ADVERTISEMENT

ಸುಲಭ ಕಲಿಕೆಗೆ ದಿಕ್ಷಾ

ಪ್ರಹ್ಲಾದ್ ವಾ.ಪತ್ತಾರ
Published 30 ಜುಲೈ 2019, 19:30 IST
Last Updated 30 ಜುಲೈ 2019, 19:30 IST
   

ಡಿಜಿಟಲ್‌ ತಂತ್ರಜ್ಞಾನವು ಅಡುಗೆ ಮನೆಯ ದಿನಸಿ ಸಾಮಗ್ರಿಗಳ ಖರೀದಿಯಿಂದ ಹಿಡಿದು, ರಾಕೆಟ್ ಉಡಾವಣೆವರೆಗೂ ಆವರಿಸಿಕೊಂಡಿದೆ. ಇಂದು ಪ್ರತಿ ಕ್ಷೇತ್ರಗಳು ಡಿಜಿಟಲೀಕರಣದತ್ತ ಸಾಗುತ್ತಿವೆ. ಸುಲಭವಾಗಿ, ಸರಳವಾಗಿ ಹಾಗೂ ವ್ಯವಸ್ಥಿತವಾಗಿ ಕೆಲಸ ಕಾರ್ಯ ಮಾಡಲು ಡಿಜಿಟಲ್ ತಂತ್ರಜ್ಞಾನ ಎಲ್ಲರಿಗೂ ಸಹಕಾರಿಯಾಗಿದೆ.

ಶಿಕ್ಷಣ ಕ್ಷೇತ್ರದಲ್ಲೂ ಡಿಜಿಟಲ್ ತಂತ್ರಜ್ಞಾನ ಬಳಕೆ ಇತ್ತೀಚಿನ ದಿನಗಳಲ್ಲಿ ಹೆಚ್ಚುತ್ತಿದೆ. ದಾಖಲೆಗಳ ನಿರ್ವಹಣೆ, ಸ್ಮಾರ್ಟ್‌ಕ್ಲಾಸ್, ಪರೀಕ್ಷೆ, ಮೌಲ್ಯಮಾಪನ, ತರಗತಿ ನಿರ್ವಹಣೆ, ಪಠ್ಯ ಪುಸ್ತಕ ಹೀಗೆ ವಿವಿಧ ಆಯಾಮಗಳಲ್ಲಿ ಬಹುಮುಖಿಯಲ್ಲಿ ಡಿಜಿಟಲ್ ತಂತ್ರಜ್ಞಾನ ಬಳಕೆಯಾಗುತ್ತಿದೆ.

ಈ ಶೈಕ್ಷಣಿಕ ವರ್ಷದಿಂದ ರಾಜ್ಯ ಸರ್ಕಾರದ ಅಧೀನದಲ್ಲಿರುವ ಡಿ.ಎಸ್.ಇ.ಆರ್.ಟಿ. ಸಂಸ್ಥೆಯು ಪಠ್ಯಪುಸ್ತಕದಲ್ಲಿ ಕ್ಯೂ ಆರ್ ಕೋಡ್ ಬಳಸಿಕೊಂಡು ಶಿಕ್ಷಕರಿಗೆ, ಮಕ್ಕಳಿಗೆ, ಪೋಷಕರಿಗೆ ಉಪಯುಕ್ತವಾಗುವಂತೆ ಪಠ್ಯಕ್ಕೆ ಪೂರಕವಾದ ವಿಡಿಯೊ, ಆಡಿಯೊ, ನೋಟ್ಸ್, ಪ್ರಶ್ನಾವಳಿ, ಬಹು ಅಂಶ ಪ್ರಶ್ನೆಗಳು, ಹೀಗೆ ವಿನೂತನ ವಿಭಿನ್ನ ಸಂಪನ್ಮೂಲ ನೀಡಲು ಸಜ್ಜಾಗುತ್ತಿದೆ.

ADVERTISEMENT

ಭಾರತ ಸರ್ಕಾರದ ಮಾನವ ಸಂಪನ್ಮೂಲ ಇಲಾಖೆಯ ಅಂಗ ಸಂಸ್ಥೆ ಎನ್.ಸಿ.ಇ.ಆರ್.ಟಿ. ಹಾಗೂ ಮಾಹಿತಿ ತಂತ್ರಜ್ಞಾನ ಸಚಿವಾಲಯದ ಸಹಯೋಗದೊಂದಿಗೆ ‘ದಿಕ್ಷಾ’ ಎಂಬ ಪೋರ್ಟಲ್ ಸಿದ್ಧಪಡಿಸಲಾಗಿದೆ. ರಾಷ್ಟ್ರವ್ಯಾಪಿ ಎಲ್ಲಾ ರಾಜ್ಯಗಳಲ್ಲೂ ಅನುಕೂಲವಾಗುವಂತೆ ಇದನ್ನು ಅಭಿವೃದ್ಧಿಪಡಿಸಲಾಗಿದೆ. ದೇಶದ ಎಲ್ಲಾ ಶಿಕ್ಷಕರನ್ನು, ಮಕ್ಕಳನ್ನು ಸಂವಹನ ಮಾಡುವುದು, ಚರ್ಚಿಸುವುದು, ಸಾಹಿತ್ಯ ವಿನಿಮಯ ಮಾಡಿಕೊಳ್ಳುವುದು ಶೈಕ್ಷಣಿಕ ಸಮಸ್ಯೆಗಳನ್ನು ಪರಿಹರಿಸಿಕೊಳ್ಳುವುದು ಮುಂತಾದ ಶೈಕ್ಷಣಿಕ ಚಟುವಟಿಕೆಗಳಲ್ಲಿ ಎಲ್ಲರನ್ನೂ ಭಾಗಿದಾರರನ್ನಾಗಿ ಮಾಡಿ ಸಂವಹನ ಏರ್ಪಡಿಸುವ ಉದ್ದೇಶವನ್ನು ಈ ಪೋರ್ಟಲ್ ಹೊಂದಿದೆ.

ಕರ್ನಾಟಕ ರಾಜ್ಯ ಸರ್ಕಾರದ ಸಾರ್ವಜನಿಕ ಶಿಕ್ಷಣ ಇಲಾಖೆಯ ಅಂಗ ಸಂಸ್ಥೆಯಾದ ಡಿ.ಎಸ್.ಇ.ಆರ್.ಟಿ. ನಮ್ಮ ರಾಜ್ಯದ 1ನೇ ತರಗತಿಯಿಂದ 10 ನೇ ತರಗತಿವರೆಗೂ ಇರುವ ಪಠ್ಯಪುಸ್ತಕಗಳನ್ನು ‘ದಿಕ್ಷಾ’ ಪೋರ್ಟಲ್‌ನಲ್ಲಿ ಅಳವಡಿಸಿದೆ.

ಈ ಶೈಕ್ಷಣಿಕ ವರ್ಷದಲ್ಲಿ ವಿತರಿಸಿರುವ ಇಂಗ್ಲಿಷ್, ಗಣಿತ ಹಾಗೂ ವಿಜ್ಞಾನ ಪಠ್ಯಪುಸ್ತಕಗಳಲ್ಲಿ ಕ್ಯೂ ಆರ್ ಕೋಡ್ ಅಳವಡಿಸಲಾಗಿದೆ. ಈ ಕೋಡ್ ಸ್ಕ್ಯಾನ್ ಮಾಡುವ ಮೂಲಕ ಅಧ್ಯಾಯಕ್ಕೆ ಸಂಬಂಧಿಸಿದ ಪೂರಕ ಸಾಹಿತ್ಯ ಬಳಸಿಕೊಳ್ಳಬಹುದಾಗಿದೆ.

ದಿಕ್ಷಾ ಮೊಬೈಲ್ ಆ್ಯಪ್ ಕೂಡ ಅಭಿವೃದ್ದಿ ಪಡಿಸಲಾಗಿದ್ದು ಆ್ಯಂಡ್ರಾಯ್ಡ್‌ ಮೊಬೈಲ್‌ನಲ್ಲಿ ಈ ಆ್ಯಪ್ ಕಾರ್ಯನಿರ್ವಹಿಸುವುದು. ಆ್ಯಪ್ ಓಪನ್ ಮಾಡಿಕೊಂಡು ಪಠ್ಯ ಪುಸ್ತಕದಲ್ಲಿರುವ ಅಗತ್ಯ ಕ್ಯೂ ಆರ್ ಕೋಡ್ ಸ್ಕ್ಯಾನ್ ಮಾಡಿದಾಕ್ಷಣ ಮೊಬೈಲ್‌ನಲ್ಲಿ ಸಾಹಿತ್ಯ ಡೌನ್ ಲೋಡ್ ಆಗುತ್ತದೆ.

ಹೆಚ್ಚಿನ ಮಾಹಿತಿಗಾಗಿ
https://diksha.gov.in/resources

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.