ADVERTISEMENT

ನಿಮ್ಮ ಪ್ರಶ್ನೆಗೆ, ತಜ್ಞರ ಉತ್ತರ: ‘ವಿಎಫ್‌ಎಕ್ಸ್’ ಕೋರ್ಸ್‌ ಕಲಿಕೆ ಹೇಗೆ?

ವಿ.ಪ್ರದೀಪ್ ಕುಮಾರ್
Published 5 ಡಿಸೆಂಬರ್ 2021, 19:30 IST
Last Updated 5 ಡಿಸೆಂಬರ್ 2021, 19:30 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

1. ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಹೇಗೆ ತಯಾರಿಯಾಗಬೇಕು?
ಚೇತನ್ ಕಳ್ಳಿಮನಿ, ಮಹಾಲಿಂಗಪುರ.

ಉತ್ಸಾಹಭರಿತ ಮನಸ್ಸು, ಗುರಿ ಸೇರುವ ಸಂಕಲ್ಪ, ನಿಮ್ಮ ಸಾಮರ್ಥ್ಯದಲ್ಲಿ ಅಚಲವಾದ ಆತ್ಮವಿಶ್ವಾಸ ಮತ್ತು ಪರಿಣಾಮಕಾರಿ ಕಾರ್ಯತಂತ್ರ, ನಿಮ್ಮನ್ನು ಯಾವುದೇ ಸ್ಪರ್ಧಾತ್ಮಕ ಪರೀಕ್ಷೆಯ ಯಶಸ್ಸಿನತ್ತ ಕೊಂಡೊಯ್ಯುತ್ತದೆ. ಜೊತೆಗೆ, ಈ ಸಲಹೆಗಳನ್ನು ಅನುಸರಿಸಿ.
• ಪರೀಕ್ಷೆಯಲ್ಲಿ ಅಪೇಕ್ಷಿತ ಶೇಕಡಾವಾರು ಗುರಿಯನ್ನು ನಿರ್ಧರಿಸಿ.
• ನಿಮ್ಮ ಸಾಮರ್ಥ್ಯ ಮತ್ತು ದೌರ್ಬಲ್ಯಗಳನ್ನು ತಿಳಿದು ಸೂಕ್ತವಾದ ಕಾರ್ಯತಂತ್ರವನ್ನು ರೂಪಿಸಿ.
• ಅಣಕು ಪರೀಕ್ಷೆಗಳನ್ನು ಪ್ರತ್ಯೇಕವಾಗಿ ಮತ್ತು ಸಹಪಾಠಿಗಳೊಡನೆ ಅಭ್ಯಾಸ ಮಾಡಿ.
• ಪ್ರಶ್ನೆಪತ್ರಿಕೆಯಲ್ಲಿನ ಸೂಚನೆಗಳನ್ನು ಎಚ್ಚರಿಕೆಯಿಂದ ಓದಿ.
• ಖಚಿತವಾಗಿ ತಿಳಿದಿರುವ ಪ್ರಶ್ನೆಗಳು/ವಿಭಾಗಗಳನ್ನು ಮೊದಲು ಉತ್ತರಿಸಿ.
• ಪ್ರಶ್ನೆಗಳನ್ನು ಉತ್ತರಿಸುವಾಗ ವೇಗ ಮತ್ತು ನಿಖರತೆಯಲ್ಲಿ ಸಮತೋಲನವಿರಲಿ.
• ದಾರಿ ತಪ್ಪಿಸುವ ತಂತ್ರಗಾರಿಕೆಯ ಪ್ರಶ್ನೆಗಳ ಬಗ್ಗೆ ಎಚ್ಚರವಿರಲಿ.
• ಪರೀಕ್ಷೆಯ ದಿನದಂದು ಆದಷ್ಟು ಶಾಂತಚಿತ್ತದಿಂದಿರಿ. ಇದರಿಂದ ಮನಸ್ಸಿನ ಮೇಲಿನ ಒತ್ತಡ ಕಡಿಮೆಯಾಗಿ ಫಲಿತಾಂಶವೂ ಉತ್ತಮವಾಗುತ್ತದೆ.
• ನಿಮ್ಮ ಆಸಕ್ತಿ, ಅಭಿರುಚಿ ಕುರಿತ ಪ್ರಶ್ನೆಗಳನ್ನು ಪ್ರಾಮಾಣಿಕವಾಗಿ ಉತ್ತರಿಸಿ.
• ತಿಳಿಯದ ಬಹು ಆಯ್ಕೆ ಪ್ರಶ್ನೆಗಳನ್ನು ಉತ್ತರಿಸುವಾಗ ಖಚಿತವಾದ ತಪ್ಪು ಆಯ್ಕೆಗಳನ್ನು ತೆಗೆದುಹಾಕಿ ಜಾಣತನದಿಂದ ಊಹಿಸಿ.

ಕಾರ್ಯತಂತ್ರಗಳನ್ನು ರೂಪಿಸುವ ಮಾರ್ಗದರ್ಶನಕ್ಕಾಗಿ ಗಮನಿಸಿ: http://www.vpradeepkumar.com/how-to-succeed-in-entrance-exams/

ADVERTISEMENT

2. ನಾನು ದ್ವಿತೀಯ ಪಿಯುಸಿ ಓದುತ್ತಿದ್ದೇನೆ (ವಿಜ್ಞಾನ). ವಿಎಫ್‌ಎಕ್ಸ್ ಮತ್ತು ಅನಿಮೇಷನ್‌ನಲ್ಲಿ ತುಂಬಾ ಆಸಕ್ತಿ ಇದೆ. ಯಾವ ಕಾಲೇಜಿಗೆ ಸೇರಿದರೆ ಉತ್ತಮ?ಈ ಕ್ಷೇತ್ರದ ಉದ್ಯೋಗಾವಕಾಶಗಳ ಬಗ್ಗೆ ತಿಳಿಸಿ.
ಪ್ರಜ್ವಲ್, ಊರು ತಿಳಿಸಿಲ್ಲ.

ವಿಎಫ್‌ಎಕ್ಸ್‌ ಮತ್ತು ಅನಿಮೇಷನ್ ಈಗ ಬೇಡಿಕೆಯಲ್ಲಿರುವ ಕ್ಷೇತ್ರ. ಸೃಜನಶೀಲತೆಯ ಜೊತೆಗೆ, ಈ ಕ್ಷೇತ್ರದಲ್ಲಿ ಸ್ವಾಭಾವಿಕ ಆಸಕ್ತಿ ಇದ್ದರೆ ಮತ್ತು ಕಂಪ್ಯೂಟರ್ ಬಳಕೆಯಲ್ಲಿ ಪರಿಣತಿಯಿದ್ದಲ್ಲಿ ಬಿಎಸ್‌ಸಿ (ವಿಎಫ್‌ಎಕ್ಸ್, ಅನಿಮೇಷನ್, ಗೇಮ್ ಡಿಸೈನಿಂಗ್ ಇತ್ಯಾದಿ) ಪದವಿ ಕಲಿಯಬಹುದು. ಚಿತ್ರೋದ್ಯಮ, ಟಿವಿ ಚಾನೆಲ್‌ಗಳು, ಸ್ಟುಡಿಯೊಗಳು, ಗೇಮಿಂಗ್ ಸಂಸ್ಥೆಗಳು, ಜಾಹೀರಾತು ಮತ್ತು ಮಾಧ್ಯಮ ಸಂಸ್ಥೆಗಳು ಸೇರಿದಂತೆ ಅನೇಕ ಕ್ಷೇತ್ರಗಳಲ್ಲಿ ಆಕರ್ಷಕ ಉದ್ಯೋಗಾವ ಕಾಶಗಳಿವೆ.

ಈ ಕೋರ್ಸ್ ಸಂಬಂಧಪಟ್ಟ ಹೆಚ್ಚಿನ ವಿವರಗಳಿಗಾಗಿ ಗಮನಿಸಿ: https://collegedunia.com/courses/bachelor-of-science-bsc-animation-and-vfx

3. ನಾನು 2016 ರಲ್ಲಿ ಬಿಕಾಂ ಪದವಿಯನ್ನು ಪೂರ್ಣಗೊಳಿಸಿ ಕೆಲವು ಖಾಸಗಿ ಕಂಪನಿಗಳಲ್ಲಿ ಕೆಲಸ ಮಾಡಿದ್ದೇನೆ. ಆದರೆ, ಕೆಲಸಗಳಲ್ಲಿ ಸಂಪೂರ್ಣವಾದ ತೃಪ್ತಿ ಸಿಗದ ಕಾರಣ, ಆ ಉದ್ಯೋಗಳನ್ನು ಬಿಟ್ಟು, ಈಗ ಸಿವಿಲ್ ಸರ್ವೀಸಸ್ ಪರೀಕ್ಷೆಗಳಿಗೆ ತಯಾರಿ ಆರಂಭಿಸಿದ್ದೇನೆ. ಆದರೆ ಈಗ ನನಗೆ 26 ವರ್ಷ. ಈ ವಯಸ್ಸಿನಲ್ಲಿ ಹೀಗೆ ಮುಂದುವರಿಯಬಹುದೇ?
ವಿನಾಯಕ ಎಸ್, ಸಾಗರ.

ತೃಪ್ತಿಯಿಲ್ಲದ ವೃತ್ತಿಜೀವನದಿಂದ ಖಾಸಗಿ ಜೀವನದ ಮೇಲೂ ಪರಿಣಾಮವಾಗುವುದು ಸಹಜ. ಈಗಲೂ ಕಾಲ ಮಿಂಚಿಲ್ಲ; ಕೆಪಿಎಸ್‌ಸಿ ಮತ್ತು ಯುಪಿಎಸ್‌ಸಿ ಪರೀಕ್ಷೆಗಳಿಗೆ ಕ್ರಮವಾಗಿ ಗರಿಷ್ಟ 35 ಮತ್ತು 32 ವರ್ಷದ ಮಿತಿಯಿದೆ. ಹಾಗಾಗಿ, ಈ ಪರೀಕ್ಷೆಗಳ ಮೂಲಕ ನಿಮ್ಮ ವೃತ್ತಿಜೀವನವನ್ನು ಪುನಃ ಪ್ರಾರಂಭಿಸಬಹುದು.

4. ನಾನು ಬಿಎಸ್‌ಸಿ (ಪಿಸಿಎಂ) ಮುಗಿಸಿದ್ದೇನೆ. ಪೊಲೀಸ್ ಮತ್ತು ಎಸ್‌ಡಿಎ ಪರೀಕ್ಷೆ ಬರೆದಿದ್ದೇನೆ. ಆದರೆ, ಈ ನೇಮಕಾತಿ ತಡವಾಗಬಹುದೆಂದು ಮನೆಯಲ್ಲಿ ಎಂಎಸ್‌ಸಿ ಮಾಡಲು ಒತ್ತಾಯ ಮಾಡುತ್ತಿದ್ದಾರೆ. ನಿಮ್ಮ ಸಲಹೆ ಬೇಕು.
ಬಸ್ಸಮ್ಮ, ರಾಯಚೂರು.

ನಿಮ್ಮ ಸ್ವಾಭಾವಿಕ ಪ್ರತಿಭೆ ಮತ್ತು ಆಸಕ್ತಿಯನ್ನು ಪರಿಗಣಿಸಿ ಯಾವ ವೃತ್ತಿಯಲ್ಲಿ ಹೆಚ್ಚಿನ ತೃಪ್ತಿ ಮತ್ತು ಯಶಸ್ಸು ನಿಮ್ಮದಾಗಬಹುದೆಂದು ಪರಿಶೀಲಿಸಿ. ಅದರಂತೆ ವೃತ್ತಿ ಯೋಜನೆಯನ್ನು ತಯಾರಿಸಿ ಸೂಕ್ತವಾದ ಕೋರ್ಸ್ ಮತ್ತು ವೃತ್ತಿಯನ್ನು ಅನುಸರಿಸಿ.

5. ಬಿಕಾಂ ಮುಗಿಸಿ ಎಂಕಾಂ ಮಾಡುತ್ತಾ ಕೆಪಿಎಸ್‌ಸಿ ಮತ್ತು ಕೆಎಸ್‌ಪಿ ಪರೀಕ್ಷೆಗಳಿಗೆ ತಯಾರಿ ಮಾಡಬೇಕೆಂದು ಕೊಂಡಿದ್ದೇನೆ. ನನ್ನ ನಿರ್ಧಾರ ಸರಿ ಇದೆಯೇ?
–ಶಿವಕುಮಾರ್, ಊರು ತಿಳಿಸಿಲ್ಲ.

ಇಷ್ಟು ಕಿರು ಮಾಹಿತಿಯಿಂದ ನಿಮ್ಮ ನಿರ್ಧಾರದ ಬಗ್ಗೆ ಪ್ರತಿಕ್ರಿಯಿಸಲಾಗುವುದಿಲ್ಲ. ಆದರೂ, ಕೆಪಿಎಸ್‌ಸಿ ಮತ್ತು ಕೆಎಸ್‌ಪಿ ಪರೀಕ್ಷೆಗಳ ಮೂಲಕ ವೃತ್ತಿಜೀವನವನ್ನು ರೂಪಿಸಿಕೊಳ್ಳಲು ಸಾಧ್ಯವಿದೆ.

6. ನಾನು 2015 ರಲ್ಲಿ ಬಿಎ ಮಾಡಿ ನಂತರ 2017 ರಲ್ಲಿ ಬಿಪಿಇಡಿ ಮಾಡಿದ್ದೇನೆ. ಆದರೆ ನನ್ನ ಬಿಎ ಪದವಿಯಲ್ಲಿ ಶೇ 59ರಷ್ಟು ಅಂಕಗಳಿವೆ. ಈಗ ನಾನು ಮತ್ತೊಮ್ಮೆ ಬಿಎ ಮಾಡಲು ಬಯಸಿದ್ದೇನೆ. ಈಗ ಬಿಪಿಇಡಿ ನೇಮಕಾತಿಯಲ್ಲಿ ಹೊಸದಾಗಿ ಕಲಿಯುವ ಬಿಎ ಪದವಿಯ ಫಲಿತಾಂಶವನ್ನು ಪರಿಗಣಿಸುತ್ತಾರಾ?
–ವಸಂತ್, ಊರು ತಿಳಿಸಿಲ್ಲ.

ನಮಗಿರುವ ಮಾಹಿತಿಯಂತೆ ಬಿಪಿಇಡಿ ಸಂಬಂಧಿತ ನೇಮಕಾತಿಯಲ್ಲಿ ಬಿಎ ಪದವಿಯ ಫಲಿತಾಂಶ ಗಣನೆಗೆ ತೆಗೆದುಕೊಳ್ಳುವ ಸಾಧ್ಯತೆ ಕಡಿಮೆ.

7. ನಾನು ಬಿಕಾಂ ಮುಗಿಸಿದ್ದೇನೆ. ಈಗ ಪಿಎಸ್‌ಐ ಪರೀಕ್ಷೆಗೆ ಓದಬೇಕು ಮತ್ತು ಎಂಕಾಂ ಮಾಡಬೇಕು. ಎರಡನ್ನೂ ನಿಭಾಯಿಸುವುದು ಹೇಗೆ?
–ಹೆಸರು, ಊರು ತಿಳಿಸಿಲ್ಲ.

ವೃತ್ತಿಯೋಜನೆಯಂತೆ ಪಿಎಸ್‌ಐ ಪರೀಕ್ಷೆಗೆ ತಯಾರಾಗುತ್ತಿರುವ ನಿಮಗೆ ಎಂಕಾಂ ಅಗತ್ಯವಿದೆಯೇ ಎಂದು ಇನ್ನೊಮ್ಮೆ ಯೋಚಿಸಿ. ಆದರೆ, ಎರಡನ್ನೂ ಮಾಡಬೇಕೆನಿಸಿದರೆ ನಿಭಾಯಿಸುವುದು ಕಷ್ಟವೇನಲ್ಲ. ಸಮಯದ ನಿರ್ವಹಣೆ ಕುರಿತು ನವೆಂಬರ್ 29 ರ ಪ್ರಶ್ನೋತ್ತರದಲ್ಲಿ ಸುದೀರ್ಘವಾದ ಮಾರ್ಗದರ್ಶನವಿದೆ. ದಯವಿಟ್ಟು ಓದಿಕೊಳ್ಳಿ.

8. ನಾನು ಕಳೆದ 4 ವರ್ಷಗಳಿಂದ ವಕೀಲಿ ವೃತ್ತಿಯಲ್ಲಿದ್ದು ಈ ವೃತ್ತಿಯನ್ನು ಪ್ರೀತಿಸುತ್ತೇನೆ. ಜೊತೆಗೆ ನನಗೆ ಸಮಾಜಸೇವೆಯಲ್ಲಿ ಆಸಕ್ತಿಯಿದ್ದು ಅನೇಕ ಯೋಜನೆಗಳು ಮನಸ್ಸಿನಲ್ಲಿವೆ. ಈ ನಿಟ್ಟಿನಲ್ಲಿ ಎಂಎಸ್‌ಡಬ್ಲ್ಯು ಪದವಿ ಮಾಡಲು ಇಚ್ಛಿಸಿದ್ದೇನೆ. ಸಲಹೆ ನೀಡಿ.
ಹೆಸರು, ಊರು ತಿಳಿಸಿಲ್ಲ.

ನಿಮಗಿರುವ ಸಮಾಜ ಸೇವೆಯ ಬಗೆಗಿನ ಆಸಕ್ತಿ ಮತ್ತು ಅದಕ್ಕಾಗಿ ಅನೇಕ ಯೋಜನೆಗಳನ್ನು ಹಾಕಿಕೊಂಡಿರುವುದು ಶ್ಲಾಘನೀಯ ಕಾರ್ಯ. ಆದರೆ, ಈ ಯೋಜನೆಗಳನ್ನು ಕಾರ್ಯಗತಗೊಳಿಸಲು ಎಂಎಸ್‌ಡಬ್ಲ್ಯು ಕೋರ್ಸ್ ಮಾಡುವ ಅಗತ್ಯವಿಲ್ಲ ಎನ್ನುವುದು ನನ್ನ ಅಭಿಪ್ರಾಯ. ನಿಮಗೆ ಆಸಕ್ತಿಯಿರುವ ಯೋಜನೆಗಳಲ್ಲಿ ತೊಡಗಿರುವ ಅನೇಕ ಸಮಾಜ ಸೇವಾ ಸಂಸ್ಥೆಗಳೊಡನೆ ಕೈಜೋಡಿಸಿ ಸಮಾಜಕ್ಕೆ ನಿಮ್ಮ ಕೊಡುಗೆಯನ್ನು ನೀಡಬಹುದು.

9. ನಾನು ಈಗ 3 ವರ್ಷದ ಡಿಪ್ಲೊಮಾ ಮುಗಿಸಿದ್ದು ಪೊಲೀಸ್ ಇಲಾಖೆಯಲ್ಲಿ //ಕಾನ್‌ಸ್ಟೆಬಲ್‌(ಪೇದೆ)// ಆಗಿದ್ದೇನೆ. ಕೇಂದ್ರ ಲೋಕಸೇವಾ ಆಯೋಗ ನಡೆಸುವ ಪರೀಕ್ಷೆಯನ್ನು ಕನ್ನಡ ಮಾಧ್ಯಮದಲ್ಲಿ ಬರೆಯುವ ಕನಸಿದೆ. ಇದಕ್ಕಾಗಿ ದೂರಶಿಕ್ಷಣದ ಮೂಲಕ ಬಿಎ ಪದವಿಯನ್ನು ಮಾಡುತ್ತಿದ್ದೇನೆ. ನನ್ನ ಆಯ್ಕೆ ಸರಿಯೇ? ಸ್ಪರ್ಧಾತ್ಮಕ ಪರೀಕ್ಷೆಗೆ ಹೇಗೆ ತಯಾರಿ ಮಾಡಿಕೊಳ್ಳಬೇಕು?
ಶಿವಾನಂದ, ಹುಬ್ಬಳ್ಳಿ.

ನೀವು ಈಗಾಗಲೇ ವೃತ್ತಿಯಲ್ಲಿರುವುದರಿಂದ ಸ್ಪರ್ಧಾತ್ಮಕ ಪರೀಕ್ಷೆ ಬರೆಯುವ ನಿರ್ಧಾರ ಸರಿಯೆನಿಸುತ್ತದೆ. ಅದರಲ್ಲೂ ಯುಪಿಎಸ್‌ಸಿ ಪರೀಕ್ಷೆಯನ್ನು ಕನ್ನಡದಲ್ಲಿ ಬರೆಯುವ ತೀರ್ಮಾನ ಮೆಚ್ಚುವಂತದ್ದು. ನಿಗದಿತ ದಿನಚರಿಯೊಂದಿಗೆ ಪ್ರಚಲಿತ ವಿದ್ಯಮಾನಗಳ ಮಾಹಿತಿ, ಬರವಣಿಗೆಯ ಗುಣಮಟ್ಟ, ವಿಷಯಗಳ ಆಳವಾದ ಅಧ್ಯಯನ, ಪುನರಾವರ್ತನೆ ಇತ್ಯಾದಿಗಳ ಬಗ್ಗೆ ಪರಿಪೂರ್ಣವಾದ ತಯಾರಿ ಇರಲಿ. ಜೊತೆಗೆ, ಸಾಕಷ್ಟು ಪರಿಶ್ರಮ, ದೃಢತೆ, ಗೆಲ್ಲುವ ಆಶಾಭಾವನೆ ಅತ್ಯಗತ್ಯ.

10. ನಾನು ದೂರಶಿಕ್ಷಣದಲ್ಲಿ ಬಿಎಸ್‌ಸಿ (ಲೈಬ್ರರಿ ಸೈನ್ಸ್) ತೆಗೆದುಕೊಂಡಿದ್ದೇನೆ. ಈ ಕೋರ್ಸ್‌ ಮಾಡಿದವರಿಗೆ ಯಾವ ರೀತಿಯ ಸರ್ಕಾರಿ ಉದ್ಯೋಗಾವಕಾಶಗಳಿವೆ ಎಂಬುದರ ಬಗ್ಗೆ ತಿಳಿಸಿಕೊಡಿ.
ಮಂಜುನಾಥ್ ವಿ, ಊರು ತಿಳಿಸಿಲ್ಲ.

ಈ ಪದವಿಯ ನಂತರ ಸರ್ಕಾರಿ ಮತ್ತು ಖಾಸಗಿ ಶಾಲೆಗಳು, ಕಾಲೇಜುಗಳು, ವಿಶ್ವವಿದ್ಯಾಲಯಗಳ ಗ್ರಂಥಾಲಯಗಳು, ರಾಯಭಾರ ಕಚೇರಿಗಳು, ವಸ್ತುಸಂಗ್ರಹಾಲಯಗಳು, ಗ್ಯಾಲರಿಗಳು, ಸುದ್ದಿ ಸಂಸ್ಥೆಗಳು, ಫೋಟೊ ಮತ್ತು ಚಲನಚಿತ್ರ ಗ್ರಂಥಾಲಯಗಳಂತಹ ವಿಭಾಗ, ಇಲಾಖೆಗಳಲ್ಲಿ ಉದ್ಯೋಗಾವಕಾಶಗಳಿವೆ.

11. ನನಗೀಗ 68 ವರ್ಷ. ನಾನು 2014 ರಲ್ಲಿ ನಿವೃತ್ತಿ ಪಡೆದಿದ್ದೇನೆ. ಈಗ ನನಗೆ ಕಾನೂನು ಪುಸ್ತಕಗಳನ್ನು ಓದಬೇಕೆಂದು ಬಹಳಷ್ಟು ಆಸೆಯಿದೆ. ಈಗ ಓದಬಹುದೇ? ಕಾನೂನಿನ ಪುಸ್ತಕಗಳು ಕನ್ನಡದಲ್ಲಿ ಇದೆಯೇ?
–ಹೆಸರು, ಊರು ತಿಳಿಸಿಲ್ಲ.

ಈ ವಯಸ್ಸಿನಲ್ಲೂ ನಿಮ್ಮಲ್ಲಿರುವ ಜ್ಞಾನಾರ್ಜನೆಯ ಆಸಕ್ತಿ, ಓದುವ ಹಂಬಲ ಶ್ಲಾಘನೀಯ. ಕಾನೂನು ವಿಸ್ತಾರವಾದ ಕ್ಷೇತ್ರ; ನಿಮಗೆ ಕಾನೂನಿನ ಯಾವ ಕ್ಷೇತ್ರದಲ್ಲಿ ಆಸಕ್ತಿಯಿದೆ ಎನ್ನುವುದನ್ನು ಗುರುತಿಸಿ. ಕಾನೂನು ಸಂಬಂಧಿತ ಕನ್ನಡದ ಪುಸ್ತಕಗಳು, ಕಾನೂನು ಪುಸ್ತಕ ಮಾರಾಟ ಸಂಸ್ಥೆಗಳು, ಇ-ಕಾಮರ್ಸ್ ಸಂಸ್ಥೆಗಳ ಮುಖಾಂತರ ಲಭ್ಯ. ಆನ್‌ಲೈನ್ ಮತ್ತು ಸಾರ್ವಜನಿಕ ಗ್ರಂಥಾಲಯಗಳಲ್ಲಿಯೂ ನೀವು ಹುಡುಕಬಹುದು.

12. ಸರ್, ಎಸ್‌ಎಸ್‌ಎಲ್‌ಸಿ ಅಂಕಪಟ್ಟಿಯಲ್ಲಿ ನನ್ನ ಹೆಸರನ್ನು ತಪ್ಪಾಗಿ ಮುದ್ರಿಸಲಾಗಿದೆ. ಇದನ್ನು ಹೇಗೆ ಸರಿಪಡಿಸಿಕೊಳ್ಳಬಹುದು?
ದೀಪಕ್, ಊರು ತಿಳಿಸಿಲ್ಲ.

ಸಂಬಂಧ ಪಟ್ಟ ದಾಖಲೆಗಳೊಂದಿಗೆ ನಿಮ್ಮ ಶಾಲೆಯ ಮೂಲಕ ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಗೆ ಅರ್ಜಿ ಸಲ್ಲಿಸಿ.

13. ನಾನು ಅಕೌಂಟಿಂಗ್ ಮತ್ತು ಟ್ಯಾಕ್ಸೇಷನ್‌ನಲ್ಲಿ ಎಂಕಾಂ ಮಾಡಲು ಆಸಕ್ತಿ ಇದೆ. ಇದರ ಬದಲಿಗೆ 6 ತಿಂಗಳ ಬಿಸಿನೆಸ್ ಅಕೌಂಟಿಂಗ್ ಮತ್ತು ಟ್ಯಾಕ್ಸೇಶನ್ ಕೋರ್ಸ್ ಮಾಡಬಹುದೇ? ಯಾವುದು ಉತ್ತಮ?
ಹೆಸರು, ಊರು ತಿಳಿಸಿಲ್ಲ.

ಭವಿಷ್ಯದ ವೃತ್ತಿಜೀವನದ ದೃಷ್ಟಿಯಿಂದ ಎಂಕಾಂಮಾಡುವುದು ಉತ್ತಮ.

ಶಿಕ್ಷಣ ತಜ್ಞ​ಮತ್ತು ವೃತ್ತಿ ಸಲಹೆಗಾರವಿ. ಪ್ರದೀಪ್‌ ಕುಮಾರ್‌

ನಿಮ್ಮ ಪ್ರಶ್ನೆಗೆ ತಜ್ಞರ ಉತ್ತರ
ವಿದ್ಯಾರ್ಥಿಗಳೇ, ನಿಮ್ಮ ಮುಂದಿನ ಕೋರ್ಸ್‌ ಮತ್ತು ಸೂಕ್ತವಾದ ವೃತ್ತಿಯ ಆಯ್ಕೆ ಹಾಗೂ ಭವಿಷ್ಯವನ್ನು ರೂಪಿಸಿಕೊಳ್ಳುವ ಬಗ್ಗೆ ಗೊಂದಲಗಳಿವೆಯೇ? ಹಾಗಿದ್ದರೆ ನಮಗೆ ಬರೆಯಿರಿ. ನಿಮ್ಮ ಪ್ರಶ್ನೆಗಳಿಗೆ ಶಿಕ್ಷಣ ತಜ್ಞ ಮತ್ತು ವೃತ್ತಿ ಸಲಹೆಗಾರ ವಿ. ಪ್ರದೀಪ್ ಕುಮಾರ್ ಉತ್ತರಿಸಲಿದ್ದಾರೆ. ಪ್ರಶ್ನೆಗಳನ್ನು shikshana@prajavani.co.in ಗೆ ಕಳಿಸಬಹುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.