ಕಂಪ್ಯೂಟರ್, ಇಂಟರ್ನೆಟ್ ಮತ್ತು ಸ್ಮಾರ್ಟ್ ಫೋನುಗಳು ಆಧುನಿಕ ಬದುಕಿನ ಆಧಾರಸ್ತಂಭಗಳಾಗಿರುವ ಹೊತ್ತಿನಲ್ಲೇ ಅವು ದಿನನಿತ್ಯದ ಜೀವನದ ಸವಾಲುಗಳಾಗಿಯೂ ಪರಿಣಮಿಸಿವೆ. ಬ್ಯಾಂಕ್ ಖಾತೆಯಲ್ಲಿ ಠೇವಣಿ ಇಟ್ಟ ಲಕ್ಷಾಂತರ ರೂಪಾಯಿ ಹಣ ಕ್ಷಣಾರ್ಧದಲ್ಲಿ ಮಾಯವಾಗುವುದುಂಟು. ಭದ್ರತಾ ಪಡೆಗಳ ಜಾಲತಾಣಗಳಲ್ಲೇ ಭಯೋತ್ಪಾದಕ ಸಂಘಟನೆಗಳ ಬಾವುಟ ಹಾರಾಡುವುದುಂಟು. ಬೃಹತ್ ಕಾರ್ಪೋರೇಟ್ ಕಂಪೆನಿಗಳ ಅಮೂಲ್ಯ ದತ್ತಾಂಶಗಳು ರಾತೋರಾತ್ರಿ ವಂಚಕರ ಪಾಲಾಗುವುದುಂಟು.
ತಂತ್ರಜ್ಞಾನ ವಿಕಾಸದ ವೇಗದಲ್ಲೇ ವಂಚಕರೂ ಬೆಳೆಯುತ್ತಿದ್ದಾರೆ. ಬುದ್ಧಿವಂತ ತಂತ್ರಜ್ಞರು ಚಾಪೆಯ ಕೆಳಗೆ ತೂರಿದರೆ ಸೈಬರ್ ಕಳ್ಳರು ರಂಗೋಲಿ ಕೆಳಗೆ ತೂರುತ್ತಿದ್ದಾರೆ. ಹೀಗಾಗಿ ಸೈಬರ್ ಸೆಕ್ಯೂರಿಟಿ ಎಂಬ ಹೊಸ ಶಾಖೆಯೇ ವಿಸ್ತಾರವಾಗಿ ಬೆಳೆಯುತ್ತಿದೆ. ಸೈಬರ್ ಕಳ್ಳರ ಉಪಟಳದಿಂದ ವಿವಿಧ ವಲಯಗಳನ್ನು, ಕಂಪೆನಿಗಳನ್ನು ಕಾಪಾಡುವ ಕೌಶಲಪೂರ್ಣ ಉದ್ಯೋಗಿಗಳ ಅಗತ್ಯ ಹಿಂದೆಂದಿಗಿಂತಲೂ ಈಗ ಹೆಚ್ಚಾಗಿದೆ. ಈ ಕ್ಷೇತ್ರಕ್ಕೆ ಸಂಬಂಧಿಸಿದ ಸಾಕಷ್ಟು ಔಪಚಾರಿಕ ಹಾಗೂ ಆನ್ಲೈನ್ ಕೋರ್ಸುಗಳೂ ಈಗ ಧಾರಾಳವಾಗಿ ದೊರೆಯುತ್ತಿವೆ.
ಸೈಬರ್ ಸೆಕ್ಯೂರಿಟಿಯನ್ನು ಕಂಪ್ಯೂಟರ್ ಸೆಕ್ಯೂರಿಟಿ, ಡಿಜಿಟಲ್ ಸೆಕ್ಯೂರಿಟಿ, ಐಟಿ ಸೆಕ್ಯೂರಿಟಿ ಇತ್ಯಾದಿ ಹೆಸರುಗಳಿಂದ ಗುರುತಿಸುವುದುಂಟು. ಕಂಪ್ಯೂಟರ್ ಹಾಗೂ ಅದರ ಜಾಲಗಳನ್ನು ವಂಚಕರ ದಾಳಿಗಳಿಂದ ಕಾಪಾಡುವುದು ಸೈಬರ್ ಸೆಕ್ಯೂರಿಟಿಯ ಪ್ರಧಾನ ಉದ್ದೇಶ. ವಂಚಕರ ಹ್ಯಾಕಿಂಗ್ ತಂತ್ರಗಳಿಗೆ ಪ್ರತಿತಂತ್ರಗಳನ್ನು ರೂಪಿಸಿ, ದತ್ತಾಂಶಗಳನ್ನು ಸಂರಕ್ಷಿಸುವ ಕೌಶಲಗಳನ್ನು ಕಲಿಸುವುದು ಸೈಬರ್ ಸೆಕ್ಯೂರಿಟಿ ಕೋರ್ಸುಗಳ ಕೆಲಸ. ಇವು ಅನೇಕ ಕೌಶಲಗಳ ಗುಚ್ಛಗಳಾಗಿರುವುದರಿಂದ, ಇವುಗಳನ್ನು ಆಸಕ್ತರು ತಮ್ಮ ಅನುಕೂಲಕ್ಕನುಗುಣವಾಗಿ ಪ್ರತ್ಯೇಕವಾಗಿಯೂ ಕಲಿಯಬಹುದು; ಒಟ್ಟಾಗಿಯೂ ಕಲಿಯಬಹುದು. ಔಪಚಾರಿಕ ತಾಂತ್ರಿಕ ಕೋರ್ಸುಗಳಲ್ಲಿ ಇಂದು ಸೈಬರ್ ಸೆಕ್ಯೂರಿಟಿ ಒಂದು
ಸ್ಪೆಶಲೈಸೇಶನ್ ವಿಷಯವಾಗಿ ಲಭ್ಯವಿದೆ. ಇದನ್ನು ವಿವಿಧ ಉಪವಿಷಯಗಳನ್ನಾಗಿ ವಿಂಗಡಿಸಿದ ಹತ್ತಾರು ಕೋರ್ಸುಗಳು ಆನ್ಲೈನ್ ಮಾದರಿಯಲ್ಲಿಯೂ ಲಭ್ಯವಿವೆ.
ʼಇಂಟ್ರೊಡಕ್ಷನ್ ಟು ಸೈಬರ್ ಸೆಕ್ಯೂರಿಟಿʼ, ʼಆನ್ಲೈನ್ ಪ್ರೈವಸಿʼ, ʼಸೈಬರ್ ಕ್ರೈಂ ಅಡ್ಮಿನಿಸ್ಟ್ರೇಶನ್ʼ ನಂತಹ ಕೋರ್ಸುಗಳನ್ನು ತಾಂತ್ರಿಕ ವಿದ್ಯಾಭ್ಯಾಸದ ಹಿನ್ನೆಲೆ ಇಲ್ಲದವರೂ ತೆಗೆದುಕೊಳ್ಳಬಹುದು. ಕಂಪ್ಯೂಟರ್ ಹಾಗೂ ಇಂಟರ್ನೆಟ್ ಬಳಕೆಯ ಉತ್ತಮ ತಿಳಿವಳಿಕೆ ಇದ್ದರೆ ಸಾಕು. ಪೈಥಾನ್, ಲಿನಕ್ಸ್, ಎಸ್‌ಕ್ಯೂಎಲ್ ಭಾಷೆಗಳಿಗೆ ಸಂಬಂಧಿಸಿದ ಕೋರ್ಸುಗಳನ್ನು ಮಾಡಬೇಕಾದರೆ ಮಾತ್ರ ವಿಜ್ಞಾನ ಇಲ್ಲವೇ ತಾಂತ್ರಿಕ ವಿಷಯಗಳನ್ನು (ಡಿಪ್ಲೋಮಾ/ ಬಿಎಸ್ಸಿ) ಓದಿದ್ದರೆ ಒಳ್ಳೆಯದು.
ಎಲ್ಲ ಕಾರ್ಪೋರೇಟ್ ಕಂಪೆನಿಗಳೂ ಇಂದು ಸೈಬರ್ ಭದ್ರತಾ ವಿಶ್ಲೇಷಕರನ್ನು ನೇಮಕ ಮಾಡಿಕೊಳ್ಳುತ್ತಿವೆ. ಇ-ಕಾಮರ್ಸ್, ಹಣಕಾಸು, ಆರೋಗ್ಯ, ತಂತ್ರಜ್ಞಾನ, ಸರ್ಕಾರಿ ಸಂಸ್ಥೆಗಳಲ್ಲಿ ಈ ಹುದ್ದೆಗಳ ಅವಶ್ಯಕತೆ ಹಿಂದೆಂದಿಗಿಂತಲೂ ಹೆಚ್ಚಾಗಿದೆ. ಈ ಉದ್ಯೋಗಗಳಲ್ಲಿ ಆರಂಭಿಕ ಹಂತದಲ್ಲೇ ಆಕರ್ಷಕ ವೇತನ ದೊರೆಯುವುದು ಒಂದು ವೈಶಿಷ್ಟ್ಯ.
ಭಾರತ ಸರ್ಕಾರ ಶಿಕ್ಷಣ ಸಚಿವಾಲಯದ ʼಸ್ವಯಂʼ ಆನ್ಲೈನ್ ತಾಣದಲ್ಲಿ ಸೈಬರ್ ಸೆಕ್ಯೂರಿಟಿಗೆ ಸಂಬಂಧಿಸಿದ ಅನೇಕ ಕೋರ್ಸುಗಳಿವೆ. ಇವು ವಿವಿಧ ವಿಶ್ವವಿದ್ಯಾನಿಲಯಗಳಿಂದ ಹಾಗೂ ಉನ್ನತ ತಾಂತ್ರಿಕ ಶಿಕ್ಷಣ ಸಂಸ್ಥೆಗಳಿಂದ ರೂಪಿಸಲ್ಪಟ್ಟಿದ್ದು, ವೀಡಿಯೋ ಹಾಗೂ ಪಠ್ಯರೂಪದಲ್ಲಿವೆ. ಸರ್ಟಿಫಿಕೇಟ್ ಇನ್ ಸೈಬರ್ ಸೆಕ್ಯೂರಿಟಿ, ಇನ್ಫಾರ್ಮೇಶನ್ ಸೆಕ್ಯೂರಿಟಿ & ಸೈಬರ್ ಫಾರೆನ್ಸಿಕ್ಸ್, ಹಾರ್ಡ್‌ವೇರ್ ಸೆಕ್ಯೂರಿಟಿ, ಆನ್ಲೈನ್ ಪ್ರೈವಸಿ, ಸೈಬರ್ ಕ್ರೈಂ ಅಡ್ಮಿನಿಸ್ಟ್ರೇಶನ್- ಮುಂತಾದ ಕೋರ್ಸುಗಳನ್ನು ಪದವಿ ವ್ಯಾಸಂಗ ಮಾಡುತ್ತಿರುವವರು ತೆಗೆದುಕೊಳ್ಳಬಹುದು.
ವಿವರಗಳನ್ನು ಇಲ್ಲಿ ಗಮನಿಸಿ:
https://onlinecourses.swayam2.ac.in/
ಸಿಸ್ಕೋ ನೆಟ್‌ವರ್ಕಿಂಗ್ ಅಕಾಡೆಮಿಯು 15 ಗಂಟೆಗಳ ಸೈಬರ್ ಸೆಕ್ಯೂರಿಟಿ ಕೋರ್ಸನ್ನು ಉಚಿತವಾಗಿ ನೀಡುತ್ತಿದೆ. ಕೊಂಡಿ ಇಲ್ಲಿದೆ:
https://www.netacad.com/courses/cybersecurity/introduction-cybersecurity
ಆರಂಭಿಕ ಹಂತದ ಕಲಿಕೆಗೆ ಗ್ರೇಟ್ ಲರ್ನಿಂಗ್ ಅಕಾಡೆಮಿ ಒದಗಿಸುವ ಸೈಬರ್ ಭದ್ರತೆಯ ಕೋರ್ಸ್ ಅನುಕೂಲಕರವಾಗಿದೆ. ಇದು ಉಚಿತವಾಗಿ ಲಭ್ಯವಿದೆ. ಈ ಲಿಂಕ್ ಗಮನಿಸಿ: https://www.mygreatlearning.com/academy/learn-for- free/courses/introduction-to-cyber-security
ಗೂಗಲ್ ಕಂಪೆನಿಯು ಈ ಕ್ಷೇತ್ರಕ್ಕೆ ಸಂಬಂಧಿಸಿದ ಉನ್ನತ ಗುಣಮಟ್ಟದ ಕೋರ್ಸ್‌ಗಳನ್ನು ಒದಗಿಸುತ್ತಿದೆ. ಆದರೆ ಇದಕ್ಕೆ ನಿರ್ದಿಷ್ಟ ಶುಲ್ಕ ಪಾವತಿಸಬೇಕಿರುತ್ತದೆ. ಪ್ರತಿದಿನ ಒಂದು ಗಂಟೆಯಂತೆ, ಆರು ತಿಂಗಳು ಇದಕ್ಕೆ ಮೀಸಲಿಟ್ಟರೆ ವಿವಿಧ ಹಂತಗಳ ಎಂಟು ಕೋರ್ಸುಗಳನ್ನು ಮುಗಿಸಿಕೊಳ್ಳಬಹುದು. ವಿವರಗಳನ್ನು ಇಲ್ಲಿ ನೋಡಿ: https://grow.google/certificates/cybersecurity/
(ಮುಂದಿನವಾರ: ಗ್ರಾಫಿಕ್ ಡಿಸೈನಿಂಗ್)
ಸಿಬಂತಿ ಪದ್ಮನಾಭ ಕೆ. ವಿ., ಸಹಾಯಕ ಪ್ರಾಧ್ಯಾಪಕ, ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗ, ತುಮಕೂರು
ವಿಶ್ವವಿದ್ಯಾನಿಲಯ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.