ADVERTISEMENT

ನಿಮ್ಮ ಪ್ರಶ್ನೆಗೆ ತಜ್ಞರ ಉತ್ತರ: ವೈದ್ಯಕೀಯ ಕ್ಷೇತ್ರದಲ್ಲಿ ವಿಧ ವಿಧ ಕೋರ್ಸ್‌ಗಳು

ವಿ. ಪ್ರದೀಪ್ ಕುಮಾರ್ ಅವರ ಅಂಕಣ

ವಿ.ಪ್ರದೀಪ್ ಕುಮಾರ್
Published 18 ಜೂನ್ 2023, 23:52 IST
Last Updated 18 ಜೂನ್ 2023, 23:52 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

1. ಬಿಎಎಂಎಸ್ ಮತ್ತು ಬಿ.ಎಸ್ಸಿ (ಕೃಷಿ) ಕೋರ್ಸ್‌ ಪೂರ್ಣಗೊಳಿಸಿದವರಿಗೆ ಭವಿಷ್ಯದಲ್ಲಿ ಉದ್ಯೋಗ ಮತ್ತು ಉನ್ನತ ಶಿಕ್ಷಣ ಅಧ್ಯಯನಕ್ಕೆ ಅವಕಾಶಗಳ ಹೇಗಿದೆ ?

-ವಿಘ್ನೇಶ್ ಆರ್‌.ಜೆ, ಮೈಸೂರು.

ಉತ್ತರ: ಹೆಚ್ಚುತ್ತಿರುವ ಪರಿಸರ ಮಾಲಿನ್ಯ, ನೈಸರ್ಗಿಕ ವಿಪತ್ತುಗಳು ಮತ್ತು ಪಿಡುಗುಗಳ ಜೊತೆಗೆ ಜಗತ್ತಿನ ಜನಸಂಖ್ಯೆಯಲ್ಲಿ ವಯಸ್ಸಾದವರ ಪ್ರಮಾಣ ಹೆಚ್ಚುತ್ತಿದೆ. ಹೀಗಾಗಿ ಆರೋಗ್ಯಕ್ಕೆ ಸಂಬಂಧಿಸಿದ ಎಲ್ಲಾ ಕ್ಷೇತ್ರಗಳಿಗೂ ಭವಿಷ್ಯದಲ್ಲಿ ಇನ್ನೂ ಹೆಚ್ಚಿನ ಪ್ರಾಮುಖ್ಯತೆ ಇರುತ್ತದೆ. ಹಾಗಾಗಿ, ಬಿಎಎಂಎಸ್ (ಬ್ಯಾಚುಲರ್‌ ಆಫ್‌ ಆಯುರ್ವೇದಿಕ್ ಮೆಡಿಸಿನ್ ಅಂಡ್ ಸರ್ಜರಿ) ಕೋರ್ಸ್‌ಗೆ ಭವಿಷ್ಯದಲ್ಲಿಯೂ ಬೇಡಿಕೆ ನಿರೀಕ್ಷಿಸಬಹುದು. ಈ  ಕೋರ್ಸ್ ನಂತರ, ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ವೈದ್ಯರಾಗಬಹುದು. ಹಲವಾರು ವರ್ಷಗಳ ಅನುಭವದ ನಂತರ ಖುದ್ದಾಗಿ ಪ್ರಾಕ್ಟೀಸ್ ಮಾಡಬಹುದು. ಹೆಚ್ಚಿನ ತಜ್ಞತೆಗಾಗಿ, ಎಂ.ಎಸ್ (ಆಯುರ್ವೇದ) ಮಾಡಬಹುದು.

ADVERTISEMENT

ನಮ್ಮ ದೇಶದ ಒಟ್ಟು ದೇಶೀಯ ಉತ್ಪನ್ನದಲ್ಲಿ (ಜಿಡಿಪಿ) ಕೃಷಿ ಮತ್ತು ಸಂಬಂಧಿತ ವಲಯದ ಕೊಡುಗೆ ಶೇ 20ರಷ್ಟಿದೆ. ಇದಲ್ಲದೆ, ಬೆಳೆಗಳ ಹಾಳಾಗುವಿಕೆ, ಪ್ರವಾಹ, ಕೀಟಗಳು, ರೋಗಗಳು ಇತ್ಯಾದಿ ಕಾರಣಗಳಿಂದ ಪ್ರತಿ ವರ್ಷ ಸುಮಾರು ಶೇ 20ಕ್ಕೂ ಹೆಚ್ಚು ಬೆಳೆ ನಾಶವಾಗುತ್ತಿದೆ. ಹಾಗಾಗಿ, ಕೃಷಿ ಸಂಬಂಧಿತ ಆಧುನಿಕ ತಂತ್ರಜ್ಞಾನದ ಬಳಕೆಯಿಂದ ಅಧಿಕ ಇಳುವರಿ, ಸಮಯದ ಉಳಿತಾಯ, ಉತ್ಪಾದನಾ ವೆಚ್ಚದ ಕಡಿತ, ಉತ್ಪನ್ನಗಳ ಸಂರಕ್ಷಣೆ, ಸಾಗಣೆ ಮತ್ತು ಮಾರಾಟ ನಿರ್ವಹಣೆ ಕುರಿತ ಅತ್ಯಂತ ಉಪಯುಕ್ತ ಮಾಹಿತಿಯನ್ನು ಬಿ.ಎಸ್ಸಿ (ಕೃಷಿ) ಕೋರ್ಸ್‌ನಲ್ಲಿ ನೀಡಲಾಗುತ್ತದೆ. ಹಾಗಾಗಿ, ಈ ಕೋರ್ಸ್ ಮಾಡಿರುವ ಪದವೀಧರರಿಗೆ ಹೆಚ್ಚಿನ ಬೇಡಿಕೆ  ನಿರೀಕ್ಷಿಸಬಹುದು.

ಈ ಕೋರ್ಸ್ ನಂತರ ಸರ್ಕಾರಿ ಮತ್ತು ಖಾಸಗಿ ಕ್ಷೇತ್ರದ ಕೃಷಿ ಉದ್ದಿಮೆಗಳು, ಆಹಾರ ಸಂಬಂಧಿತ ಉದ್ದಿಮೆಗಳು, ಸಾವಯವ ಆಹಾರ ಉತ್ಪಾದನಾ ಘಟಕಗಳು, ರಸಗೊಬ್ಬರ ಮತ್ತು ಕೀಟನಾಶಕ ಸಂಸ್ಥೆಗಳು, ಕೃಷಿ ಯಂತ್ರೋಪಕರಣಗಳು, ಬ್ಯಾಂಕಿಂಗ್, ಸಂಶೋಧನಾ ಸಂಸ್ಥೆಗಳು, ಪ್ರಯೋಗಾಲಯಗಳು ಸೇರಿದಂತೆ ಅನೇಕ ಕ್ಷೇತ್ರಗಳಲ್ಲಿ ಉದ್ಯೋಗಾವಕಾಶಗಳಿವೆ. ಉನ್ನತ ಶಿಕ್ಷಣಕ್ಕಾಗಿ, ಎಂ.ಎಸ್ಸಿ/ಪಿಎಚ್.ಡಿ ಮಾಡಬಹುದು. ಹಾಗೂ ನಿಮಗೆ ಅಭಿರುಚಿಯಿದ್ದಲ್ಲಿ, ಜ್ಞಾನ ಮತ್ತು ಕೌಶಲಗಳ ಸದುಪಯೋಗದಿಂದ ಸ್ವಂತ ಕೃಷಿ ಆರಂಭಿಸಿ, ಪ್ರಯೋಗಶೀಲ ರೈತರಾಗಿ, ನಾಡಿನ ಇನ್ನಿತರ ರೈತರಿಗೂ ಮಾದರಿಯಾಗಬಹುದು.

ನಿಮ್ಮ ಅಭಿರುಚಿ ಮತ್ತು ಸ್ವಾಭಾವಿಕ ಪ್ರತಿಭೆಗೆ ಅನುಗುಣವಾಗಿ, ಮೊದಲು ವೃತ್ತಿಯ ಆಯ್ಕೆ ಮಾಡಿ ಅದರಂತೆ ಕೋರ್ಸ್ ಆಯ್ಕೆ ಇರಲಿ. ಹೆಚ್ಚಿನ ಮಾರ್ಗದರ್ಶನಕ್ಕಾಗಿ ಈ ವಿಡಿಯೊ ವೀಕ್ಷಿಸಿ: https://www.youtube.com/watch?v=MHnPg_sp6E0 

2. ನಾನು ಪಿಯುಸಿ ಪೂರ್ಣಗೊಳಿಸಿದ್ದೇನೆ. ನನಗೆ ನರ್ಸಿಂಗ್ ಮತ್ತು ಎಂಜಿನಿಯರಿಂಗ್ ಕೋರ್ಸ್‌ಗಳ ಬಗ್ಗೆ ಮಾಹಿತಿ ಬೇಕಿದೆ. ಹೆಣ್ಣು ಮಕ್ಕಳಿಗೆ ಯಾವುದು ಕೋರ್ಸ್‌ ಸೂಕ್ತ?

ಹೆಸರು, ಊರು ತಿಳಿಸಿಲ್ಲ.

ಉತ್ತರ: ವೃತ್ತಿ/ಕೋರ್ಸ್ ಆಯ್ಕೆ ಮಾಡುವಾಗ ಲಿಂಗ ತಾರತಮ್ಯವಿಲ್ಲದೆ ಸ್ವಾಭಾವಿಕ ಪ್ರತಿಭೆ, ಆಸಕ್ತಿ, ಸಾಮರ್ಥ್ಯ, ಕೌಶಲಗಳು ಪ್ರಮುಖ ಆಧಾರಗಳಾಗಿರಬೇಕು. ನೀವು ಪರಿಶೀಲಿಸುತ್ತಿರುವ ಎರಡೂ ವೃತ್ತಿಗಳ ಯಶಸ್ಸಿಗೆ ಬೇಕಾಗುವ ಜ್ಞಾನ, ಆಸಕ್ತಿ, ಅಭಿರುಚಿ, ಸಾಮರ್ಥ್ಯ ಮತ್ತು ಕೌಶಲಗಳ ದೃಷ್ಟಿಯಿಂದ ವಿಭಿನ್ನ. ನರ್ಸಿಂಗ್ ವೃತ್ತಿಯಲ್ಲಿ ಯಶಸ್ವಿಯಾಗಲು ಸೇವಾ ಮನೋಭಾವ, ಅನುಭೂತಿ, ನಿಷ್ಠೆ, ಪ್ರಾಮಾಣಿಕತೆ, ಸಮಯ ಪ್ರಜ್ಞೆ ಇತ್ಯಾದಿಗಳ ಅವಶ್ಯಕತೆ ಇದೆ. ಹಾಗೆಯೇ, ಎಂಜಿನಿಯರಿಂಗ್ ವೃತ್ತಿಗೆ ಗಣಿತದಲ್ಲಿ ತಜ್ಞತೆ, ವಿಶ್ಲೇಷಾತ್ಮಕ ಕೌಶಲ, ಯೋಜನೆಯ ನಿರ್ವಹಣೆ, ತಾಂತ್ರಿಕ ಕೌಶಲ ಇತ್ಯಾದಿಗಳಿರಬೇಕು. ಆದ್ದರಿಂದ, ನಿಮಗೆ ಸೂಕ್ತವೆನಿಸುವ ವೃತ್ತಿ/ಕೋರ್ಸ್ ಆಯ್ಕೆ ಮಾಡುವುದು ಸೂಕ್ತ.

ಪಿಯುಸಿ ನಂತರ ಬಿ.ಎಸ್ಸಿ (ನರ್ಸಿಂಗ್) ಕೋರ್ಸ್ ಮಾಡಲು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಆಯೋಜಿಸುವ ಪ್ರವೇಶ ಪರೀಕ್ಷೆ ಈಗ ಕಡ್ಡಾಯವಾಗಿದೆ ಎನ್ನುವುದು ನಿಮ್ಮ ಗಮನದಲ್ಲಿರಲಿ. ಪಿಯುಸಿ ನಂತರದ ಕೋರ್ಸ್ ಆಯ್ಕೆಗಳ ಮಾಹಿತಿಗಾಗಿ ಈ ವಿಡಿಯೊ ವೀಕ್ಷಿಸಿ: https://www.youtube.com/watch?v=ChvTG9rg33A 

3. ನಾನು ಪಿಯುಸಿ ಮುಗಿಸಿ ವೈದ್ಯಕೀಯ ಕ್ಷೇತ್ರಕ್ಕೆ ಹೋಗಬೇಕೆಂದುಕೊಂಡಿದ್ದೇನೆ. ಬಿ.ಎಸ್ಸಿಯಲ್ಲಿ ಯಾವ ಕೋರ್ಸ್ ತೆಗೆದುಕೊಳ್ಳಬೇಕು?

ಹೆಸರು, ಊರು ತಿಳಿಸಿಲ್ಲ.

ಉತ್ತರ: ಪಿಯುಸಿ ನಂತರ ಫಾರ್ಮಸಿ, ಆರೋಗ್ಯ ಮತ್ತು ಸ್ವಾಸ್ಥ್ಯ ಕ್ಷೇತ್ರದಲ್ಲಿ ವೃತ್ತಿಯನ್ನು ಅರಸಲು ಎಂಬಿಬಿಎಸ್, ಬಿಡಿಎಸ್, ಆಯುರ್ವೇದ, ನ್ಯಾಚುರೋಪತಿ ಅಲ್ಲದೆ ಹಲವಾರು ವೈವಿಧ್ಯಮಯ ಅವಕಾಶಗಳಿವೆ.

• ಪ್ಯಾರಮೆಡಿಕಲ್/ಇನ್ನಿತರ ಕೋರ್ಸ್‌ಗಳು: ಬಿ.ಎಸ್ಸಿ ಕೋರ್ಸ್‌ನ್ನು ಮೆಡಿಕಲ್ ಸೈನ್ಸ್, ಲ್ಯಾಬೋರೇಟರಿ ಟೆಕ್ನಾಲಜಿ, ಇಮೇಜಿಂಗ್ ಟೆಕ್ನಾಲಜಿ, ಅನಸ್ಥೇಶಿಯ ಟೆಕ್ನಾಲಜಿ, ಆಪರೇಷನ್ ಥಿಯೇಟರ್ ಟೆಕ್ನಾಲಜಿ, ಡಯಾಲಿಸಿಸ್ ಟೆಕ್ನಾಲಜಿ, ಹಾಸ್ಪಿಟಲ್ ಮ್ಯಾನೇಜ್‌ಮೆಂಟ್, ರೇಡಿಯಾಲಜಿ, ನ್ಯೂಕ್ಲಿಯರ್ ಮೆಡಿಸಿನ್ ಟೆಕ್ನಾಲಜಿ, ಕಾರ್ಡಿಯಾಕ್ ಟೆಕ್ನಾಲಜಿ, ನರ್ಸಿಂಗ್, ಡಯಟಿಕ್ಸ್, ಫಿಸಿಯೋತೆರಪಿ, ಸ್ಪೋರ್ಟ್ಸ್ ಸೈನ್ಸ್ ಮುಂತಾದ ವಿಭಾಗಗಳಲ್ಲಿ ಮಾಡಬಹುದು.

• ಫಾರ್ಮಾ: ಬಿ.ಫಾರ್ಮಾ ಕೋರ್ಸ್ ರಾಸಾಯನಿಕ ವಿಜ್ಞಾನ, ಆರೋಗ್ಯ, ಔಷದೋಪಚಾರ ಮತ್ತು ಸ್ವಾಸ್ಥ್ಯಕ್ಕೆ ಸಂಬಂಧಿಸಿದ ಬೇಡಿಕೆಯಲ್ಲಿರುವ ಕ್ಷೇತ್ರ. ಈ ಪದವಿಯ ನಂತರ ಸರ್ಕಾರಿ ಮತ್ತು ಖಾಸಗಿ ವಲಯದ ಆಸ್ಪತ್ರೆಗಳು, ಫಾರ್ಮಾ ಕಂಪನಿಗಳು, ಸಂಶೋಧನಾ ಸಂಸ್ಥೆಗಳು, ಆರೋಗ್ಯ ಮತ್ತು ಡ್ರಗ್ ಕಂಟ್ರೋಲ್ ಇಲಾಖೆಗಳು, ಲ್ಯಾಬೋರೇಟರಿಗಳು, ಕಾಲೇಜುಗಳು, ಮೆಡಿಕಲ್ ಟ್ರಾನ್ಸ್ಕ್ರಿಪ್ಷನ್‌ ಸಂಸ್ಥೆಗಳು ಸೇರಿದಂತೆ ಅನೇಕ ಕ್ಷೇತ್ರಗಳಲ್ಲಿ ವೃತ್ತಿಯ ಅವಕಾಶಗಳಿವೆ

• ವಿಜ್ಞಾನ, ಅನ್ವಯಿಕ ವಿಜ್ಞಾನ ಮತ್ತು ಸಂಶೋಧನೆ: ಈ ಕ್ಷೇತ್ರಗಳಲ್ಲಿ ಆಸಕ್ತಿಯಿದ್ದರೆ ಬಿ.ಎಸ್ಸಿ ಕೋರ್ಸನ್ನು ಜೀವವಿಜ್ಞಾನ, ಬಯೋಕೆಮಿಸ್ಟ್ರಿ, ಬಯೋಟೆಕ್ನಾಲಜಿ, ಬಯೋಇನ್‌ಫರ್‌ಮೇಟಿಕ್ಸ್, ಮೈಕ್ರೊಬಯಾಲಜಿ, ಕ್ಲಿನಿಕಲ್ ರಿಸರ್ಚ್, ಜೆನೆಟಿಕ್ಸ್, ಸೈಕಾಲಜಿ, ಕ್ರಿಮಿನಾಲಜಿ, ಫೊರೆನ್ಸಿಕ್ ಸೈನ್ಸ್, ಕೌನ್ಸೆಲಿಂಗ್, ಪರಿಸರ ವಿಜ್ಞಾನ ಮುಂತಾದ ಕ್ಷೇತ್ರಗಳಲ್ಲಿ ಮಾಡಿ ವೃತ್ತಿಯನ್ನು ಅರಸಬಹುದು. ಹೆಚ್ಚಿನ ತಜ್ಞತೆಗಾಗಿ, ಎಂ.ಎಸ್ಸಿ/ಪಿಎಚ್.ಡಿ ಮಾಡಬಹುದು.

4. ನಾನು ಎಂಬಿಬಿಎಸ್ ಮಾಡಿ ವೈದ್ಯಳಾಗಬೇಕೆಂದಿದ್ದೆ. ಆದರೆ, ಈ ವರ್ಷದ ನೀಟ್ ಪರೀಕ್ಷೆಯಲ್ಲಿ 100 ಅಂಕಗಳಷ್ಟೇ ಬಂದಿದೆ. ನಾನು ಯಾವುದೇ ಕೋಚಿಂಗ್ ಪಡೆಯಲಿಲ್ಲ. ಹಾಗಾಗಿ, ಈ ವರ್ಷ ಸಂಪೂರ್ಣವಾಗಿ ನೀಟ್ ಪರೀಕ್ಷೆಗೆ ತಯಾರಿ ನಡೆಸಬಹುದೇ ಎಂದು ಯೋಚಿಸು ತ್ತಿದ್ದೇನೆ. ಈ ನಿರ್ಧಾರ ಸರಿಯೇ ಅಥವಾ ಬೇರೆ ಯಾವ ಕೋರ್ಸ್ ಮಾಡಬಹುದು? ಬೆಂಗಳೂರಿನ ಯಾವ ಕೋಚಿಂಗ್ ಸೆಂಟರ್ ಉತ್ತಮ ಆಯ್ಕೆ? ನಿಮ್ಮ ಮಾರ್ಗದರ್ಶನದ ಅಗತ್ಯವಿದೆ.

ಅಮೃತಾ ಎಸ್. ಊರು ತಿಳಿಸಿಲ್ಲ.

ಉತ್ತರ: ನೀಟ್ ಪರೀಕ್ಷೆಯಲ್ಲಿ ನಿರೀಕ್ಷಿತ ಫಲಿತಾಂಶ ಬರಲಿಲ್ಲವೆಂದು ಎದೆಗುಂದದೆ, ಭವಿಷ್ಯದ ಕನಸುಗಳನ್ನು ಸಾಕಾರಗೊಳಿಸಲು, ಸ್ವಯಂಪ್ರೇರಣೆಯೇ ನಿಮ್ಮ ಸಾಧನೆಗೆ ಸಂಜೀವಿನಿಯಾಗಬೇಕು.

ಮೊದಲಿಗೆ, ಅರ್ಹತಾ ಪರೀಕ್ಷೆಯಲ್ಲಿ ಉತ್ತಮ ಅಂಕಗಳನ್ನು ಪಡೆದರೂ ನೀಟ್ ಪರೀಕ್ಷೆಯಲ್ಲಿ ಕಡಿಮೆ ಅಂಕಗಳು ಬಂದಿರುವುದಕ್ಕೆ ಕಾರಣಗಳನ್ನು ವಿಶ್ಲೇಷಿಸಬೇಕು. ಹಾಗಾಗಿ, ಈ ಸಾಧ್ಯತೆಗಳನ್ನು ಪರಿಶೀಲಿಸಿ:

• ಅರ್ಹತಾ ಪರೀಕ್ಷೆ ಮತ್ತು ನೀಟ್ ಪರೀಕ್ಷೆಗಳ ನಡುವೆ ಸಮತೋಲನದ ಕೊರತೆ.
• ವಿಶೇಷವಾಗಿ, ನೀಟ್ ಪರೀಕ್ಷೆಯ ತಯಾರಿಗೆ ಅಗತ್ಯವಾದ ಏಕಾಗ್ರತೆ, ಇನ್ನಿತರ ಕೊರತೆಗಳು.
• ನೀಟ್ ಅಣಕು ಪರೀಕ್ಷೆಯ ಅಂಕಗಳು ಮತ್ತು ಅಂತಿಮ ಪರೀಕ್ಷೆಯ ಅಂಕಗಳ ವ್ಯತ್ಯಾಸಗಳು.
• ನೀಟ್ ಪರೀಕ್ಷೆಯಲ್ಲಿ ಉತ್ತರಿಸಿರದ ಪ್ರಶ್ನೆಗಳ ಸಂಖ್ಯೆ ಮತ್ತು ತಪ್ಪು ಉತ್ತರಗಳಿಂದ ಬಂದಿರಬಹುದಾದ ಋಣಾತ್ಮಕ ಅಂಕಗಳ ಪರಿಣಾಮ.

ಎಂಬಿಬಿಎಸ್ ಮಾಡಿ ವೈದ್ಯಳೇ ಆಗಬೇಕು ಎನ್ನುವುದಾದರೆ, ಈಗಲೂ ಅವಕಾಶವಿದೆ. ಈ ವರ್ಷದ ನೀಟ್ ಪರೀಕ್ಷೆಯ ವಿಶ್ಲೇಷಣೆಯನ್ನು ಆಧರಿಸಿ, ಸೂಕ್ತವಾದ ಕಾರ್ಯತಂತ್ರವನ್ನು ರೂಪಿಸಿ, ಮುಂದಿನ ವರ್ಷದ ನೀಟ್ ಪರೀಕ್ಷೆಗೆ ಉತ್ಸಾಹದಿಂದಲೂ, ಸಕಾರಾತ್ಮಕ ಧೋರಣೆಯಿಂದಲೂ ತಯಾರಾಗಿ. ಕೋಚಿಂಗ್ ಸೆಂಟರ್‌ಗಳ ಉಪಯುಕ್ತತೆಯನ್ನು ಅಲ್ಲಗಳೆಯಲಾಗದು. ಕೋಚಿಂಗ್ ಸೆಂಟರ್‌ಗೆ ಸೇರಬೇಕೇ ಬೇಡವೇ ಎಂಬ ನಿರ್ಧಾರ ನಿಮ್ಮದು.

ಮೆಡಿಕಲ್ ಕ್ಷೇತ್ರಕ್ಕೆ ಸಂಬಂಧಿಸಿದ ಇನ್ನಿತರ ಕೋರ್ಸ್‌ಗಳ ಬಗ್ಗೆ ಇಂದಿನ ಪ್ರಶ್ನೋತ್ತರದ ’ಪ್ರಶ್ನೆ 3ರಲ್ಲಿ ಉತ್ತರ ನೀಡಿದ್ದೇನೆ. ದಯವಿಟ್ಟು ಅದನ್ನೂ ಓದಿಕೊಳ್ಳಿ.

5. ನಾನು ಪದವಿಯನ್ನು ಮುಗಿಸಿ ಪೊಲೀಸ್ ಇಲಾಖೆಯನ್ನು ಸೇರಬೇಕೆಂದುಕೊಂಡಿದ್ದೆ. ಆದರೆ, ನನ್ನ ಎತ್ತರ ಕಡಿಮೆಯಿದೆ. ಸ್ನೇಹಿತರು ಬಿ.ಇಡಿ ಮಾಡಲು ಸಲಹೆ ನೀಡುತ್ತಿದ್ದಾರೆ. ದಾರಿ ಕಾಣದೆ ಕಂಗಾಲಾಗಿದ್ದೇನೆ. ಪರಿಹಾರ ತಿಳಿಸಿ.

ಹೆಸರು, ಊರು ತಿಳಿಸಿಲ್ಲ.

ಉತ್ತರ: ನಮ್ಮ ಬದುಕಿಗೊಂದು ಕೈಪಿಡಿ ಇಲ್ಲ; ಯಶಸ್ಸಿಗೆ ಇಂತದ್ದೇ ವೃತ್ತಿ ಮಾಡಬೇಕೆನ್ನುವ ನಿಯಮವಿಲ್ಲ. ಆದರೆ, ವೃತ್ತಿಯನ್ನು ನಮ್ಮ ಅಭಿರುಚಿಯಂತೆ, ಆಸಕ್ತಿಯಂತೆ ಆರಿಸಿ, ಪರಿಶ್ರಮದಿಂದ ಅನುಸರಿಸಿದರೆ, ಬದುಕಿನಲ್ಲಿ ಯಶಸ್ಸು, ಸಂತೃಪ್ತಿ ಸಿಗುವುದರಲ್ಲಿ ಸಂದೇಹವಿಲ್ಲ. ನೀವು ವೃತ್ತಿಯೋಜನೆಯನ್ನು ಮಾಡಿದರೆ ಮುಂದಿನ ಹಾದಿ ಸ್ಪಷ್ಟವಾಗುತ್ತದೆ. ವೃತ್ತಿಯೋಜನೆಯನ್ನು ಮಾಡುವ ಮಾರ್ಗದರ್ಶನಕ್ಕಾಗಿ ಈ

ವಿಡಿಯೊ ವೀಕ್ಷಿಸಿ: https://www.youtube.com/watch?v=oyUMPrEKPPU 

6. ನಾನು ಎಂಕಾಂ ಮುಗಿಸುತ್ತಿದ್ದು, ಪೊಲೀಸ್ ಕಾನ್‌ಸ್ಟೆಬಲ್‌ ಹುದ್ದೆಯ ಪರೀಕ್ಷೆಗೆ ತಯಾರಿ ಮಾಡುತ್ತಿದ್ದೇನೆ. ಒಂದು ವೇಳೆ, ಈ ಕೆಲಸ ಸಿಗದಿದ್ದರೆ ಮುಂದೇನು ಮಾಡಬೇಕು ತಿಳಿಯುತ್ತಿಲ್ಲ. ಪರಿಹಾರ ತಿಳಿಸಿ.

ಹೆಸರು, ಊರು ತಿಳಿಸಿಲ್ಲ.

ಉತ್ತರ: ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಾಗುವಾಗ ಸೂಕ್ತವಾದ ಕಾರ್ಯತಂತ್ರವಿರಬೇಕು; ಸಕಾರಾತ್ಮಕ ಧೋರಣೆಯಿರಬೇಕು; ಗೆಲ್ಲುವ ವಿಶ್ವಾಸವಿರಬೇಕು. ಆದ್ದರಿಂದ, ಈಗಲೇ ವೈಫಲ್ಯದ ಬಗ್ಗೆ ಯೋಚಿಸದೆ ಪರೀಕ್ಷೆಯ ಮಾದರಿ, ಪಠ್ಯಕ್ರಮವನ್ನು ಅರಿತು, ಏಕಾಗ್ರತೆಯಿಂದಲೂ, ಪರಿಶ್ರಮದಿಂದಲೂ ತಯಾರಾಗಿ. ಹಾಗೂ, ಪದವೀಧರರಾದ ನಿಮಗೆ, ಪೊಲೀಸ್ ಸಬ್ ಇನ್ಸ್ಪೆಕ್ಟರ್ ಹುದ್ದೆಯ ಅರ್ಹತೆಯೂ ಇರುತ್ತದೆ.

7. ನಾನು ಅಂತಿಮ ವರ್ಷದ ಬಿ.ಎಸ್ಸಿ ಮಾಡುತ್ತಿದ್ದು, ಮುಂದೆ ಎಂ.ಎಸ್ಸಿ ಮಾಡುವ ಆಸೆ ಇದೆ. ಸ್ನಾತಕೋತ್ತರ ಪದವಿ ಹಾಗೂ ಎನ್‌ಇಟಿ–ಕೆಎಸ್‌ಇಟಿ ಬಗ್ಗೆ ತಿಳಿಸಿ.

ಮೋಹಿತ್, ನೆಲಮಂಗಲ 

ಉತ್ತರ: ಬಿ.ಎಸ್ಸಿ ನಂತರ ನಿಮಗಿಷ್ಟವಿರುವ ವಿಷಯದಲ್ಲಿ ಎಂ.ಎಸ್ಸಿ ಮಾಡಬಹುದು. ಎಂ.ಎಸ್ಸಿ ಪದವಿಯಲ್ಲಿ ಕನಿಷ್ಠ ಶೇ 55 (ಸಾಮನ್ಯ ವರ್ಗ) ಅಂಕಗಳನ್ನು ಗಳಿಸಿದರೆ ಎನ್‌ಇಟಿ/ಕೆಎಸ್‌ಇಟಿ ಪರೀಕ್ಷೆಯನ್ನು ಬರೆಯಬಹುದು. ಅಂತಿಮ ವರ್ಷದ ಎಂ.ಎಸ್ಸಿ ಮಾಡುವಾಗಲೂ ಈ ಪರೀಕ್ಷೆಗಳಲ್ಲಿ ಭಾಗವಹಿಸಬಹುದು. ಎನ್‌ಇಟಿ ಪರೀಕ್ಷೆಯಲ್ಲಿ ಉತ್ತೀರ್ಣರಾದರೆ, ದೇಶದ ಯಾವುದೇ ಕಾಲೇಜು/ವಿಶ್ವವಿದ್ಯಾಲಯಗಳಲ್ಲಿ ಉಪನ್ಯಾಸಕರಾಗಬಹುದು; ಕೆಎಸ್‌ಇಟಿ ಪರೀಕ್ಷೆಯ ಮೂಲಕ ರಾಜ್ಯದ ಕಾಲೇಜು/ವಿಶ್ವವಿದ್ಯಾಲಯಗಳಲ್ಲಿ ಉಪನ್ಯಾಸಕರಾಗಬಹುದು.

ಈ ಎರಡೂ ಪರೀಕ್ಷೆಗಳ ಮಾದರಿ ಒಂದೇ ಇದ್ದು, ಪ್ರಶ್ನೆಪತ್ರಿಕೆ-1 ಸಾಮಾನ್ಯ ಜ್ಞಾನ, ಬೋಧನೆ ಹಾಗೂ ಸಂಶೋಧನೆಯ ಅಭಿರುಚಿಗೆ ಸಂಬಂಧಿಸಿರುತ್ತದೆ; ಅಭ್ಯರ್ಥಿಗಳ ಸಾಮಾನ್ಯ ತಿಳಿವಳಿಕೆಗಳನ್ನು ಗ್ರಹಿಸುವ ಹಾಗೂ ಯೋಚನಾ ಸಾಮರ್ಥ್ಯವನ್ನು ಅಳೆಯುಂವಂತಹದ್ದಾಗಿರುತ್ತದೆ.

ಪ್ರಶ್ನೆಪತ್ರಿಕೆ-2ರಲ್ಲಿ ನಿಮ್ಮ ವಿಷಯ ಜ್ಞಾನದ ಕುರಿತಾದ ಪ್ರಶ್ನೆಗಳಿರುತ್ತದೆ. ಎನ್‌ಇಟಿ ಪರೀಕ್ಷೆ ವರ್ಷದಲ್ಲಿ ಎರಡು ಬಾರಿಯೂ, ಕೆಎಸ್‌ಇಟಿ ಪರೀಕ್ಷೆ ವರ್ಷದಲ್ಲಿ ಒಂದು ಬಾರಿ ಆಯೋಜಿಸಲಾಗುತ್ತದೆ.

ಉತ್ತಮ ಶಿಕ್ಷಕರಾಗಲು ವಿಷಯದ ಕುರಿತು ಆಳವಾದ ಜ್ಞಾನದ ಜೊತೆಗೆ ಸಂವಹನ ಕೌಶಲ, ಸಮಯದ ನಿರ್ವಹಣೆ, ತಾಳ್ಮೆ, ಸಹನೆ, ನಾಯಕತ್ವದ ಕೌಶಲ ಮತ್ತು ಈ ವೃತ್ತಿಯ ಬಗ್ಗೆ ಅಭಿರುಚಿಯಿರಬೇಕು.

8. ನಾನು ಪಿಯುಸಿ ಮುಗಿಸಿದ್ದು ಫೊರೆನ್ಸಿಕ್ ಸೈನ್ಸ್ ಓದುವ ಆಸೆ ಇದೆ. ದಯವಿಟ್ಟು ಇದರ ಬಗ್ಗೆ ತಿಳಿಸಿ.
ಹೆಸರು, ಊರು ತಿಳಿಸಿಲ್ಲ.

ಉತ್ತರ: ‌ಪಿಯುಸಿ ನಂತರ ಬಿ.ಎಸ್ಸಿ (ವಿಧಿ ವಿಜ್ಞಾನ) ಕೋರ್ಸ್ ಉತ್ತಮ ಆಯ್ಕೆ ಎನ್ನುವುದರಲ್ಲಿ ಸಂದೇಹವಿಲ್ಲ. ಫೊರೆನ್ಸಿಕ್‌ ಸೈನ್ಸ್‌ ಕುರಿತು ಹಿಂದಿನ ಸಂಚಿಕೆಗಳಲ್ಲಿ ವಿಸ್ತೃತ ಮಾಹಿತಿಯಿರುವ ಲೇಖನ ಪ್ರಕಟವಾಗಿತ್ತು. ಆ ಲೇಖನ ಓದಲು ಲಿಂಕ್‌ ಕ್ಲಿಕ್ ಮಾಡಿ.  https://www.prajavani.net/education-career/education/best-choice-in-graduate-courses-forensic-science-complete-information-here-2311659 

9. ನಾನು ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದಲ್ಲಿ ಪದವಿ ಪರೀಕ್ಷೆಯಲ್ಲಿ ಉತ್ತೀರ್ಣನಾಗಿದ್ದೇನೆ. ಆದರೆ, ಇನ್ನೂ ಘಟಿಕೋತ್ಸವ ನಡೆದಿಲ್ಲ. ಮುಂದಿನ ಪರೀಕ್ಷೆಗಳಿಗೆ/ಹುದ್ದೆಗಳಿಗೆ ಪದವಿಯ ಆಧಾರದ ಮೇಲೆ ಅರ್ಜಿ ಸಲ್ಲಿಸಬಹುದೇ ಅಥವಾ ಅಂತಿಮ ಅಂಕಪಟ್ಟಿ ಬಂದ ಮೇಲೆ ಸಲ್ಲಿಸಬೇಕೆ?

ಹುಸೇನ್ ಬಾ ಮುಲ್ತಾನಿ, ಬೆಳಗಾವಿ

ಉತ್ತರ: ನೀವು ಯಾವ ಪರೀಕ್ಷೆ/ಹುದ್ದೆಗೆ ಅರ್ಜಿ ಸಲ್ಲಿಸಬೇಕು ಎಂದು ತಿಳಿಸಿಲ್ಲ. ಸಾಮಾನ್ಯವಾಗಿ, ಅನೇಕ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ/ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅರ್ಹತಾ ಪರೀಕ್ಷೆಗೆ ಹಾಜರಾದ/ಅಥವಾ ಉತ್ತೀರ್ಣರಾದ ಅಭ್ಯರ್ಥಿಗಳಿಗೆ ಅವಕಾಶವಿರುತ್ತದೆ. ಹಾಗೂ ತಾತ್ಕಾಲಿಕ ಪದವಿ ಪ್ರಮಾಣಪತ್ರವನ್ನು ಸಲ್ಲಿಸಿ, ಅಧಿಕೃತ ಪ್ರಮಾಣಪತ್ರವನ್ನು ಸಲ್ಲಿಸಲು ನಿರ್ಧಿಷ್ಟ ಅವಧಿಯ ಕಾಲಾವಕಾಶವಿರುತ್ತದೆ. ಮೇಲಾಗಿ, ರಾಷ್ಟ್ರೀಯ ಶೈಕ್ಷಣಿಕ ದಾಖಲೆಗಳ ಸಂಗ್ರಹಗಾರ (ನ್ಯಾಷನಲ್ ಅಕಾಡಿಮಿಕ್ ಡಿಪಾಸಿಟರಿ) ಮೂಲಕ ರಾಜ್ಯದ ಎಲ್ಲಾ ವಿದ್ಯಾರ್ಥಿಗಳ ಶೈಕ್ಷಣಿಕ ದಾಖಲೆಗಳನ್ನು ಸುರಕ್ಷಿತವಾಗಿ ಸಂಗ್ರಹಿಸಿ ವಿದ್ಯಾರ್ಥಿಗಳಿಗೂ, ಉದ್ಯೋಗದಾತರಿಗೂ ಲಭ್ಯ ಮಾಡುವ ವ್ಯವಸ್ಥೆಯಿದೆ. ನಿಮ್ಮ ಆಧಾರ್ ದಾಖಲೆಯ ಮೂಲಕ ’ಡಿಜಿಲಾಕರ್’ ಖಾತೆಯನ್ನು ತೆರೆಯಬಹುದು. ಹಾಗಾಗಿ, ಈ ಎಲ್ಲಾ ಸಾಧ್ಯತೆಗಳನ್ನು ಪರಿಶೀಲಿಸಿ.

10. ನನ್ನ ಮಗ ಎಂಜಿನಿಯರಿಂಗ್ ಮಾಡುತ್ತಿದ್ದು, ಒಂದು ವರ್ಷದ ನಂತರ ಕಾಲೇಜನ್ನು ಬದಲಾಯಿಸಬಹುದೇ? ದಯವಿಟ್ಟು ತಿಳಿಸಿ.

ಹೆಸರು, ಊರು ತಿಳಿಸಿಲ್ಲ.

ಉತ್ತರ: ಸಾಮಾನ್ಯವಾಗಿ ವಿಶ್ವವಿದ್ಯಾಲಯದ ನಿಯಮಾವಳಿಗಳಂತೆ ವಿದ್ಯಾರ್ಥಿಗಳು ಒಂದು ವರ್ಷದ ನಂತರ ಕಾಲೇಜಿನ/ವಿಭಾಗದ ಬದಲಾವಣೆಗೆ ಅವಕಾಶವಿರುತ್ತದೆ. ಉದಾಹರಣೆಗೆ, ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದಲ್ಲಿಯೂ (ವಿಟಿಯು) ಈ ಅವಕಾಶವಿದೆ. ನಿಯಮಾವಳಿಗಳು, ಶುಲ್ಕಗಳು ಸರ್ಕಾರಿ/ಅನುದಾನಿತ/ಅನುದಾನರಹಿತ ಕಾಲೇಜುಗಳಿಗೆ ಪ್ರತ್ಯೇಕವಾಗಿ ಅನ್ವಯಿಸುತ್ತದೆ. ಹಾಗಾಗಿ, ಸಂಬಂಧಪಟ್ಟ ಕಾಲೇಜು/ವಿಶ್ವವಿದ್ಯಾಲಯವನ್ನು ಸಂಪರ್ಕಿಸಿ ಮತ್ತು ಹೆಚ್ಚಿನ ಮಾಹಿತಿಗಾಗಿ, ಕಳೆದ ವರ್ಷದ ವಿಟಿಯು ವಿಶ್ವವಿದ್ಯಾಲಯದ ಸುತ್ತೋಲೆಯನ್ನು ಗಮನಿಸಿ: https://vtu.ac.in/wp-content/uploads/2022/11/NOTIFICATION-4170-11162022183808.pdf

11. ನಾನು ಡಿಎಂಎಲ್‌ಟಿ ಮಾಡಿದ್ದು, ಶಿಕ್ಷಣ ಮುಂದುವರಿಸಬೇಕಾದರೆ ಪ್ಯಾರಾಮೆಡಿಕಲ್ ಕ್ಷೇತ್ರದ ಯಾವ ಕೋರ್ಸ್ ಆಯ್ಕೆ ಮಾಡಬಹುದು?
ಹೆಸರು, ಊರು ತಿಳಿಸಿಲ್ಲ.

ಉತ್ತರ: ಡಿಎಂಎಲ್‌ಟಿ (ಡಿಪ್ಲೊಮಾ ಇನ್ ಮೆಡಿಕಲ್ ಲ್ಯಾಬ್ ಟೆಕ್ನಾಲಜಿ) ಕೋರ್ಸ್ ನಂತರ ಇಮೇಜಿಂಗ್ ಟೆಕ್ನಾಲಜಿ, ಅನಸ್ಥೇಶಿಯ ಟೆಕ್ನಾಲಜಿ, ಆಪರೇಷನ್ ಥಿಯೇಟರ್ ಟೆಕ್ನಾಲಜಿ, ಡಯಾಲಿಸಿಸ್ ಟೆಕ್ನಾಲಜಿ, ಮೆಡಿಕಲ್ ರೆಕಾರ್ಡ್ಸ್ ಟೆಕ್ನಾಲಜಿ, ಹಾಸ್ಪಿಟಲ್ ಮ್ಯಾನೇಜ್‌ಮೆಂಟ್, ರೇಡಿಯಾಲಜಿ, ನ್ಯೂಕ್ಲಿಯರ್ ಮೆಡಿಸಿನ್ ಟೆಕ್ನಾಲಜಿ, ಕಾರ್ಡಿಯಾಕ್ ಕೇರ್ ಮುಂತಾದ ಕ್ಷೇತ್ರಗಳ ಸರ್ಟಿಫಿಕೆಟ್/ಡಿಪ್ಲೊಮಾ/ಪದವಿ ಕೋರ್ಸ್ಗಳನ್ನು ಮಾಡಬಹುದು. ಪದವಿ ಕೋರ್ಸ್ಗಳಿಗೆ ಲ್ಯಾಟರಲ್ ಪ್ರವೇಶದ ಸಾಧ್ಯತೆಯನ್ನು ಪರಿಶೀಲಿಸಿ.

ವಿದ್ಯಾರ್ಥಿಗಳೇ, ನಿಮ್ಮ ಮುಂದಿನ ಕೋರ್ಸ್‌ ಮತ್ತು ಸೂಕ್ತವಾದ ವೃತ್ತಿಯ ಆಯ್ಕೆ ಹಾಗೂ ಭವಿಷ್ಯವನ್ನು ರೂಪಿಸಿಕೊಳ್ಳುವ ಬಗ್ಗೆ ಗೊಂದಲಗಳಿವೆಯೇ? ಹಾಗಿದ್ದರೆ ನಮಗೆ ಬರೆಯಿರಿ. ನಿಮ್ಮ ಪ್ರಶ್ನೆಗಳಿಗೆ ಶಿಕ್ಷಣತಜ್ಞ ಮತ್ತು ವೃತ್ತಿ ಸಲಹೆಗಾರ ವಿ. ಪ್ರದೀಪ್ ಕುಮಾರ್ ಉತ್ತರಿಸಲಿದ್ದಾರೆ. ಪ್ರಶ್ನೆಗಳನ್ನು shikshana@prajavani.co.in ಗೆ ಕಳಿಸಬಹುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.