ನಾಲತವಾಡ: ಪಟ್ಟಣದ ಪ್ರತಿಷ್ಠಿತ ಶಾಲೆಗಳ ಪಟ್ಟಿಗೆ ಇಲ್ಲಿನ ಗಂಡು ಮಕ್ಕಳ ಶಾಸಕರ ಸರ್ಕಾರಿ ಮಾದರಿ ಶಾಲೆಯೂ ಸೇರಿದೆ. ಒಂದೂವರೆ ಶತಮಾನದಿಂದಲೂ ಸಹಸ್ರ, ಸಹಸ್ರ ಸಂಖ್ಯೆಯ ವಿದ್ಯಾರ್ಥಿಗಳಿಗೆ ವಿದ್ಯಾದಾನ ಮಾಡಿದ ಕೀರ್ತಿ ಈ ಶಾಲೆಯದ್ದಾಗಿದೆ.
ಕ್ರಿ.ಶ.1865ರಲ್ಲಿ ಈ ಶಾಲೆ ಆರಂಭಗೊಂಡಿದೆ. ವಿದ್ಯಾರ್ಥಿಗಳ ಪಾಲಿನ ದೇಗುಲ ಇದೇ ಆಗಿದೆ. ನಾಲತವಾಡ ಸೇರಿದಂತೆ ಸುತ್ತಮುತ್ತಲ ಹಳ್ಳಿಗಳ ಮಕ್ಕಳಿಗೆ ಬ್ರಿಟಿಷರ ಕಾಲದಿಂದಲೂ ವಿದ್ಯಾದಾನ ನೀಡಿದೆ. ಇಲ್ಲಿ ಕಲಿತ ಅನೇಕರು ಉನ್ನತ ಹುದ್ದೆಗಳನ್ನು ಅಲಂಕರಿಸಿದ್ದಾರೆ. ವಿದೇಶದಲ್ಲೂ ನೆಲೆ ಕಂಡುಕೊಂಡಿರುವುದು ವಿಶೇಷ.
ಪಾಠದೊಂದಿಗೆ ಆಟದಲ್ಲೂ ಸೈ ಎನಿಸಿಕೊಂಡು, ರಾಜ್ಯ–ರಾಷ್ಟ್ರ ಮಟ್ಟದ ಪಂದ್ಯಾವಳಿಯಲ್ಲೂ ರಾರಾಜಿಸಿದ ಹಲವು ಉದಾಹರಣೆ ಈ ಶಾಲೆಗಿದೆ. ಸಂಕನಾಳ, ಪಾಟೀಲ ಶಿಕ್ಷಕರನ್ನು ಈ ಊರಿನ ಯಾವೊಬ್ಬ ಕ್ರೀಡಾಳು ಮರೆಯಲ್ಲ. ರಾಜ್ಯ ಮಟ್ಟದ ಕ್ರೀಡಾಕೂಟಗಳನ್ನು ಆಯೋಜಿದ ಹೆಗ್ಗಳಿಕೆ ಈ ಶಾಲೆಯದ್ದು.
ಹೆಂಚಿನ ಮೂಲ ಕಟ್ಟಡದೊಂದಿಗೆ ಅವಿನಾಭಾವ ಸಂಬಂಧ ಹೊಂದಿರುವ ಈ ಶಿಕ್ಷಣ ದೇಗುಲದ ಹಳೆ ವಿದ್ಯಾರ್ಥಿಗಳು ಕಾಯಕಲ್ಪಕ್ಕಾಗಿ ಕಾಯುತ್ತಿದ್ದಾರೆ. ತಮ್ಮ ನೆಚ್ಚಿನ ಗುರುಗಳಾದ ಜಿ.ಎಸ್.ಕುಪ್ಪಸ್ತ, ಎಸ್.ಬಿ.ನಾರಗಲ್ಲ, ಜೋಶಿ, ಎಸ್.ಎನ್.ಪೇಟ್ಕರ್, ಯಮನಮ್ಮ ಗದ್ದನಕೇರಿ, ಬಿರಾದಾರ, ಹಿರೇಮಠ, ಸಿ.ಬಿ.ನಾಯ್ಕರ್ ಶಿಕ್ಷಕರನ್ನು ಊರ ಜನರು ಎಂದೂ ಮರೆಯರು.
ಹಳೆ ತಲೆಮಾರಿನ ಮಾದರಿ ಶಿಕ್ಷಕರ ಪಥದಲ್ಲೇ ಸಾಗಿರುವ ಶಾಲೆಯ ಪ್ರಸ್ತುತ ಮುಖ್ಯ ಶಿಕ್ಷಕರಾದ ಸಿ.ವೈ.ತಾಳಿಕೋಟೆ ಸಾರಥ್ಯದಲ್ಲಿ ಶಿಕ್ಷಕಿಯರಾದ ಎಂ.ಕೆ.ಜಕಾತಿ, ಬಿ.ಜಿ.ಪಟ್ಟಣಶೆಟ್ಟಿ, ಶಿಲ್ಪಾ ಎ.ಗಂಗನಗೌಡ್ರ, ಆರ್.ಜಿ.ಇಮಡೇರ, ಜಿ.ಕೆ.ಯರಂತೇಲಿಮಠರ ಸೇವೆ ಸಾರ್ಥಕವಾದದ್ದು. ಇವರ ಪರಿಶ್ರಮದ ಫಲವಾಗಿ ಇದೀಗ ಶಾಲೆ ಆಕರ್ಷಣೆಯ ತಾಣವಾಗಿದೆ.
ಒಂದು ಕೋಣೆ ರೈಲಿನ ಸ್ವರೂಪ ಪಡೆದಿದ್ದರೆ, ಮತ್ತೊಂದು ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್‌ನ ಚಿತ್ರಣ ಪಡೆದು ಕಂಗೊಳಿಸುತ್ತಿದೆ. ಈ ಎರಡೂ ಕೋಣೆಗಳು ವಿದ್ಯಾರ್ಥಿಗಳಿಗೆ ಅಚ್ಚುಮೆಚ್ಚಾಗಿವೆ.
ಮಧ್ಯಾಹ್ನದ ಬಿಸಿಯೂಟಕ್ಕೆ ಚಪಾತಿ, ಪಲ್ಯ, ಅನ್ನ–ಸಾಂಬಾರ್, ರೈಸ್‌ಬಾತ್, ಬಿಸಿಬೇಳೆ ಬಾತ್, ವೆಜ್ ಬಿರಿಯಾನಿ, ಉಪ್ಪಿಟ್ಟು, ರಾಷ್ಟ್ರೀಯ ಹಬ್ಬಗಳಂದು ಕೇಸರಿ ಬಾತ್, ಖಾರಾ ಬಾತ್ ನೀಡುವ ಸಂಪ್ರದಾಯ ಈ ಶಾಲೆಯಲ್ಲಿದೆ.
ಪಾಠದೊಂದಿಗೆ ಆಟಕ್ಕೆ ಸೂಕ್ತ ಸಲಕರಣೆಗಳಿವೆ. ಮನರಂಜನೆ, ಚಿತ್ರಕಲೆಗಾಗಿ ಪಠ್ಯ ಹಾಗೂ ಪಠ್ಯೇತರ ಕಲಿಕೆ ಇಲ್ಲಿ ರಾರಾಜಿಸುತ್ತಿದೆ. ಮಕ್ಕಳ ಕಲಿಕೆಗೆ, ಶಿಕ್ಷಕರ ಬೋಧನೆಗೆ ಸಾಥ್ ನೀಡುತ್ತಿರುವ ಎಸ್‌ಡಿಎಂಸಿ ಅಧ್ಯಕ್ಷ ಗುರುನಾಥರೆಡ್ಡಿ ಡಿಗ್ಗಿ, ಶಿಕ್ಷಕರು ಶಾಲೆಯ ಪ್ರಗತಿಗೆ ಕೈಗೊಳ್ಳುವ ಕಾರ್ಯಕ್ಕೆ ಸದಾ ಬೆನ್ನೆಲುಬಾಗಿ ನಿಂತಿರುವುದು ವಿಶೇಷ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.