ADVERTISEMENT

ನಿಮ್ಮ ಪ್ರಶ್ನೆಗೆ ತಜ್ಞರ ಉತ್ತರ: ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ಹೇಗೆ?

ಪ್ರದೀಪ್ ಕುಮಾರ್ ವಿ.
Published 4 ಆಗಸ್ಟ್ 2024, 23:30 IST
Last Updated 4 ಆಗಸ್ಟ್ 2024, 23:30 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ಹೇಗೆ?

-ಜೇಜು ನಾಯಕ್, ಯಾದಗಿರಿ.

ಪರೀಕ್ಷೆಗಳ ಪ್ರಾಮುಖ್ಯತೆ, ಕಠಿಣತೆಯ ಮಟ್ಟ ಹಾಗೂ ನಿಮ್ಮ ಧ್ಯೇಯ ಮತ್ತು ಸಾಮರ್ಥ್ಯದ ಆಧಾರದ ಮೇಲೆ ಸೂಕ್ತ ಕಾರ್ಯತಂತ್ರವನ್ನು ರೂಪಿಸಬೇಕು. ಎಷ್ಟು ಸಮಯ ಓದಬೇಕು ಎನ್ನುವುದಕ್ಕಿಂತ ಓದುವಿಕೆ ಪರಿಣಾಮಕಾರಿಯಾಗಿರಬೇಕು. ಅದೇ ರೀತಿ ಸ್ವಯಂ-ಪ್ರಶ್ನೆಗಳನ್ನು ಕೇಳುವುದರಿಂದ ವಿಷಯದ ಬಗ್ಗೆ ಒಳನೋಟಗಳು ಲಭಿಸಿ, ನಿಮ್ಮಲ್ಲಿ ವಿಮರ್ಶಾತ್ಮಕ ಚಿಂತನಾ ಕೌಶಲ್ಯದ ಅಭಿವೃದ್ಧಿಯಾಗಿ ಕಲಿಕೆ ಪರಿಪೂರ್ಣವಾಗುತ್ತದೆ. ಹಾಗೂ, ಈ ಸಲಹೆಗಳನ್ನು ಗಮನಿಸಿ:
◦ SQ3R ನಂತಹ ಓದುವಿಕೆಯ ತಂತ್ರಗಾರಿಕೆ ಉಪಯುಕ್ತ.
◦ ಹಿಂದಿನ ಪ್ರಶ್ನೆಪತ್ರಿಕೆಗಳನ್ನು ಗಮನಿಸಿ ಅಣಕು ಪರೀಕ್ಷೆಗಳನ್ನು ಮಾಡುತ್ತಿರಿ.
◦ ಮನಸ್ಸು ಉಲ್ಲಾಸವಾಗಿರುವಾಗ, ಕಠಿಣ ವಿಷಯಗಳು ಮತ್ತು ಕಡಿಮೆ ಆಸಕ್ತಿಯಿರುವ ವಿಷಯಗಳನ್ನು ಓದಿ.
◦ ದಿನನಿತ್ಯದ ಅಧ್ಯಯನ ವೇಳಾಪಟ್ಟಿಯನ್ನು ಪಾಲಿಸಿ.
◦ ಆದಷ್ಟು ಶಾಂತ ವಾತಾವರಣದಲ್ಲಿ ಏಕಾಗ್ರತೆಯಿಂದ ಓದಿ.
◦ ಏಕಾಗ್ರತೆ ಮತ್ತು ಸ್ಮರಣಶಕ್ತಿಯನ್ನು ಹೆಚ್ಚಿಸುವ ಭ್ರಮರಿ ಪ್ರಾಣಾಯಾಮವನ್ನು ದಿನಕ್ಕೆ 2-3 ಬಾರಿ ಅಭ್ಯಾಸ ಮಾಡಿ.
◦ ಆಗಾಗ್ಗೆ ಸಣ್ಣ ವಿರಾಮಗಳನ್ನು ತೆಗೆದುಕೊಳ್ಳಿ.
ಪರಿಣಾಮಕಾರಿ ಅದ್ಯಯನದ ಮಾರ್ಗದರ್ಶನಕ್ಕಾಗಿ ಈ ವಿಡಿಯೊ ವೀಕ್ಷಿಸಿ: https://www.youtube.com/watch?v=3PzmKRaJHmk

ADVERTISEMENT

ನಾನು ಪದವಿ ಮುಗಿಸಿ ಮೂರು ವರ್ಷ ಆಗಿದ್ದು, ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಯಶಸ್ಸು ಸಿಗದೆ, ಈಗ ಬಿ.ಪಿಇಡಿ, ಬಿಇಡಿ, ಕಾನೂನು ಅಥವಾ ಎಂಕಾಂ ಕೋರ್ಸ್‌ಗಳಲ್ಲಿ ಯಾವ ಕೋರ್ಸ್ ಮಾಡಿದರೆ ಜೀವನವನ್ನು ಕಟ್ಟಿಕೊಳ್ಳಬಹುದು? ಈವರೆಗೆ, ಸಾಕಷ್ಟು ಸೋಲನ್ನು ಕಂಡಿದ್ದು,  ಮಾರ್ಗದರ್ಶನ ಬೇಕಿದೆ.
–ಹೆಸರು, ಊರು ತಿಳಿಸಿಲ್ಲ.

ಜೀವನದಲ್ಲಿ ಕನಸುಗಳಿರಬೇಕು; ಕನಸುಗಳು ಮಹತ್ವಾಕಾಂಕ್ಷೆಯಾಗಬೇಕು. ಅದರಂತೆ, ವೃತ್ತಿ ಮತ್ತು ವೈಯಕ್ತಿಕ ಜೀವನದಲ್ಲಿ ನಿರ್ದಿಷ್ಟವಾದ, ಸ್ಪಷ್ಟವಾದ, ಸಾಧಿಸಬಹುದಾದ, ಮತ್ತು ಅಳೆಯಬಹುದಾದ ಗುರಿಯಿರಬೇಕು. ಬಾಳಿಗೊಂದು ಗುರಿ ಇದ್ದರೆ, ನಮ್ಮಲ್ಲಿರುವ ಸುಪ್ತ ಶಕ್ತಿಗಳನ್ನು ಆ ಗುರಿಯೆಡೆಗೆ ಕೇಂದ್ರೀಕರಿಸಿ, ವೃತ್ತಿಯಲ್ಲಿ ಯಶಸ್ಸು ಮತ್ತು ಜೀವನದಲ್ಲಿ ಸಂತೃಪ್ತಿಯನ್ನು ಪಡೆಯಬಹುದು.

ನೀವು ತಿಳಿಸಿರುವ ಎಲ್ಲಾ ಕೋರ್ಸ್ ಆಯ್ಕೆಗಳಲ್ಲೂ ವೃತ್ತಿ ಜೀವನವನ್ನು ರೂಪಿಸಿಕೊಳ್ಳಬಹುದು. ಕಲಿಯುವ ವಿದ್ಯೆಗೂ, ನಿಮ್ಮಲ್ಲಿರುವ ಕೌಶಲಗಳಿಗೂ ಸರಿಹೊಂದುವಂಥ, ನಿಮ್ಮ ಇಷ್ಟ, ಅಭಿರುಚಿಗೆ ಸ್ಪಂದಿಸುವಂಥ ವೃತ್ತಿ, ಅದರಂತೆ ಕೋರ್ಸ್ ಆಯ್ಕೆ ಮಾಡಿಕೊಳ್ಳಿ. ಏಕೆಂದರೆ, ಒಲವಿಲ್ಲದ ವೃತ್ತಿ ನೀರಸಮಯ; ಅಂತಹ ವೃತ್ತಿಯಲ್ಲಿ ಯಶಸ್ಸು ಅಸಾಧ್ಯ. ಹೆಚ್ಚಿನ ಮಾರ್ಗದರ್ಶನಕ್ಕಾಗಿ ಈ ವಿಡಿಯೊ ವೀಕ್ಷಿಸಿ   

ನಾನು ಜೀವವಿಜ್ಞಾನದಲ್ಲಿ ಪದವಿಯನ್ನು ಮಾಡಿದ್ದು ನನಗೆ ಇಂಟೀರಿಯರ್ ಡಿಸೈನ್ ಕ್ಷೇತ್ರದಲ್ಲಿ ಆಸಕ್ತಿ¬ದ್ದು, ನಿಮ್ಮ ಮಾರ್ಗದರ್ಶನವನ್ನು ನೀಡಿ.
–ಸಂಪದ ಶಿಂಧೆ, ಊರು ತಿಳಿಸಿಲ್ಲ.

ಇಂಟೀರಿಯರ್ ಡಿಸೈನ್ ಕ್ಷೇತ್ರದಲ್ಲಿ ಯಶಸ್ವಿಯಾಗಲು ಸೃಜನಶೀಲತೆ, ಕಲ್ಪನಾ ಶಕ್ತಿ, ಸಮಸ್ಯೆಗಳನ್ನು ಪರಿಹರಿಸುವ ಶಕ್ತಿ, ಸಂವಹನ, ವಿವರಗಳಿಗೆ ಗಮನ, ಸಮಯದ ನಿರ್ವಹಣೆ, ಆಟೋಕ್ಯಾಡ್ ಮುಂತಾದ ಕೌಶಲಗಳ ಅಗತ್ಯವಿರುತ್ತದೆ. ಹಾಗಾಗಿ, ಈ ಕೌಶಲಗಳು ನಿಮ್ಮಲ್ಲಿವೆಯೇ ಅಥವಾ ಈ ಕೌಶಲಗಳನ್ನು ಬೆಳೆಸಿಕೊಳ್ಳಬಹುದೇ ಎಂದು ಆಲೋಚಿಸಿ. ಹಾಗೂ, ಈ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಪದವಿ (ಬಿ.ಡಿಸೈನ್) ಅಥವಾ ಅಲ್ಪಾವಧಿ ಸರ್ಟಿಫಿಕೆಟ್/ಡಿಪ್ಲೊಮಾ ಕೋರ್ಸ್ ಮಾಡಿ ಬೇಡಿಕೆಯಲ್ಲಿರುವ ಈ ಕ್ಷೇತ್ರದಲ್ಲಿ ಜೀವನವನ್ನು ರೂಪಿಸಿಕೊಳ್ಳಬಹುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.