ADVERTISEMENT

ಸರ್ಕಾರಿ ಶಾಲೆಗಳಲ್ಲಿ ಇ ಲರ್ನಿಂಗ್

ಸಂಧ್ಯಾ ಹೆಗಡೆ
Published 14 ಅಕ್ಟೋಬರ್ 2018, 19:45 IST
Last Updated 14 ಅಕ್ಟೋಬರ್ 2018, 19:45 IST
ಶಿರಸಿಯ 5ನೇ ನಂಬರ್ ಶಾಲೆಯಲ್ಲಿ ಇ–ಲರ್ನಿಂಗ್ ಮೂಲಕ ಪಾಠ
ಶಿರಸಿಯ 5ನೇ ನಂಬರ್ ಶಾಲೆಯಲ್ಲಿ ಇ–ಲರ್ನಿಂಗ್ ಮೂಲಕ ಪಾಠ   

ಸರ್ಕಾರಿ ಶಾಲೆಗಳ ಮಕ್ಕಳಿಗೆ ಇ–ಪರದೆಯ ದರ್ಶನ ಭಾಗ್ಯ ಸಿಗುವುದು ಶಿಕ್ಷಣ ಇಲಾಖೆಯ ಯಾವುದಾದರೂ ಕಾರ್ಯಕ್ರಮಗಳಿದ್ದಾಗ ಮಾತ್ರ. ಆರೆಂಟು ಶಾಲೆಗಳ ಮಕ್ಕಳನ್ನು ಒತ್ತಟ್ಟಿಗೆ ಕುಳ್ಳಿರಿಸಿ, ಅರೆ ಕತ್ತಲಿನ ಕೋಣೆಯಲ್ಲಿ ಬಿಳಿ ಪರದೆಯ ಮೇಲೆ ಕಪ್ಪು ಗೆರೆಯಲ್ಲಿ ಅಕ್ಷರಗಳು ಮೂಡುತ್ತಿದ್ದರೆ ಮಕ್ಕಳಿಗೆ ಸಿನಿಮಾ ಟಾಕೀಸಿಗೆ ಹೋದ ಅನುಭವ.

21ನೇ ಶತಮಾನದ ಮಕ್ಕಳಿಗೆ ಸ್ಮಾರ್ಟ್‌ ಫೋನ್‌ಗಳು ಪರಿಚಿತವಾದರೂ, ಇ–ಪರದೆಯ ಮೇಲಿನ ಚಿತ್ರಸಹಿತ ಕಲಿಕೆ ಗ್ರಾಮೀಣ ಶಾಲೆಗಳ ಮಕ್ಕಳಿಗೆ ಅಪರಿಚಿತವೇ. ಆದರೆ, ಶಿರಸಿ ಶೈಕ್ಷಣಿಕ ಜಿಲ್ಲೆಯ ಸರ್ಕಾರಿ ಶಾಲೆಗಳ ಮಕ್ಕಳು ಪಠ್ಯದಲ್ಲಿರುವ ಪಾಠಗಳನ್ನು ಗೋಡೆಯಲ್ಲಿ ಮೂಡುವ ಚಿತ್ರಗಳನ್ನು ನೋಡುತ್ತ ಪ್ರಾಯೋಗಿಕವಾಗಿ ಕಲಿಯುತ್ತಾರೆ. ಇಂಥದ್ದೊಂದು ತಂತ್ರಜ್ಞಾನ ಆಧಾರಿತ ಶಿಕ್ಷಣಕ್ಕೆ ನೆರವಾದದ್ದು ಶಿರಸಿಯ ರೋಟರಿ ಕ್ಲಬ್.

ಒಂದೂವರೆ ವರ್ಷದ ಹಿಂದೆ ಶೈಕ್ಷಣಿಕ ಜಿಲ್ಲೆಯ ಶಿರಸಿ, ಸಿದ್ದಾಪುರ, ಯಲ್ಲಾಪುರ ತಾಲ್ಲೂಕುಗಳ 66 ಪ್ರಾಥಮಿಕ, ಪ್ರೌಢಶಾಲೆಗಳಲ್ಲಿ ಪ್ರಾರಂಭವಾಗಿರುವ ಇ–ಕಲಿಕೆ ಯಶಸ್ವಿಯಾಗಿ ನಡೆಯುತ್ತಿದೆ. ಇದಕ್ಕೆ ಮುಖ್ಯ ಪ್ರೇರಣೆಯಾದವರು ಶೈಕ್ಷಣಿಕ ಜಿಲ್ಲೆಯ ಆಗಿನ ಡಿಡಿಪಿಐ ಎಂ.ಎಸ್.ಪ್ರಸನ್ನಕುಮಾರ್ ಹಾಗೂ ಅವರ ತಂಡ.

ADVERTISEMENT

‘ನಾನು ಕಲಿತ ಜಾನ್ಮನೆ ಶಾಲೆಯ ಎಜ್ಯುಸಾಟ್ ಕಾರ್ಯಕ್ರಮಕ್ಕೆ ಅತಿಥಿಯಾಗಿ ಹೋಗಿದ್ದೆ. ಆ ಕಾರ್ಯಕ್ರಮದಲ್ಲಿ ಭಾಷಣ ಮಾಡುತ್ತ, ಡಿಡಿಪಿಐ ಪ್ರಸನ್ನಕುಮಾರ್ ಅವರು ಇ–ಕಲಿಕೆಯ ಬಗ್ಗೆ ಪ್ರಸ್ತಾಪಿಸಿದರು. ಅತ್ಯಂತ ಪರಿಣಾಮಕಾರಿಯಾಗಿರುವ ಇ–ಕಲಿಕೆ ಸೌಲಭ್ಯ ಸರ್ಕಾರಿ ಶಾಲೆಯ ಮಕ್ಕಳಿಗೆ ದೊರೆತರೆ, ನಗರದ ಮಕ್ಕಳಿಗೆ ಕಮ್ಮಿ ಇಲ್ಲದಂತೆ ಈ ಮಕ್ಕಳು ಸಾಧನೆ ಮಾಡಬಹುದು ಎಂದು ಅವರು ಉಲ್ಲೇಖಿಸಿದ್ದು, ನನ್ನ ಗಮನ ಸೆಳೆಯಿತು. ಈ ಮಾತೇ ಇ–ಲರ್ನಿಂಗ್ ಪರಿಕರಗಳ ವಿತರಣೆಗೆ ಮುಖ್ಯ ಸ್ಫೂರ್ತಿ’ ಎನ್ನುತ್ತಾರೆ ಸತತ ಪ್ರಯತ್ನದಿಂದ ಯೋಜನೆ ಜಾರಿಗೊಳಿಸಿದ ರೋಟರಿ ಕ್ಲಬ್‌ನ ಅಂದಿನ ಅಧ್ಯಕ್ಷ ಡಾ. ದಿನೇಶ ಹೆಗಡೆ.

‘ರೋಟರಿ ಕ್ಲಬ್ ಸದಸ್ಯರು ನಾಟಕ ಪ್ರದರ್ಶನವೊಂದನ್ನು ಪ್ರದರ್ಶಿಸಿ, ಅಲ್ಲಿ ಸಂಗ್ರಹವಾದ ಹಣವನ್ನು ಮೂಲಧನವನ್ನಾಗಿ ಇಟ್ಟುಕೊಂಡೆವು. ರೋಟರಿ ಫೌಂಡೇಷನ್‌, ಬೇರೆ ಬೇರೆ ರೋಟರಿ ಕ್ಲಬ್‌ಗಳ ನೆರವು ಕೂಡ ಸಿಕ್ಕಿತು. ಎಲ್‌ಸಿಡಿ ಪ್ರಾಜೆಕ್ಟರ್, ಲ್ಯಾಪ್‌ಟಾಪ್, ಸ್ಮಾರ್ಟ್ ಬೋರ್ಡ್, ಯುಪಿಎಸ್‌ ಸೇರಿ ಪ್ರತಿ ಶಾಲೆಗೆ ₹ 90ಸಾವಿರ ಮೊತ್ತದ ಪರಿಕರಗಳನ್ನು ನಾವು ನೀಡಿದರೆ, ಉಳಿದ ₹ 10ಸಾವಿರ ಮೊತ್ತವನ್ನು ಶಾಲಾಭಿವೃದ್ಧಿ ಸಮಿತಿಯವರು ಭರಿಸಿದರು’ ಎಂದು ಅವರು ಯೋಜನೆ ಅನುಷ್ಠಾನದ ಕ್ರಮವನ್ನು ವಿವರಿಸಿದರು.

‘ರಾಜ್ಯ ಪಠ್ಯಕ್ರಮವನ್ನು ಇ–ಕಲಿಕೆಗೆ ಪರಿವರ್ತಿಸಿ ಕೊಟ್ಟಿರುವುದರಿಂದ ಮಕ್ಕಳು, ಚಿತ್ರದೊಂದಿಗೆ ಪಾಠ ಕಲಿಯುತ್ತಾರೆ. ಸರ್ಕಾರಿ ಶಾಲೆಗೆ ಇಂತಹ ಸೌಲಭ್ಯಗಳನ್ನು ನೀಡಿದರೆ, ನಮ್ಮ ಮಕ್ಕಳು ಜಾಗತಿಕ ಸ್ಪರ್ಧೆ ಎದುರಿಸಲು ಪ್ರಾಥಮಿಕ ಹಂತದಿಂದಲೇ ಸನ್ನದ್ಧರಾಗುತ್ತಾರೆ’ ಎನ್ನುತ್ತಾರೆ ಪ್ರಸ್ತುತ, ಶಿಕ್ಷಣ ಇಲಾಖೆಯ ಕರ್ನಾಟಕ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿ ಬೆಳಗಾವಿ ವಿಭಾಗದ ಜಂಟಿ ನಿರ್ದೇಶಕರಾಗಿರುವ ಎಂ.ಎಸ್.ಪ್ರಸನ್ನಕುಮಾರ್.

ಇ–ಪರದೆಯ ಕೊಠಡಿಯಲ್ಲಿ ಕುಳಿತಿದ್ದ ಶಿರಸಿಯ 5ನೇ ನಂಬರ್ ಶಾಲೆಯ ಮಗು ಗೌರಿ ಮುದ್ದುಮುದ್ದಾಗಿ ಹೇಳಿತು: ‘ನನಗೆ ಕಂಪ್ಯೂಟರ್ ನೋಡಬೇಕು, ಅದರಲ್ಲಿ ಬರುವ ಚಿತ್ರಗಳನ್ನು ನೋಡಬೇಕು ಎಂದು ಆಸೆಯಾಗುತ್ತಿತ್ತು. ಅಪ್ಪನ ಬಳಿ ಹೇಳಿದರೆ, ಬೈದು ಸುಮ್ಮನಾಗಿಸುತ್ತಿದ್ದ. ಈಗ ಶಾಲೆಯಲ್ಲಿ ಪರದೆಯ ಮೇಲೆ ಚಿತ್ರ ಕಥೆಗಳನ್ನು ನೋಡಲು ಖುಷಿಯಾಗುತ್ತದೆ. ಒಂದು ಬದಿಗೆ ಚಿತ್ರ, ಪಕ್ಕದಲ್ಲಿ ಅದರ ವಿವರಣೆ ಎರಡನ್ನೂ ಒಟ್ಟಿಗೆ ನೋಡುವುದರಿಂದ, ಅದು ನೆನಪಿನಲ್ಲುಳಿಯುತ್ತದೆ. ಪರದೆಯ ಮೇಲೆ ನೋಡಿದ ಸಮಾಜ, ವಿಜ್ಞಾನ ಪಾಠಗಳೆಲ್ಲವೂ ಪರೀಕ್ಷೆಯಲ್ಲಿ ಕಣ್ಣ ಪರದೆಯ ಮೇಲೆ ತೆರೆದುಕೊಳ್ಳುತ್ತವೆ’.

‘ಸರ್ಕಾರಿ ಶಾಲೆಯ ಮಕ್ಕಳಿಗೆ ಉಚಿತಗಳನ್ನು ಕೊಡುವುದು ಖುಷಿಯೇ. ಇದರಷ್ಟೇ ಮಹತ್ವವನ್ನು ಸರ್ಕಾರ ತಂತ್ರಜ್ಞಾನ ಆಧಾರಿತ ಶಿಕ್ಷಣಕ್ಕೂ ಕೊಡಬೇಕು’ ಎಂದರು ಶಾಲೆಗೆ ಮಗುವನ್ನು ಬಿಡಲು ಬಂದಿದ್ದ ಮಹಾದೇವ ಆಚಾರಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.