ಒಂದೇ ರೀತಿಯ ಉದ್ಯೋಗ ಮಾಡಿ ಬೇಸರವಾಗುತ್ತಿದೆಯೇ? ಇದ್ದ ಉದ್ಯೋಗದಲ್ಲೂ ಬಡ್ತಿ ಇಲ್ಲದೇ ಕೂತಿದ್ದೀರಾ? ಬೇರೆ ಉದ್ಯೋಗಕ್ಕೆ ಸೇರುವ ಆಸೆಯಿದ್ದರೂ ಅವಕಾಶಗಳು ಸಿಗುತ್ತಿಲ್ಲವೇ? ಚಿಂತೆ ಬೇಡ, ನಿಮಗೆ ಇಷ್ಟವಿರುವ ಉದ್ಯೋಗವನ್ನು ಆರಾಮವಾಗಿ ಪಡೆಯಲು ಸಾಧ್ಯವಿದೆ. ಅದು ಹೇಗೆನ್ನುತ್ತೀರಾ? ಉದ್ಯೋಗದಲ್ಲಿ ಬದಲಾವಣೆ ಬೇಕೆಂದರೆ ಬೇರೆ ತರಹದ ಅಥವಾ ಹೆಚ್ಚಿನ ಶಿಕ್ಷಣ ಪಡೆಯಬೇಕಾಗುತ್ತದೆ. ಕಲಿಕೆಯನ್ನು ಇಷ್ಟಪಡುವಿರಾದರೆ ಅಥವಾ ಹೆಚ್ಚು ವೇತನ ಸಿಗುವ ಕೆಲಸದ ಮೇಲೆ ಕಣ್ಣಿಟ್ಟಿದ್ದರೆ, ನೀವು ಓದನ್ನು ಮುಂದುವರಿಸಬಹುದು. ಅದು ಔದ್ಯೋಗಿಕ ಬದುಕಿನ ಯಾವ ಹಂತದಲ್ಲಿದ್ದರೂ ಸರಿ.
ಮುಂದುವರಿದ ಕಲಿಕೆಯು ಹಿಂದೆ ನಿಮ್ಮ ಕೈ ತಪ್ಪಿದಂತಹ ಉತ್ತಮ ಉದ್ಯೋಗಕ್ಕೆ ಅವಕಾಶ ಕಲ್ಪಿಸಬಹುದು. ಮುಂದುವರಿದ ಶಿಕ್ಷಣ ಎಂದರೆ ಅದು ಕಾಲೇಜು ಕೋರ್ಸ್ ಆಗಿರಬಹುದು ಅಥವಾ ಅಲ್ಪಾವಧಿ ತರಬೇತಿ ಆಗಿರಬಹುದು. ಕೆಲಸ ಮಾಡುತ್ತಿರುವ ವೃತ್ತಿಪರರು ಅಥವಾ ವಯಸ್ಸಾದವರೂ ಈ ಅಲ್ಪಾವಧಿ ತರಬೇತಿ ಪಡೆಯಬಹುದು.
ಮುಂದುವರಿದ ಕಲಿಕೆಗೆ ಪ್ರಮುಖ ಕಾರಣವೆಂದರೆ ಆರ್ಥಿಕ ಪರಿಸ್ಥಿತಿ. ಆರ್ಥಿಕ ಹಿಂಜರಿತದ ಸಂದರ್ಭದಲ್ಲಿ ಇಂತಹ ಕಲಿಕೆಗೆ ಸೇರುವವರ ಸಂಖ್ಯೆಯೂ ಅಧಿಕ ಎನ್ನುತ್ತಾರೆ ತಜ್ಞರು. ಇದೇ ರೀತಿ ಉದ್ಯೋಗಿಗಳು ತಾವು ಇದ್ದ ಉದ್ಯೋಗದಲ್ಲೇ ಉಳಿಯುವ ಸಲುವಾಗಿ ಅಥವಾ ಬಡ್ತಿ ಪಡೆಯುವ ಸಲುವಾಗಿ ಕೌಶಲವನ್ನು ಅಭಿವೃದ್ಧಿಪಡಿಸಿಕೊಳ್ಳಲು ಅಥವಾ ಹೊಸ ಉದ್ಯೋಗ ಪಡೆದುಕೊಳ್ಳಲು ಬಳಸಿಕೊಳ್ಳಬಹುದು.
ಹಾಗೆಯೇ ಈ ಮುಂದುವರಿದ ಕಲಿಕೆಗೆ ಕೆಲವು ಕಾರಣ ಹಾಗೂ ಲಾಭಗಳನ್ನು ಪಟ್ಟಿ ಮಾಡಬಹುದು.
ಉತ್ತಮ ವೇತನದ ಸಾಧ್ಯತೆ
ಕೇವಲ ಪದವಿ ಪಡೆದು ಕೆಲಸಕ್ಕೆ ಸೇರಿದವರು ತಮ್ಮ ಬಡ್ತಿ ಅವಕಾಶ ಹೆಚ್ಚಿಸಿಕೊಳ್ಳಲು ಹಾಗೂ ವೇತನ ಹೆಚ್ಚಿಸಿಕೊಳ್ಳಲು ಉನ್ನತ ಶಿಕ್ಷಣ ಮುಂದುವರಿಸಬಹುದು. ಇದಕ್ಕೆ ವಿಶೇಷವಾದ ತರಬೇತಿಯ ಅವಶ್ಯಕತೆ ಇರುತ್ತದೆ. ಉದಾಹರಣೆಗೆ ಆಡಳಿತ ಅಥವಾ ನಿರ್ವಹಣೆಯಂತಹ ಸ್ಥಾನಗಳಲ್ಲಿ ಇದ್ದವರು.
ಕಾರ್ಮಿಕ ಇಲಾಖೆಯ ವರದಿಯ ಪ್ರಕಾರ ಇದಕ್ಕೆ ಹೆಚ್ಚಾಗಿ ಸ್ನಾತಕೋತ್ತರ ಪದವಿಯ ಅಗತ್ಯವಿರುತ್ತದೆ. ಕೇವಲ ಪದವಿಯ ಮೇಲೆ ಎಲ್ಲಾ ಕ್ಷೇತ್ರಗಳಲ್ಲಿ ಉತ್ತಮ ಉದ್ಯೋಗ ಪಡೆಯಲು ಸಾಧ್ಯವಿಲ್ಲ. ಸ್ನಾತಕೋತ್ತರ ಪದವಿಯನ್ನು ಗಳಿಸಿದರೆ ಹೆಚ್ಚು ವೇತನದ ಉದ್ಯೋಗ ಪಡೆಯಲು ಸಾಧ್ಯವಿದೆ. ಉದಾಹರಣೆಗೆ ಪದವಿಯಿರುವ ಮಾರುಕಟ್ಟೆ ಮತ್ತು ಮಾರಾಟ ವಿಭಾಗದ ಅಧಿಕಾರಿ ವಾರ್ಷಿಕ ಐದು ಲಕ್ಷ ರೂಪಾಯಿ ಪಡೆದರೆ, ಸ್ನಾತಕೋತ್ತರ ಪದವಿ ಹೊಂದಿರುವ ಇದೇ ಹುದ್ದೆಯಲ್ಲಿರುವ ಅಧಿಕಾರಿ ವಾರ್ಷಿಕ 10- 12 ಲಕ್ಷ ರೂಪಾಯಿ ವೇತನ ಪಡೆಯಬಹುದು.
ಅವಕಾಶಗಳು ಹೆಚ್ಚು
ಸಾಮಾನ್ಯವಾಗಿ ಬ್ಯುಸಿನೆಸ್, ಶಿಕ್ಷಣ, ಆರೋಗ್ಯ ಕ್ಷೇತ್ರಗಳಲ್ಲಿ ಸ್ನಾತಕೋತ್ತರ ಪದವಿಯಿದ್ದರೆ ಇದು ಹೆಚ್ಚು ವೇತನ ಪಡೆಯುವ ಟೂಲ್ ಇದ್ದಂತೆ. ಹಾಗೆಯೇ ಜಾಹೀರಾತು, ಪಬ್ಲಿಕ್ ರಿಲೇಷನ್, ಮಾನವ ಸಂಪನ್ಮೂಲ, ಆಡಳಿತ ನಿರ್ವಹಣೆ ಮೊದಲಾದ ಕಡೆ ಸ್ನಾತಕೋತ್ತರ ಪದವಿ ಇದ್ದವರಿಗೆ ಅವಕಾಶಗಳು ಜಾಸ್ತಿ.
ಈ ಕ್ಷೇತ್ರದಲ್ಲಿರುವವರಿಂದ ಮಾಹಿತಿ ಪಡೆಯುವುದು ಉತ್ತಮ. ಏಕೆಂದರೆ ಸ್ನಾತಕೋತ್ತರ ಪದವಿ ಪಡೆಯಲು ಹೆಚ್ಚು ಹಣ ಬೇಕು ಹಾಗೂ ಸಮಯವೂ ತಗಲುತ್ತದೆ. ಹೀಗಾಗಿ ಚೆನ್ನಾಗಿ ಯೋಚಿಸಿ ಮುಂದುವರಿಯಿರಿ.ಇಲ್ಲದಿದ್ದರೆ ಅಲ್ಪಾವಧಿ ಕೋರ್ಸ್, ಸರ್ಟಿಫಿಕೇಷನ್ ಕೋರ್ಸ್ ಮಾಡಿಕೊಳ್ಳಬಹುದು.
ಕೆಲವು ಕ್ಷೇತ್ರಗಳಲ್ಲಿ ಕೌಶಲದ ಅಗತ್ಯವಿರುತ್ತದೆ. ಸಂಶೋಧನೆ ಮಾಡುವ ಸಾಮರ್ಥ್ಯಬೆಳೆಸಿಕೊಳ್ಳಬಹುದು.ವಿಶ್ವವಿದ್ಯಾಲಯಗಳಲ್ಲಿ ಪ್ರಾಧ್ಯಾಪಕ ವೃತ್ತಿಯಲ್ಲಿರುವವರಿಗೆ ಇದು ಲಾಭದಾಯಕ.
ನೇಮಕಾತಿಗೆ ಅನುಕೂಲ
ನಿಮ್ಮಲ್ಲಿರುವ ಕೌಶಲಗಳನ್ನು ರೆಸ್ಯೂಮ್‌ನಲ್ಲಿ ನಮೂದಿಸುವುದು ಹಾಗೂ ಸಂದರ್ಶನದ ಸಂದರ್ಭದಲ್ಲಿ ತಿಳಿಸುವುದು ಮುಖ್ಯ. ಇದರಿಂದ ನೇಮಕಾತಿಗೆ ಹೆಚ್ಚು ಅನುಕೂಲವಾಗುತ್ತದೆ. ಇದಲ್ಲದೇ ಬೇರೆ ಉದ್ಯೋಗಿಗಳ ಜೊತೆ ಹೆಚ್ಚು ಪೈಪೋಟಿ ನೀಡಲು ಸಾಧ್ಯ.ಇನ್ನೊಂದು ವೃತ್ತಿಯನ್ನು ಬದಲಿಸಬೇಕಾದರೆ ಈ ಮುಂದುವರಿದ ಕಲಿಕೆ ನೆರವಿಗೆ ಬರುತ್ತದೆ. ಈ ರೀತಿಯ ಸಂದರ್ಭ ಬಂದಾಗ ಹೆಚ್ಚುವರಿ ಶಿಕ್ಷಣ ಅಗತ್ಯವೇ ಎಂಬುದನ್ನು ಮೊದಲು ತಿಳಿದುಕೊಳ್ಳಿ.
ಸದ್ಯ ಔದ್ಯೋಗಿಕ ಮಾರುಕಟ್ಟೆಯಲ್ಲಿ ಯಾವ ರೀತಿಯ ಉದ್ಯೋಗಗಳಿಗೆ ಹೆಚ್ಚು ಬೇಡಿಕೆಯಿದೆ. ಯಾವ ರೀತಿಯ ಪೈಪೋಟಿಯಿದೆ ಎಂಬುದನ್ನು ತಿಳಿದುಕೊಳ್ಳಿ.ಜೊತೆಗೆ ವ್ಯಕ್ತಿತ್ವ ವಿಕಸನ, ಸಮಯದ ನಿರ್ವಹಣೆ, ಬಿಕ್ಕಟ್ಟಿನ ಪರಿಸ್ಥಿತಿಯ ನಿರ್ವಹಣೆ, ಸಮಸ್ಯೆಗಳ ಪರಿಹಾರದ ಕೌಶಲವಿದ್ದಲ್ಲಿ ಅದು ನಿಮಗೆ ಹೆಚ್ಚಿನ ಲಾಭ ತಂದುಕೊಡಬಹುದು.
ಇದು ನಿಮಗೆ ಹೆಚ್ಚುವರಿ ಇಮೇಜ್ ತಂದುಕೊಡುವಲ್ಲಿಯೂ ಸಹಕಾರಿ. ಹಾಗೆಯೇ ನಿಮ್ಮಲ್ಲಿರುವ ಆತ್ಮವಿಶ್ವಾಸವನ್ನು ಹೆಚ್ಚಿಸುತ್ತದೆ.ಇನ್ನೊಂದು ಮುಖ್ಯವಾದ ವಿಷಯವೆಂದರೆ ನೀವು ಯಾವಾಗ ಬೇಕಾದರೂ ಕಾಲೇಜಿಗೆ ಸೇರಬಹುದು. ಇದಕ್ಕೆ ವಯಸ್ಸಿನ ನಿರ್ಬಂಧವಿಲ್ಲ. ಅವಕಾಶವಿದ್ದರೆ ಆನ್‌ಲೈನ್ ಕೋರ್ಸ್ಮಾಡಿಕೊಳ್ಳಬಹುದು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.