ADVERTISEMENT

ಆರ್‌ಟಿಇಗೆ 8 ವರ್ಷ: ವಿಸ್ತರಣೆ ಸಾಧ್ಯತೆ ಇಲ್ಲ?

9ನೇ ತರಗತಿಗೆ ಶುಲ್ಕದ ಹೊರೆ

​ಪ್ರಜಾವಾಣಿ ವಾರ್ತೆ
Published 30 ಡಿಸೆಂಬರ್ 2019, 10:07 IST
Last Updated 30 ಡಿಸೆಂಬರ್ 2019, 10:07 IST
   

ಬೆಂಗಳೂರು: ಶಿಕ್ಷಣ ಹಕ್ಕು ಕಾಯ್ದೆ (ಆರ್‌ಟಿಇ) ಜಾರಿಗೆ ಬಂದು ಎಂಟು ವರ್ಷವಾಗುತ್ತಿದ್ದು, 2012ರಲ್ಲಿ ಈ ಯೋಜನೆಯಡಿಯಲ್ಲಿ 1ನೇ ತರಗತಿಗೆ ಸೇರಿದ ವಿದ್ಯಾರ್ಥಿಗಳು ಇದೀಗ 8ನೇ ತರಗತಿಯಲ್ಲಿದ್ದಾರೆ. ಆದರೆ ಮುಂದಿನ ವರ್ಷ ಹೆಚ್ಚಿನವರ ಭವಿಷ್ಯ ಅತಂತ್ರವಾಗುವ ಆತಂಕ ಎದುರಾಗಿದೆ.

6 ರಿಂದ 14 ವರ್ಷದೊಳಗಿನ ಮಕ್ಕಳಿಗೆ ಉಚಿತ, ಕಡ್ಡಾಯ ಶಿಕ್ಷಣ ನೀಡಬೇಕು ಎಂಬ ನಿಯಮದಂತೆ ಆರ್‌ಟಿಇ ಜಾರಿಗೆ ಬಂದಿದ್ದು, 9 ಮತ್ತು 10ನೇ ತರಗತಿಗೂ ಅದನ್ನು ವಿಸ್ತರಿಸಬೇಕು ಎಂದು ತಿಳಿಸಿಲ್ಲ. ಇದನ್ನೇ ಬಳಸಿಕೊಂಡ ರಾಜ್ಯ ಸರ್ಕಾರ, ಭಾರಿ ಆರ್ಥಿಕ ಹೊರೆಯ ಕಾರಣ ನೀಡಿ ನಿಯಮದಂತೆಯೇ ನಡೆದುಕೊಳ್ಳುವ ಹಾದಿ ತುಳಿಯುವ ಲಕ್ಷಣ ಕಾಣಿಸಿದೆ.

‘ಆರ್‌ಟಿಇ ಯೋಜನೆಯಡಿಯಲ್ಲಿ2012ರಲ್ಲಿ 43 ಸಾವಿರ ಮಂದಿ 1ನೇ ತರಗತಿಗೆ ಸೇರ್ಪಡೆಯಾಗಿದ್ದರು. ಆದರೆ ಅಷ್ಟೇ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಎಂಟನೇ ತರಗತಿಯಲ್ಲೂ ಓದುತ್ತಿರುವ ಸಾಧ್ಯತೆ ಇಲ್ಲ, ಹೀಗಿದ್ದರೂ ಸಾವಿರಾರು ಮಂದಿ 9ನೇ ತರಗತಿಗೆ ಖಾಸಗಿ ಶಾಲೆಗಳ ದುಬಾರಿ ಶುಲ್ಕ ಭರಿಸಬೇಕಿದ್ದು, ಹಲವರು ಶಿಕ್ಷಣದಿಂದ ವಂಚಿತರಾಗುವ ಅಪಾಯ ಇದೆ’ ಎಂದು ಆರ್‌ಟಿಇ ವಿದ್ಯಾರ್ಥಿಗಳು ಮತ್ತು ಪೋಷಕರ ಸಂಘದ ಪ್ರಧಾನ ಕಾರ್ಯದರ್ಶಿ ಬಿ.ಎನ್‌.ಯೋಗಾನಂದ ‘ಪ್ರಜಾವಾಣಿ’ಗೆ ತಿಳಿಸಿದರು.

ADVERTISEMENT

‘ನೂತನ ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ 12ನೇ ತರಗತಿವರೆಗೂ ಆರ್‌ಟಿಇ ಮುಂದುವರಿಸಬೇಕು ಎಂದು ತಿಳಿಸಲಾಗಿದೆ ನಿಜ, ಆದರೆ ಇದನ್ನು ಜಾರಿಗೆ ತರುವುದು ಬಹಳ ಕಷ್ಟಕರ ಸಂಗತಿ, ಭಾರಿ ಬಜೆಟ್‌ನ ಅಗತ್ಯ ಬೀಳುತ್ತದೆ. ಹೀಗಾಗಿ ತಿದ್ದುಪಡಿಗೆ ಒಳಪಟ್ಟ ಆರ್‌ಟಿಇ ಕಾಯ್ದೆಯಂತೆ 8ನೇ ತರಗತಿವರೆಗೆ ಮಾತ್ರ ಉಚಿತ ಶಿಕ್ಷಣದ ಹೊರೆಯನ್ನು ಸರ್ಕಾರ ಹೊರಬಹುದಷ್ಟೇ, ಸರ್ಕಾರಿ ಶಾಲೆಗಳನ್ನು ಬಲಪಡಿಸುವ ಮೂಲಕ ಮಕ್ಕಳನ್ನು ಸರ್ಕಾರಿ ಶಾಲೆಗಳಿಗೇ ಸೇರಿಸುವ ನಿಟ್ಟಿನಲ್ಲಿ ಪ್ರೇರೇಪಣೆ ನೀಡುವ ಹಾದಿಯನ್ನೇ ಸರ್ಕಾರ ತುಳಿಯುವ ಸಾಧ್ಯತೆ ಇದೆ’ ಎಂದು ಇಲಾಖೆಯ ಹಿರಿಯ ಹಿರಿಯ ಅಧಿಕಾರಿಯೊಬ್ಬರು ಅಭಿಪ್ರಾಯಪಟ್ಟರು.

ಆರ್‌ಟಿಇಯನ್ನು 9 ಮತ್ತು 10ನೇ ತರಗತಿಗೆ ವಿಸ್ತರಿಸುವ ಯಾವ ಪ್ರಸ್ತಾಪವೂ ಸದ್ಯ ಇಲಾಖೆಯ ಮುಂದೆ ಇಲ್ಲ ಎಂದುಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ಎಸ್‌.ಆರ್‌.ಉಮಾಶಂಕರ್‌ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.