಯಲಾಗುವ ದೊಡ್ಡ ಕಂದು ಆಲ್ಗೆಗಳ ದಟ್ಟವಾದ ಗುಂಪುಗಳ ರಚನೆಯಾಗಿದೆ. ಈ ಕಾಡುಗಳು ಸಾಮಾನ್ಯವಾಗಿ ಆಳವಿಲ್ಲದ, ಪೌಷ್ಟಿಕವಾಗಿ ಸಮೃದ್ಧವಾದ ಕರಾವಳಿ ನೀರಿನಲ್ಲಿ, ವಿಶೇಷವಾಗಿ ಪ್ರಪಂಚದಾದ್ಯಂತ ಶೀತ ಮತ್ತು ಸಮಶೀತೋಷ್ಣ ಪ್ರದೇಶಗಳಲ್ಲಿ ಬೆಳೆಯುತ್ತವೆ.

ಕೆಲ್ಪ್ ಪಾಚಿಗಳು ಸಾಗರ ತಳಗಳಲ್ಲಿ ಕೆಲವು ಇಂಚುಗಳಿಂದ ಹಿಡಿದು ನೂರು ಅಡಿ ಎತ್ತರಕ್ಕೆ ಬೆಳೆಯಬಲ್ಲದು. ಇವು ಕಾಡಿನಲ್ಲಿರುವ ದಟ್ಟವಾದ ಮರಗಳನ್ನು ಹೋಲುವ ರೀತಿಯಲ್ಲಿ, ನೀರಿನ ಅಡಿಯಲ್ಲಿ ಕಂಡುಬರುವ ಎತ್ತರದ ರಚನೆಗಳಾಗಿವೆ. ಆದ್ದರಿಂದ ಇದನ್ನು ‍‘ಕೆಲ್ಪ್ ಕಾಡುಗಳು’ಎಂದು ಕರೆಯಲಾಗುತ್ತದೆ.

ಈ ಪರಿಸರ ವ್ಯವಸ್ಥೆಗಳು ಹೆಚ್ಚು ಉತ್ಪಾದಕ ಪರಿಸರ ವ್ಯವಸ್ಥೆಗಳಾಗಿದ್ದು ವೈವಿಧ್ಯಮಯ ಸಮುದ್ರ ಜೀವಿಗಳಿಗೆ ಆವಾಸ ಸ್ಥಾನಗಳಾಗಿವೆ. ಕೆಲ್ಪ್ ಕಾಡುಗಳು ನೂರಕ್ಕೂ ಹೆಚ್ಚಿನ ಮೀನು, ಅಕಶೇರುಕಗಳು ಮತ್ತು ಸಮುದ್ರ ಸಸ್ತನಿಗಳು ಸೇರಿ ವಿವಿಧ ಜೀವಿಗಳಿಗೆ ಆವಾಸಸ್ಥಾನವನ್ನು ಮತ್ತು ಆಹಾರ ಮೂಲವನ್ನು ಒದಗಿಸುತ್ತದೆ. ಕೆಲ್ಪ್ ಕಾಡುಗಳ ಸಂಕೀರ್ಣ ರಚನೆಯು ಅನೇಕ ಸಾಗರ ಜೀವಿಪ್ರಭೇದಗಳಿಗೆ ಆಶ್ರಯ ಮತ್ತು ರಕ್ಷಣೆ ನೀಡುತ್ತದೆ. ಈ ಮೂಲಕ ಕೆಲ್ಪ್‌ ಕಾಡುಗಳನ್ನು ಸಾಗರದೊಳಗಿನ ನರ್ಸರಿ ಮೈದಾನಗಳು ಮತ್ತು ಆಹಾರ ಪ್ರದೇಶಗಳು ಎನ್ನಲಾಗುತ್ತದೆ.

ಸಾಗರದೊಳಗಿನ ಜೀವವೈವಿಧ್ಯವನ್ನು ಬೆಂಬಲಿಸುವುದರ ಜೊತೆಗೆ, ಕೆಲ್ಪ್ ಕಾಡುಗಳು ನಿರ್ಣಾಯಕ ಪರಿಸರ ಪಾತ್ರಗಳನ್ನು ವಹಿಸುತ್ತವೆ. ಸಮುದ್ರದ ತಳವನ್ನು ಸ್ಥಿರಗೊಳಿಸುವ ಮೂಲಕ, ಸವೆತವನ್ನು ಕಡಿಮೆ ಮಾಡುವ ಮೂಲಕ ಮತ್ತು ದ್ಯುತಿಸಂಶ್ಲೇಷಣೆಯ ಮೂಲಕ ನೀರಿನಿಂದ ಇಂಗಾಲದ ಡೈಆಕ್ಸೈಡ್ ಅನ್ನು ಹೀರಿಕೊಳ್ಳುವ ಮೂಲಕ ಕರಾವಳಿ ಪರಿಸರ ವ್ಯವಸ್ಥೆಗಳನ್ನು ನಿಯಂತ್ರಿಸಲು ಅವು ಸಹಾಯ ಮಾಡುತ್ತವೆ. ಈ ಮೂಲಕ ಹವಾಮಾನ ಬದಲಾವಣೆಯ ಪರಿಣಾಮಗಳನ್ನು ತಗ್ಗಿಸುತ್ತವೆ.

ಕೆಲ್ಪ್ ಕಾಡುಗಳು ಮಾಲಿನ್ಯ, ಮಿತಿಮೀರಿದ ಮೀನುಗಾರಿಕೆ, ಆವಾಸಸ್ಥಾನ ನಾಶ ಮತ್ತು ಹವಾಮಾನ ಬದಲಾವಣೆ ಸೇರಿದಂತೆ ವಿವಿಧ ಮಾನವ ಚಟುವಟಿಕೆಗಳಿಂದ ಅಪಾಯವನ್ನು ಎದುರಿಸುತ್ತವೆ. ಬೆಚ್ಚಗಿನ ಸಮುದ್ರದ ತಾಪಮಾನ, ಸಾಗರ ಆಮ್ಲೀಕರಣ ಮತ್ತು ಸಾಗರ ಪ್ರವಾಹಗಳಲ್ಲಿನ ಬದಲಾವಣೆಗಳು ಕೆಲ್ಪ್ ಪಾಚಿಗಳ ಬೆಳವಣಿಗೆಯನ್ನು ಅಡ್ಡಿಪಡಿಸಿ, ಈ ಪ್ರಮುಖ ಪರಿಸರ ವ್ಯವಸ್ಥೆಗಳ ಅವನತಿಗೆ ಕಾರಣವಾಗಬಹುದು.

ಕಡಲ ಜೀವವೈವಿಧ್ಯ ಮತ್ತು ಪರಿಸರ ವ್ಯವಸ್ಥೆಯ ಆರೋಗ್ಯವನ್ನು ಕಾಪಾಡಿಕೊಳ್ಳಲು ಕೆಲ್ಪ್ ಕಾಡುಗಳನ್ನು ರಕ್ಷಿಸುವುದು ಮತ್ತು ಸಂರಕ್ಷಿಸುವುದು ಅತ್ಯಗತ್ಯ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.