ಬಣ್ಣಗಳ ಬಗ್ಗೆ ಎಷ್ಟೊಂದು ಮೋಹವಿರುತ್ತದೆ ನಮಗೆ. ಲಕ್ಷೋಪಲಕ್ಷ ಬಣ್ಣಗಳನ್ನು ಬಿಂಬಿಸುವ ಪ್ರಕೃತಿಗಿಂತ ಬಣ್ಣಮಯವಾದ ಸಂಗತಿ ಮತ್ತೊಂದು ಇರಲಾರದೇನೋ. ಹಬ್ಬ, ಉತ್ಸವಗಳ ಸಂಭ್ರಮಗಳೆಂದರೆ ಬಣ್ಣ ಬಣ್ಣದ ಬಟ್ಟೆಗಳು, ಬಣ್ಣದ ಹೂವುಗಳು ನಮಗೆ ಬೇಕು. ವಿದ್ಯಾರ್ಥಿ ದೆಸೆಯಲ್ಲಿ ಬಣ್ಣಗಳಿಗೆ ಒಂದಿಷ್ಟು ಹೆಚ್ಚು ಆದ್ಯತೆ. ಪರೀಕ್ಷೆಗಳಿಗೆ ಓದಿಕೊಳ್ಳುವ ಸಮಯದಲ್ಲಿ, ನಿರಂತರ ತರಗತಿಗಳಿದ್ದಾಗ, ಅಸೈನ್‍ಮೆಂಟ್‌ಗಳಿದ್ದಾಗಲೂ ಈ ಬಣ್ಣಗಳು ವಿದ್ಯಾರ್ಥಿಗಳಿಗೆ ಸಹಕರಿಸುತ್ತವೆ ಎಂದರೆ ನಂಬುತ್ತೀರ.
ಹೌದು. ಬಣ್ಣಗಳು ವಿದ್ಯಾರ್ಥಿಗಳ ಮನಸ್ಸಿನ ಮೇಲಿರುವ ಒತ್ತಡವನ್ನು ಕಡಿಮೆ ಮಾಡಬಲ್ಲವು. ಬಣ್ಣಗಳನ್ನು ಬಳಸಿ ಚಿತ್ರಗಳನ್ನು ಬರೆಯುವ ಪ್ರಕ್ರಿಯೆಯನ್ನು ಮಿದುಳು ಒಂದು ಸಂತೋಷದ ಚಟುವಟಿಕೆಯನ್ನಾಗಿ ಸ್ವೀಕರಿಸುತ್ತದೆ. ಈ ಕುರಿತು ಅನೇಕ ಪ್ರಯೋಗಗಳು ನಡೆದಿವೆ. ಬಣ್ಣಗಳಿಗೆ ಸಂಬಂಧಿಸಿದ ಚಟುವಟಿಕೆಗಳನ್ನು ಮಾಡಿದ ಬಳಿಕ ಓದಿದ ವಿಚಾರಗಳನ್ನು ಚೆನ್ನಾಗಿ ನೆನಪಿನಲ್ಲಿಟ್ಟುಕೊಂಡು ಬರೆದಿರುವುದುಂಟು. ಅಂದರೆ ಅವರ ಏಕಾಗ್ರತೆಯ ಸಾಮರ್ಥ್ಯ ವೃದ್ಧಿಯಾದಂತಿತ್ತು. ಹಾಗಾಗಿ ವಿದ್ಯಾರ್ಥಿಗಳು ಬಣ್ಣಗಾರಿಕೆಯನ್ನು ಲಘುವಿಚಾರವೆಂದು ತಿಳಿಯಬೇಕಾಗಿಲ್ಲ. ನಿಮ್ಮ ಕಲಿಕಾ ಸಾಮರ್ಥ್ಯ ವನ್ನು ವೃದ್ಧಿಸಿಕೊಳ್ಳಲು ಬಣ್ಣಗಳ ಜೊತೆಗೆ ಗೆಳೆತನ ಸಂಪಾದಿಸಿದರ ಲಾಭವಾಗಬಹುದು. ‘ನಾನೊಬ್ಬ ಸಂಶೋಧನಾ ವಿದ್ಯಾರ್ಥಿಯಾಗಿದ್ದುಕೊಂಡು, ಪುಟದಲ್ಲಿ ಕಲರಿಂಗ್ ಮಾಡಿದರೆ ಸಿಲ್ಲಿಯಾಗಿರಬಹುದು’ ಎಂಬ ಕೀಳರಿಮೆ ಬೆಳೆಸಿಕೊಳ್ಳದೇ, ಅದರಿಂದಾಗುವ ಕಲಿಕಾ ಲಾಭವನ್ನು ವಿದ್ಯಾರ್ಥಿಗಳು ಗುರುತಿಸಬಹುದು.
ಬಣ್ಣದ ಚಿತ್ರಗಳನ್ನು ಬರೆಯುವಾಗ ಮನಸ್ಸಿನಲ್ಲಿರುವ ಆತಂಕ ಕಡಿಮೆಯಾಗು ವುದಷ್ಟೇ ಅಲ್ಲ, ಹೊಸ ವಿಚಾರವನ್ನು ಗ್ರಹಿಸುವುದಕ್ಕೆ ಮನಸ್ಸು ಕುತೂಹಲಿಯಾಗಿ ಸಿದ್ಧವಾಗಿರುತ್ತದೆ ಕೂಡ. ಜೊತೆಗೆ ಸೃಜನಶೀಲವಾಗಿ ಯೋಚನೆ ಮಾಡಲು ಸನ್ನದ್ಧ ಸ್ಥಿತಿಯಲ್ಲಿರುತ್ತದೆ.
ಚಿತ್ರಗಳು ಕಲಿಕೆಯನ್ನು ಹೇಗೆ ಉದ್ದೀಪಿಸುತ್ತವೆ ಎಂಬುದನ್ನು ಮಂಗಳೂರಿನ ಸ್ವರೂಪ ಅಧ್ಯಯನ ಕೇಂದ್ರದ ನಿರ್ದೇಶಕ ಗೋಪಾಡ್ಕರ್ ಅವರು ತಮ್ಮ ವಿದ್ಯಾರ್ಥಿಗಳಿಗೆ ತಿಳಿಸಿಕೊಡುತ್ತಾರೆ. ಅವರ ಪರಿಕಲ್ಪನೆಯ ಸ್ವರೂಪ ಅಧ್ಯಯನ ಕೇಂದ್ರದಲ್ಲಿ ವಿದ್ಯಾರ್ಥಿಗಳು ಚಿತ್ರಗಳನ್ನು ಆಧರಿಸಿಯೇ ಪ್ರಶ್ನೆಗಳಿಗೆ ಉತ್ತರಗಳನ್ನು ಸಿದ್ಧಪಡಿಸುತ್ತಾರೆ. ‘ಅಕ್ಷರಗಳ ಮೂಲಕ ನೋಟ್ಸ್ ಮಾಡಿಕೊಳ್ಳುವುದಕ್ಕೆ ಬದಲಾಗಿ, ವಿದ್ಯಾರ್ಥಿಗಳು ಚಿತ್ರವೊಂದನ್ನು ರಚಿಸಿ, ಅದರ ಆಧಾರದಲ್ಲಿ ವಿಚಾರಗಳನ್ನು ನೆನಪಿನಲ್ಲಿ ಇಟ್ಟುಕೊಳ್ಳುತ್ತಾರೆ. ಈ ಪ್ರಕ್ರಿಯೆಯಲ್ಲಿ ಹಾಡುಗಳೂ ಬಣ್ಣಗಳೂ ಸೇರಿರುವುದರಿಂದ ಕಲಿಕೆಯು ಸುಲಭವಾಗುತ್ತದೆ. ಅಷ್ಟೇ ಅಲ್ಲ ವಿದ್ಯಾರ್ಥಿಗಳು ಖುಷಿಯಿಂದ ಕಲಿಯುತ್ತಾರೆ’ ಎಂದು ಅವರು ಹೇಳುತ್ತಾರೆ.
ಅಂದರೆ ಶಿಶುವಿಹಾರಕ್ಕೆ ಹೋಗುತ್ತ, ಪ್ರಾಥಮಿಕ ತರಗತಿಗಳಲ್ಲಿ ಕಲಿಯುತ್ತ ಇರುವಾಗ, ಬಿಳಿ ಹಾಳೆಗಳ ಮೇಲೆ ಚಿತ್ರ ಬರೆಯುತ್ತ, ಅವುಗಳಿಗೆ ಬಣ್ಣ ತುಂಬುತ್ತ, ಕೈಯೆಲ್ಲಾ ರಂಗು ರಂಗಾಗಿಸಿಕೊಳ್ಳುತ್ತಾರೆ. ಆದರೆ ದೊಡ್ಡವರಾಗುತ್ತ ಅವರು ಅವುಗಳತ್ತ ಗಮನ ಹರಿಸುವುದನ್ನು ಕಡಿಮೆ ಮಾಡುತ್ತಾರೆ. ಪಾಠಗಳು, ಪ್ರಾಜೆಕ್ಟ್‌ಗಳು, ಪ್ರಶ್ನೋತ್ತರಗಳು, ರೆಕಾರ್ಡ್‌ಗಳು ಎಂಬುದಾಗಿ ಅಂಕಗಳ ಲೆಕ್ಕಾಚಾರಗಳಲ್ಲಿ ಮುಳುಗಿ ಹೋಗುತ್ತಾರೆ. ಗಂಭೀರವದನರಾಗಿಬಿಡುತ್ತಾರೆ.
ಆದ್ದರಿಂದ ಆಧುನಿಕ ಶಿಕ್ಷಣ ಪದ್ಧತಿಯಲ್ಲಿ ಬಣ್ಣದ ಚಿತ್ರಗಳನ್ನು ಬರೆಯುವ ತರಗತಿಗಳಿಗೆ ಸೇರಿಸಿಕೊಳ್ಳುವಂತೆ ಶಿಕ್ಷಣ ತಜ್ಞರು ಮತ್ತು ಮನಶ್ಯಾಸ್ತ್ರಜ್ಞರು ಸಲಹೆ ಮಾಡುತ್ತಿದ್ದಾರೆ. ತರಗತಿಯಲ್ಲಿ ಚಿತ್ರಕಲೆಯನ್ನು ಪಠ್ಯವನ್ನಾಗಿ ಬೋಧಿಸದೇ ಇದ್ದರೂ, ಅದನ್ನು ಹವ್ಯಾಸವನ್ನಾಗಿ ಮಕ್ಕಳು ತಮ್ಮ ಬದುಕಿನಲ್ಲಿ ಅಳವಡಿಸಿಕೊಳ್ಳುವಷ್ಟರ ಮಟ್ಟಿಗೆ ಅವಕಾಶವನ್ನು ಕೊಡಬೇಕು.
ಚಿತ್ರ ಬರೆಯುವುದೇನಿದ್ದರೂ ಪುಟಾಣಿ ಮಕ್ಕಳಿಗೆ ಸಂಬಂಧಿಸಿದ ವಿಷಯ ಎಂಬ ಗ್ರಹಿಕೆ ನಮ್ಮಲ್ಲಿದೆ. ಪುಟ್ಟ ಮಕ್ಕಳಿಗಷ್ಟೇ ಬಣ್ಣದ ಪೆನ್ಸಿಲ್ ಗಿಫ್ಟ್ ಕೊಡುತ್ತಾರೆ. ಆದರೆ ದೊಡ್ಡವರೂ ಈ ಚಿತ್ರಗಳು ಮತ್ತು ಬಣ್ಣಗಳನ್ನು ಬಳಸಿ ಮನಸ್ಸನ್ನು ಹಗುರಾಗಿಸಿಕೊಳ್ಳಬಹುದು. ಹೆಚ್ಚಿನ ಅಧ್ಯಯನಕ್ಕೆ ತಮ್ಮ ಮನಸ್ಸನ್ನು ಸಿದ್ಧಮಾಡಿಕೊಳ್ಳಬಹುದು.
ಒಂದು ಪುಟದಲ್ಲಿ ಸುಖಾಸುಮ್ಮನೇ ಬಣ್ಣಗಳನ್ನು ತುಂಬುತ್ತಾ ಸಾಗುವುದು ಕೂಡ ಖುಷಿಕೊಡುವ ವಿಷಯ. ಬಣ್ಣಗಳ ಸಂಯೋಜನೆ ಹೇಗಿರಬೇಕು ಎಂದು ಕಲ್ಪಿಸುವುದು, ಹೊಸ ಹೊಸ ವಿನ್ಯಾಸಗಳ ಸಾಧ್ಯತೆಗಳನ್ನು ಅನ್ವೇಷಿಸುವುದು- ಮನಸ್ಸನ್ನು ಅರಳಿಸುವ ಪ್ರಕ್ರಿಯೆಯೇ ಆಗಿದೆ. ಆದ್ದರಿಂದ ಬಣ್ಣಗಳ ಜೊತೆಗಿನ ಆಟವು ನಿರ್ದಿಷ್ಟವಾಗಿ ಚಿತ್ರಕಲೆಯೇ ಆಗಬೇಕೆಂದೇನೂ ಇಲ್ಲ. ಆದರೆ ಸುಮ್ಮನೇ ಬಣ್ಣ ಬಳಿಯುತ್ತ ಕುಳಿತುಕೊಳ್ಳುವುದು ಬೋರ್ ಎನಿಸಬಹುದು. ಚಿತ್ರಗಳ ಔಟ್‌ಲೈನ್‌ಗಳಿರುವ ಪುಸ್ತಕಗಳು ಈ ಬಣ್ಣಗಾರಿಕೆಗೆ ಸಹಕಾರಿ ಆಗಬಹುದು. ಆದರೆ ಚಿತ್ರಕಲೆಯು ಇನ್ನಷ್ಟು ರಚನಾತ್ಮಕವಾಗಿರಬಹುದು ಎನಿಸುತ್ತದೆ.
ದೊಡ್ಡ ತರಗತಿಗಳಿಗೆ ತೆರಳುತ್ತಿದ್ದಂತೆಯೇ ಮಕ್ಕಳ ಮನಸ್ಸಿನಲ್ಲಿ ಒತ್ತಡ ಸೃಷ್ಟಿಯಾಗಲಾರಂಭಿಸುತ್ತದೆ. ಎಂಟನೇ ತರಗತಿಯಲ್ಲಿ ಚೆನ್ನಾಗಿ ಅಂಕಗಳನ್ನು ತೆಗೆದರೆ, ಹತ್ತನೇ ತರಗತಿಯ ಪ್ರಮುಖ ಘಟ್ಟಕ್ಕೆ ಒಂದು ಪೀಠಿಕೆಯಂತೆ ಒಂಬತ್ತನೇ ತರಗತಿಯನ್ನು ಪರಿಗಣಿಸಲಾಗುತ್ತದೆ. ಹಾಗಾಗಿ ಪ್ರೌಢಶಾಲಾ ತರಗತಿಗಳಲ್ಲಂತೂ ಮಕ್ಕಳ ಮನಸ್ಸಿನ ಮೇಲೆ ಒತ್ತಡ ಸೃಷ್ಟಿಯಾಗುವುದು ಸಹಜ. ಅಂತಹ ಸಂದರ್ಭಗಳಲ್ಲಿ ಈ ಬಣ್ಣದ ಸಹವಾಸ ಮಾಡುವುದರಿಂದ ತುಸು ಹೊತ್ತು ವಿಶ್ರಾಂತಿ ಪಡೆಯಬಹುದು.
ಬಣ್ಣಗಾರಿಕೆಯು ಮಕ್ಕಳ ಮನಸ್ಸಿನ ಒತ್ತಡವನ್ನು ನಿವಾರಿಸಬಲ್ಲುದಾದರೆ, ದೊಡ್ಡವರ ಮನಸ್ಸನ್ನೂ ಹಗುರಾಗಿಸುವುದು ಸಾಧ್ಯವಿಲ್ಲವೇ? ಖಂಡಿತಾ ಸಾಧ್ಯವಿದೆ. ದೊಡ್ಡವರಿಗಾಗಿಯೇ ಕಲರಿಂಗ್ ಬುಕ್‌ಗಳು ಇಂದು ಮಾರುಕಟ್ಟೆಯಲ್ಲಿ ಲಭ್ಯವಿವೆ. ಕಚೇರಿಗಳಲ್ಲಿ ನಿರಂತರ ಮೀಟಿಂಗ್‌ಗಳಲ್ಲಿ ಭಾಗವಹಿಸಿ, ಪ್ಲಾನಿಂಗ್ ಸೆಷನ್ ಗಳನ್ನು ನಿಭಾಯಿಸಿ, ‘ಉಸ್ಸಪ್ಪಾ’ ಎಂದು ಕುಳಿತುಕೊಂಡಾಗ ಟೇಬಲ್ ಮೇಲೆ ಕಲರಿಂಗ್ ಪ್ಯಾಡ್ ಕಾಣಿಸಿದರೆ ಒಂದಷ್ಟು ಹೊತ್ತು ಅದರೊಡನೆ ಆಟವಾಡುವುದು ಒಳ್ಳೆಯದು ಎಂದು ಮನಶ್ಯಾಸ್ತ್ರಜ್ಞರು ಸಲಹೆ ಮಾಡುವುದುಂಟು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.