ADVERTISEMENT

ಸ್ಪರ್ಧಾವಾಣಿ: ಘೇಂಡಾಮೃಗ ಸಂರಕ್ಷಣೆಗೆ ಏನಿದು ‘ಭಾರತದ ಮಾದರಿ’

ಸುಕೃತ ಎಸ್.
Published 25 ಸೆಪ್ಟೆಂಬರ್ 2024, 23:41 IST
Last Updated 25 ಸೆಪ್ಟೆಂಬರ್ 2024, 23:41 IST
<div class="paragraphs"><p>ಘೇಂಡಾಮೃಗ</p></div>

ಘೇಂಡಾಮೃಗ

   

ಹುಲಿ, ಆನೆ, ಸಿಂಹಗಳಂತೆ ಘೇಂಡಾಮೃಗ ಬಹು ಚರ್ಚಿತ ಪ್ರಾಣಿಯೇನಲ್ಲ. ಆನೆಯ ಬಳಿಕ ಜಗತ್ತಿನಲ್ಲಿರುವ ಅತಿ ದೊಡ್ಡ ಸಸ್ತನಿ ಈ ಘೇಂಡಾಮೃಗ. ಇವುಗಳಲ್ಲಿ ಐದು ವಿಧಗಳಿವೆ. ಅವುಗಳಲ್ಲಿ ‘ಒಂಟಿ ಕೊಂಬಿನ ಘೇಂಡಾಮೃಗ’ ಅಥವಾ ‘ಇಂಡಿಯನ್‌ ರೈನೊ’ ಕೂಡ ಒಂದು. ಬೇಟೆಯ ಕಾರಣಕ್ಕೆ ಅಳಿವಿನ ಅಂಚಿಗೆ ಬಂದಿದ್ದ ಘೇಂಡಾಮೃಗವನ್ನು ಭಾರತ ಉಳಿಸಿಕೊಂಡಿದೆ. ಇದರ ಸಂರಕ್ಷಣೆ ಪ್ರಕ್ರಿಯೆಗೆ ಶತಮಾನದ ಇತಿಹಾಸವಿದೆ. ಜಗತ್ತಿನಲ್ಲಿ ಪ್ರಾಣಿ ಸಂರಕ್ಷಣೆಯ ‘ಭಾರತ ಮಾದರಿ’ ರೂಪುಗೊಂಡಿದೆ.

ಸೆಪ್ಟೆಂಬರ್‌ 22 ವಿಶ್ವ ಘೇಂಡಾಮೃಗ ದಿನ. ಇದರ ಭಾಗವಾಗಿ ಕೇಂದ್ರ ಸರ್ಕಾರವು ಇತ್ತೀಚೆಗೆ ಪುಟ್ಟ ವರದಿಯೊಂದನ್ನು ಬಿಡುಗಡೆಗೊಳಿಸಿದೆ. ಒಂಟಿ ಕೊಂಬಿನ ಘೇಂಡಾಮೃಗ ಸಂರಕ್ಷಣೆಯಲ್ಲಿ ಭಾರತವು ಕೈಗೊಂಡ ಕ್ರಮಗಳ ಕುರಿತು ಅದರಲ್ಲಿ ಮಾಹಿತಿಗಳಿವೆ. 1960ರ ಹೊತ್ತಿಗೆ 600ರಷ್ಟಿದ್ದ ಒಂಟಿ ಕೊಂಬಿನ ಘೇಂಡಾಮೃಗಗಳ ಸಂಖ್ಯೆಯು 2024ರ ಹೊತ್ತಿಗೆ 4,000 ದಾಟಿ‌ದೆ.

ADVERTISEMENT

ಅಸ್ಸಾಂನ ಕಾಜಿರಂಗ ರಾಷ್ಟ್ರೀಯ ಉದ್ಯಾನ ಪ್ರದೇಶವು ಒಂಟಿ ಕೊಂಬಿನ ಘೇಂಡಾಮೃಗಗಳ ಆವಾಸಸ್ಥಾನ. ಅಸ್ಸಾಂ ಮಾತ್ರವಲ್ಲದೆ, ಪಶ್ಚಿಮ ಬಂಗಾಳ, ಉತ್ತರ ಪ್ರದೇಶ ರಾಜ್ಯಗಳಲ್ಲಿಯೂ ಈ ಘೇಂಡಾಮೃಗದ ಆವಾಸವಿದೆ. ಭಾರತ ಮಾತ್ರವಲ್ಲದೆ ನೇಪಾಳ ಹಾಗೂ ಭೂತಾನ್‌ನಲ್ಲಿಯೂ ಒಂಟಿ ಕೊಂಬಿನ ಘೇಂಡಾಮೃಗಗಳು ಕಾಣಸಿಗುತ್ತವೆ. ಈ ದೇಶಗಳಲ್ಲಿ ಬಿಟ್ಟು ಬೇರೆಯಲ್ಲೂ ಈ ಪ್ರಬೇಧದ ಘೇಂಡಾಮೃಗಗಳಿಲ್ಲ.


ಏನಿದು ‘ಭಾರತ ಮಾದರಿ’?

ಈ ಮಾದರಿಯು ರೂಪುಗೊಂಡಿರುವುದರ ಹಿಂದೆ ಹಲವಾರು ದಶಕಗಳ ಶ್ರಮವಿದೆ. ಬ್ರಿಟಿಷರ ಕಾಲದಲ್ಲಿ ಇವುಗಳನ್ನು ಕ್ರೀಡೆಗಾಗಿ ಬೇಟೆಯಾಡಲಾಗುತ್ತಿತ್ತು. ಇದೇ ಕಾರಣಕ್ಕಾಗಿ ಒಂಟಿ ಕೊಂಬಿನ ಘೇಂಡಾಮೃಗಗಳು ಹೇರಳವಾಗಿದ್ದ ಕಾಜಿರಂಗ ಅರಣ್ಯ ಪ್ರದೇಶವನ್ನು ಲೇಡಿ ಕರ್ಜನ್‌ ಸಂರಕ್ಷಿತ ಪ್ರದೇಶವನ್ನಾಗಿ ಘೋಷಿಸಿದರು. ಅಲ್ಲಿಂದೀಚೆಗೆ ಬ್ರಿಟಿಷರು, ಸ್ವಾತಂತ್ರ್ಯಾನಂತರ ಭಾರತ ಸರ್ಕಾರ, ಅಸ್ಸಾಂ ಸರ್ಕಾರ ಹಾಗೂ ಸ್ಥಳೀಯರ ಶ್ರಮದಿಂದಾಗಿ ಈ ಪ್ರಬೇಧದ ಘೇಂಡಾಮೃಗವು ಉಳಿದುಕೊಂಡಿದೆ.

1897ರ ಅಸ್ಸಾಂ ಅರಣ್ಯ ಸಂರಕ್ಷಣೆ ಕಾಯ್ದೆ, 1932ರ ಬಂಗಾಳ ಘೇಂಡಾಮೃಗ ಸಂರಕ್ಷಣೆ ಕಾಯ್ದೆ, 1954ರ ಅಸ್ಸಾಂ ಘೇಂಡಾಮೃಗ ಸಂರಕ್ಷಣೆ ಕಾಯ್ದೆ, 1972ರ ವನ್ಯಜೀವಿ (ಸಂರಕ್ಷಣೆ) ಕಾಯ್ದೆ ಹಾಗೂ ಈ ಕಾಯ್ದೆಗೆ 2009ರಲ್ಲಿ ಅಸ್ಸಾಂ ಸರ್ಕಾರ ಮಾಡಿದ ತಿದ್ದುಪಡಿ... ಇಂಥ ಹಲವು ಕಠಿಣ ಕಾನೂನುಗಳ ಕಾರಣದಿಂದಾಗಿ ಭಾರತದಲ್ಲಿ ಒಂಟಿ ಕೊಂಬಿನ ಘೇಂಡಾಮೃಗಗಳ ಸಂಖ್ಯೆ ಏರಿಕೆಯಾಗುತ್ತಿದೆ ಮತ್ತು ಇವುಗಳ ಬೇಟೆ ನಿಂತುಹೋಗಿದೆ.

ಸಂರಕ್ಷಣೆ ಪ್ರಕ್ರಿಯೆಯಲ್ಲಿ ಸರ್ಕಾರದೊಂದಿಗೆ ಸಾರ್ವಜನಿಕರು ಕೈಜೋಡಿಸಿರುವುದೇ ಈ ಮಾದರಿಯ ಯಶಸ್ಸಿನ ಪ್ರಮುಖ ಕಾರಣ. ಇದರಿಂದಾಗಿ ಮಾನವ–ವನ್ಯಜೀವಿ ಸಂರ್ಘವು ಕಾಜಿರಂಗ ಉದ್ಯಾನ ಪ್ರದೇಶದಲ್ಲಿ ತಗ್ಗಿದೆ.

ಯಶಸ್ಸಿನ ಇತರೆ ಪ್ರಮುಖ ಕಾರಣಗಳು

lಆವಾಸಸ್ಥಾನಗಳ ವ್ಯಾಪ್ತಿಯನ್ನು ಹೆಚ್ಚಿಸಿರುವುದು

lನೂತನ ಸಂರಕ್ಷಿತ ಪ್ರದೇಶಗಳನ್ನು ಘೋಷಿಸಿರುವುದು

lಬೇಟೆಗೆ ಸಂಪೂರ್ಣ ನಿಷೇಧ

lಬೇಟೆಯಾಡಿದರೆ ಹೆಚ್ಚಿನ ಪ್ರಮಾಣ ದಂಡ ವಸೂಲಿ, ಜೀವಾವಧಿ ಶಿಕ್ಷೆ ಸೇರಿದಂತೆ ಕಠಿಣ ಸಜೆ

ಕೊಂಬು: ಜೀವಕ್ಕೆ ಆಪತ್ತು

ಚೀನಾ ಹಾಗೂ ವಿಯೆಟ್ನಾಂಗಳಲ್ಲಿ ಘೇಂಡಾಮೃಗಗಳ ಕೊಂಬಿಗೆ ಔಷಧೀಯ ಗುಣಗಳಿವೆ ಎಂಬ ನಂಬಿಕೆ ಜನರಲ್ಲಿದೆ. ಇದೇ ಕಾರಣಕ್ಕೆ ವಿಶ್ವದಾದ್ಯಂತ ಘೇಂಡಾಮೃಗಗಳನ್ನು ಹತ್ಯೆ ಮಾಡಲಾಗುತ್ತಿದೆ. ಜಗತ್ತಿನಾದ್ಯಂತ ನಡೆಯುವ ವನ್ಯಜೀವಿಗಳ ಕಳ್ಳಸಾಗಣೆಯಲ್ಲಿ ಘೇಂಡಾಮೃಗಗಳ ಕೊಂಬು, ಅಂಗಗಳಿಂದ ತಯಾರಾದ ಉತ್ಪನ್ನಗಳ ಕಳ್ಳಸಾಗಣೆಯು ಶೇ 29ರಷ್ಟಿದೆ ಎಂದು ವಿಶ್ವಸಂಸ್ಥೆ ಹೇಳುತ್ತದೆ. ಜಗತ್ತಿನಾದ್ಯಂತ ಘೇಂಡಾಮೃಗಗಳ ಸಂಖ್ಯೆಯು ತುಸು ಏರಿಕೆ ಕಾಣುತ್ತಿದ್ದರೂ ಅದರ ಕೊಂಬಿಗಾಗಿ ಹೆಚ್ಚಿನ ಪ್ರಮಾಣದಲ್ಲಿ ಬೇಟೆಯಾಡಲಾಗುತ್ತಿದೆ.

ಹವಾಮಾನ ಬದಲಾವಣೆ, ಆವಾಸಸ್ಥಾನಗಳು ಕಾಣೆಯಾಗುತ್ತಿರುವುದು ಘೇಂಡಾಮೃಗಗಳ ಸಂಖ್ಯೆ ಇಳಿಕೆಯಾಗಲು ಇರುವ ಇತರ ಪ್ರಮುಖ ಕಾರಣಗಳು.

ಕೃಷ್ಣನ ವಾಹನ

ಘೇಂಡಾಮೃಗ ಅಸ್ಸಾಂ ರಾಜ್ಯದ ಹೆಮ್ಮೆ. ಅಲ್ಲಿನ ಜನರು ಈ ಪ್ರಾಣಿಯನ್ನು ದೇವರು ಅಂತಲೂ ‍ಪೂಜಿಸುತ್ತಾರೆ. ಪ್ರತಿ ವರ್ಷ ಅಲ್ಲಿ ಜಾತ್ರೆಯೂ ನಡೆಯುತ್ತದೆ. ರಾಜ್ಯದ ಮೂಲೆ ಮೂಲೆಯಿಂದಲೂ ಜನರು ಈ ಜಾತ್ರೆಯಲ್ಲಿ ಭಾಗವಹಿಸುತ್ತಾರೆ. ಅಲ್ಲಿನ ಸಂಸ್ಕೃತಿಯಲ್ಲಿ ಘೇಂಡಾಮೃಗ ಹಾಸುಹೊಕ್ಕಾಗಿದೆ. ಈ ಪ್ರಾಣಿಯ ಬಗೆಗಿನ ಅಲ್ಲಿನ ಜನಪದ ಕಥೆಯೊಂದು ಕುತೂಹಲಕಾರಿಯಾಗಿದೆ. ಕಥೆ ಹೀಗಿದೆ:

ಸೋನಿಪುರದ ರಾಜಕುಮಾರಿಗೆ ಸುಂದರ ರಾಜಕುಮಾರನ ಕನಸು ಬಿದ್ದು, ಆತನ ಮೇಲೆ ಪ್ರೇಮಾಂಕುರವಾಯಿತು. ಗೆಳತಿ ಚಿತ್ರಲೇಖಾ, ರಾಜಕುಮಾರಿ ವಿವರಿಸಿದ ಕನಸನ್ನೇ ಧ್ಯಾನಿಸಿ ರಾಜಕುಮಾರನ ಚಿತ್ರ ಬಿಡಿಸಿದಳು. ಆ ಚಿತ್ರವು ಕೃಷ್ಣನ ಮೊಮ್ಮಗ ಅನಿರುದ್ಧನದು. ಅನಿರುದ್ಧನು ರಾಜಕುಮಾರಿಯನ್ನು ವರಿಸಲು ಸೋನಿಪುರಕ್ಕೆ ಬರುತ್ತಾನೆ. ಆದರೆ ರಾಜನಿಗೆ ಈ ಮದುವೆ ಇಷ್ಟವಿರುವುದಿಲ್ಲ. ಅನಿರುದ್ಧನನ್ನು ಬಂಧಿ ಮಾಡಿಕೊಳ್ಳುತ್ತಾನೆ. ಈಗ ಕೃಷ್ಣನ ಪ್ರವೇಶವಾಗುತ್ತದೆ. ತನ್ನ ಮೊಮ್ಮಗನನ್ನು ಕರೆತರಲು, ಇಬ್ಬರಿಗೂ ಮದುವೆ ಮಾಡಿಸಲು, ಕೃಷ್ಣ ಸೋನಿಪುರಕ್ಕೆ ಘೇಂಡಾಮೃಗವೇರಿ ಹೊರಟನಂತೆ.

ಬ್ರಹ್ಮಪುತ್ರ ನದಿಯನ್ನು ದಾಟಿ ಸೋನಿಪುರ ಸೇರಬೇಕು. ಕೃಷ್ಣ ತನ್ನ ಘೇಂಡಾಮೃಗದ ಸೇನೆಯನ್ನು ನದಿಯ ದಂಡೆಯಲ್ಲಿಯೇ ಬಿಟ್ಟು ತೆರಳಿದ. ಇವುಗಳು ಅಲ್ಲಿನ ಪ್ರಕೃತಿಗೆ ಮನಸೂರೆಗೊಂಡು ಹುಲ್ಲು ತಿನ್ನುತ್ತಾ ನಿಂತುಬಿಟ್ಟವಂತೆ. ಕೃಷ್ಣ ತನ್ನ ಕೆಲಸದಲ್ಲಿ ಸಫಲನಾಗಿ ಆ ಬದಿಯ ದಂಡೆಯಿಂದ ಕೊಳಲು ಊದಿ ತನ್ನ ಘೇಂಡಾಮೃಗ ಸೇನೆಯನ್ನು ಕರೆದನಂತೆ. ಆದರೆ, ನದಿಯ ರಭಸದ ಶಬ್ದಕ್ಕೆ ಘೇಂಡಾಮೃಗಗಳಿಗೆ ಕೊಳಲಿನ ಕರೆ ಕೇಳಿಸಲಿಲ್ಲ. ಇದರಿಂದ ಕ್ರುದ್ಧನಾದ ಕೃಷ್ಣ, ನದಿ ದಾಟಿಬಂದು, ನೀವೆಲ್ಲಾ ಇಲ್ಲಿಯೇ ಇದ್ದುಬಿಡಿ ಎಂದು ತನ್ನ ಘೇಂಡಾಮೃಗ ಸೇನೆಯನ್ನು ಬಿಟ್ಟು ತೆರಳಿದನಂತೆ. ಅಲ್ಲಿಂದ ಅವು ಅಸ್ಸಾಂನಲ್ಲಿಯೇ ಇದ್ದು ಬಿಟ್ಟವಂತೆ.

ಕೃಷ್ಣ, ತಮ್ಮ ಘೇಂಡಾಮೃಗ ಸೇನೆಯನ್ನು ಯುದ್ಧಕ್ಕೆಂದು ಸಿದ್ಧಪಡಿಸಿಕೊಂಡು ಬಂದಿದ್ದನಂತೆ. ಅವಕ್ಕೆ ಬೆನ್ನಿನ ಮೇಲೆ ಕವಚಗಳನ್ನು ಹಾಕಿದ್ದನಂತೆ, ಮೂಗಿನ ಮೇಲೆ ಕೊಂಬು ಕೂರಿಸಿದ್ದನಂತೆ. ಕೃಷ್ಣ ಬಿಟ್ಟು ಹೋದ ಮೇಲೆ ಅವುಗಳು ಈ ಕವಚವನ್ನು ಕಳಚಲಿಲ್ಲವಂತೆ. ಅದಕ್ಕಾಗಿಯೇ ಅವುಗಳ ದೇಹದ ಮೇಲೆ ಕಿವಿಯಲ್ಲಿ ಹಾಗೂ ಬಾಲದ ತುದಿಗೆ ಬಿಟ್ಟರೆ ಬೇರೆಡೆ ಕೂದಲೇ ಇಲ್ಲವಂತೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.