ಹರಪನಹಳ್ಳಿ: ಪಟ್ಟಣದ ಹಿಂದುಳಿದ ವರ್ಗ ಮತ್ತು ಅಲ್ಪಸಂಖ್ಯಾತರ (ಬಿಸಿಎಂ) ವಸತಿನಿಲಯದ ಅಡುಗೆಯವರು ಹಾಗೂ ಅಡುಗೆ ಸಹಾಯಕರು ಬಿಡುವಿನ ವೇಳೆ ಸ್ವಇಚ್ಛೆಯಿಂದ ನಿಲಯದ ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಾಗಲು ನೆರವಾಗುತ್ತಿದ್ದಾರೆ.
ಹರಪನಹಳ್ಳಿ ತಾಲ್ಲೂಕು ವ್ಯಾಪ್ತಿಯಲ್ಲಿ ಒಟ್ಟು ಏಳು ವಸತಿನಿಲಯಗಳಿವೆ. ಸರ್ಕಾರದಿಂದ ನೇರ ನೇಮಕಗೊಂಡಿರುವ ‘ಡಿ’ ಗ್ರೂಪ್ ಹುದ್ದೆಯ ಅಡುಗೆಯವರು ಹಾಗೂ ಅಡುಗೆ ಸಹಾಯಕರು ಒಟ್ಟು 21 ಮಂದಿ ಇದ್ದಾರೆ. 11 ಜನ ಅಡುಗೆಯವರು, 10 ಜನ ಅಡುಗೆ ಸಹಾಯಕರಿದ್ದಾರೆ. ಬಹುತೇಕರು ಹುದ್ದೆಗೆ ಕನಿಷ್ಠ ಅಗತ್ಯವಾದ ಎಸ್‌ಎಸ್‌ಎಲ್‌ಸಿ ವಿದ್ಯಾರ್ಹತೆಗಿಂತಲೂ ಉನ್ನತ ಶಿಕ್ಷಣ ಪಡೆದಿದ್ದಾರೆ.
ಒಬ್ಬರು ಮಾತ್ರ ಎಸ್‌ಎಸ್‌ಎಲ್‌ಸಿ ಮುಗಿಸಿದ್ದರೆ, ಉಳಿದವರೆಲ್ಲರೂ ಪಿಯುಗಿಂತಲೂ ಹೆಚ್ಚು ಓದಿದವರು. ಉನ್ನತ ಶಿಕ್ಷಣ ಪಡೆದವರು ಈಗ ಮಕ್ಕಳ ಕಲಿಕೆಗೆ ನೆರವಾಗುತ್ತಿದ್ದಾರೆ.
ಓಬಳಾಪುರದ ಎನ್.ರಮೇಶ್ (ಬಿಬಿಎಂ, ಎಂಬಿಎ), ವಿಜಯಪುರದ ಅಂಕಲಗಿಯ ಶಾಂತಪ್ಪ ನಾಗರಪಳ್ಳಿ (ಬಿಎಸ್ಸಿ, ಬಿ.ಇಡಿ), ಬಾಗಲಕೋಟೆಯ ಮಂಜುಳಾ ಬಿರಾದಾರ (ಬಿ.ಎಸ್ಸಿ), ವಿಜಯಪುರ ಈರಣ್ಣ ಪತ್ತಾರ (ಡಿಪ್ಲೊಮಾ), ರಾಣೆಬೆನ್ನೂರಿನ ಕತ್ತಿ ದಿಳ್ಳೆಪ್ಪ (ಡಿ.ಇಡಿ) ಅವರು ವಿದ್ಯಾರ್ಥಿಗಳಿಗೆ ಪಾಠ ಮಾಡುತ್ತಾರೆ.
ದೇವರಾಜ ಅರಸು ಭವನದಲ್ಲಿ ಪ್ರತಿದಿನ ಸಂಜೆ 4 ಗಂಟೆಯಿಂದ 6 ಗಂಟೆಯವರೆಗೆ ವಿಷಯವಾರು ಪಾಠ ಮಾಡಲಾಗುತ್ತಿದೆ. ಇಲ್ಲಿ ಪದವಿ ವಿದ್ಯಾರ್ಥಿಗಳನ್ನೇ ಕೇಂದ್ರೀಕರಿಸಿ ಅವರ ಮುಂದಿನ ಸ್ಪರ್ಧಾತ್ಮಕ ಜೀವನಕ್ಕೆ ಅನುಕೂಲವಾಗುವ ದೃಷ್ಟಿಯಿಂದ ಸಾಮಾನ್ಯ ಜ್ಞಾನ, ಮಾನಸಿಕ ಸಾಮರ್ಥ್ಯ, ಮೂಲ ವಿಜ್ಞಾನ, ಗಣಿತ, ಸ್ಪೋಕನ್ ಇಂಗ್ಲಿಷ್ ಬೋಧಿಸುತ್ತಿದ್ದಾರೆ.
ಬಿಎಸ್ಸಿ ಓದಿ ಅಡುಗೆ ಸಹಾಯಕಿ ಆಗಿರುವ ಬಾಗಲಕೋಟೆಯ ಮಂಜುಳಾ ಬಿರಾದಾರ ನಿಲಯದ ವಿದ್ಯಾರ್ಥಿಗಳಿಗೆ ಸ್ಪೋಕನ್ ಇಂಗ್ಲಿಷ್ ಹೇಳಿಕೊಡುತ್ತಿದ್ದಾರೆ. ‘ತಂದೆ ತೀರಿಕೊಂಡಿದ್ದಾರೆ. ತಾಯಿ ಕೂಲಿ ಕೆಲಸ ಮಾಡುತ್ತಾರೆ. ಸಹೋದರ ಪಿಯುಸಿ ಓದುತ್ತಿದ್ದಾನೆ. ಮನೆಯಲ್ಲಿನ ಕಡು ಬಡತನದಿಂದಾಗಿ ಉನ್ನತ ಅಧ್ಯಯನ ಮಾಡುವ ಆಸೆ ಕೈಬಿಟ್ಟಿದ್ದೇನೆ. ಮನೆತನದ ಜವಾಬ್ದಾರಿ ನನ್ನ ಹೆಗಲ ಮೇಲಿದ್ದು, ತಮ್ಮನನ್ನು ಪೊಲೀಸ್ ಅಧಿಕಾರಿ ಮಾಡುವ ಮಹಾದಾಸೆ ಹೊಂದಿದ್ದೇನೆ’ ಎನ್ನುತ್ತಾರೆ ಮಂಜುಳಾ.
ಬಿಬಿಎಂ, ಎಂಬಿಎ ಮುಗಿಸಿ ಬೆಂಗಳೂರಿನ ಖಾಸಗಿ ಕಂಪನಿಯಲ್ಲಿ ಐದು ವರ್ಷ ಕೆಲಸ ಮಾಡಿದ ಅನುಭವವಿರುವ ಓಬಳಾಪುರದ ಎನ್. ರಮೇಶ್, ‘ನಮ್ಮದು ಮಧ್ಯಮ ವರ್ಗದ ಕುಟುಂಬ. ಸರ್ಕಾರಿ ನೌಕರಿ ಎಂಬ ಕಾರಣಕ್ಕೆ ಖಾಸಗಿ ಕೆಲಸ ಬಿಟ್ಟು ಇಲ್ಲಿಗೆ ಬಂದಿದ್ದೇನೆ. ಕೆಲಸದ ಬಿಡುವಿನ ವೇಳೆ ವಿದ್ಯಾರ್ಥಿಗಳಿಗೆ ಸ್ಪೋಕನ್ ಇಂಗ್ಲಿಷ್, ವ್ಯಕ್ತಿತ್ವ ವಿಕಸನ ವಿಷಯ ಹೇಳಿಕೊಡುತ್ತೇನೆ. ಇದು ವೈಯಕ್ತಿಕವಾಗಿ ನನಗೂ ಖುಷಿಯೂ ತಂದಿದೆ’ ಎಂದು ಹೇಳಿದರು.
ಅಡುಗೆ ಸಹಾಯಕನಾಗಿರುವ ವಿಜಯಪುರದ ಅಂಕಲಗಿಯ ಶಾಂತಪ್ಪ ನಾಗರಪಳ್ಳಿ ಓದಿದ್ದು ಬಿಎಸ್ಸಿ, ಬಿ.ಇಡಿ. ‘ಊರಲ್ಲಿ ವಿದ್ಯಾರ್ಥಿಗಳಿಗೆ ಮನೆ ಪಾಠ ಮಾಡುತ್ತಿದ್ದೆ. ನಮ್ಮ ಶೈಕ್ಷಣಿಕ ಅರ್ಹತೆ ಗುರುತಿಸಿ ಬಿಸಿಎಂ ವಿಸ್ತೀರ್ಣಾಧಿಕಾರಿ ಬಿ.ಎಚ್.ಚಂದ್ರಪ್ಪ ಅವರು ನಿಲಯದ ವಿದ್ಯಾರ್ಥಿಗಳಿಗೆ ಬಿಡುವಿನ ವೇಳೆ ಪಾಠ ಮಾಡಲು ಅನುವು ಮಾಡಿಕೊಟ್ಟಿದ್ದಾರೆ. ಅಡುಗೆಗಷ್ಟೇ ಸೀಮಿತಗೊಳಿಸದೆ ಪ್ರತಿಭೆ ಗುರುತಿಸಿರುವುದು ಖುಷಿಯ ಸಂಗತಿ’ ಎಂದು ಹೇಳುತ್ತಾರೆ.
* ‘ದಾರಿದೀಪ’ ಎಂಬ ಶೀರ್ಷಿಕೆಯಡಿ 2008ರಿಂದ ನಿಲಯದ ವಿದ್ಯಾರ್ಥಿಗಳಿಗೆ ಪರಿಣಿತರಿಂದ ತರಬೇತಿ ನೀಡುತ್ತಾ ಬರಲಾಗುತ್ತಿದೆ. ಈಗ ಅಡುಗೆಯವರು ಹಾಗೂ ಸಹಾಯಕರು ಈ ಮಹತ್ತಕಾರ್ಯಕ್ಕೆ ಕೈಜೋಡಿಸಿದ್ದಾರೆ.
-ಬಿ.ಎಚ್.ಚಂದ್ರಪ್ಪ, ಬಿಸಿಎಂ ವಿಸ್ತೀರ್ಣಾಧಿಕಾರಿ, ಹರಪನಹಳ್ಳಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.