ADVERTISEMENT

ಕನ್ನಡ ಮಾಧ್ಯಮ ಇಂಗ್ಲಿಷ್‌ನಲ್ಲಿ ವಾಕ್ಚಾತುರ್ಯ

ಶಾಲಾ ಮಕ್ಕಳ ಮೇಲೆ ಪ್ರಯೋಗ

ಡಾ.ಎ.ಓ.ಅವಲಮೂರ್ತಿ
Published 19 ಫೆಬ್ರುವರಿ 2019, 19:45 IST
Last Updated 19 ಫೆಬ್ರುವರಿ 2019, 19:45 IST
   

ಪ್ರಾಥಮಿಕ ಹಂತದ ಮಕ್ಕಳಿಗೆ ಮುಖ್ಯವಾಗಿ ಮಾತನಾಡುವ ಇಂಗ್ಲಿಷ್ (ಸ್ಪೋಕನ್‌ ಇಂಗ್ಲಿಷ್‌) ಬೇಕು. ಅವರು ತಮ್ಮ ಮಾತೃಭಾಷೆ/ ವಾತಾವರಣದ ಭಾಷೆಯಲ್ಲಿ ಏನೆಲ್ಲ ಮಾತನಾಡಬಲ್ಲರೋ ಅದನ್ನು ಇಂಗ್ಲಿಷ್‌ನಲ್ಲಿ ಮಾತನಾಡಬಲ್ಲಷ್ಟು ಇಂಗ್ಲಿಷ್ ಬೇಕು. ಅಷ್ಟು ಇಂಗ್ಲಿಷ್ ಬಂದರೆ ಮಾತ್ರ ತಮ್ಮ ಮಕ್ಕಳಿಗೆ ಕೆಲಸ ಸಿಗುತ್ತದೆ, ಬದುಕು ಕಟ್ಟಿಕೊಳ್ಳಲು ಸಾಧ್ಯವಾಗುತ್ತದೆ ಎಂಬುದು ಬಹುತೇಕ ಪೋಷಕರ ನಂಬಿಕೆ. ಇಂಗ್ಲಿಷ್ ಮಾಧ್ಯಮದ ಶಾಲೆಯಲ್ಲಿ ಓದಿದರೆ ತಮ್ಮ ಮಕ್ಕಳಿಗೆ ಇಂಗ್ಲಿಷ್ ಮಾತನಾಡಲು ಬರುತ್ತದೆ ಎಂಬುದು ಅವರ ಇನ್ನೊಂದು ನಂಬಿಕೆ.

ಕನ್ನಡ ಮಾಧ್ಯಮದ ಶಿಕ್ಷಣದಲ್ಲಿ ಗಣಿತ, ವಿಜ್ಞಾನ, ಸಮಾಜ ಇವೆಲ್ಲವನ್ನೂ ಕನ್ನಡದಲ್ಲೇ ಬೋಧಿಸಲಾಗುತ್ತದೆ. ಅದೇ ಇಂಗ್ಲಿಷ್ ಮಾಧ್ಯಮದ ಶಿಕ್ಷಣದಲ್ಲಿ ಅವುಗಳನ್ನೆಲ್ಲ ಇಂಗ್ಲಿಷ್‌ನಲ್ಲಿ ಬೋಧಿಸಲಾಗುತ್ತದೆ. ಇಂಗ್ಲಿಷ್‌ನಲ್ಲಿ ಮ್ಯಾಥ್ಸ್‌, ಸೈನ್ಸ್, ಸೋಷಿಯಲ್ ಪಾಠ ಕೇಳಿದ ಮಾತ್ರಕ್ಕೆ ಮತ್ತು ಓದಿದ ಮಾತ್ರಕ್ಕೆ ಇಂಗ್ಲಿಷ್ ಮಾತನಾಡಲು ಬರುವುದಿಲ್ಲ. ಇಂಗ್ಲಿಷ್ ಮಾತನಾಡಲು ಬರುವುದು ಇಂಗ್ಲಿಷ್ ಮಾತನಾಡುವುದರಿಂದ.

ಇಂಗ್ಲಿಷ್ ಮಾಧ್ಯಮ ಶಾಲೆಗಳಲ್ಲಿ ಓದುವ ಮಕ್ಕಳಿಗೆ ಇಂಗ್ಲಿಷ್ ಮಾತನಾಡಲು ಬರುವುದು ಇಂಗ್ಲಿಷ್ ಮಾಧ್ಯಮದಿಂದಲ್ಲ. ಅಲ್ಲಿನ ಇಂಗ್ಲಿಷ್ ವಾತಾವರಣದಿಂದ. ಅಂದರೆ, ಎಲ್ಲರೂ ಎಲ್ಲವನ್ನೂ ಇಂಗ್ಲಿಷ್‌ನಲ್ಲೇ ಮಾತನಾಡಬೇಕು ಎಂಬ ಕಟ್ಟುಪಾಡು. ಅಂಥದ್ದೇ ವಾತಾವರಣವನ್ನು ಕಲ್ಪಿಸಿದರೆ ಸಾಕು, ನಮ್ಮ ಮಕ್ಕಳು ಕನ್ನಡ ಮಾಧ್ಯಮದಲ್ಲಿ ಓದುತ್ತಿದ್ದರೂ ಇಂಗ್ಲಿಷ್ ಮಾತನಾಡುವುದನ್ನು ಕಲಿಯುತ್ತಾರೆ.

ADVERTISEMENT

ಭಾಷಾಕಲಿಕೆಗೆ ಸಂಬಂಧಿಸಿದಂತೆ ಮೊದಲು ಮಾತು, ಆಮೇಲೆ ಅಕ್ಷರ. ಇದು ಕಲಿಕೆಯಲ್ಲಿ ಸಹಜ ಕ್ರಮ. ಯಾವುದೇ ಮಗು, ತನ್ನ ಮನೆಯ/ವಾತಾವರಣದ ಮಾತನ್ನು ಅಕ್ಷರ ಕಲಿಕೆಗಿಂತ ಮುಂಚೆಯೇ ಯಾವ ಪುಸ್ತಕ/ ಶಾಲೆ/ ಶಿಕ್ಷಕರ ಅಗತ್ಯವೇ ಇಲ್ಲದೆ ಕಲಿಯುತ್ತದೆ. ಇದು ಇಂಗ್ಲಿಷೂ ಸೇರಿದಂತೆ ಎಲ್ಲ ಭಾಷೆಗಳಿಗೂ ಅನ್ವಯವಾಗುವ ಸತ್ಯ.

‌ಫೂಲ್‌ಪ್ರೂಫ್ ವಿಧಾನ

ಇದೊಂದು ಸರಳ ತರಬೇತಿ ಕ್ರಮ. ಇಂಗ್ಲಿಷ್ ಅಕ್ಷರಾಭ್ಯಾಸ ಮಾಡಿಸುವ, ಇಂಗ್ಲಿಷ್ ಪದಗಳು, ವಾಕ್ಯಗಳು, ವ್ಯಾಕರಣ ಇತ್ಯಾದಿ ಯಾವುದನ್ನು ಹೇಳಿಕೊಡುವ ಗೋಜಲಿಲ್ಲ. ನೇರ ಮಾತುಕತೆಯಷ್ಟೆ - ಇಂಗ್ಲಿಷ್‌ನಲ್ಲಿ.

ಇದರಲ್ಲಿ ತರಬೇತಿದಾರರು ಒಬ್ಬ ವಿದ್ಯಾರ್ಥಿಯನ್ನು ವೇದಿಕೆಗೆ ಕರೆಯುತ್ತಾರೆ. ವಿದ್ಯಾರ್ಥಿ ವೇದಿಕೆಗೆ ಬಂದು ತರಬೇತುದಾರರ ಎದುರು ನಿಂತ ಮೇಲೆ, ತರಬೇತಿದಾರರು ಒಂದು ಚೆಂಡನ್ನು ವಿದ್ಯಾರ್ಥಿಗೆ ತೋರಿಸುತ್ತಾ, ಪ್ರಶ್ನಿಸುತ್ತಾರೆ ‘ವಾಟ್‌ ಈಸ್‌ ದಿಸ್‌’? ಎಂದು. ಅದಕ್ಕೆ ವಿದ್ಯಾರ್ಥಿ ‘ದಿಸ್‌ ಈಸ್‌ ಬಾಲ್‌’ ಎಂದು ಉತ್ತರಿಸುವುದನ್ನು ಕಲಿಸುತ್ತಾರೆ. ಅನಂತರ ಶಿಕ್ಷಕರು ಚೆಂಡನ್ನು ಮೊದಲ ವಿದ್ಯಾರ್ಥಿಗೆ ಕೊಟ್ಟು, ಎರಡನೆಯ ವಿದ್ಯಾರ್ಥಿಯನ್ನು ವೇದಿಕೆಯ ಮೇಲೆ ಕರೆಯುವಂತೆ ಹೇಳುತ್ತಾರೆ. ಎರಡನೆಯ ವಿದ್ಯಾರ್ಥಿ ವೇದಿಕೆಗೆ ಬಂದು, ಮೊದಲ ವಿದ್ಯಾರ್ಥಿಯ ಎದುರು ನಿಂತ ಮೇಲೆ, ಮೊದಲನೆ ವಿದ್ಯಾರ್ಥಿ ಚೆಂಡನ್ನು ತೋರಿಸುತ್ತಾ, ಎರಡನೆ ವಿದ್ಯಾರ್ಥಿಯನ್ನು ಪ್ರಶ್ನಿಸುತ್ತಾನೆ: ವಾಟ್‌ ಈಸ್‌ ದಿಸ್‌? ಎರಡನೆಯ ವಿದ್ಯಾರ್ಥಿ ಉತ್ತರಿಸುತ್ತಾನೆ: ‘ದಿಸ್‌ ಈಸ್‌ ಬಾಲ್‌’.

ಈ ಸರಪಳಿ ಹೀಗೆಯೇ ಮುಂದುವರಿದು, ಇಡೀ ತರಗತಿಯ ಮಕ್ಕಳೆಲ್ಲ ಮೇಲಿನ ಮಾತುಕತೆಯಲ್ಲಿ ಭಾಗವಹಿಸಲು ತರಬೇತುದಾರರು ಅನುವು ಮಾಡಿಕೊಡುತ್ತಾರೆ. ಮುಂದಿನ ತರಗತಿಗಳಲ್ಲಿ ವಾಟ್‌ನಿಂದ ಪ್ರಾರಂಭವಾಗುವ ಎರಡು ಪ್ರಶ್ನೆಗಳನ್ನು ಕೇಳುವ ಮತ್ತು ಅವುಗಳಿಗೆ ಉತ್ತರಿಸುವುದನ್ನು ಕಲಿಸುತ್ತಾರೆ. ಆಮೇಲೆ ಮೂರು ಪ್ರಶ್ನೆಗಳು, ಮೂರು ಉತ್ತರಗಳು. ಇದೇ ರೀತಿಯಾಗಿ ಹೂ, ವೇರ್‌, ವಿಚ್‌, ವೆನ್‌ ಇತ್ಯಾದಿಗಳಿಂದ ಪ್ರಾರಂಭವಾಗುವ ಪ್ರಶ್ನೆ ಕೇಳುವುದನ್ನು ಮತ್ತು ಉತ್ತರಿಸುವುದನ್ನು ಕಲಿಸುತ್ತಾರೆ.

ಮಾತಿನ ಕಲಿಕೆಗೆ ಇಂಗ್ಲಿಷ್ ಶಿಕ್ಷಕರೇ ಬೇಕಿಲ್ಲ!

ಈ ಪದ್ಧತಿಯಲ್ಲಿ ವೇದಿಕೆಯ ಮೇಲೆ ಕೇವಲ ಮಕ್ಕಳದ್ದೇ ಕಲರವ ಇರುತ್ತದೆ. ತರಬೇತಿದಾರರು ಕೇವಲ ಮಾತುಕತೆಯನ್ನು ಪ್ರಾರಂಭಿಸುತ್ತಾರೆ. ಅನಂತರ ಪಕ್ಕದಲ್ಲಿ ನಿಂತು, ಉಳಿದೆಲ್ಲ ಮಾತುಕತೆಯನ್ನು ಮಕ್ಕಳೇ ಸರತಿಯಲ್ಲಿ ಒಬ್ಬರೆದುರು ಇನ್ನೊಬ್ಬರು ನಿಂತು ಮಾಡಲು ಸಹಕರಿಸುತ್ತಾರೆ. ಮಕ್ಕಳು ಮಾತುಕತೆಯಾಡುವಾಗ ಅದನ್ನು ಸರಿಯಾಗಿ ಆಡುತ್ತಿದ್ದಾರೆಯೇ ಇಲ್ಲವೇ ಎಂಬುದನ್ನು ಗಮನಿಸುತ್ತಿರುತ್ತಾರೆ. ಯಾವುದೇ ಮಗು ಮಾತುಕತೆ ಸರಿಯಾಗಿ ಆಡದಿದ್ದ ಸಂದರ್ಭದಲ್ಲಿ ಮಾತ್ರ ಮಧ್ಯ ಪ್ರವೇಶಿಸಿ ತಪ್ಪನ್ನು ಸರಿ ಮಾಡುತ್ತಾರೆ. ಮಕ್ಕಳು ಮಾತುಕತೆಯನ್ನು ಸರಿಯಾಗಿ ಆಡುವವರೆಗೆ ಅವರಿಂದ ಆಡಿಸುತ್ತಾರೆ. ಕಲಿಸುವುದೆಂದರೆ ಇದೇ ತಾನೆ.

ಮೇಲಿನ ತರಬೇತಿಯನ್ನು ನೀಡಲು ಇಂಗ್ಲಿಷ್ ಶಿಕ್ಷಕರೇ ಬೇಕಿಲ್ಲ! ಈಗಿರುವ ಯಾವುದೇ ಶಿಕ್ಷಕರಾದರೂ ಸಾಕು. ಅವರಿಗೆ ಒಂದಿಷ್ಟು ಪ್ರಾಯೋಗಿಕ ತರಬೇತಿ ನೀಡಿದರೆ ಅವರು ಮಕ್ಕಳಿಗೆ ಇಂಗ್ಲಿಷ್ ಮಾತನಾಡುವುದನ್ನು ಕಲಿಸುವುದರೊಂದಿಗೆ ತಾವೂ ಕಲಿಯುತ್ತಾರೆ. ಅಲ್ಲದೆ, ಈ ಪದ್ಧತಿಯಲ್ಲಿ ಮಕ್ಕಳಿಗೆ ಪಠ್ಯ ಪುಸ್ತಕ, ಪೆನ್ಸಿಲ್, ನೋಟ್ ಪುಸ್ತಕ ಯಾವುದೂ ಬೇಡ. ತರಬೇತಿದಾರರಿಗೆ ತರಬೇತಿಯ ಮಾರ್ಗದರ್ಶನ ಮತ್ತು ಎಲ್ಲ ಸಂದರ್ಭಗಳನ್ನು ನಿಭಾಯಿಸಲು ಶಕ್ಯವಾದಂಥ ಪ್ರಶ್ನೆ-ಉತ್ತರಗಳನ್ನೊಳಗೊಂಡ ಒಂದು ಕೈಪಿಡಿ ಕೊಟ್ಟರಾಯಿತು.

ಭಾಷೆಯಾಗಿ ಇಂಗ್ಲಿಷ್

ಇದಕ್ಕೆ ಸಮಾಂತರವಾಗಿ, ಚುಕ್ಕಿಯಾಟದ ಮೂಲಕ ಅಕ್ಷರ ಕಲಿಕೆ ಎಂಬ ತರಬೇತಿಯನ್ನು ನೀಡಬಹುದು. ಪಠ್ಯ ಇಂಗ್ಲಿಷಿನ ಭಾಗದಂತಿರುವ ಇದರಲ್ಲಿ, ಅಕ್ಷರಾಭ್ಯಾಸದ ನಡುವೆಯೂ ಇಂಗ್ಲಿಷ್ ಮಾತುಗಾರಿಕೆಯ ತಂತ್ರವನ್ನು ಸೇರಿಸಲಾಗಿದೆ.ಮುಂದೆ ಇಂಗ್ಲಿಷ್ ಪದಗಳು, ವಾಕ್ಯಗಳು ಇತ್ಯಾದಿಗಳನ್ನು ಮಾತಿನಲ್ಲಿ ಬಳಸುವ, ಓದುವ ಮತ್ತು ಬರೆಯುವ ತರಬೇತಿಯನ್ನು ನೀಡಿದರೆ ಮಕ್ಕಳ ಇಂಗ್ಲಿಷ್ ಕಲಿಕೆ ಪರಿಪೂರ್ಣವಾಗಿರುತ್ತದೆ. ಒಂದಕ್ಕೊಂದು ಪೂರಕವಾಗಿರುವ ಮೇಲಿನ ಎರಡು ತರಬೇತಿಗಳಿಂದ ಮಕ್ಕಳು ಇಂಗ್ಲಿಷ್‌ನಲ್ಲಿ ಮಾತನಾಡುವುದನ್ನು, ಓದುವುದನ್ನು ಮತ್ತು ಬರೆಯುವುದನ್ನು ಕಲಿಯುವುದರಲ್ಲಿ ಸಂಶಯವಿಲ್ಲ.

ತರಬೇತಿ ಮುಖ್ಯ

ಕನ್ನಡ ಮಾಧ್ಯಮದಲ್ಲಿ ಓದುವ ವಿದ್ಯಾರ್ಥಿಯೊಬ್ಬನಿಗೆ ಕನ್ನಡದಲ್ಲಿ ಮಾತನಾಡುವಷ್ಟೆ ಚೆನ್ನಾಗಿ ಇಂಗ್ಲಿಷ್ ಮಾತನಾಡಲು ತರಬೇತಿ ನೀಡಿದರೆ, ಅವನು ಕನ್ನಡದಲ್ಲಿ ಓದಿ ಅರ್ಥ ಮಾಡಿಕೊಂಡ ಯಾವುದೇ ವಿಷಯವನ್ನು ಇಂಗ್ಲಿಷ್‌ನಲ್ಲೂ ವಿವರಿಸಬಲ್ಲ ಸಾಮರ್ಥ್ಯವನ್ನು ಗಳಿಸಿರುತ್ತಾನೆ. ಏಕೆಂದರೆ ವಿಷಯ ಯಾವುದಾದರೇನು? ಭಾಷೆ ಅದೇ. ಕೇವಲ ಆಯಾ ವಿಷಯಕ್ಕೇ ಸಂಬಂಧಿಸಿದ ವಿಶಿಷ್ಟ (ಪಾರಿಭಾಷಿಕ) ಪದಗಳಿರುತ್ತವೆ ಅಷ್ಟೆ. ಉಳಿದದ್ದೆಲ್ಲ ಎಲ್ಲ ಸಂದರ್ಭಗಳಲ್ಲೂ ಬಳಸುವ ಪದಗಳೇ ಆಗಿರುತ್ತವೆ. ಉಳಿದವೆಲ್ಲ ಸಾಮಾನ್ಯ ಪದಗಳು. ಹೇಗೂ ಎಲ್ಲ ಕನ್ನಡ ಪಾರಿಭಾಷಿಕ ಪದಗಳಿಗೆ ಇಂಗ್ಲಿಷ್‌ನ ಪಾರಿಭಾಷಿಕ ಪದಗಳನ್ನು ಕಂಸದಲ್ಲಿ ಕೊಟ್ಟಿರುತ್ತಾರೆ. ಮಕ್ಕಳಿಗೆ ಎರಡೂ ಭಾಷೆಯ ಪದಗಳ ಪರಿಚಯವಿರುತ್ತದೆ. ಹೀಗಾಗಿ ಮಾಧ್ಯಮದ ತೊಂದರೆಯಾಗುವುದಿಲ್ಲ.

ನಮ್ಮ ಮಕ್ಕಳು ಕನ್ನಡ ಮಾಧ್ಯಮದಲ್ಲೂ ಸುಲಭವಾಗಿ, ಸಹಜವಾಗಿ ಮತ್ತು ಕಷ್ಟವಿಲ್ಲದೆ ಜ್ಞಾನಾರ್ಜನೆ ಮಾಡಬಹುದು. ಜೊತೆಗೆ, ಇಂಗ್ಲಿಷ್ ಮಾತನಾಡುವ ಕಲೆಯನ್ನೂ ಕಲಿಸಬಹುದು. ಕನ್ನಡದಲ್ಲಿ ಪಡೆದ ಜ್ಞಾನವನ್ನು ಇಂಗ್ಲಿಷ್‌ನಲ್ಲೂ ಪ್ರಸ್ತುತ ಪಡಿಸಬಲ್ಲ ಸಾಮರ್ಥ್ಯವನ್ನು ದಕ್ಕಿಸಿಕೊಡಬಹುದು. ಇದರಿಂದ ನಮ್ಮ ಮಕ್ಕಳು ಕನ್ನಡದ ಅಸ್ಮಿತೆಯನ್ನು ಉಳಿಸಿಕೊಂಡಂತೆಯೂ ಆಗುತ್ತದೆ; ಅವರ ಪೋಷಕರ ಅಭೀಪ್ಸೆಯಂತೆ ಬದುಕನ್ನು ಕಟ್ಟಿಕೊಳ್ಳಲು ಸಮರ್ಥರೂ ಆಗುತ್ತಾರೆ.

ಭಾಷಾ ಕಲಿಕೆಏಕಾಂಗಿ ಕ್ರಿಯೆಯಲ್ಲ

ಭಾಷೆ ಮಾತನಾಡುವುದನ್ನು ಕಲಿಯುವುದು ಏಕಾಂಗಿ ಕ್ರಿಯೆಯಲ್ಲ. ಅದು ಸಾಮೂಹಿಕ ಕ್ರಿಯೆ. ಈ ಸಾಮೂಹಿಕ ಕ್ರಿಯೆಯಲ್ಲಿ ಮಕ್ಕಳನ್ನು ತೊಡಗಿಸಿದರೆ ಸಾಕು, ಅವರು ಇಂಗ್ಲಿಷ್ ಮಾತನಾಡುವುದನ್ನು ಕಲಿಯುತ್ತಾರೆ.

ಭಾಷೆ ಮಾತನಾಡುವುದನ್ನು ಕಲಿಯಲು ಇರುವುದು ಒಂದೇ ದಾರಿ: ಸುಮ್ಮನೆ ಮಾತನಾಡುತ್ತಾ ಹೋಗುವುದು. ಅದಕ್ಕೊಬ್ಬ ಜೊತೆಗಾರ ಬೇಕು. ಜೊತೆಗಾರನೊಂದಿಗೆ ಮಾತನಾಡುತ್ತಾ ಮಾತನಾಡುತ್ತಾ ಮಾತನಾಡುವುದನ್ನು ಕಲಿಯಬಹುದು.

ಮಕ್ಕಳು ತಮ್ಮ ತಮ್ಮಲ್ಲೇ ಇಂಗ್ಲಿಷ್ ಮಾತನಾಡುವಂತೆ ಮಾಡಲು ಯಾವುದಾದರೂ ಪರಿಣಾಮಕಾರಿ ಮಾರ್ಗವಿದೆಯೇ ಎಂಬುದನ್ನು ನಾವು ಶೋಧಿಸಿಕೊಂಡರೆ, ಮಾಧ್ಯಮದ ಸಮಸ್ಯೆಗೆ ಒಂದು ಪರಿಹಾರ ಸಿಗುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.