‘ಪರೀಕ್ಷೆಯಲ್ಲಿ ಒಳ್ಳೆಯ ಅಂಕ ಪಡೆದು ಮುಂದೆ ವಿಜ್ಞಾನಿಯಾಗಬೇಕು ಎಂದುಕೊಂಡಿದ್ದೆ. ನೋಡಿದ್ರೆ ಪರೀಕ್ಷೆಗಳನ್ನೇ ರದ್ದು ಮಾಡ್ಬಿಟ್ರು. ಇನ್ಮೇಲೆ ಇಂಟರ್ನಲ್ ಪರೀಕ್ಷೆಯಲ್ಲಿ ಗಳಿಸಿದ ಅಂಕಗಳ ಮೇಲೆ ರಿಸಲ್ಟ್ ಕೊಡ್ತಾರಂತೆ. ನಾನು ಅದ್ರಲ್ಲಿ ಚೆನ್ನಾಗಿ ಮಾಡಿಲ್ಲ. ನನ್ನ ಭವಿಷ್ಯವೇ ಹಾಳಾಯ್ತು. ಊಟ– ತಿಂಡಿ ಸೇರಲ್ಲ, ಸರಿಯಾಗಿ ನಿದ್ದೆನೂ ಬರಲ್ಲ. ತಲೆನೇ ಕೆಟ್ಟು ಹೋಗಿದೆ. ಏನ್ಮಾಡ್ಲಿ ಮೇಡಂ?’ ಆಪ್ತಸಮಾಲೋಚನೆಗೆ ಬಂದ ಸಿಬಿಎಸ್‌ಇ ಹತ್ತನೇ ತರಗತಿ ವಿದ್ಯಾರ್ಥಿಯೋರ್ವ ತನ್ನ ಮನದ ನೋವನ್ನು ಬಿಚ್ಚಿಟ್ಟ.
***
‘ಅಪ್ಪ-ಅಮ್ಮ ನೋಡಿದ್ರೆ ಎಷ್ಟೊತ್ತಿಗೂ ಓದ್ಕೊ ಓದ್ಕೊ ಅಂತ ಹೇಳ್ತಾ ಇರ‍್ತಾರೆ. ಪರೀಕ್ಷೆ ನಡೆಯುತ್ತೋ ಇಲ್ವೋ ಅಂತ ಅನುಮಾನ ಶುರುವಾಗಿದೆ. ಓದೋಕೆ ಕೂತ್ರೆ ಎಲ್ಲಾ ವ್ಯರ್ಥ ಆಗುತ್ತೇನೋ ಅಂತ ಅನ್ನಿಸಲು ಶುರುವಾಗಿ ಮನಸ್ಸು ಎಲ್ಲೆಲ್ಲೋ ಹೋಗ್ಬಿಡುತ್ತೆ. ಗಮನ ಕೊಡಕ್ಕೇ ಆಗ್ತಿಲ್ಲ. ಯೋಚ್ನೆ ಮಾಡಿ ಮಾಡಿ ಹುಚ್ಚು ಹಿಡ್ದಂಗೆ ಆಗಿದೆ’ ಪಿಯುಸಿ ವಿದ್ಯಾರ್ಥಿನಿಯೊಬ್ಬಳು ತನ್ನ ಅಂತರಂಗವನ್ನು ತೆರೆದಿಡುತ್ತಾ ಕಣ್ಣೀರಾದಳು!
– ಇದು ಕೆಲವೇ ಮಕ್ಕಳ ವ್ಯಥೆಯಲ್ಲ. ಹತ್ತು, ಹನ್ನೆರಡನೆ ತರಗತಿಯ ಹಲವು ವಿದ್ಯಾರ್ಥಿಗಳ ಮನಸ್ಥಿತಿ ಕೋವಿಡ್ ತಂದಿಟ್ಟ ಅನಿಶ್ಚಿತ ಪರಿಸ್ಥಿತಿಯಿಂದಾಗಿ ಹದಗೆಟ್ಟಿದೆ. ಹೌದು, ಸಿಬಿಎಸ್‌ಇ ಹತ್ತನೇ ತರಗತಿ ಪರೀಕ್ಷೆ ರದ್ದಾಗಿದ್ದರೆ, ಹನ್ನೆರಡನೇ ತರಗತಿಯ ಪರೀಕ್ಷೆಯನ್ನು ಮುಂದೂಡಲಾಗಿದೆ. ಇನ್ನು ರಾಜ್ಯ ಸರ್ಕಾರ ಎಸ್ಸೆಸ್ಸೆಲ್ಸಿ, ಪಿಯುಸಿ ಮತ್ತು ಸಿಇಟಿ ಪರೀಕ್ಷೆಯನ್ನು ಮುಂದೂಡಿದೆ. ಜೆಇಇ ಮುಖ್ಯ ಪರೀಕ್ಷೆಗಳೂ ಮುಂದೂಡಲ್ಪಟ್ಟಿವೆ. ಪರೀಕ್ಷೆಗಳ ರದ್ದು, ಮುಂದೂಡಿಕೆ, ಕೆಲವೊಂದು ಪರೀಕ್ಷೆಗಳ ಅನಿಶ್ಚಿತತೆ ವಿದ್ಯಾರ್ಥಿ ಸಮೂಹವನ್ನು ಕಂಗೆಡಿಸಿದೆ. ಜೊತೆಗೆ ಕೋವಿಡ್ ಕಾರಣ ಆನ್‌ಲೈನ್ ಕ್ಲಾಸ್‌ಗಳೇ ಹೆಚ್ಚಾಗಿ ಪಾಠಗಳೂ ಸರಿಯಾಗಿ ಅರ್ಥವಾಗದೆ ಗೊಂದಲದಲ್ಲಿರುವ ವಿದ್ಯಾರ್ಥಿಗಳ ಸಂಖ್ಯೆಯೂ ಸಾಕಷ್ಟಿದೆ. ಇತ್ತ ಸಂಬಂಧಿಕರು, ಸ್ನೇಹಿತರ ಭೇಟಿಯೂ ಅಸಾಧ್ಯ. ಕಾಯಿಲೆಯ ಭೀತಿ, ಹತ್ತಿರದವರನ್ನು ಕಳೆದುಕೊಂಡ ದುಃಖ, ಆರ್ಥಿಕ ಸಂಕಷ್ಟ, ಮನೆಯಲ್ಲಿ ವೈಮನಸ್ಯ, ಜಗಳ... ಎಲ್ಲವೂ ಎಳೆಯ ಮನಸ್ಸುಗಳನ್ನು ನಲುಗಿಸಿವೆ. ಪರಿಣಾಮ ಹಲವು ವಿದ್ಯಾರ್ಥಿಗಳು ಆತಂಕ, ಖಿನ್ನತೆಯಿಂದ ಬಳಲುತ್ತಿದ್ದಾರೆ.
ಶಿಕ್ಷಣದ ಕುರಿತ ಆತಂಕ
ಇತ್ತೀಚೆಗೆ ನಡೆದ ಸಮೀಕ್ಷೆಯೊಂದರ ವರದಿಯ ಪ್ರಕಾರ 16ರಿಂದ 20 ವರ್ಷದೊಳಗಿನವರಲ್ಲಿ ಶೇ 55.9ರಷ್ಟು ಮಂದಿಯಲ್ಲಿ ಖಿನ್ನತೆ, ಆತಂಕ ಹೆಚ್ಚಲು ಕೋವಿಡ್ ಭಯಕ್ಕಿಂತ ಶಿಕ್ಷಣ, ಭವಿಷ್ಯದ ಓದು ಕುರಿತಾದ ಹೆದರಿಕೆಯೇ ಕಾರಣವಂತೆ. ಉನ್ನತ ವ್ಯಾಸಂಗದ ಬಗ್ಗೆ ಕನಸು ಕಂಡಿದ್ದ ವಿದ್ಯಾರ್ಥಿಗಳು ಪರೀಕ್ಷೆ ರದ್ದು, ಮುಂದೂಡಿಕೆಯಿಂದ ಮುಂದೇನು ಎಂಬ ಆತಂಕದಿಂದ ಬಳಲುತ್ತಿದ್ದಾರಂತೆ. 10ನೇ ತರಗತಿಯಲ್ಲಿ ಉತ್ತಮ ಅಂಕ ಗಳಿಸಿ, ಒಳ್ಳೆಯ ಕಾಲೇಜಿನಲ್ಲಿ ತಮ್ಮ ಇಷ್ಟದ ಕೋರ್ಸ್‌ಗೆ ಸೇರಲು ಬಯಸಿದ್ದ ವಿದ್ಯಾರ್ಥಿಗಳು ಭ್ರಮ ನಿರಸನಗೊಂಡು ಅನಿಶ್ಚಿತ ಪರಿಸ್ಥಿತಿಗೆ ಹೊಂದಿಕೊಳ್ಳಲು ಹೆಣಗಾಡುತ್ತಿದ್ದಾರಂತೆ.
ಕಳೆದೊಂದು ವರ್ಷದಿಂದ ಹಿಂದೆಂದೂ ಕಂಡರಿಯದ ಸವಾಲುಗಳು, ನ್ಯೂ ನಾರ್ಮಲ್‌ಗೆ ಹೊಂದಿಕೊಳ್ಳುವ ಕಷ್ಟ, ಆನ್‌ಲೈನ್ ತರಗತಿಗಳು, ಸಿಲೆಬಸ್ ಕಡಿತದ ಜೊತೆಗೆ ಕುಟುಂಬದಲ್ಲಿ ಪೋಷಕರು ತಮ್ಮದೇ ಸಮಸ್ಯೆಯಿಂದ ಎದುರಿಸುವ ಒತ್ತಡ... ಇವೆಲ್ಲವುಗಳಿಂದ ಹೈರಾಣಾಗಿರುವ ಹದಿಹರೆಯದ ಮನಸ್ಸು ಈಗ ಪರೀಕ್ಷೆ ಮುಂದೂಡಿಕೆ, ರದ್ದು ಮೊದಲಾದವುಗಳಿಂದ ದಿಕ್ಕು ತೋಚದ ಸ್ಥಿತಿಯಲ್ಲಿದೆ.
ಇನ್ನು ಸ್ನಾತಕೋತ್ತರ ವ್ಯಾಸಂಗ ಮಾಡುತ್ತಿರುವ ವೈದ್ಯಕೀಯ ವಿದ್ಯಾರ್ಥಿಗಳು ಕಳೆದ ವರ್ಷದಿಂದಲೇ ವಿಪರೀತ ಒತ್ತಡಕ್ಕೆ ಒಳಗಾಗಿದ್ದಾರೆ ಎನ್ನುತ್ತದೆ ಇನ್ನೊಂದು ವರದಿ. ಅವರನ್ನು ಕೋವಿಡ್ ಫ್ರಂಟ್‌ಲೈನ್ ವಾರಿಯರ್ಸ್ ಎಂದು ಪರಿಗಣಿಸಲಾಗಿದ್ದು, ವಿದ್ಯಾರ್ಥಿ ದೆಸೆಯಿಂದ ಉದ್ಯೋಗಕ್ಕೆ ಕಾಲಿಡುವ ಹಂತದಲ್ಲಿ ಆಗಿರುವ ದಿಢೀರ್ ಬದಲಾವಣೆ ತಲ್ಲಣವನ್ನು ಉಂಟು ಮಾಡಿದೆ.
ಮಾನಸಿಕ ಸ್ಥಿತಿಯೇ ಕದಡಿರುವ ಈ ಹೊತ್ತಿನಲ್ಲಿ ಪರಿಸ್ಥಿತಿಯನ್ನು ತಿಳಿಗೊಳಿಸಬೇಕಾದ ಪೋಷಕರ ಜವಾಬ್ದಾರಿ ತುಂಬಾ ದೊಡ್ಡದು.
(ಲೇಖಕಿ: ಆಪ್ತ ಸಮಾಲೋಚಕಿ, ಬಾಳೆಬೈಲು, ತೀರ್ಥಹಳ್ಳಿ)
ಪೋಷಕರಿಗೆ ಸಲಹೆಗಳು
ಮೊಟ್ಟ ಮೊದಲಿಗೆ ಇದು ನಮಗೊಬ್ಬರಿಗೇ ಬಂದ ಕಷ್ಟವಲ್ಲ, ದೇಶದ ಎಲ್ಲಾ ವಿದ್ಯಾರ್ಥಿಗಳದ್ದೂ ಇದೇ ಸಮಸ್ಯೆ ಎಂದು ಮಕ್ಕಳಿಗೆ ತಿಳಿ ಹೇಳಿ. ಕೊರೊನಾ ಕುರಿತೇ ಸದಾ ಮಾತು ಬೇಡ.
ಪರೀಕ್ಷೆಗಳು ಯಾವಾಗ ನಡೆದರೂ ಸಿದ್ಧವಾಗಿರಬೇಕೆಂದು ಮನವರಿಕೆ ಮಾಡಿಸಿ. ಎಷ್ಟೊತ್ತಿಗೂ ಓದುವಂತೆ ಒತ್ತಡ ಬೇಡ.
ಪರೀಕ್ಷಾ ಫಲಿತಾಂಶದ ಬಗ್ಗೆ ತಲೆಕೆಡಿಸಿಕೊಳ್ಳದಿರುವಂತೆ ಧೈರ್ಯ ತುಂಬುತ್ತಾ ನಿನ್ನ ಜೊತೆ ನಾವಿರುತ್ತೇವೆಂದು ಆತ್ಮವಿಶ್ವಾಸ ಹೆಚ್ಚುವ ಮಾತನ್ನಾಡಿ.
ಒಂದು ವೇಳೆ ಪರೀಕ್ಷೆ ರದ್ದಾಗಿ ಆಂತರಿಕ ಅಂಕಗಳ ಮೇಲೆ ಫಲಿತಾಂಶ ನೀಡಿದಾಗ ಅಂಕಗಳ ಬಗ್ಗೆ ತೃಪ್ತಿಯಿಲ್ಲದಿದ್ದರೆ ಮುಂದೆ ಪರೀಕ್ಷೆ ತೆಗೆದುಕೊಳ್ಳುವ ಅವಕಾಶವೂ ಇರುವುದರಿಂದ ಉತ್ತಮವಾಗಿ ಸಿದ್ಧತೆ ಮಾಡಿಕೊಳ್ಳುವಂತೆ ಪ್ರೇರೇಪಿಸಿ.
ಮಕ್ಕಳ ಇಷ್ಟದ ಹವ್ಯಾಸಗಳನ್ನು ಗುರುತಿಸಿ ಬೆಳೆಸಿಕೊಳ್ಳುವಲ್ಲಿ ಸಹಾಯ ಮಾಡಿ. ಓದುವ ಹವ್ಯಾಸ ಬೆಳೆಸಿ.
ಶಾಲಾ-ಕಾಲೇಜುಗಳಿಲ್ಲವೆಂದು ದಿನಚರಿಯಲ್ಲಿ ಹೆಚ್ಚಿನ ವ್ಯತ್ಯಾಸ ಬೇಡ. ಪ್ರತಿದಿನ ಒಂದೇ ಸಮಯಕ್ಕೆ ಮಲಗುವುದು, ಏಳುವುದರ ಜೊತೆಗೆ ಊಟ-ತಿಂಡಿಯೂ ಸಕಾಲದಲ್ಲಾಗಲಿ.
ದಿನದ ಒಂದಷ್ಟು ಸಮಯವಾದರೂ ಮಕ್ಕಳೊಂದಿಗೆ ಮಾತನಾಡಿ. ಅವರ ಮಾತುಗಳನ್ನು ಸಮಾಧಾನದಿಂದ ಆಲಿಸಿ ಅಗತ್ಯವಿದ್ದರಷ್ಟೇ ಸಲಹೆ ನೀಡಿ.
ಮಕ್ಕಳಿಗೆ ಎಲ್ಲದಕ್ಕೂ ಅತಿಯಾದ ನಿರ್ಬಂಧ ಹೇರದೆ ಮೊಬೈಲ್ ಮತ್ತಿತರ ಗ್ಯಾಜೆಟ್‌ಗಳ ಅತಿ ಬಳಕೆಯಿಂದಾಗುವ ತೊಂದರೆಗಳ ಅರಿವು ಮೂಡಿಸಿ.
ಹದಿಹರೆಯದಲ್ಲಿ ಸ್ನೇಹಿತರ ಒಡನಾಟ ಬಯಸುವುದು ಸಹಜ. ದಿನಕ್ಕೊಮ್ಮೆಯಾದರೂ ಸ್ನೇಹಿತರೊಂದಿಗೊ, ಸಹಪಾಠಿಗಳೊಂದಿಗೊ ಫೋನ್‌ನಲ್ಲಿ ಮಾತನಾಡಿಕೊಳ್ಳಲು ಅವಕಾಶ ಮಾಡಿಕೊಡಿ.
ವಾರಾಂತ್ಯದ ಪಿಕ್‌ನಿಕ್, ಹರಟೆಯಿಲ್ಲದೇ ಕಿರಿಕಿರಿ ಸಹಜ. ಅವರಿಗಿಷ್ಟದ ತಿಂಡಿಯನ್ನು ಮನೆಯಲ್ಲೇ ಮಾಡಿ ಕೊಡಿ. ಮನೆಗೆಲಸದಲ್ಲಿ ಮಕ್ಕಳನ್ನೂ ತೊಡಗಿಸಿಕೊಂಡರೆ ಸಮಯ ಕಳೆಯುವುದರ ಜೊತೆಗೆ ಹೊಸತನ್ನು ಕಲಿತ ಖುಷಿ ಸಿಗುವುದು.
ಹರೆಯದಲ್ಲಿ ಮೂಡುವ ನಕಾರಾತ್ಮಕ ಯೋಚನೆಗಳನ್ನು ಹೊರಹಾಕಲು ಆಟೋಟಗಳು ಸಹಕಾರಿ. ಆದರೀಗ ಮನೆಯಿಂದ ಹೊರಹೋಗಲು ಸಾಧ್ಯವಿಲ್ಲದ ಕಾರಣ ಮನೆಯಲ್ಲಿಯೇ ಯೋಗ, ಏರೋಬಿಕ್ಸ್, ನೃತ್ಯದಂತಹ ಚಟುವಟಿಕೆಗಳನ್ನು ಉತ್ತೇಜಿಸಿ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.