ADVERTISEMENT

ಪರೀಕ್ಷೆಗೆ ಸಿದ್ಧತೆ ಹೀಗಿರಲಿ..!

ಟಿ.ಎ.ಬಾಲಕೃಷ್ಣ ಅಡಿಗ
Published 15 ಜನವರಿ 2019, 19:30 IST
Last Updated 15 ಜನವರಿ 2019, 19:30 IST
ಶಿಕ್ಷಣ 
ಶಿಕ್ಷಣ    

ವಿದ್ಯಾರ್ಥಿಗಳೇ, ನಿಮ್ಮ ತರಗತಿಯಲ್ಲಿನ ಈ ವರ್ಷದ ಪಾಠ-ಪ್ರವಚನಗಳು ಬಹುತೇಕ ಮುಗಿಯುವ ಹಂತಕ್ಕೆ ತಲುಪಿದೆಯಲ್ಲವೆ? ನೀವೀಗ ಶಾಲೆಯ ಮಟ್ಟದಲ್ಲಿ ನಡೆಯುವ ಪೂರ್ವ ಸಿದ್ಧತಾ ಪರೀಕ್ಷೆಗೆ ತಯಾರಾಗುತ್ತಿದ್ದೀರಲ್ಲವೆ? ಇನ್ನು ಕೆಲವೇ ವಾರಗಳಲ್ಲಿ ಅಂತಿಮ ಪರೀಕ್ಷೆಯನ್ನು ಬರೆಯಬೇಕಾಗಿದೆ.

ಈ ಹಿನ್ನೆಲೆಯಲ್ಲಿ ಸಮಯದ ಅಭಾವ ನಿಮ್ಮನ್ನು ಕಾಡುತ್ತಿರಬೇಕಲ್ಲವೆ? ನೀವು ಧೃತಿಗೆಡುವ ಅವಶ್ಯಕತೆ ಇಲ್ಲ. ಈಗಿನಿಂದ ಪ್ರಾರಂಭಿಸಿ, ಅಂತಿಮ ಪರೀಕ್ಷೆಯ ದಿನದವರೆಗೆ ಇರುವ ಸಮಯವನ್ನು ಸದುಪಯೋಗಪಡಿಸಿಕೊಂಡು ಕ್ರಮಬದ್ಧವಾಗಿ ಅಧ್ಯಯನ ಮಾಡಿದರೆ ನೀವು ನಿರಾತಂಕವಾಗಿ ಪರೀಕ್ಷೆಗಳನ್ನು ಎದುರಿಸಬಹುದು. ಈ ನಿಟ್ಟಿನಲ್ಲಿ ಬರಲಿರುವ ಪರೀಕ್ಷೆಗೆ ನಿಮ್ಮ ಸಿದ್ಧತೆ ಹೇಗಿರಬೇಕು? ಇಲ್ಲಿದೆ ಕೆಲವು ಉಪಯುಕ್ತ ಸಲಹೆಗಳು.

ನಿಮ್ಮ ಓದಿಗೊಂದು ವೇಳಾಪಟ್ಟಿ ಇರಲಿ

ADVERTISEMENT

ಭಾಷಾ ವಿಷಯಗಳೂ ಸೇರಿ ಹೆಚ್ಚೆಂದರೆ ಆರು ವಿಷಯಗಳಿಗೆ ನೀವು ಪರೀಕ್ಷೆಯಲ್ಲಿ ಉತ್ತರಿಸಬೇಕಲ್ಲವೆ? ಈ ಆರು ವಿಷಯಗಳ ಅಧ್ಯಯನಕ್ಕೆ ಒಂದು ವೇಳಾಪಟ್ಟಿಯನ್ನು ಹಾಕಿಕೊಳ್ಳಿ. ಅದರಲ್ಲಿ, ಬೆಳಿಗ್ಗೆ ಕನಿಷ್ಠ ಎರಡು ಗಂಟೆ, ಸಂಜೆ ನಿಮ್ಮ ಅನುಕೂಲಕ್ಕೆ ತಕ್ಕಂತೆ 2-3 ಗಂಟೆ ಅಧ್ಯಯನಕ್ಕೆ ಮೀಸಲಿಡಿ. ಒಂದು ದಿನಕ್ಕೆ ಒಂದು ವಿಷಯವಿರಲಿ. ರಜಾ ದಿನವಾದ ಭಾನುವಾರವನ್ನು ಹೆಚ್ಚಿನ ಅಧ್ಯಯನ ಅವಶ್ಯವಿರುವ ಅಥವಾ ಕ್ಲಿಷ್ಟ ಎನಿಸುವ ವಿಷಯಕ್ಕೆ ಮೀಸಲಿಡಿ. ವೇಳಾಪಟ್ಟಿಯನ್ನು ನಿಮ್ಮ ಶಿಕ್ಷಕ ಹಾಗೂ ಪೋಷಕರಿಗೆ ತೋರಿಸಿ. ಅವರು ಕೊಡುವ ಸಲಹೆಯನ್ನೂ ಅಳವಡಿಸಿಕೊಳ್ಳಿ. ವೇಳಾಪಟ್ಟಿಯನ್ನು ನಿಮ್ಮ ಅಧ್ಯಯನ ಸ್ಥಳದಲ್ಲಿ ತೂಗು ಹಾಕಿಕೊಳ್ಳಿ. ಸಾಕಷ್ಟು ಗಾಳಿ, ಬೆಳಕು ಇರುವ ಸ್ಥಳವನ್ನು ಆಯ್ಕೆ ಮಾಡಿಕೊಳ್ಳಿ. ಅಧ್ಯಯನಕ್ಕೆ ಬೇಕಾಗುವ ಪಠ್ಯ ಪುಸ್ತಕ, ನಿಮ್ಮ ತರಗತಿಯಲ್ಲಿ ಬರೆದುಕೊಂಡ ಟಿಪ್ಪಣಿ, ಪೂರಕ ಅಧ್ಯಯನ ಸಾಮಗ್ರಿ, ಇವೆಲ್ಲವನ್ನೂ ಸುಲಭವಾಗಿ ಸಿಗುವಂತೆ ನಿಮ್ಮ ಅಧ್ಯಯನ ಸ್ಥಳದಲ್ಲಿ ವಿಷಯವಾರು ಜೋಡಿಸಿಟ್ಟುಕೊಳ್ಳಿ.

ಈ ರೀತಿಯ ಮಾನಸಿಕ ಸಿದ್ಧತೆ ನಿಮ್ಮ ಆತ್ಮವಿಶ್ವಾಸವನ್ನು ಹೆಚ್ಚಿಸುತ್ತದೆ. ಬಿಡುವಿರುವ ಸಮಯದಲ್ಲಿ ಗಣಿತದ ಸಮಸ್ಯೆಗಳನ್ನು ಬಿಡಿಸುವುದು, ವಿಜ್ಞಾನದ ಚಿತ್ರಗಳನ್ನು ಬರೆದು ಅಭ್ಯಾಸ ಮಾಡಿಕೊಳ್ಳುವುದು ಮುಂತಾದ ಚಟುವಟಿಕೆಗಳನ್ನು ಮಾಡಿ. ಇವೂ ಪರೀಕ್ಷಾ ಸಿದ್ಧತೆಯ ಪ್ರಮುಖ ಭಾಗ. ಅಧ್ಯಯನ ಮಾಡುವುದು ಎಂದರೆ ಬರೀ ಪಾಠವನ್ನು ಓದುವುದು ಮಾತ್ರವಲ್ಲ ಎಂಬುದನ್ನು ನೆನಪಿಟ್ಟುಕೊಳ್ಳಿ. ಭಾನುವಾರ ಮತ್ತು ರಜಾ ದಿನಗಳಲ್ಲಿ ನಿಮಗೆ ಓದಲು ಸಿಗುವ ಹೆಚ್ಚಿನ ಸಮಯವನ್ನು ಕ್ಲಿಷ್ಟ ಎನಿಸಿದ ವಿಷಯಗಳಿಗೆ ಅಥವಾ ಅಧ್ಯಾಯಗಳಿಗೆ ಮೀಸಲಿಡಿ. ಸಿಗುವ ಯಾವುದೇ ಹೆಚ್ಚಿನ ಸಮಯವನ್ನು ವ್ಯರ್ಥ ಮಾಡದೆ, ಸದುಪಯೋಗಪಡಿಸಿಕೊಳ್ಳಿ.

ಪ್ರತಿ ಅಧ್ಯಾಯದ ಸಾರಾಂಶ ಬರೆದುಕೊಳ್ಳಿ

ಯಾವುದೇ ವಿಷಯದಲ್ಲಿ ಪ್ರತಿ ದಿನ ನೀವು ಓದಿ ಮನನ ಮಾಡಿಕೊಂಡ ಅಧ್ಯಾಯದ ಸಂಕ್ಷಿಪ್ತ ಸಾರಾಂಶವನ್ನು ಒಂದು ಹಾಳೆಯಲ್ಲಿ ಬರೆದುಕೊಳ್ಳಿ. ಸಾರಾಂಶ ಸಾಧ್ಯವಾದಷ್ಟೂ ಪ್ರಮುಖ ಪದಗಳ ರೂಪದಲ್ಲಿರಲಿ. ಅಧ್ಯಾಯವನ್ನು ಓದಿ ಮುಗಿಸಿದ ನಂತರ, ಪುಸ್ತಕವನ್ನು ಮುಚ್ಚಿಟ್ಟು, ಸಾರಾಂಶದಲ್ಲಿ ನೀವು ಬರೆದುಕೊಂಡಿರುವ ಪದಗಳನ್ನು ಒಂದೊಂದಾಗಿ ತೆಗೆದುಕೊಂಡು ಸಂಬಂಧಿಸಿದ ಮಾಹಿತಿಯನ್ನು ನೆನಪಿಸಿಕೊಳ್ಳಲು ಪ್ರಯತ್ನಿಸಿ. ಸಮಸ್ಯೆಯಾದರೆ, ಮತ್ತೊಮ್ಮೆ ವಿಷಯವನ್ನು ಓದಿಕೊಳ್ಳಿ. ಪ್ರತಿ ಬಾರಿ ಓದುವಾಗ ಹೀಗೆ ಮಾಡುವುದರಿಂದ ನಿಮ್ಮ ಸ್ಮರಣ ಶಕ್ತಿ ಸುಧಾರಿಸುತ್ತದೆ. ಪರೀಕ್ಷೆಯ ದಿನದಂದು ಪ್ರಶ್ನೆ ಪತ್ರಿಕೆಯಲ್ಲಿನ ಪ್ರಮುಖ ಪದಗಳನ್ನು ನೋಡುತ್ತಿದ್ದಂತೆ ಪೂರಕ ಮಾಹಿತಿಯನ್ನು ನೆನಪಿಗೆ ತಂದುಕೊಳ್ಳುವುದಕ್ಕೆ ಈ ವಿಧಾನ ಅತ್ಯಂತ ಉಪಯುಕ್ತ. ಇದೇ ವಿಧಾನವನ್ನು ಗಣಿತದ ಪ್ರಮುಖ ಸೂತ್ರಗಳಿಗೂ, ವಿಜ್ಞಾನಕ್ಕೆ ಸಂಬಂಧಿಸಿದ ಚಿತ್ರಗಳಿಗೂ ಸಮಾಜ ವಿಜ್ಞಾನದ ಸಿದ್ಧಾಂತಗಳಿಗೂ ಬಳಸಿಕೊಳ್ಳಿ. ಈ ರೀತಿ ಬರೆದುಕೊಂಡ ಹಾಳೆಗಳನ್ನು ಸುರಕ್ಷಿತವಾಗಿ ಒಂದೆಡೆ ತೆಗೆದಿಟ್ಟುಕೊಳ್ಳಿ. ಪರೀಕ್ಷೆಯ ದಿನ ಹತ್ತಿರ ಬಂದಂತೆ, ನೀವು ಓದಿದ ವಿಷಯವನ್ನು ಪುನರ್ಮನನ ಮಾಡಿಕೊಳ್ಳಲು ಈ ಸಾರಾಂಶದ ಹಾಳೆಗಳು ಅತ್ಯುಪಯುಕ್ತವಾಗುತ್ತವೆ.

ವಿಶ್ರಾಂತಿ ಅಗತ್ಯ

ಯಾವುದೇ ಕಾರಣಕ್ಕೂ ಹಲವು ಗಂಟೆಗಳ ಕಾಲ ಸತತವಾಗಿ ಅಧ್ಯಯನ ಮಾಡಬೇಡಿ. ಬಿಡುವಿಲ್ಲದೆ ನಿರಂತರವಾಗಿ ಓದುವುದರಿಂದ ಏಕತಾನತೆ ಉಂಟಾಗುತ್ತದೆ. ಇದು ನಿಮ್ಮ ಏಕಾಗ್ರತೆಗೆ ಭಂಗ ತರುತ್ತದೆ. ಇದರಿಂದ ನಿಮ್ಮ ಮೆದುಳಿನ ಮೇಲೆ ಅನಗತ್ಯ ಒತ್ತಡ ಬೀಳುತ್ತದೆ. ಪ್ರತಿ ಒಂದು ಗಂಟೆಯ ಅಧ್ಯಯನದ ನಂತರ ಕನಿಷ್ಠ ಐದರಿಂದ ಹತ್ತು ನಿಮಿಷಗಳ ವಿರಾಮ ಪಡೆದುಕೊಳ್ಳಿ. ಸಣ್ಣ ಪುಟ್ಟ ವ್ಯಾಯಾಮ ಮಾಡಿ, ಇಲ್ಲವೇ ಕೆಲ ಹೊತ್ತು ಓಡಾಡಿ. ಇದರಿಂದ ರಕ್ತ ಸಂಚಾರ ಉತ್ತಮಗೊಂಡು ಮೆದುಳಿಗೆ ಅಗತ್ಯವಾದ ವಿಶ್ರಾಂತಿ ದೊರಕುತ್ತದೆ. ರಾತ್ರಿ ಬಹು ಹೊತ್ತಿನವರೆಗೂ ನಿದ್ದೆಗೆಟ್ಟು ಓದುವುದಕ್ಕಿಂತ, ಬೆಳಿಗ್ಗೆ ಬೇಗ ಎದ್ದು ಓದುವುದು ಬಹಳ ಒಳ್ಳೆಯ ಅಭ್ಯಾಸ. ಪರೀಕ್ಷೆಯ ದಿನಗಳು ಹತ್ತಿರ ಬಂದಂತೆ ನೀವು ಓದುವ ಸಮಯವನ್ನು ಕ್ರಮೇಣ ಹೆಚ್ಚಿಸುತ್ತಾ ಹೋಗುವುದು ಖಂಡಿತ ಒಳ್ಳೆಯದಲ್ಲ. ನೀವು ಕ್ರಮಬದ್ಧವಾಗಿ ಅಧ್ಯಯನ ಮಾಡಿದ್ದರೆ ಈ ಸಮಸ್ಯೆ ಖಂಡಿತ ಉದ್ಭವಿಸುವುದಿಲ್ಲ. ಪರೀಕ್ಷೆ ಸಮೀಪಿಸುತ್ತಿದ್ದಂತೆ ನಿಮ್ಮ ದೇಹಕ್ಕೆ, ವಿಶೇಷವಾಗಿ ಮೆದುಳಿಗೆ ಹೆಚ್ಚಿನ ವಿಶ್ರಾಂತಿ ಅವಶ್ಯಕ. ಇದರ ಜೊತೆಗೆ, ನಿದ್ದೆಗೆಟ್ಟು ಓದುವುದೂ ಒಳ್ಳೆಯದಲ್ಲ. ನಿಮ್ಮ ವಯಸ್ಸಿಗೆ ಕನಿಷ್ಠ ಆರು ಗಂಟೆಯ ನಿದ್ರೆ ಅತ್ಯವಶ್ಯ.

ಸಮಾನ ಮನಸ್ಕ ಸ್ನೇಹಿತರೊಡನೆ ಚರ್ಚಿಸಿ

ನಿಮ್ಮ ಹಾಗೇ ಅಧ್ಯಯನಶೀಲರಾಗಿರುವ ಸಮಾನ ಮನಸ್ಕ ಗೆಳೆಯರ ಜೊತೆಗೆ ಪ್ರತಿದಿನ ಸಂಜೆ ಒಂದು ಗಂಟೆಯ ಕಾಲ ಕಳೆಯಿರಿ. ಅ ದಿನ ನೀವು ಓದಿದ ವಿಷಯದ ಬಗ್ಗೆ ಪರಸ್ಪರ ಗುಂಪಿನಲ್ಲಿ ಚರ್ಚೆ ನಡೆಸಿ. ನೀವು ಓದಿರುವ ಅಧ್ಯಾಯದಲ್ಲಿನ ಕ್ಲಿಷ್ಟ ಅಂಶಗಳ ಬಗ್ಗೆ ಪರಸ್ಪರ ಚರ್ಚೆ ಮಾಡಿ. ಸಂಭಾವ್ಯ ಪ್ರಶ್ನೆಗಳನ್ನು, ಅವುಗಳಿಗೆ ಉತ್ತರಗಳನ್ನೂ ಕಂಡುಕೊಳ್ಳಿ. ನಿಮಗೆ ಕ್ಲಿಷ್ಟ ಅನ್ನಿಸಿದ ವಿಷಯವೊಂದು ನಿಮ್ಮ ಸ್ನೇಹಿತನಿಗೆ ಸುಲಭವಾಗಿ ಅರ್ಥವಾಗಿರಬಹುದು. ಪರಸ್ಪರ ಚರ್ಚಿಸುವ ಮೂಲಕ ಇಬ್ಬರೂ ಅಥವಾ ನಿಮ್ಮ ಇತರ ಎಲ್ಲ ಸ್ನೇಹಿತರೂ ಇದರ ಪ್ರಯೋಜನವನ್ನು ಪಡೆಯಬಹುದು. ಆದರೆ, ಇಲ್ಲಿ ವ್ಯರ್ಥ ಕಾಲಹರಣಕ್ಕೆ ಅವಕಾಶ ಕೊಡಬೇಡಿ. ಸಮಯವನ್ನು ಸದುಪಯೋಗ ಪಡಿಸಿಕೊಳ್ಳಿ. ಮನಃಶಾಸ್ತ್ರಜ್ಞರ ಪ್ರಕಾರ, ಬರೀ ಓದಿದ್ದು ಬಹು ಬೇಗ ಮರೆತು ಹೋಗುತ್ತದೆ. ಓದುತ್ತಾ ಕೇಳಿಸಿಕೊಂಡದ್ದು ಸಾಕಷ್ಟು ಕಾಲ ನೆನಪಿನಲ್ಲಿ ಉಳಿಯುತ್ತದೆ. ಓದುವುದರ ಜೊತೆಗೆ ಕೇಳಿಸಿಕೊಂಡು ಪರಸ್ಪರ ಚರ್ಚೆ ಮಾಡಿದ ವಿಷಯಗಳು ಬಹು ದೀರ್ಘಕಾಲ ನೆನಪಿನಲ್ಲಿ ಉಳಿಯುತ್ತವೆ.

ಶಿಕ್ಷಕರ ನೆರವು ಪಡೆದುಕೊಳ್ಳಿ

ನೀವು ಅಧ್ಯಯನ ಮಾಡಿದ ವಿಷಯಗಳ ಸಾರಾಂಶಗಳನ್ನು ಬರೆದುಕೊಳ್ಳುವುದರ ಜೊತೆಗೆ, ಅದರಲ್ಲಿ ನಿಮಗೆ ಅರ್ಥವಾಗದೇ ಉಳಿದು ಹೋಗಿರುವ ಅಂಶಗಳನ್ನೂ, ಗುಂಪು ಚರ್ಚೆಯಲ್ಲಿ ಮೂಡಿ ಬಂದಿರುವ ಸಂದೇಹಗಳನ್ನೂ ಪಟ್ಟಿ ಮಾಡಿಕೊಳ್ಳಿ. ನಿಮ್ಮ ಪಠ್ಯ ಪುಸ್ತಕ ಅಥವಾ ನೋಟ್ಸ್‌ನಲ್ಲಿ ಇವುಗಳಿಗೆ ಪರಿಹಾರ ಸಿಗದೇ ಹೋದರೆ, ನಿಮ್ಮ ಶಿಕ್ಷಕರನ್ನು ಭೇಟಿಯಾಗಿ ಸಂದೇಹಗಳನ್ನು ಬಗೆಹರಿಸಿಕೊಳ್ಳಿ.

ಮನಸ್ಸು ಪ್ರಶಾಂತವಾಗಿರಲಿ

ಪರೀಕ್ಷಾ ಸಿದ್ಧತೆಯ ಈ ದಿನಗಳಲ್ಲಿ ನಿಮ್ಮ ಮನಸ್ಸು ಸಾದ್ಯವಾದಷ್ಟೂ ನಿರ್ಮಲವಾಗಿ, ಪ್ರಶಾಂತವಾಗಿ ಇರಬೇಕು. ಅದಕ್ಕೆ ಪೂರಕವಾಗಿ ನಿಮ್ಮ ವರ್ತನೆ ಇರಬೇಕು. ಉದ್ವೇಗಕ್ಕೆ ಒಳಗಾಗಬೇಡಿ. ಅಂತಹ ಯಾವುದೇ ಸಂದರ್ಭ ಅಕಸ್ಮಾತ್ ಎದುರಾದಲ್ಲಿ, ಅದನ್ನು ಮನಸ್ಸಿಗೆ ಹಚ್ಚಿಕೊಳ್ಳಬೇಡಿ. ನಿಮ್ಮ ಮನಸ್ಸು ಪ್ರಶಾಂತವಾಗಿದ್ದರೆ, ನಿಮ್ಮ ಆತ್ಮವಿಶ್ವಾಸಕ್ಕೆ ಯಾವುದೇ ಕುಂದು ಬರುವುದಿಲ್ಲ ಹಾಗೂ ನಿಮ್ಮ ಏಕಾಗ್ರತೆಗೆ ಭಂಗ ಉಂಟಾಗುವುದಿಲ್ಲ. ನೀವು ಗಮನಿಸಲೇಬೇಕಾದ ಇನ್ನೊಂದು ಪ್ರಮುಖ ಆಂಶವೆಂದರೆ, ಪರೀಕ್ಷೆ ಮುಗಿಯುವವರೆಗೆ ನಿಮ್ಮ ಮನಸ್ಸನ್ನು ಕೆಡಿಸುವ ಮೊಬೈಲ್, ಲ್ಯಾಪ್‌ಟಾಪ್ ಮುಂತಾದ ಎಲೆಕ್ಟ್ರಾನಿಕ್ಸ್‌ ಉಪಕರಣಗಳ ಬಳಕೆಯನ್ನು ನಿಲ್ಲಿಸುವುದು. ನಿಮ್ಮ ವಿದ್ಯಾರ್ಥಿ ಜೀವನಕ್ಕೆ ಅವು ಅನಿವಾರ್ಯವೇನಲ್ಲ.

ಈ ಕೆಲವು ಅಂಶಗಳನ್ನು ನಿಮ್ಮ ಓದುವ ಪ್ರಕ್ರಿಯೆಯಲ್ಲಿ ಅಳವಡಿಸಿಕೊಂಡರೆ ಮುಂಬರುವ ಪರೀಕ್ಷೆಗಳನ್ನು ನೀವು ಯಾವ ಆತಂಕವೂ ಇಲ್ಲದೆ ಸಂಪೂರ್ಣ ಆತ್ಮವಿಶ್ವಾಸದಿಂದ ಎದುರಿಸಬಹುದು. ನಿಮ್ಮ ಗುರಿಯನ್ನು ತಲುಪಬಹುದು.

ಪೌಷ್ಟಿಕ ಆಹಾರ ಸೇವಿಸಿ

ನಿಮ್ಮ ವಿವಿಧ ಚಟುವಟಿಕೆಗಳಿಗೆ ದೇಹದ ಎಲ್ಲ ಜೀವಕೋಶಗಳಿಗೆ ಬೇಕಾಗುವ ಶಕ್ತಿಯನ್ನು ಒದಗಿಸುವುದು ನಿಮ್ಮ ಆಹಾರದ ಪೋಷಕಾಂಶಗಳು ಎಂಬುದು ನಿಮಗೆ ತಿಳಿದ ವಿಷಯ. ಓದಿದ್ದು ನೆನಪಿರಬೇಕಾದರೆ, ವಿಶೇಷವಾಗಿ ಮೆದುಳಿನ ನರಕೋಶಗಳಲ್ಲಿ ನಿರಂತರವಾಗಿ ಶಕ್ತಿಯ ಬಿಡುಗಡೆ ಆಗಬೇಕು. ಹೀಗಾಗಿ, ಕಾಲ ಕಾಲಕ್ಕೆ ಸರಿಯಾಗಿ ಪೌಷ್ಟಿಕವಾದ ಆಹಾರ ಸೇವಿಸುವುದು ಈ ಸಮಯದಲ್ಲಿ ಅತ್ಯಂತ ಮುಖ್ಯ. ಓದಿನ ಒತ್ತಡದಲ್ಲಿ, ಆಹಾರ ಸೇವನೆಯನ್ನು ಮುಂದೂಡುವುದು ಸರಿಯಲ್ಲ. ಅಲ್ಲದೆ, ಈ ಸಮಯದಲ್ಲಿ ಕಾಫಿ, ಟೀ ಮುಂತಾದ ಉತ್ತೇಜಕ ಪಾನೀಯಗಳನ್ನು ಹೆಚ್ಚಾಗಿ ಸೇವಿಸುವುದು ಒಳ್ಳೆಯದಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.