ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಖಾಲಿ ಇರುವ 310 ಪ್ರಾಂಶುಪಾಲರ ಹುದ್ದೆಗಳ (ಗ್ರೇಡ್–1) ಭರ್ತಿಗಾಗಿ ನೇಮಕಾತಿ ಪ್ರಕ್ರಿಯೆ ಆರಂಭವಾಗಿದೆ. ಇದೇ ಮೊದಲ ಬಾರಿಗೆ ಸ್ಪರ್ಧಾತ್ಮಕ ಪರೀಕ್ಷೆ ಮೂಲಕ ಈ ಹುದ್ದೆಗಳನ್ನು ಭರ್ತಿ ಮಾಡುತ್ತಿದ್ದು, ನೇಮಕಾತಿಯ ಜವಾಬ್ದಾರಿಯನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರಕ್ಕೆ ವಹಿಸಲಾಗಿದೆ.
ಶಿಕ್ಷಣದ ಗುಣಮಟ್ಟ ಹೆಚ್ಚಿಸುವ ಜತೆಗೆ ಆಡಳಿತ ನಿರ್ವಹಣೆಯ ಜವಾಬ್ದಾರಿಯೂ ಪ್ರಾಂಶುಪಾಲರಿಗೆ ಇದೆ. ಇದನ್ನು ಗಮನದಲ್ಲಿಟ್ಟುಕೊಂಡು ಸಮರ್ಥರನ್ನು ಆಯ್ಕೆ ಮಾಡಬೇಕು ಎಂಬ ಉದ್ದೇಶದಿಂದ 100 ಅಂಕಗಳಿಗೆ ಸ್ಪರ್ಧಾತ್ಮಕ ಪರೀಕ್ಷೆ ನಡೆಸಲಾಗುತ್ತಿದೆ. ಅದರಲ್ಲಿ ಗಳಿಸಿದ ಅಂಕಗಳು ಮತ್ತು ಮೀಸಲಾತಿ ಆಧರಿಸಿ ಆಯ್ಕೆಪಟ್ಟಿಯನ್ನು ಪ್ರಕಟಿಸಲಾಗುತ್ತದೆ.
ಕಲ್ಯಾಣ ಕರ್ನಾಟಕ ಭಾಗದಲ್ಲಿನ 45 ಮತ್ತು ರಾಜ್ಯದ ಇನ್ನುಳಿದ ಭಾಗದಲ್ಲಿರುವ ಕಾಲೇಜುಗಳಲ್ಲಿನ 265 ಪ್ರಾಂಶುಪಾಲರ ಹುದ್ದೆಗಳನ್ನು ತುಂಬಲು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಈಗಾಗಲೇ ಅರ್ಜಿಗಳನ್ನು ಆಹ್ವಾನಿಸುವ ಮೂಲಕ ನೇಮಕಾತಿಗೆ ಚಾಲನೆ ನೀಡಿದೆ.
ಅರ್ಜಿ ಸಲ್ಲಿಸುವುದು ಹೇಗೆ?
ಪ್ರಾಂಶುಪಾಲರ ಹುದ್ದೆಯ ಆಕಾಂಕ್ಷಿಗಳು ಆನ್‌ಲೈನ್ ಮೂಲಕವೇ ಅರ್ಜಿಗಳನ್ನು ಸಲ್ಲಿಸಬೇಕು. ಆಫ್‌ಲೈನ್ ಮೂಲಕ ಅರ್ಜಿ ಸಲ್ಲಿಸುವುದಕ್ಕೆ ಅವಕಾಶ ಇಲ್ಲ. ಜನವರಿ 15ರವರೆಗೆ ಅರ್ಜಿ ಸಲ್ಲಿಸಲು ಅವಕಾಶ ಇದ್ದು, ಆಯ್ದ ಇ–ಪೋಸ್ಟ್ ಆಫೀಸ್‌ಗಳಲ್ಲಿ ಜನವರಿ 17ರ ಒಳಗೆ ಶುಲ್ಕ ಪಾವತಿಸಬೇಕು.
ಸಾಮಾನ್ಯ ವರ್ಗದವರು ಹಾಗೂ ಪ್ರವರ್ಗ 2ಎ, 2ಬಿ, 3ಎ, 3ಬಿಗೆ ಸೇರಿದ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕ ಐದು ಸಾವಿರ ರೂಪಾಯಿ ನಿಗದಿಪಡಿಸಲಾಗಿದೆ. ಎಸ್‌ಸಿ, ಎಸ್‌ಟಿ ಹಾಗೂ ಪ್ರವರ್ಗ–1ರ ಅಭ್ಯರ್ಥಿಗಳು ₹2500 ಶುಲ್ಕ ಪಾವತಿಸಬೇಕು. ಅರ್ಜಿ ಸಲ್ಲಿಸಲು ಹಾಗೂ ಹೆಚ್ಚಿನ ಮಾಹಿತಿಗಾಗಿ http://kea.kar.nic.in ಸಂಪರ್ಕಿಸಬೇಕು.
ಯಾರು ಅರ್ಹರು?
ಸರ್ಕಾರಿ ಮತ್ತು ಖಾಸಗಿ ಪದವಿ ಕಾಲೇಜಿನಲ್ಲಿ ಬೋಧನೆ ಅಥವಾ ಸಂಶೋಧನೆ ಅಥವಾ ಆಡಳಿತದಲ್ಲಿ ಪೂರ್ಣಕಾಲಿಕ ಬೋಧಕರಾಗಿ 15 ವರ್ಷ ಸೇವಾ ಅನುಭವ ಹೊಂದಿರುವ ಪ್ರಾಧ್ಯಾಪಕ/ಸಹ ಪ್ರಾಧ್ಯಾಪಕರು ಅರ್ಜಿ ಸಲ್ಲಿಸಬಹುದು.
ಅಲ್ಲದೆ ವಿಶ್ವವಿದ್ಯಾಲಯ ಅನುದಾನ ಆಯೋಗ (ಯುಜಿಸಿ) ಪಟ್ಟಿ ಮಾಡಿರುವ ಪತ್ರಿಕೆಗಳಲ್ಲಿ ಕನಿಷ್ಠ 10 ಸಂಶೋಧನಾ ಲೇಖನಗಳು ಪ್ರಕಟವಾಗಿರಬೇಕು. ಯುಜಿಸಿ ಮಾನದಂಡಗಳ ಪ್ರಕಾರ 110 ಸಂಶೋಧನಾ ಅಂಕಗಳನ್ನು ಹೊಂದಿರಬೇಕು. ಅರ್ಜಿ ಸಲ್ಲಿಸಲು ನಿರಾಕ್ಷೇಪಣಾ ಪತ್ರ ಅಗತ್ಯ. ಹಿಂದಿನ ಸೇವಾವಧಿ, ವೇತನ, ರಜೆ ಇತ್ಯಾದಿಗಳನ್ನು ಪಿಂಚಣಿ ಉದ್ದೇಶಕ್ಕೆ ಪರಿಗಣಿಸಲಾಗುತ್ತದೆ.
ಪರೀಕ್ಷೆಯ ವಿಧಾನ ಹೇಗಿರುತ್ತದೆ?
ಸ್ಪರ್ಧಾತ್ಮಕ ಪರೀಕ್ಷೆಯು 100 ಅಂಕಗಳ ಬಹುಆಯ್ಕೆ ಮಾದರಿಯ ಒಂದು ಪ್ರಶ್ನೆಪತ್ರಿಕೆಯನ್ನು ಒಳಗೊಂಡಿರುತ್ತದೆ. ಸಾಮಾನ್ಯ ಜ್ಞಾನ, ಗ್ರಹಿಕಾ ಸಾಮರ್ಥ್ಯ, ಪಿಂಚಣಿ ಮತ್ತು ವೇತನ ಲೆಕ್ಕಾಚಾರ, ಸಾರ್ವಜನಿಕ ಸಂಗ್ರಹಣೆ, ಅಧಿನಿಯಮಗಳು ಮತ್ತು ನಿಯಮಗಳು, ಕರ್ನಾಟಕ ಸಿವಿಲ್ ಸೇವಾ ನಿಯಮಗಳು, ಪಠ್ಯೇತರ ಚಟುವಟಿಕೆಗಳು, ಕಂಪ್ಯೂಟರ್ ಜ್ಞಾನ, ತಾರ್ಕಿಕ ಜ್ಞಾನ, ನೈತಿಕತೆ ವಿಷಯಗಳನ್ನು ಒಳಗೊಂಡ ಪ್ರಶ್ನೆಗಳು ಕನ್ನಡ ಮತ್ತು ಇಂಗ್ಲಿಷ್‌ನಲ್ಲಿ ಇರುತ್ತವೆ. ತಪ್ಪು ಉತ್ತರಗಳಿಗೆ ಅಂಕಗಳನ್ನು ಕಳೆಯುವುದಿಲ್ಲ.
150 ಅಂಕಗಳ ಕಡ್ಡಾಯ ಕನ್ನಡ ಭಾಷಾ ಪರೀಕ್ಷೆ ಇರುತ್ತದೆ. ಇದರಲ್ಲಿ ಕನಿಷ್ಠ 50 ಅಂಕಗಳನ್ನು ಪಡೆಯ ಬೇಕು.ಇದು ಎಸ್ಸೆಸ್ಸೆಲ್ಸಿ ಹಂತದ ಪ್ರಶ್ನೆ ಪತ್ರಿಕೆಯಾಗಿರುತ್ತದೆ. ಎಸ್ಸೆಸ್ಸೆಲ್ಸಿ ಅಥವಾ ತತ್ಸಮಾನ ಪರೀಕ್ಷೆ ಅಥವಾ ಎಸ್ಸೆಸ್ಸೆಲ್ಸಿಗಿಂತ ಹೆಚ್ಚಿನ ಯಾವುದೇ ಪರೀಕ್ಷೆಯಲ್ಲಿ ಕನ್ನಡವು ಮುಖ್ಯಭಾಷೆ, ದ್ವಿತೀಯ ಭಾಷೆ ಅಥವಾ ಐಚ್ಛಿಕ ವಿಷಯವಾಗಿದ್ದರೆ ಅಥವಾ ಕನ್ನಡ ಮಾಧ್ಯಮದಲ್ಲಿ ಉತ್ತೀರ್ಣರಾಗಿದ್ದರೆ, ಅಂತಹವರಿಗೆ ಕನ್ನಡ ಪರೀಕ್ಷೆಯಿಂದ ವಿನಾಯಿತಿ ನೀಡಲಾಗುತ್ತದೆ. ಕನ್ನಡ ಭಾಷಾ ಪರೀಕ್ಷೆಯಲ್ಲಿ ಗಳಿಸಿದ ಅಂಕಗಳನ್ನು ಮೆರಿಟ್‌ಗೆ ಪರಿಗಣಿಸುವುದಿಲ್ಲ. ಇದು ಕೇವಲ ಅರ್ಹತೆಗಾಗಿ ಅಷ್ಟೇ.
ಅವಧಿ ಎಷ್ಟು?
ಪ್ರಾಂಶುಪಾಲರನ್ನು ಐದು ವರ್ಷಗಳ ಅವಧಿಗೆ ನೇಮಕ ಮಾಡಿಕೊಳ್ಳಲಾಗುತ್ತದೆ. ಅದಾದ ಬಳಿಕ ಸರ್ಕಾರ ರಚಿಸುವ ಸಮಿತಿಯು ಅವರ ಕಾರ್ಯವನ್ನು ಮೌಲ್ಯಮಾಪನಕ್ಕೆ ಒಳಪಡಿಸಲಿದೆ. ಕಾರ್ಯನಿರ್ವಹಣೆ ಉತ್ತಮವಾಗಿದ್ದರೆ ಮತ್ತೆ ಐದು ವರ್ಷಗಳ ಕಾಲ ಅವಧಿ ವಿಸ್ತರಿಸಲು ಅವಕಾಶ ಇದೆ. ಒಂದು ವೇಳೆ ಅವಧಿ ವಿಸ್ತರಣೆ ಆಗದೆ ಇದ್ದರೆ, ಪ್ರಾಂಶುಪಾಲರಾಗಿ ನೇಮಕವಾಗುವುದಕ್ಕೂ ಮುಂಚೆ ಇದ್ದ ಕಾಲೇಜಿನಲ್ಲಿ ವಯೋಮಿತಿ ಪೂರ್ಣಗೊಳ್ಳುವವರೆಗೆ ಹಿಂದೆ ಇದ್ದ ಹುದ್ದೆಯಲ್ಲಿ ಮುಂದುವರಿಯಬಹುದು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.