ADVERTISEMENT

ಇಂಗ್ಲಿಷ್ ಕಲಿಕೆಯಲ್ಲಿ ರಂಗತಂತ್ರ, ಹೇಗೆ, ಎಂತು...

ವಿಶಾಖ ಎನ್.
Published 27 ನವೆಂಬರ್ 2018, 19:30 IST
Last Updated 27 ನವೆಂಬರ್ 2018, 19:30 IST
ಸಾಣೇಹಳ್ಳಿಯಲ್ಲಿ ಶಿಕ್ಷಕರಿಗೆ ತರಬೇತಿ
ಸಾಣೇಹಳ್ಳಿಯಲ್ಲಿ ಶಿಕ್ಷಕರಿಗೆ ತರಬೇತಿ   

ಹೋದವರ್ಷ ಚಿತ್ರದುರ್ಗ ಜಿಲ್ಲೆಯ ಸಾಣೇಹಳ್ಳಿಯಲ್ಲಿ ಮೂವತ್ತು ಶಿಕ್ಷಕರಿಗೆ ‘ಭಾಷಾ ಕಲಿಕೆಯಲ್ಲಿ ರಂಗತಂತ್ರಗಳ ಪಾತ್ರ’ ಎನ್ನುವ ಕುರಿತು ಶಿಬಿರವೊಂದನ್ನು ಆಯೋಜಿಸಲಾಗಿತ್ತು. ಅಲ್ಲಿ ವಿವಿಧ ಶಾಲೆಗಳ ಶಿಕ್ಷಕ-ಶಿಕ್ಷಕಿಯರಿಗೆ ತರಬೇತಿ ನೀಡಿದವರು ಚನ್ನಗಿರಿ ತಾಲ್ಲೂಕು ಮಾವಿನಕಟ್ಟೆ ಸರ್ಕಾರಿ ಶಾಲೆಯ ರಂಗಶಿಕ್ಷಕ ವೆಂಕಟೇಶ್ವರ ಕೆ. ಹಾಗೂ ಹಾವೇರಿ ಜಿಲ್ಲೆಯ ಶಿಗ್ಗಾಂವ್ ಬಳಿಯ ಕ್ಯಾಲಕೊಂಡ ಸರ್ಕಾರಿ ಶಾಲೆಯ ರಂಗಶಿಕ್ಷಕ ಕೃಷ್ಣಮೂರ್ತಿ ಕ್ಯಾಲಕೊಂಡ.

ಇಡೀ ರಾಜ್ಯದಲ್ಲಿ 47 ರಂಗಶಿಕ್ಷಕರು ಸರ್ಕಾರಿ ಶಾಲೆಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಅಲ್ಲೆಲ್ಲ ವಿವಿಧ ವಿಷಯಗಳ ಬೋಧನೆಗೆ ರಂಗತಂತ್ರಗಳನ್ನು ಅಳವಡಿಸಿಕೊಳ್ಳಲಾಗಿದೆ. ವೆಂಕಟೇಶ್ವರ ಅಂಥ ತಂತ್ರವನ್ನು ಇಂಗ್ಲಿಷ್ ಪಠ್ಯಕ್ಕೆ ಅಳವಡಿಸಿಕೊಂಡ ಬಗೆಯನ್ನು ಹಂಚಿಕೊಂಡಿದ್ದಾರೆ.

ಈ ಮೇಷ್ಟರು ಇಂಗ್ಲಿಷ್‌ನಲ್ಲೇ ಬಿ.ಎಡ್. ಮಾಡಿರುವುದು. ಅಲ್ಲದೆ ನೀನಾಸಂನಲ್ಲಿ ರಂಗಶಿಕ್ಷಣ ಪಡೆದುಕೊಂಡಿದ್ದಾರೆ. ಎರಡನ್ನೂ ಬೆಸೆದು ತಮ್ಮ ಶಾಲೆಯಲ್ಲಿ 8, 9 ಹಾಗೂ 10ನೇ ತರಗತಿಯ ಮಕ್ಕಳಿಗೆ ಇಂಗ್ಲಿಷ್ ಕಲಿಸುತ್ತಾರೆ. ಸದ್ಯಕ್ಕೆ 8, 9ನೇ ತರಗತಿಯ ಮಕ್ಕಳಿಗೆ ವ್ಯಾಕರಣವನ್ನು ಕಲಿಸಲು ಮಾತ್ರ ಈ ತಂತ್ರ ಬಳಸುತ್ತಿದ್ದು, 10ನೇ ತರಗತಿಯ ಮಕ್ಕಳಿಗೆ ಪಾಠಗಳನ್ನು ತಿಳಿಹೇಳಲೂ ಇದೇ ಕ್ರಮವನ್ನು ಅನುಸರಿಸುತ್ತಿರುವುದು ವಿಶೇಷ.

ADVERTISEMENT

‘ಹಳ್ಳಿ ಶಾಲೆಗಳಲ್ಲಿ ಹೈಸ್ಕೂಲಿಗೆ ಬರುವ ಬಹುತೇಕ ಮಕ್ಕಳಿಗೆ ಇಂಗ್ಲಿಷ್ ಆಲ್ಫಬೆಟ್ಸ್ ಕೂಡ ಸರಿಯಾಗಿ ತಿಳಿದಿರುವುದಿಲ್ಲ. ಹೀಗಾಗಿ ಮೊದಲಿಗೆ ನಾನು ಎಲ್ಲಾ ಮಕ್ಕಳನ್ನೂ ಒಂದೊಂದು ಆಲ್ಫಬೆಟ್ ಆಗಿ ಹೆಸರಿಸುತ್ತೇನೆ; ಎ, ಬಿ, ಸಿ, ಡಿ ಹೀಗೆ. ಆಯಾ ವಿದ್ಯಾರ್ಥಿ-ವಿದ್ಯಾರ್ಥಿನಿ ನಾವು ಹೇಳಿದ ಕಾಂಬಿನೇಷನ್‌ನಲ್ಲಿ ಸಾಲಾಗಿ ನಿಲ್ಲುವ ಮೂಲಕ ಅಕ್ಷರಗಳ ಪುಂಜವನ್ನು ತಿಳಿಸಿಕೊಡುತ್ತೇವೆ. ಉದಾಹರಣೆಗೆ ‘ಇ, ಎಫ್, ಜಿ’ ಎಂದರೆ ಆ ಆಲ್ಫಬೆಟ್‌ಗಳಾಗಿರುವ ಮೂವರು ಸಾಲಾಗಿ ನಿಲ್ಲುತ್ತಾರೆ. ಮುಂದಿನ ಹಂತದಲ್ಲಿ ಅಕ್ಷರಗಳನ್ನು ಬೆರೆಸಿದಂತೆ ಸಮೂಹಗಳನ್ನಾಗಿಸುತ್ತೇವೆ. ಉದಾಹರಣೆಗೆ: ‘ಎಂ, ಕ್ಯೂ, ವೈ’ ಎಂದರೆ ಆಯಾ ಆಲ್ಫಬೆಟ್ ಆಗಿರುವ ಮಕ್ಕಳು ಒಂದೆಡೆ ಸೇರಬೇಕು. ಇದೇ ತಂತ್ರವನ್ನು ವಿಸ್ತರಿಸಿ ಪದಗಳ ಕಲಿಕೆಗೂ ಅನ್ವಯಿಸುತ್ತೇವೆ’ - ಹೀಗೆ ರಂಗಾಟದ ಮೂಲಕ ಇಂಗ್ಲಿಷ್ ಪದಪಾಠ ಮಾಡುವ ಬಗೆಯನ್ನು ವೆಂಕಟೇಶ್ವರ ಬಿಚ್ಚಿಟ್ಟರು.

ರಂಗಪ್ರಕ್ರಿಯೆಯಲ್ಲಿ ಮೂರು ಘಟಕಗಳಿವೆ. ಒಂದು-ನೆನಪಿನಾಟ. ಎರಡನೆಯದು-ಏಕಾಗ್ರತೆ ಹೆಚ್ಚಿಸಿಕೊಳ್ಳುವ ಆಟ. ಮೂರನೆಯದು-ವಾರ್ಮ್ ಅಪ್ ಅರ್ಥಾತ್ ಸರಳ ವ್ಯಾಯಾಮ. ಯಾವ ಅಕ್ಷರ ಯಾರು ಎಂದು ಗುರುತಿಸುವುದೇ ನೆನಪಿನಾಟ. ಸಮೂಹಗಳಾಗಿ ಎಲ್ಲರೂ ಸೇರುವ ಬಗೆ ಏಕಾಗ್ರತೆಯನ್ನು ರೂಢಿಸುತ್ತದೆ. ದೇಹದ ಬಾಗು-ಬಳುಕುವಿಕೆಗೆ ಅನುವಾಗುವಂತೆ ಸರಳ ವ್ಯಾಯಾಮ ಮಾಡುವುದರಿಂದ ಮಕ್ಕಳಲ್ಲಿನ ಅಂತರ್ಮುಖಿ ಧೋರಣೆ ಕಡಿಮೆಯಾಗಿ, ಅವರು ಎಲ್ಲರ ಜತೆ ಮುಕ್ತವಾಗಿ ಬೆರೆಯುತ್ತಾರೆ.

ಇಂಗ್ಲಿಷ್‌ನ 26 ಅಕ್ಷರ ಹಾಗೂ 44 ಧ್ವನಿಸಂಕೇತಗಳನ್ನು (ಸೌಂಡ್ ಇಮೇಜಸ್) ವೆಂಕಟೇಶ್ವರ ಈ ರಂಗತಂತ್ರದಿಂದ ಹೇಳಿಕೊಡುತ್ತಾರೆ.

‘ಹಳ್ಳಿಯ ಮಕ್ಕಳಿಗೆ ಉಚ್ಚಾರಣೆಯ ಮುಖ್ಯ ಸಮಸ್ಯೆ ಇರುತ್ತದೆ. ಮನೆಯಲ್ಲಿ ಆಡುವ ಭಾಷೆಯೇ ಮನದಲ್ಲಿ ಕುಳಿತಿರುತ್ತದೆ. ಹೀಗಾಗಿ ಅವರು ಇಂಗ್ಲಿಷನ್ನೂ ಮಾತೃಭಾಷೆಯ ಮೂಲಕವೇ ದಕ್ಕಿಸಿಕೊಳ್ಳುವುದು. ಮೊದಲಿಗೆ ಮಾತೃಭಾಷೆಯನ್ನೂ ತಿದ್ದಬೇಕಾಗುತ್ತದೆ. ಮೊದಲ ಭಾಷೆ ಕನ್ನಡ. ಎರಡನೇ ಭಾಷೆ ಇಂಗ್ಲಿಷ್. ಕನ್ನಡದಲ್ಲಿನ ಜಟಿಲ, ಕ್ಲೀಷೆ, ಜಿಜ್ಞಾಸೆ ಇಂಥ ಪದಗಳ ಗ್ರಹಿಕೆಯಲ್ಲಿ ಮಕ್ಕಳು ದುರ್ಬಲರಾದರೆ, ಇಂಗ್ಲಿಷ್‌ನ ಜಾಯಮಾನವನ್ನು ಗ್ರಹಿಸಲೂ ಪರದಾಡಬೇಕಾಗುತ್ತದೆ. ಎಷ್ಟೋ ಮಕ್ಕಳಿಗೆ ಪ್ರೊನನ್ಸಿಯೇಷನ್ ಎಂದು ಹೇಳಲೂ ಬರುವುದಿಲ್ಲ; ಫೊನೆಟಿಕ್ ಸೌಂಡ್‌ಗಳಂತೂ ದೂರದ ಮಾತು. ಅಕ್ಷರಗಳಾಗುವ ಆಟ ಇಂಥ ಸಮಸ್ಯೆ ಹೋಗಲಾಡಿಸುವ ತಂತ್ರವೂ ಹೌದು’ ಎನ್ನುತ್ತಾರೆ ವೆಂಕಟೇಶ್ವರ.

ಹಾಗಿದ್ದರೆ, ಒಂದು ಪದದಲ್ಲಿ ಎರಡು ಏಕರೀತಿಯ ಅಕ್ಷರಗಳು ಬಂದರೆ ಮಕ್ಕಳು ಹೇಗೆ ತೋರಿಸುತ್ತಾರೆ ಎಂಬ ಇನ್ನೊಂದು ಪ್ರಶ್ನೆ ಮೂಡುತ್ತದೆ. ಉದಾಹರಣೆಗೆ, Apple. ‘ಎ’ ಅಕ್ಷರ ಆಗಿರುವ ಬಾಲಕ ಅಥವಾ ಬಾಲಕಿಯ ಪಕ್ಕ ‘ಪಿ’ ಅಕ್ಷರದ ಪಾತ್ರ ನಿಂತು, ಒಂದು ಕೈ ಮೇಲೆತ್ತುತ್ತದೆ. ಹೀಗೆ ಮಾಡಿದರೆ ಎರಡು ಸಲ ‘ಪಿ’ ಎಂದು ಅರ್ಥೈಸಿಕೊಳ್ಳುವುದು ರಂಗತಂತ್ರದ ಒಂದು ಸೂಕ್ಷ್ಮ.

ರಂಗಪಾತ್ರಗಳ ಮೂಲಕವೇ ಇಂಗ್ಲಿಷ್‌ನ 44 ಸೌಂಡ್ ಇಮೇಜಸ್ ಕೂಡ ಕಟ್ಟಿಕೊಡುವುದರಲ್ಲಿ ವೆಂಕಟೇಶ್ವರ ಯಶಸ್ವಿಯಾಗಿದ್ದಾರೆ. ಅಷ್ಟೇ ಅಲ್ಲ, ವ್ಯಾಕರಣಕ್ಕೂ ಇದೇ ಸೂಕ್ಷ್ಮವನ್ನು ಅನ್ವಯಿಸಿ ಕ್ರಿಯಾಪದ, ನಾಮಪದ ಇತ್ಯಾದಿಯ ಮರ್ಮವನ್ನು ತಿಳಿಸಿಕೊಟ್ಟಿದ್ದಾರೆನ್ನುವುದು ವಿಶೇಷ. ಅಕ್ಷರ ಕಲಿಕೆ, ವ್ಯಾಕರಣ ಕಲಿಕೆಯ ಮಾತಾಯಿತು. ಈ ತಂತ್ರ ಬಳಸಿ ಪಾಠವನ್ನು ಬೋಧಿಸುವುದಾದರೂ ಹೇಗೆ? ಇದನ್ನು ವೆಂಕಟೇಶ್ವರ ಅವರು ಬಿಡಿಸಿಡುವುದು ಹೀಗೆ:

‘ಹತ್ತನೇ ತರಗತಿಯಲ್ಲಿ ಆರ್. ಕೆ. ನಾರಾಯಣ್ ಅವರ ‘ಹೀರೊ’ ಎಂಬ ಪಾಠವಿದೆ. ಅದರಲ್ಲಿ ಅಪ್ಪ ಪತ್ರಿಕೆಯನ್ನು ಓದಿ, ಮಗನಿಗೆ ಏನನ್ನೋ ವರದಿ ಮಾಡುವಂತೆ ಸೂಚಿಸುವ ಪ್ರಸಂಗವಿದೆ. ಅದನ್ನು ನಾವು ಮಕ್ಕಳನ್ನೇ ಪಾತ್ರಗಳಾಗಿಸಿ, ಅಭಿನಯದ ಮೂಲಕ ತೋರಿಸುತ್ತೇವೆ. ಮೊದಲು ಕನ್ನಡದಲ್ಲಿ ಪಾಠಪ್ರಸಂಗದ ನಾಟಕ ಆಡಿಸುತ್ತೇವೆ. ಆಮೇಲೆ ಇಂಗ್ಲಿಷ್‌ನಲ್ಲಿ ಆಡಿಸುತ್ತೇವೆ, ಹೀಗಾದಾಗ ಅವರು ಪರೀಕ್ಷೆಯಲ್ಲಿ ಕೇಳಬಹುದಾದ ಎಲ್ಲ ರೀತಿಯ ಪ್ರಶ್ನೆಗಳಿಗೂ ಸಮರ್ಥ ಉತ್ತರ ನೀಡಬಲ್ಲರು. ‘ಮಾಲ್ಗುಡಿ ಡೇಸ್’ನ ‘ಸ್ವಾಮಿ ಅಂಡ್ ಫ್ರೆಂಡ್ಸ್’ನ ಒಂದು ಕಂತಿನಲ್ಲಿ ಅದೇ ಪಾಠದ ಸಾರಾಂಶ ಇರುವುದರಿಂದ ಆ ವಿಡಿಯೊ ಡೌನ್‌ಲೋಡ್‌ ಮಾಡಿ, ಮಕ್ಕಳಿಗೆ ತೋರಿಸಿದೆ. ಅದು ಇಂಗ್ಲಿಷ್‌ನಲ್ಲೇ ಇರುವುದರಿಂದ ಪದಗಳ ಉಚ್ಚಾರಣೆ, ಏರಿಳಿತದ ಸೂಕ್ಷ್ಮ ಮಕ್ಕಳಿಗೆ ಸುಲಭವಾಗಿ ಅರ್ಥವಾಯಿತು.’

ಹಲವು ರಾಷ್ಟ್ರಗಳಲ್ಲಿ ಈ ತಂತ್ರವನ್ನು ಅಳವಡಿಸಿಕೊಂಡಿದ್ದು, ವಿದ್ಯಾರ್ಥಿಗಳಲ್ಲಿ ಸಮಾನತೆಯನ್ನು ಇದು ರೂಢಿಸುತ್ತದೆ ಎನ್ನುತ್ತಾರೆ ವೆಂಕಟೇಶ್ವರ. ಎಲ್ಲ ವಿಷಯಗಳಲ್ಲೂ ಈ ತಂತ್ರ ಉಪಯೋಗಿಸಿ ಬೋಧಿಸುವುದು ಸಾಧ್ಯವಿದೆ ಎನ್ನುವ ಅವರು, ಅದಕ್ಕೆ ಅಸಂಖ್ಯ ಪ್ರಾತ್ಯಕ್ಷಿಕೆಗಳನ್ನೂ ನೀಡಬಲ್ಲರು. ಸಾಣೇಹಳ್ಳಿಯಲ್ಲಿ ನಡೆದದ್ದು ಅಂಥದ್ದೇ ಶಿಬಿರ. ಅಲ್ಲಿ ಮೊದ ಮೊದಲು ಹಿಂಜರಿಕೆಯಿಂದಲೇ ಕಲಿತ ಶಿಕ್ಷಕರು ಆಮೇಲೆ ಶಾಲೆಯಲ್ಲಿ ತಾವೇ ಅಭಿನಯಿಸಿ ತೋರಿಸುವಷ್ಟು ಮೈಚಳಿ ಬಿಟ್ಟಿದ್ದನ್ನು ಇವರು ಕಂಡಿದ್ದಾರೆ. ಸದ್ಯಕ್ಕೆ ಹೆಚ್ಚುವರಿ ತರಗತಿ, ರಂಗತರಗತಿಯಲ್ಲಿ ಈ ರೀತಿ ಪಾಠ ಕಲಿಸಲು ಇವರಿಗೆ ಸಾಧ್ಯವಾಗುತ್ತಿದೆ. ಶಾಲೆಯ ಇತರ ಶಿಕ್ಷಕರಿಗೂ ಇದರ ಸೂಕ್ಷ್ಮ ಕ್ರಮೇಣ ದಾಟುತ್ತದೆ ಎನ್ನುವುದು ಇವರ ವಿಶ್ವಾಸ.

ಸ್ಪರ್ಧೆಯಲ್ಲೂ ಸೈ

‘ಪ್ರತಿಭಾ ಕಾರಂಜಿ’ಗಾಗಿ ವಿಜ್ಞಾನ ನಾಟಕಗಳನ್ನು ಅಳವಡಿಸಿಕೊಳ್ಳುವುದು ವೆಂಕಟೇಶ್ವರ ಅವರ ವಿಶೇಷತೆ. ಎರಡು ವರ್ಷಗಳ ಹಿಂದೆ ‘ಮೇರಿ ಕ್ಯೂರಿ’ ನಾಟಕ ಅಭಿನಯಿಸಿ ಅವರ ಶಾಲೆಯ ಮಕ್ಕಳು ದಕ್ಷಿಣ ಭಾರತ ಮಟ್ಟದ ಸ್ಪರ್ಧೆಯವರೆಗೆ ಸಾಗಿದ್ದರು. ಈ ಸಲ ‘ವಾಲ್ ಪರೈ’ ದುರಂತಕಥೆಯನ್ನು ಹೇಳುವ ನಾಟಕ ಕೂಡ ದಕ್ಷಿಣ ಭಾರತ ಮಟ್ಟದವರೆಗೆ ಆಯ್ಕೆಯಾಗಿದೆ. ಇದೇ 29ರಂದು ಬೆಂಗಳೂರಿನಲ್ಲಿ ಸ್ಪರ್ಧೆ ನಡೆಯಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.