ಹೆಸರು, ಊರು ತಿಳಿಸಿಲ್ಲ.
1. ಸರ್, ನಾನು ಪಿಯುಸಿ ಮಾಡುತ್ತಿದ್ದು ಮುಂದೆ ಬಿಟೆಕ್ (ಆಹಾರ ತಂತ್ರಜ್ಞಾನ) ಮಾಡಬೇಕು. ಈ ಕೋರ್ಸ್ ಮಾಹಿತಿ, ನಂತರದ ಅವಕಾಶಗಳೇನು?
ಆಹಾರ ತಂತ್ರಜ್ಞಾನ ಕ್ಷೇತ್ರದ ಪದವೀಧರರಿಗೂ ಹೆಚ್ಚಿನ ಬೇಡಿಕೆಯಿದೆ. ಈ ಕ್ಷೇತ್ರದಲ್ಲಿ ಆಸಕ್ತಿಯಿದ್ದರೆ, ಬಿಟೆಕ್ (ಆಹಾರ ತಂತ್ರಜ್ಞಾನ) ಕೋರ್ಸ್ ಮಾಡಿ, ವೃತ್ತಿಜೀವನವನ್ನು ರೂಪಿಸಿಕೊಳ್ಳಬಹುದು.
ಈ ಕೋರ್ಸ್ ನಂತರ, ಸರ್ಕಾರಿ ಮತ್ತು ಖಾಸಗಿ ಕ್ಷೇತ್ರದ ಆಹಾರ ಪದಾರ್ಥ ಮತ್ತು ಪಾನೀಯ ತಯಾರಿಕಾ ಉದ್ದಿಮೆಗಳು, ಆಹಾರ ಸಂಬಂಧಿತ (ಕೃತಕ ಮತ್ತು ನೈಸರ್ಗಿಕ ಸಂರಕ್ಷಕಗಳು, ಬಣ್ಣಗಳು, ಸ್ವಾದಗಳು ಇತ್ಯಾದಿ) ಉದ್ದಿಮೆಗಳು, ಕೃಷಿ ಉದ್ದಿಮೆಗಳು, ಸಾವಯವ ಉದ್ದಿಮೆಗಳು, ಹೋಟೆಲ್ಸ್ ಮತ್ತು ರೆಸ್ಟೋರೆಂಟ್ಸ್, ಆಸ್ಪತ್ರೆಗಳು, ಶಿಕ್ಷಣ ಸಂಸ್ಥೆಗಳು, ಫಾರ್ಮಾ ಉದ್ದಿಮೆಗಳು, ಸಂಶೋಧನಾ ಸಂಸ್ಥೆಗಳು, ಆಹಾರ ಪರೀಕ್ಷಾ ಪ್ರಯೋಗಾಲಯಗಳು ಸೇರಿದಂತೆ ಹಲವಾರು ಕ್ಷೇತ್ರಗಳಲ್ಲಿ ವಿಪುಲವಾದ ಉದ್ಯೋಗಾವಕಾಶಗಳಿವೆ. ಬಿಟೆಕ್ ನಂತರ ಎಂಟೆಕ್ ಮಾಡಿ, ಈ ಕ್ಷೇತ್ರದಲ್ಲಿ ಹೆಚ್ಚಿನ ತಜ್ಞತೆಯನ್ನು ಪಡೆಯಬಹುದು. ವೃತ್ತಿಯ ಅನುಭವದ ನಂತರ ಸ್ವಂತ ಉದ್ದಿಮೆಯನ್ನೂ ಪ್ರಾರಂಭಿಸಬಹುದು.
ಹೆಸರು, ಊರು ತಿಳಿಸಿಲ್ಲ.
2. ನನ್ನ ಮಗ ಮೊದಲ ವರ್ಷದ ಪಿಯುಸಿ (ಪಿಸಿಎಂಇ) ಓದುತ್ತಿದ್ದು, ದ್ವಿತೀಯ ಪಿಯುಸಿ ನಂತರ, ಯಾವ ಕೋರ್ಸ್‌ಗೆ ಹೆಚ್ಚಿನ ಉದ್ಯೋಗಾವಕಾಶಗಳಿವೆ?
ಪಿಯುಸಿ ನಂತರದ ಕೋರ್ಸ್ ಆಯ್ಕೆಗಳಲ್ಲಿ ಈಗ ವಿಪುಲತೆಯೂ ವೈವಿಧ್ಯತೆಯೂ ಇದೆ. ಯಾವುದೇ ಕೋರ್ಸ್ನ ಫಲಿತಾಂಶ ಉತ್ಕೃಷ್ಟವಾಗಿದ್ದರೆ ಆಕರ್ಷಕವಾದ ಉದ್ಯೋಗಾವಕಾಶಗಳಿವೆ. ಹಾಗಾಗಿ, ವಿದ್ಯಾರ್ಥಿಗಳ ಆಸಕ್ತಿ, ಅಭಿರುಚಿ ಮತ್ತು ಸ್ವಾಭಾವಿಕ ಪ್ರತಿಭೆಯಂತೆ ವೃತ್ತಿಯೋಜನೆಯನ್ನು ಮಾಡಿ ಅದಕ್ಕೆ ಅನುಗುಣವಾಗಿ ಕೋರ್ಸ್ ಆಯ್ಕೆ ಮಾಡುವುದು ಸೂಕ್ತ..
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.