1. ನಾನು ಬಿಕಾಂ ಪದವಿ ಮುಗಿಸಿ ಕುವೆಂಪು ವಿಶ್ವವಿದ್ಯಾಲಯದಲ್ಲಿ ದೂರ ಶಿಕ್ಷಣದ ಮೂಲಕ ಸ್ನಾತಕೋತ್ತರ ಪದವಿಯನ್ನು ಓದುತ್ತಿದ್ದೇನೆ. ಈಗ ಐಬಿಪಿಎಸ್ ಬ್ಯಾಂಕ್ ಪರೀಕ್ಷೆ ಬರೆಯುವುದು ಸರಿಯೋ ಅಥವಾ ನಾಗರಿಕ ಸೇವಾ ಪರೀಕ್ಷೆ ತೆಗೆದುಕೊಳ್ಳುವುದು ಉತ್ತಮವೋ?
–ರಾಜು, ಮಧುಗಿರಿ.
ಈ ಎರಡೂ ವೃತ್ತಿಗಳಿಗೆ ಉಜ್ವಲವಾದ ಭವಿಷ್ಯವಿದೆ. ಯಾವುದೇ ವೃತ್ತಿಯಲ್ಲಿ ಯಶಸ್ಸು ಗಳಿಸಲು ವೃತ್ತಿ ಜ್ಞಾನ ಮತ್ತು ಕೌಶಲಗಳ ಜೊತೆಗೆ ಸಕಾರಾತ್ಮಕ ಆಲೋಚನೆ, ನಿಷ್ಠೆ, ಪ್ರಾಮಾಣಿಕತೆ, ಸ್ವಯಂಪ್ರೇರಣೆ ಮತ್ತು ಆತ್ಮವಿಶ್ವಾಸವಿರಬೇಕು. ಇವನ್ನು ಬೆಳೆಸಿಕೊಂಡರೆ, ಸ್ವಾಭಾವಿಕವಾಗಿಯೇ ನಿಮ್ಮ ಕಾರ್ಯಾಚರಣೆ ನಿರೀಕ್ಷೆಯಂತಿರುತ್ತದೆ ಮತ್ತು ಕಾಲಕ್ರಮೇಣ ವೃತ್ತಿಯಲ್ಲಿ ಯಶಸ್ಸನ್ನು ಗಳಿಸಬಹುದು. ಹಾಗಾಗಿ, ನಿಮಗೆ ಹೆಚ್ಚು ಸರಿಹೊಂದುವ, ಇಷ್ಟಪಡುವ ವೃತ್ತಿಯನ್ನು ಗುರುತಿಸಿ, ಅದರಂತೆ ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಾಗಿ. ಹೆಚ್ಚಿನ ಮಾರ್ಗದರ್ಶನಕ್ಕಾಗಿ ಈ ವಿಡಿಯೊ ವೀಕ್ಷಿಸಿ: https://www.youtube.com/c/EducationalExpertManagementCareerConsultant
2. ನಾನು ಪ್ರೌಢಶಾಲೆಯಲ್ಲಿ ಕನ್ನಡ ಭಾಷೆಯ ಶಿಕ್ಷಕನಾಗಿ ಕೆಲಸ ಮಾಡುತ್ತಿದ್ದೇನೆ. ಎಂಎ (ಕನ್ನಡ) ಪದವಿ ಪಡೆದಿದ್ದೇನೆ. ಈಗ ಪತ್ರಿಕೋದ್ಯಮದಲ್ಲಿ ಆಸಕ್ತಿ ಇದೆ. ಹಾಗಾಗಿ ಒಂದು ವರ್ಷದ ಪತ್ರಿಕೋದ್ಯಮ ಪದವಿಯನ್ನು ಮಾಡಲಿಚ್ಛಿಸಿದ್ದೇನೆ. ಇದರಿಂದ ಶೈಕ್ಷಣಿಕ ಚಟುವಟಿಕೆಗಳ ಬಗ್ಗೆ ವರದಿ ಮಾಡಲು ಅನುಕೂಲ ಆಗಬಹುದಾ? ವೃತ್ತಿಯ ಜೊತೆಗೆ ಈ ಪ್ರವೃತ್ತಿಯನ್ನು ಅನುಸರಿಸಬಹುದಾ?
–ಹೆಸರು, ಊರು ತಿಳಿಸಿಲ್ಲ.
ನಿಮಗೆ ಪತ್ರಿಕೋದ್ಯಮದಲ್ಲಿ ಆಸಕ್ತಿ ಇರುವುದರಿಂದ ಪದವಿಯ ಜೊತೆಗೆ ಸಂವಹನ (ಓದುವುದು, ಬರವಣಿಗೆ, ಮಾತುಗಾರಿಕೆ, ನಿರೂಪಣೆ ಇತ್ಯಾದಿ), ವಿಶ್ಲೇಷಣಾತ್ಮಕ ಕೌಶಲ, ಸಮಯದ ನಿರ್ವಹಣೆ ಇತ್ಯಾದಿ ಕೌಶಲಗಳನ್ನೂ ಬೆಳೆಸಿಕೊಂಡರೆ, ನೀವು ಮಾಡಬೇಕೆಂದಿರುವ ಇನ್ನಿತರ ಚಟುವಟಿಕೆಗಳಿಗೆ ಸಹಾಯವಾಗುತ್ತದೆ. ವೃತ್ತಿ ಮತ್ತು ಪ್ರವೃತ್ತಿಗಳೆರಡೂ ಬದುಕಿಗೆ ಅವಶ್ಯಕ. ಆಸಕ್ತಿ, ಅಭಿರುಚಿಯಿರುವ ಪ್ರವೃತ್ತಿಯಲ್ಲಿ ಸಕ್ರಿಯವಾಗಿ ತೊಡಗಿಸಿ ಕೊಂಡು, ಮುಂದೆ ಪ್ರವೃತ್ತಿಯನ್ನೇ ವೃತ್ತಿಯನ್ನಾಗಿಸಿಕೊಂಡು, ಬದುಕಿನಲ್ಲಿ ಯಶಸ್ಸುಗಳಿಸಿರುವ ಅನೇಕ ಉದಾಹರಣೆಗಳಿವೆ. ಶುಭಹಾರೈಕೆಗಳು.
3. ನಾನು ಬಿಎ (ಸಮಾಜಶಾಸ್ತ್ರ) ಓದುತ್ತಿದ್ದು, ಮುಂದೆ ಎಂಎಸ್‌ಡಬ್ಲ್ಯೂ ಮಾಡುವ ಆಸೆ ಇದೆ. ಇದನ್ನು ಮಾಡಿದರೆ ಯಾವ ಉದ್ಯೋಗಾವಕಾಶಗಳಿವೆ?
–ಬಿ.ಸಿದ್ದರಾಮ, ಬಳ್ಳಾರಿ
ಒಂದು ಸಂಸ್ಥೆಯ ಅಭಿವೃದ್ಧಿಗಾಗಿ, ಸಂಪನ್ಮೂಲಗಳನ್ನು ವ್ಯವಸ್ಥಿತವಾಗಿ ಉಪಯೋಗಿಸುವ ಯೋಜನೆಗಳನ್ನು ರಚಿಸಿ, ಎಲ್ಲಾ ಪ್ರಯತ್ನಗಳನ್ನು ಕೇಂದ್ರೀಕರಿಸಿ, ಯೋಜನೆಗಳನ್ನು ನಿಷ್ಠೆಯಿಂದ ಕಾರ್ಯಗತಗೊಳಿಸುವುದೇ ಆಡಳಿತ ವರ್ಗದ ಮೂಲ ಉದ್ದೇಶ. ಈ ನಿಟ್ಟಿನಲ್ಲಿ, ಮಾನವ ಸಂಪನ್ಮೂಲದ ನಿರ್ವಹಣೆ ಸಂಸ್ಥೆಗಳ ಕಾರ್ಯಾಚರಣೆಯಲ್ಲಿ ಹೆಚ್ಚಿನ ಪ್ರಾಮುಖ್ಯ ಪಡೆದಿದೆ.
ಹಾಗಾಗಿ, ಎಂಎಸ್‌ಡಬ್ಲ್ಯೂ ಪದವೀಧರರಿಗೆ ಸರ್ಕಾರಿ ಮತ್ತು ಖಾಸಗಿ ಕ್ಷೇತ್ರಗಳಲ್ಲಿ ಮಾನವ ಸಂಪನ್ಮೂಲದ ಅಭಿವೃದ್ಧಿ ಮತ್ತು ನಿರ್ವಹಣೆ, ಕಾರ್ಮಿಕ ಕಲ್ಯಾಣ, ಗ್ರಾಮೀಣಾಭಿವೃದ್ಧಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ, ಸಮುದಾಯದ ಅಭಿವೃದ್ಧಿ ಇತ್ಯಾದಿ ವಲಯಗಳಲ್ಲಿ ವ್ಯಾಪಕವಾದ ಉದ್ಯೋಗಾವಕಾಶಗಳಿವೆ.
4. ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದಲ್ಲಿ ಪದವಿ ಪಡೆದರೆ ಸರ್ಕಾರಿ ಕೆಲಸಕ್ಕೆ ಅರ್ಜಿ ಸಲ್ಲಿಸಲು ಅರ್ಹರೇ? ಹಾಗೂ ಈ ವಿಶ್ವವಿದ್ಯಾಲಯದ ಮಾನ್ಯತೆ ಬಗ್ಗೆ ತಿಳಿಸಿ.
–ಮೃತ್ಯುಂಜಯ ಕಬ್ಬೂರ, ಧಾರವಾಡ
ವಿಶ್ವವಿದ್ಯಾಲಯದ ಧನಸಹಾಯ ಆಯೋಗ (ಯುಜಿಸಿ) ನಿಯಮದ ಪ್ರಕಾರ ರಾಷ್ಟ್ರೀಯ ಮೌಲ್ಯಾಂಕನ ಮತ್ತು ಮಾನ್ಯತಾ ಮಂಡಳಿ (ನ್ಯಾಕ್), ಶ್ರೇಣಿಯ ಮಾನ್ಯತೆ ಪಡೆದಿರುವ ಎಲ್ಲ ವಿಶ್ವವಿದ್ಯಾಲಯಗಳಿಗೂ ದೂರ ಶಿಕ್ಷಣ ಕೋರ್ಸ್ ಆರಂಭಿಸಲು ಅನುಮತಿ ನೀಡುತ್ತದೆ ಮತ್ತು ಮಾನ್ಯತೆ ಪಡೆದ ಕೋರ್ಸ್ ಪರೀಕ್ಷೆಯಲ್ಲಿ ಉತ್ತೀರ್ಣರಾದ ನಂತರ ಸರ್ಕಾರಿ ಉದ್ಯೋಗಗಳಿಗೆ ಅರ್ಹತೆ ಸಿಗುತ್ತದೆ. ಹಾಗಾಗಿ, ವಿಶ್ವವಿದ್ಯಾಲಯಗಳು ದೂರ ಶಿಕ್ಷಣ ಮತ್ತು ಆನ್‌ಲೈನ್ ಮೂಲಕ ನಡೆಸುವ ಕೋರ್ಸ್‌ಗಳಿಗೆ ದೂರ ಶಿಕ್ಷಣ ಬ್ಯೂರೊ, ಯುಜಿಸಿ ಮಾನ್ಯತೆಯನ್ನು ಪಡೆದಿರಬೇಕು.
ಪ್ರತಿ ಶೈಕ್ಷಣಿಕ ವರ್ಷಕ್ಕೆ ಅನುಗುಣವಾಗುವಂತೆ ಮಾನ್ಯತೆ ಪಡೆದಿರುವ ಕೋರ್ಸ್‌ಗಳ ಪಟ್ಟಿಯನ್ನು ದೂರ ಶಿಕ್ಷಣ ಬ್ಯೂರೊ, ಯುಜಿಸಿ ಸಂಸ್ಥೆಯ ಜಾಲತಾಣದಲ್ಲಿ ಪ್ರಕಟಿಸುತ್ತದೆ. ಈ ಜಾಲತಾಣದಲ್ಲಿ ಕಳೆದ ಹಲವು ವರ್ಷಗಳಿಗೆ ಅನ್ವಯವಾಗುವ ಮಾನ್ಯತೆ ಪಡೆದ ಕೋರ್ಸ್‌ಗಳ ಮಾಹಿತಿಯೂ ಲಭ್ಯ. ಉದಾಹರಣೆಗೆ 2022-23ನೇ ಶೈಕ್ಷಣಿಕ ವರ್ಷದಲ್ಲಿ, ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ 9 ಪದವಿ ಕೋರ್ಸ್‌ಗಳಿಗೂ ಮತ್ತು 33 ಸ್ನಾತಕೋತ್ತರ ಪದವಿ ಕೋರ್ಸ್‌ಗಳಿಗೂ ಮಾನ್ಯತೆ ನೀಡಲಾಗಿದೆ.
ಹಾಗಾಗಿ, ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯ ಅಥವಾ ಯಾವುದೇ ವಿಶ್ವವಿದ್ಯಾಲಯದ ದೂರ ಶಿಕ್ಷಣ/ಆನ್‌ಲೈನ್ ಕೋರ್ಸ್ ಸೇರುವ ಮೊದಲು ಈ ಜಾಲತಾಣದಲ್ಲಿನ ಮಾಹಿತಿಯನ್ನು ಪರಾಮರ್ಶಿಸಿ: https://deb.ugc.ac.in/Search/preview?id=HEI-U-0228
5. ಪ್ರಸ್ತುತ ನಾನು ಪೊಲೀಸ್ ಕಾನ್‌ಸ್ಟೆಬಲ್ ಹುದ್ದೆಯಲ್ಲಿದ್ದೇನೆ. 2020ರಲ್ಲಿ ಬಿ.ಇಡಿ ನಾಲ್ಕನೇ ಸೆಮಿಸ್ಟರ್ ಓದುವಾಗ ಪೊಲೀಸ್ ಕೆಲಸ ಸಿಕ್ಕಿತು. ಪೊಲೀಸ್ ತರಬೇತಿಯಲ್ಲಿದ್ದಾಗ ಕೋವಿಡ್ ಕಾರಣದಿಂದ ಅಂತಿಮ ಸೆಮಿಸ್ಟರ್ ಪರೀಕ್ಷೆ ಬರೆಯಲು ಆಗಲಿಲ್ಲ. ಆದರೆ, 2022 ವರ್ಷದಲ್ಲಿ ಅಂತಿಮ ಸೆಮಿಸ್ಟರ್‌ನಲ್ಲಿ ಉತ್ತೀರ್ಣನಾಗಿರುತ್ತೇನೆ. ಹಾಗಾದರೆ, ನನ್ನ ಬಿ.ಇಡಿ ಪದವಿ ಸರಿಯಾಗಿದೆಯೇ? ನಾನು ಶಿಕ್ಷಕರ ಅರ್ಹತಾ ಪರೀಕ್ಷೆ ಬರೆಯಬಹುದೇ ತಿಳಿಸಿ?
-ಶಿವು, ಬೆಂಗಳೂರು
ನೀವು ನೀಡಿರುವ ಮಾಹಿತಿಯಂತೆ ಬಿ.ಇಡಿ ಅಂತಿಮ ಸೆಮಿಸ್ಟರ್ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದೀರಿ. ಹಾಗಾಗಿ, ನೀವು ಶಿಕ್ಷಕರ ಅರ್ಹತಾ ಪರೀಕ್ಷೆಯನ್ನುಬರೆಯಬಹುದು.
6. ಕರ್ನಾಟಕದಲ್ಲಿನ ಲ್ಯಾಂಡ್ ಸರ್ವೆ ಕೋರ್ಸ್ ಕಲಿಸುವ ಐಟಿಐ ಕಾಲೇಜುಗಳ ಮಾಹಿತಿ ಮತ್ತು ಆ ಕಲಿಕೆಯಿಂದ ದೊರೆಯಬಹುದಾದ ಉದ್ಯೋಗಾವಕಾಶಗಳ ಬಗ್ಗೆ ತಿಳಿಸಿಕೊಡಿ.
-ನಂಜಪ್ಪ, ಸೊಂಡೇಕೊಪ್ಪ
ಕರ್ನಾಟಕದ ಐಟಿಐ ಕಾಲೇಜುಗಳು ನಡೆಸುವ ಸರ್ವೆಯರ್ ಡಿಪ್ಲೊಮಾ ಕೋರ್ಸ್ ಎರಡು ವರ್ಷದ್ದಾಗಿರುತ್ತದೆ. ಕೋರ್ಸ್ ನಂತರ ಸರ್ಕಾರದ ಲೋಕೋಪಯೋಗಿ ಇಲಾಖೆಗಳು, ಮೂಲಸೌಕರ್ಯ ಅಭಿವೃದ್ಧಿಸಂಸ್ಥೆಗಳು, ರಾಷ್ಟ್ರೀಯ ಹೆದ್ದಾರಿ ನಿರ್ಮಾಣ ಸಂಸ್ಥೆಗಳು, ರಿಯಲ್ ಎಸ್ಟೇಟ್ ಕಂಪನಿಗಳು ಇತ್ಯಾದಿ ಕ್ಷೇತ್ರಗಳಲ್ಲಿ ಉದ್ಯೋಗಾವಕಾಶಗಳಿವೆ.ಹೆಚ್ಚಿನ ಮಾಹಿತಿಗಾಗಿ ಗಮನಿಸಿ: http://emptrg.kar.nic.in/ITI/
7. ನಾನು ಬಿಕಾಂ 2ನೇ ವರ್ಷ ಓದುತ್ತಿದ್ದು ಈಗಿನಿಂದಲೇ ಐಎಎಸ್‌ಗೆ ತಯಾರಿ ಪ್ರಾರಂಭಿಸಬೇಕು ಎಂದುಕೊಂಡಿದ್ದೇನೆ. ಇದಕ್ಕೆ ಕೋಚಿಂಗ್ ಅವಶ್ಯಕತೆ ಇದೆಯೇ?
-ಪ್ರಶಾಂತ ಗಾಂಜಿ, ತಾವರಗೇರಾ
ಸ್ಪರ್ಧಾತ್ಮಕ ಪರೀಕ್ಷೆಗೆ ಸ್ವಯಂ ಅಧ್ಯಯನದಿಂದ ತಯಾರಾಗುವುದೇ ಅಥವಾ ಕೋಚಿಂಗ್ ಸೆಂಟರ್ ಸೇರಬೇಕೇ ಎನ್ನುವುದು ಕ್ಲಿಷ್ಟವಾದ ಆಯ್ಕೆ. ಎರಡೂ ಬಗೆಯ ಪ್ರಯತ್ನಗಳಿಂದ ಇಂತಹ ಪರೀಕ್ಷೆಗಳಲ್ಲಿಯಶಸ್ವಿಯಾದವರು ಇರುವುದರಿಂದ ಈ ಗೊಂದಲ ಸಹಜ. ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಯಶಸ್ಸನ್ನು ಗಳಿಸಲು ಯೋಜನಾ ಶಕ್ತಿ, ಏಕಾಗ್ರತೆ, ಪರಿಶ್ರಮ, ಸಮಯದ ನಿರ್ವಹಣೆ, ನಿರಂತರ ಅಭ್ಯಾಸ, ಪರಿಣಾಮಕಾರಿ ಓದುವಿಕೆ ಮತ್ತು ಮಾರ್ಗದರ್ಶನವಿರಬೇಕು. ಇವೆಲ್ಲವನ್ನೂ ಸಮರ್ಥವಾಗಿ ನಿಭಾಯಿಸುವ ಶಕ್ತಿಯಿದ್ದರೆ ಸ್ವಯಂ-ಅಧ್ಯಯನದಿಂದಲೂ ಯಶಸ್ಸನ್ನು ಗಳಿಸಬಹುದು. ಹಾಗಾಗಿ, ಅಂತಿಮ ನಿರ್ಧಾರ ನಿಮ್ಮದು. ಹೆಚ್ಚಿನ ಮಾರ್ಗದರ್ಶನಕ್ಕಾಗಿ ಈ ವಿಡಿಯೊ ವೀಕ್ಷಿಸಿ:https://www.youtube.com/watch?v=3PzmKRaJHmk
8. ನಾನು ಬಿಎಸ್ಸಿ ಪದವಿ ಮುಗಿಸಿದ್ದೇನೆ. ಮುಂದೆ ಯಾವ ಕೆಲಸಗಳಿಗೆ ಅರ್ಜಿ ಸಲ್ಲಿಸಬಹುದು ಅಂತ ತಿಳಿಸಿ.
-ಹೆಸರು ತಿಳಿಸಿಲ್ಲ, ರಾಯಚೂರು
ನೀವು ಯಾವ ವಿಭಾಗದಲ್ಲಿ ಬಿಎಸ್ಸಿ ಮಾಡಿದ್ದೀರಿ ಎಂದು ತಿಳಿಸಿಲ್ಲ. ಸುಮಾರು ನೂರಕ್ಕೂ ಹೆಚ್ಚಿನ ವಿಭಾಗಗಳಲ್ಲಿ ಬಿಎಸ್ಸಿ ಕೋರ್ಸ್ ಮಾಡಬಹುದು. ಉದಾಹರಣೆಗೆ, ಬಿಎಸ್ಸಿ (ಹಲವು ವಿಷಯಗಳಲ್ಲಿ), ಬಿಎಸ್ಸಿ (ಆನರ್ಸ್), ಬಿಎಸ್ಸಿ (ಕಂಪ್ಯೂಟರ್ ಸೈನ್ಸ್), ಬಿಎಸ್ಸಿ (ಕೃಷಿ), ಬಿಎಸ್ಸಿ (ಡೇಟಾ ಸೈನ್ಸ್), ಬಿಎಸ್ಸಿ (ಪರಿಸರ ವಿಜ್ಞಾನ), ಬಿಎಸ್ಸಿ (ಪ್ಯಾರಾ ಮೆಡಿಕಲ್) ಇತ್ಯಾದಿ. ಬಿಎಸ್ಸಿ ಪದವಿಯ ವಿಭಾಗಗಳ ಆಧಾರದ ಮೇಲೆ ಆಯಾ ಕ್ಷೇತ್ರಗಳಲ್ಲಿ ವ್ಯಾಪಕವಾದ ಉದ್ಯೋಗಾವಕಾಶಗಳಿವೆ. ಹೆಚ್ಚಿನ ಮಾರ್ಗದರ್ಶನ ಅಗತ್ಯವೆನಿಸಿದರೆ ಈ ಅಂಕಣದ ಮೂಲಕ ನಮ್ಮನ್ನು ಸಂಪರ್ಕಿಸಿ.
***
ವಿದ್ಯಾರ್ಥಿಗಳೇ, ನಿಮ್ಮ ಮುಂದಿನ ಕೋರ್ಸ್ ಮತ್ತು ಸೂಕ್ತವಾದ ವೃತ್ತಿಯ ಆಯ್ಕೆ ಹಾಗೂ ಭವಿಷ್ಯವನ್ನು ರೂಪಿಸಿಕೊಳ್ಳುವ ಬಗ್ಗೆ ಗೊಂದಲಗಳಿವೆಯೇ? ಹಾಗಿದ್ದರೆ ನಮಗೆ ಬರೆಯಿರಿ. ನಿಮ್ಮ ಪ್ರಶ್ನೆಗಳಿಗೆ ಶಿಕ್ಷಣತಜ್ಞ ಮತ್ತು ವೃತ್ತಿ ಸಲಹೆಗಾರ ವಿ. ಪ್ರದೀಪ್ ಕುಮಾರ್ ಉತ್ತರಿಸಲಿದ್ದಾರೆ. ಪ್ರಶ್ನೆಗಳನ್ನು shikshana@prajavani.co.in ಗೆ ಕಳಿಸಬಹುದು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.