ADVERTISEMENT

ಶಿಕ್ಷಣ |ಇತಿಹಾಸ ಕಲಿಕೆಯಲ್ಲಿ ಟೈಮ್‌ಲೈನ್

ಆರ್.ಬಿ.ಗುರುಬಸವರಾಜ
Published 5 ನವೆಂಬರ್ 2023, 23:30 IST
Last Updated 5 ನವೆಂಬರ್ 2023, 23:30 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

ಇತಿಹಾಸ ಅಧ್ಯಯನ ಮಾಡುವಾಗ ಸರಿಯಾದ ಕ್ರಮದಲ್ಲಿ ಟೈಮ್‌ಲೈನ್‌ ಬರೆಯುವುದು ಸವಾಲೇ ಆಗಿದೆ. ಇವನ್ನು ಸರಳವಾಗಿ ಹೇಗೆ ನೆನಪಿಡಬಹುದು ? ವಿವರ ಇಲ್ಲಿದೆ...

ಇತಿಹಾಸ ಎಂಬುದು ಮಾನವನ ಜ್ಞಾನದ ಅವಿಭಾಜ್ಯ ಅಂಗ. ಅದು ಕೇವಲ ನಡೆದ ಘಟನೆಗಳ ಕಾಲಾನ್ವಯಿಕ ಪಟ್ಟಿಯಲ್ಲ. ಅದು ನಿರ್ದಿಷ್ಟಕಾಲ, ದೇಶ, ವ್ಯಕ್ತಿ, ಮತ್ತು ಸಾಮಾಜಿಕ ಹಿನ್ನೆಲೆ ಎಂಬ ವಿವಿಧ ಆಯಾಮಗಳನ್ನು ತಿಳಿಸುವ ಸೂತ್ರವೂ ಹೌದು.  ಸತ್ಯಾನ್ವೇಷಣೆಯೇ  ಇತಿಹಾಸದ ಉದ್ದೇಶವಾಗಿದ್ದು, ಅದು ವಿಜ್ಞಾನದಂತೆ ಕ್ರಮಬದ್ಧ ಅಧ್ಯಯನ, ಅವಲೋಕನ, ವಿಶ್ಲೇಷಣೆ, ಹೋಲಿಕೆ ಮತ್ತು ನಿರ್ಣಯ/ಸಾಮಾನ್ಯೀಕರಣ ಹಂತಗಳನ್ನೂ ಒಳಗೊಂಡಿವೆ. 

ADVERTISEMENT

ಕೆಲವು ಇತಿಹಾಸಕಾರರು ಇತಿಹಾಸವನ್ನು ವಿಜ್ಞಾನವೆಂದು ತಿಳಿದಿದ್ದರೂ ನಿರೂಪಣೆಯ ವಿಚಾರಕ್ಕೆ ಬಂದಾಗ ಕಲಾತ್ಮಕ ನಿರೂಪಣೆಯ ನಿದರ್ಶನ ನೀಡುತ್ತಾರೆ.  ವಿಜ್ಞಾನಕ್ಕಿಂತ ಹೆಚ್ಚೆಂದು ವಾದಿಸುತ್ತಾರೆ. ಕೆಲವೊಮ್ಮೆ ತಮ್ಮ ನಿರೂಪಣೆಯಲ್ಲಿ ತಪ್ಪು ಅಭಿಪ್ರಾಯವನ್ನು ತಂದರೂ  ವೈಜ್ಞಾನಿಕ ತತ್ವದ ಚೌಕಟ್ಟು ನೀಡಿ, ವಿಷಯದೊಂದಿಗೆ ಒಪ್ಪಂದ ಮಾಡಿಕೊಳ್ಳುತ್ತಾರೆ. ಹಾಗಾಗಿ ಇತಿಹಾಸ ಸದಾ ಚಲನಾತ್ಮಕವಾದುದು. ಅದು ಕಾಲದ ಜೊತೆಗೆ ಸಾಗುತ್ತದೆ.  ಈ ಕಾಲ ಚಲಿಸುವಾಗ ಅದು ತನ್ನೊಳಗೆ ಹುದುಗಿಕೊಂಡ ಹಲವು ಸಂಸ್ಕೃತಿಗಳನ್ನು ಅನಾವರಣಗೊಳಿಸುತ್ತದೆ.

ಸ್ಪರ್ಧಾತ್ಮಕ ಪರೀಕ್ಷೆಗಳ ಇತಿಹಾಸ ಅಧ್ಯಯನದಲ್ಲಿ ಟೈಮ್‌ಲೈನ್‌ಗೆ ಬಹಳ ಮಹತ್ವ ಇದೆ. ಇದನ್ನು ಅರಿತು ನೆನಪಿಟ್ಟುಕೊಂಡು ಪರೀಕ್ಷೆ ಬರೆದವರು ಸುಲಭವಾಗಿ ಅಂಕ ಗಳಿಸಲು ಸಾಧ್ಯವಾಗುತ್ತದೆ. 

ಏನಿದು ಟೈಮ್‌ಲೈನ್‌?

ಟೈಮ್‌ಲೈನ್‌ ಅಂದರೆ ಕಾಲಗಣನೆ . ಅಂದರೆ ಕಾಲದ ದೃಶ್ಯ ನಿರೂಪಣೆಯಾಗಿದ್ದು ಅದು ಅನುಕ್ರಮ ಮಾಹಿತಿಯನ್ನು ಒಳಗೊಂಡಿರುತ್ತದೆ. ಕಾಲಗಣನೆ ಮೂಲಕ ಐತಿಹಾಸಿಕ ಘಟನೆಗಳ ನಡುವಿನ ಅನುಕ್ರಮ ಮತ್ತು ಕಾರಣ ಸಂಬಂಧವನ್ನು ಗುರುತಿಸಬಹುದು. ಘಟನೆಗಳನ್ನು ಒಂದು ಸುಸಂಬದ್ಧವಾದ ತಾತ್ಕಾಲಿಕ ರೇಖೆಯ ಮೇಲೆ ಮ್ಯಾಪಿಂಗ್ ಮಾಡುವ ಮೂಲಕ ಇತಿಹಾಸವನ್ನು ಜೀವಂತಗೊಳಿಸಿ ನಿರೂಪಿಸುವುದೇ ಕಾಲಗಣನೆಯಾಗಿದೆ. ಇತಿಹಾಸ ಅಧ್ಯಯನದಲ್ಲಿ ಕಾಲಗಣನೆ ಹೆಚ್ಚು ಮೌಲ್ಯಯುತವಾದ ಸಂಪನ್ಮೂಲವಾಗಿವೆ.

ಇತಿಹಾಸದಲ್ಲಿ ಟೈಮ್‌ಲೈನ್‌

ಮಾನವರ ಇತಿಹಾಸದಲ್ಲಿ ಕಾಲಗಣನೆಯ ಆವಿಷ್ಕಾರ, ಉಲ್ಲೇಖ ಅತ್ಯಂತ ಮಹತ್ವಪೂರ್ಣವಾಗಿದೆ. ದಿನ, ವಾರ, ತಿಂಗಳು, ವರ್ಷವನ್ನು ದಾಖಲಿಸುವುದು ಅತಿ ಮುಖ್ಯವಾಗಿದೆ. ಈಗ ನಾವು ಸಾಮಾನ್ಯವಾಗಿ ಕ್ರಿ.ಶ. ಮತ್ತು ಕ್ರಿ.ಪೂ. ಕಾಲವೆಂದು ಗುರುತಿಸುತ್ತೇವೆ. ಕ್ರಿಸ್ತನ ಜನನದಿಂದ ಕ್ರಿಸ್ತಶಕ ಪ್ರಾರಂಭ. ಹಿಜಿರಶಕವನ್ನು ಮುಸ್ಲಿಂ ಶಕವೆಂದು  ಕರೆಯಲಾಗಿದೆ. ಇದು ಮಹಮ್ಮದ್ ಪೈಗಂಬರರು ಮೆಕ್ಕಾ ನಗರದಿಂದ ತನ್ನ ಮತ್ತು ತನ್ನ ಅನುಯಾಯಿಗಳ ರಕ್ಷಣೆಗಾಗಿ ಮದಿನಾ(ಯಾತ್ರಿಬ್)ಗೆ ವಲಸೆ ಹೋದ (ಸಾ.ಶ. 622) ವರ್ಷವಾಗಿದೆ.

ಭಾರತದ ರಾಷ್ಟ್ರೀಯ ಶಕವರ್ಷ (22 ಮಾರ್ಚ್‌ 1957)ವನ್ನು ಜಾರಿಗೊಳಿಸಲಾಗಿದೆ. ಇದು ಕ್ರಿ.ಶದ ವರ್ಷಕ್ಕಿಂತ 78 ವರ್ಷ ಕಡಿಮೆ ಇದೆ(ಶಾಲಿವಾಹನ ಶಕ). ಮಧ್ಯಯುಗೀನ ಇತಿಹಾಸವು ಸಾ.ಶ. 700 ರಿಂದ 1800ರ ವರೆಗೆ ಒಳಗೊಂಡಿದೆ. ಆಯಾ ಕಾಲಘಟ್ಟದಲ್ಲಿನ ಜನರ ಸಂಸ್ಕೃತಿ, ಭಾಷೆ, ಬರವಣಿಗೆ,
ಉಡುಗೆ ತೊಡುಗೆ, ಕಟ್ಟಡಗಳು, ಚಿತ್ರಕಲೆ, ಸಂಗೀತ,
ಆರ್ಥಿಕ ರಾಜಕೀಯ ಜೀವನದ ಬಗ್ಗೆ ಅಧ್ಯಯನ ಮಾಡಲು ಇತಿಹಾಸ ಸಹಕಾರಿ. 

ಟೈಮ್‌ಲೈನ್‌ ಏಕೆ ಮುಖ್ಯ ?

ನಡೆದ ಘಟನೆಗಳು ಯಾವಾಗ? ಮತ್ತು ಎಲ್ಲಿ? ಎಂಬುದು ಸ್ಪಷ್ಟವಾಗಿದ್ದಾಗ ಮಾತ್ರ ಇತಿಹಾಸ ಅರ್ಥಪೂರ್ಣ ಕಥೆಯಾಗುತ್ತದೆ. ಯಾವುದೇ ಒಂದು ಘಟನೆಗೆ ಸಂಬಂಧಿಸಿದಂತೆ ಯಾವಾಗ? ಎಲ್ಲಿ? ಎಂಬುದನ್ನು ಅರಿಯದೆ, ಹೇಗೆ? ಮತ್ತು ಏಕೆ? ಎಂದು ಉತ್ತರಿಸುವುದು ಸಾಧ್ಯವಿಲ್ಲ. ಆದ್ದರಿಂದ ಇತಿಹಾಸವನ್ನು ಪೂರ್ಣವಾಗಿ ಗ್ರಹಿಸಬೇಕೆಂದರೆ, ಘಟನೆ ನಡೆದ ಕಾಲ ಹಾಗೂ ಸ್ಥಳದ ಅರಿವು ಅತ್ಯಗತ್ಯ.  ಮಾನವ ಜೀವನದ ಅನನ್ಯ ಅಧ್ಯಯನವಾಗಿರುವುದರಿಂದ ಅನುಕ್ರಮ ಅಧ್ಯಯನ ಮುಖ್ಯ. ಅನುಕ್ರಮ ಅಧ್ಯಯನಕ್ಕೆ ಟೈಮ್‌ಲೈನ್ ತುಂಬಾ ಸಹಾಯಕ. ಇತಿಹಾಸದ ಟೈಮ್‌ಲೈನ್ ರಚಿಸಿಕೊಂಡು ಅಧ್ಯಯನ ಮಾಡಿ. 

ಟೈಮ್‌ಲೈನ್ ರಚನೆ ಹೇಗೆ?

ಇತಿಹಾಸದ ಪ್ರಮುಖ ಐತಿಹಾಸಿಕ ಘಟನೆಗಳನ್ನು ಅಧ್ಯಯನ ಮಾಡುವಾಗ ಟೈಮ್‌ಲೈನ್ ರಚನೆ ಉತ್ತಮ ವಿಧಾನವಾಗಿದೆ. ದೃಷ್ಟಾಂತಗಳು ಮತ್ತು ಘಟನೆಗಳನ್ನು ಆಧಾರವಾಗಿಟ್ಟುಕೊಂಡು ವೇಗವಾಗಿ ಮತ್ತು ಸುಲಭವಾಗಿ ಟೈಮ್‌ಲೈನ್ ಅನ್ನು ರಚಿಸಿಕೊಳ್ಳಬಹುದು.  

ಟೈಮ್‌ಲೈನ್ ರಚಿಸಲು ಕೆಳಗಿನ ಅಂಶಗಳು ಸಹಾಯಕವಾಗಿವೆ. ಆರಂಭಿಕ ಮತ್ತು ಅಂತಿಮ ದಿನಾಂಕವನ್ನು ನಿರ್ಧರಿಸಿ. ಯಾವ ಕ್ರಮದಲ್ಲಿ ದಾಖಲಿಸಬೇಕು ಎಂಬುದನ್ನು ನಿರ್ಧರಿಸಿ. ಅಂದರೆ ತಿಂಗಳು, ವರ್ಷ, ದಶಕ, ಶತಮಾನ ಹೀಗೆ ಕ್ರಮದಲ್ಲಿ ದಾಖಲಿಸಬೇಕೆಂಬ ಸ್ಪಷ್ಟತೆ ಇರಲಿ. ಘಟನೆಗಳ ಪಟ್ಟಿಯನ್ನು
ಸಿದ್ದ ಮಾಡಿಕೊಳ್ಳಿ. ಘಟನೆಗಳು ಸಂಭವಿಸುವ ನಿರ್ದಿಷ್ಟ ಸಮಯವನ್ನು ವಿವಿಧ ಮೂಲಗಳಿಂದ ಸಂಶೋಧಿಸಿ ನಿಖರಪಡಿಸಿಕೊಳ್ಳಿ. 

ಸ್ಪಷ್ಟವಾಗಿ ಟೈಮ್‌ಲೈನ್ ಬರೆದುಕೊಳ್ಳಿ. ಪ್ರಮುಖ ಐತಿಹಾಸಿಕ ಘಟನೆಗಳ ಜೊತೆಗೆ ಸಾಕ್ಷ್ಯಗಳು, ಫೋಟೊಗಳು ಮತ್ತು ಕವಿತೆಗಳಂತಹ ವೈವಿಧ್ಯಮಯ ಸ್ವರೂಪದಿಂದ ರಚಿಸಿದರೆ ಅಧ್ಯಯನಕ್ಕೆ ತುಂಬಾ ಅನುಕೂಲವಾಗುತ್ತದೆ.  ವಿವಿಧ ಪರಿಕಲ್ಪನೆಗಳನ್ನಾಧರಿಸಿ ವಿವಿಧ ಟೈಮ್‌ಲೈನ್ ರಚಿಸಿದರೆ ಅಧ್ಯಯನಕ್ಕೊಂದು ಸ್ಪಷ್ಟತೆ ಇರುತ್ತದೆ.

ಶಕ ಬಂದಿದ್ದು ಯಾಕೆ?

ಸಾಮಾನ್ಯ ಶಕ ಎಂಬ ಪದ ಕಳೆದ ನಾಲ್ಕಾರು ವರ್ಷಗಳಿಂದ ಚಾಲ್ತಿಯಲ್ಲಿದೆ. ಕ್ರಿಸ್ತಶಕ ಮತ್ತು ಕ್ರಿಸ್ತಪೂರ್ವ ಎಂಬುದಕ್ಕೆ ಪರ್ಯಾಯವಾಗಿ ಸಾಮಾನ್ಯ ಶಕ ಮತ್ತು ಸಾಮಾನ್ಯ ಶಕಪೂರ್ವ ಎಂಬ ಪದಗಳನ್ನು ಬಳಸಲಾಗುತ್ತದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.