ನೀವು ಎಂಜಿನಿಯರಿಂಗ್ ಪದವೀಧರರೇ? ನಿಮ್ಮಲ್ಲಿ ಅಗಾಧ ಕಂಪ್ಯೂಟರ್ ಜ್ಞಾನವಿದೆಯೇ? ಕಂಪ್ಯೂಟರ್ ನೆಟ್‌ವರ್ಕ್ ಹಾಗೂ ಪ್ರೋಗ್ರಾಮಿಂಗ್‌ನಲ್ಲಿ ನೀವು ಪರಿಣತರೇ? ಹಾಗಾದರೆ ಇಸಿ ಕೌನ್ಸಿಲ್ ಆಧಾರಿತ ಸಿಇಎಚ್(ಸರ್ಟಿಫೈಡ್ಡ್ ಎಥಿಕಲ್ ಹ್ಯಾಕರ್) ಕೋರ್ಸ್ ಮಾಡಿ ಪ್ರಮಾಣ ಪತ್ರ ಗಳಿಸಿದರೆ ನೀವು ಎಥಿಕಲ್ ಹ್ಯಾಕರ್ ಆಗಬಹುದು.
ಎಥಿಕಲ್ ಹ್ಯಾಕರ್ಸ್‌ಗಳ ಮುಖ್ಯ ಉದ್ದೇಶ ಸೈಬರ್ ಕ್ರೈಂಗಳನ್ನು ತಡೆಯುವುದು. ಇವರು ಭದ್ರತಾ ವೃತ್ತಿಪರರಾಗಿರುತ್ತಾರೆ. ‘ವೈಟ್ ಹ್ಯಾಟ್ ಹ್ಯಾಕರ್ಸ್’ ಎಂದು ಕರೆಯುವ ಇವರು ತಮ್ಮನ್ನು ನೇಮಿಸಿಕೊಂಡ ಸಂಸ್ಥೆಯ ಪರವಾಗಿ ನಿಷ್ಠೆಯಿಂದ ದುಡಿಯುತ್ತಾರೆ. ಇವರು ತಮ್ಮ ಸಂಸ್ಥೆಯ ಕಂಪ್ಯೂಟರ್ ವ್ಯವಸ್ಥೆಗಳಲ್ಲಿನ ದೋಷ ಹಾಗೂ ದೌರ್ಬಲ್ಯಗಳನ್ನು ಕಂಡುಹಿಡಿಯುತ್ತಾರೆ. ವೈಟ್ ಹಾಗೂ ಬ್ಲ್ಯಾಕ್ ಹಾಟ್ ಹ್ಯಾಕರ್ಸ್ ಇಬ್ಬರೂ ಒಂದೇ ರೀತಿಯ ಕೌಶಲಗಳನ್ನು ಹೊಂದಿರುತ್ತಾರೆ. ಆದರೆ ನೈತಿಕ ಹ್ಯಾಕರ್ಸ್‌ಗಳು ತಮ್ಮಲ್ಲಿರುವ ಈ ಕೌಶಲವನ್ನು ನ್ಯಾಯಸಮ್ಮತವಾಗಿ ಕಾನೂನುಬದ್ಧವಾಗಿ ಬಳಸಿಕೊಳ್ಳುತ್ತಾರೆ.
ಎಥಿಕಲ್ ಹ್ಯಾಕರ್ ಎಂದರೆ ಯಾರು?
ಇಸಿ ಕೌನ್ಸಿಲ್‌ನ ಪ್ರಕಾರ ‘ಒಂದು ಸಂಸ್ಥೆಯಿಂದ ನಂಬಿಕೆಯಿಂದ ನೇಮಿಸಲ್ಪಟ್ಟ, ಬ್ಲ್ಯಾಕ್ ಹ್ಯಾಟ್ ಹ್ಯಾಕರ್‌ಗಳಂತೆಯೇ ವಿಧಾನ ಹಾಗೂ ತಂತ್ರಗಳನ್ನು ಬಳಸಿ ನೆಟ್‌ವರ್ಕ್ ಹಾಗೂ ಕಂಪ್ಯೂಟರ್‌ನಲ್ಲಿನ ಸುರಕ್ಷತಾ ಅಂಶವನ್ನು ಕಾಪಾಡುವ ಹಾಗೂ ಗುಪ್ತ ಸಮಸ್ಯೆಗಳನ್ನು ಬೇಧಿಸುವ ಕೌಶಲವನ್ನು ಹೊಂದಿರುವ ವ್ಯಕ್ತಿಯೇ ಎಥಿಕಲ್ ಹ್ಯಾಕರ್’.
ವೈಟ್ ಹ್ಯಾಟ್ ಹ್ಯಾಕರ್‌ಗಳು ದೊಡ್ಡ ದೊಡ್ಡ ಹಣಕಾಸು ಸಂಸ್ಥೆಗಳು, ಬ್ಯಾಂಕ್‌ಗಳು, ಸರ್ಕಾರಿ ಕಚೇರಿಗಳ ಡೇಟಾ ಸುರಕ್ಷತತೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತಾರೆ. ಯಾಕೆಂದರೆ ಅಂತಹ ಕಂಪನಿ, ಕಚೇರಿಗಳ ಡೇಟಾಗಳ ಮೇಲೆ ಕಪ್ಪು ಟೋಪಿಯ ಹ್ಯಾಕರ್‌ಗಳು ಸದಾ ಕಣ್ಣು ನೆಟ್ಟಿರುತ್ತಾರೆ. ಆ ಕಾರಣಕ್ಕೆ ಅವರು ಒಳ ಪ್ರವೇಶಿಸದಂತೆ ತಡೆದು ಡೇಟಾ, ಸಿಸ್ಟಂ ಹಾಗೂ ನೆಟ್‌ವರ್ಕ್ ರಕ್ಷಣೆ ಮಾಡುವ ಕೆಲಸವನ್ನು ಎಥಿಕಲ್ ಹ್ಯಾಕರ್‌ಗಳು ಮಾಡುತ್ತಾರೆ.
ಕಾರ್ಯ ವಿಧಾನ
ಅವರು ತಮಗಿರುವ ಕಂಪ್ಯೂಟರ್ ಪರಿಣತಿ, ಪ್ರೋಗ್ರಾಂಮಿಂಗ್ ಜ್ಞಾನ, ವೆಬ್ ಅಪ್ಲಿಕೇಶನ್, ಅಪರೇಟಿಂಗ್ ಸಿಸ್ಟಂ, ಅಸೆಂಬ್ಲಿ ಲಾಂಗ್ವೇಜ್, ಇಂಟರ್‌ನೆಟ್ ಸೆಕ್ಯೂಟಿರಿ ಸಿಸ್ಟಂ ಈ ಎಲ್ಲವನ್ನೂ ಬಳಸಿಕೊಂಡು ಅನೈತಿಕ ಹ್ಯಾಕರ್ಸ್‌ಗಳು ಒಳ ನುಸುಳದಂತೆ ತಮ್ಮ ಸಂಸ್ಥೆಯನ್ನು ರಕ್ಷಿಸುತ್ತಾರೆ. ತಮ್ಮ ಸಂಸ್ಥೆಯ ವ್ಯವಸ್ಥೆಯಲ್ಲಿ ದಾಳಿಗೆ ಒಳಗಾಗುವ ಪ್ರದೇಶಗಳನ್ನು ಕಂಡುಹಿಡಿದು ನೆಟ್‌ವರ್ಕ್‌ನಲ್ಲಿ ಕೆಲಸ ಮಾಡುವ ಮೂಲಕ ದಾಳಿಯನ್ನು ತಪ‍್ಪಿಸುತ್ತಾರೆ.ಎನ್‌ಕ್ರಿಪ್ಷನ್, ಸೆಕ್ಯೂರಿಟಿ ಪ್ರೋಟೊಕಾಲ್ ಹಾಗೂ ಫೈರ್‌ವಾಲ್ ಸೇರಿದಂತೆ ಇತರ ಅಂತರ್ಜಾಲ ಭದ್ರತಾ ಕ್ಷೇತ್ರಗಳ ಮೇಲೆ ಅವರು ಸದಾ ನಿಗಾ ಇಡುತ್ತಾರೆ.
ಅರ್ಹತೆಗಳು
*ಕಂಪ್ಯೂಟರ್‌ನ ಇತ್ತೀಚಿನ ಬೆಳವಣಿಗೆಗಳ ಬಗ್ಗೆ ತಿಳಿದುಕೊಳ್ಳುವ ಆಸಕ್ತಿ.
* ವಿವರಗಳನ್ನು ಅರಿತು ಕೆಲಸ ಮಾಡುವ ಸಾಮರ್ಥ್ಯ ಹಾಗೂ ಗಮನ ಹರಿಸುವಿಕೆ.
* ಸವಾಲುಗಳನ್ನು ಎದುರಿಸುವ ಸಾಮರ್ಥ್ಯ.
* ಹೊಂದಿಕೊಳ್ಳುವಿಕೆ ಹಾಗೂ ತಾಳ್ಮೆ.
* ಸಿ, ಸಿ++, ಪರ್ಲ್, ಫೈಥಾನ್, ರೂಬಿ, ವೆಬ್ ಅಪ್ಲಿಕೇಷನ್‌ಗಳಾದ ಮೈಕ್ರೋಸಾಫ್ಟ್, ಎನ್ಇಟಿ ಹಾಗೂ ಪಿಎಚ್‌ಪಿ, ಅಪರೇಟಿಂಗ್ ಸಿಸ್ಟಂಗಳಾದ ಮೈಕ್ರೋಸಾಫ್ಟ್ ವಿಂಡೋ, ಲೀನಕ್ಸ್, ಅಸೆಂಬ್ಲಿ ಲಾಂಗ್ವೇಜ್, ಟಿಸಿಪಿ/ಐಪಿ ಪ್ರೋಟೊಕಾಲ್‌ಗಳಾದ ಎಸ್‌ಎಮ್‌ಟಿಪಿ ಹಾಗೂ ಎಚ್‌ಟಿಟಿಪಿ ಪ್ರೋಗ್ರಾಮಿಂಗ್‌ಗಳಲ್ಲಿ ಪ್ರಾವೀಣ್ಯತೆ ಹೊಂದಿರಬೇಕು.
*ವಿಶ್ಲೇಷಣಾತ್ಮಕ ಹಾಗೂ ತಾರ್ಕಿಕ ಚಿಂತನೆ.
* ಸಮಸ್ಯೆಗಳನ್ನು ಪರಿಹರಿಸುವ ಕೌಶಲ.
* ಸೃಜನಶೀಲತೆ.
* ಬದ್ಧತೆ ಹಾಗೂ ಪ್ರಾಮಾಣಿಕತೆ.
ಉದ್ಯೋಗಾವಕಾಶಗಳು ಎಲ್ಲೆಲ್ಲಿ
* ಹಣಕಾಸು ಸಂಸ್ಥೆಗಳು
* ಐಟಿ ಹಾಗೂ ಐಟಿಇಎಸ್ ಕಂಪನಿಗಳು
* ಎಲ್ಲಾ ರೀತಿಯ ಆನ್‌ಲೈನ್ ಬ್ಯುಸಿನೆಸ್ ಹಾಗೂ ಸಂಸ್ಥೆಗಳು
* ಕನ್ಸಲ್ಟೆನ್ಸಿಗಳು
* ಸರ್ಕಾರಿ ಕಚೇರಿಗಳು
* ಸೆಕ್ಯೂರಿಟಿ ಇನ್‌ಸ್ಟಾಲೇಷನ್
* ಸೆಕ್ಯೂರಿಟಿ ಏಜೆನ್ಸಿಸ್
* ರಕ್ಷಣಾ ಸಂಸ್ಥೆಗಳು
* ದೂರ ಸಂಪರ್ಕ ವಲಯ
* ಇಮಿಗ್ರೇಷನ್ ಸೇವೆಗಳು
* ವಿಮಾನಯಾನ ಉದ್ಯಮಗಳು
* ಹೋಟೆಲ್‌ಗಳು
*ವಿಧಿ ವಿಜ್ಞಾನ ಪ್ರಯೋಗಾಲಯಗಳು
ಪ್ಯಾಕೇಜ್:ವರ್ಷಕ್ಕೆ 12 ಲಕ್ಷದಿಂದ 1 ಕೋಟಿ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.