ಬೆಂಗಳೂರು: ದ್ವಿತೀಯ ಪಿಯು ಫಲಿತಾಂಶ ಪ್ರಕಟವಾಗುತ್ತಿದ್ದಂತೆ, ರಾಜ್ಯದ ಕಾಲೇಜುಗಳು ವಿವಿಧ ಹೊಸ ಪದವಿ ಕೋರ್ಸ್‌ಗಳನ್ನು ಆರಂಭಿಸಿದ್ದು, ಬೇಡಿಕೆಯೂ ಹೆಚ್ಚಾಗಿದೆ.
ಈ ಬಾರಿ ದ್ವಿತೀಯ ಪಿಯುಸಿಯ ಎಲ್ಲ ವಿದ್ಯಾರ್ಥಿಗಳನ್ನೂ ಉತ್ತೀರ್ಣಗೊಳಿಸಿರುವುದರಿಂದ ಪದವಿ ಕಾಲೇಜುಗಳಲ್ಲಿ ಪ್ರವೇಶ ಪ್ರಕ್ರಿಯೆ ಚುರುಕಿನಿಂದ ನಡೆಯುತ್ತಿದೆ. ಕಾಲೇಜುಗಳಿಗೆ ಕರೆ ಮಾಡುತ್ತಿರುವ ವಿದ್ಯಾರ್ಥಿಗಳು ಮತ್ತು ಪೋಷಕರು ವಿವಿಧ ಕೋರ್ಸ್‌ಗಳ ಕುರಿತು, ಅರ್ಜಿ ಶುಲ್ಕ, ಪ್ರವೇಶ ಶುಲ್ಕ ಸೇರಿದಂತೆ ಹಲವು ಮಾಹಿತಿ ಕೇಳುತ್ತಿದ್ದಾರೆ.
ಎಂಜಿನಿಯರಿಂಗ್ ಮತ್ತು ಕಂಪ್ಯೂಟರ್ ಆಧಾರಿತ ಕೋರ್ಸ್‌ಗಳಿಗೆ ಬೇಡಿಕೆ ಹೆಚ್ಚಿದ್ದು ಬೆಂಗಳೂರು, ಮೈಸೂರು ಮತ್ತು ಮಂಗಳೂರಿನ ಹಲವು ಕಾಲೇಜುಗಳು ಅರ್ಜಿ ಶುಲ್ಕವನ್ನು ಏರಿಕೆ ಮಾಡಿವೆ.
ಅರ್ಹತೆಯ ಅಂಕ ನಿಗದಿಯೇ ಸವಾಲು
ರಾಜ್ಯದಲ್ಲಿ 2,239 ವಿದ್ಯಾರ್ಥಿಗಳು 600ಕ್ಕೆ 600 ಅಂಕಗಳನ್ನು ಗಳಿಸಿದ್ದಾರೆ. ವಿದ್ಯಾರ್ಥಿಗಳ ಪ್ರವೇಶಕ್ಕೆ ಅರ್ಹತಾ ಅಂಕ (ಕಟ್ ಆಫ್ ಮಾರ್ಕ್ಸ್) ನಿಗದಿ ಪಡಿಸುವುದೇ ದೊಡ್ಡ ಸವಾಲಾಗಿದೆ ಎಂದು ಖಾಸಗಿ ಕಾಲೇಜಿನ ಪ್ರಾಚಾರ್ಯರೊಬ್ಬರು ಹೇಳಿದರು.
ರಾಜ್ಯದಲ್ಲಿ 430 ಸರ್ಕಾರ ಪದವಿ ಕಾಲೇಜುಗಳು, 375 ಖಾಸಗಿ ಪದವಿ ಕಾಲೇಜುಗಳು ಇವೆ. ಕಳೆದ ವರ್ಷ ಕಾಲೇಜು ಶಿಕ್ಷಣ ಇಲಾಖೆಯು ಅರ್ಜಿ ಶುಲ್ಕ ₹21 ಎಂದು ನಿಗದಿ ಪಡಿಸಿತ್ತು. ಈ ವರ್ಷ ಬಹುತೇಕ ಕಾಲೇಜುಗಳು ₹50ರಿಂದ ₹100ರವರೆಗೆ ಅರ್ಜಿ ಶುಲ್ಕವನ್ನು ತೆಗೆದುಕೊಳ್ಳುತ್ತಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.