ADVERTISEMENT

ನಿಮ್ಮ ಪ್ರಶ್ನೆಗೆ ತಜ್ಞರ ಉತ್ತರ: ಸ್ಪಷ್ಟ ಗುರಿ ಇರಲಿ

ಪ್ರದೀಪ್‌ ಕುಮಾರ್‌ ವಿ
Published 9 ಜೂನ್ 2024, 22:32 IST
Last Updated 9 ಜೂನ್ 2024, 22:32 IST
   

ಓದಿನೆಡೆಗೆ ಏಕಾಗ್ರತೆ ಬೆಳೆಸಿಕೊಳ್ಳುವುದು ಹೇಗೆ?

ಹೆಸರು, ಊರು ತಿಳಿಸಿಲ್ಲ.

ನಿಮ್ಮ ವಿದ್ಯಾಭ್ಯಾಸದ ನಂತರ ವೃತ್ತಿಪರ ಮತ್ತು ವೈಯಕ್ತಿಕ ಬದುಕಿನ ಕನಸುಗಳೇನು? ಭವಿಷ್ಯದ ಕನಸುಗಳಂತೆ, ವೃತ್ತಿ ಮತ್ತು ವೈಯಕ್ತಿಕ ಜೀವನದಲ್ಲಿ ಯಶಸ್ವಿಯಾಗಲು ಸ್ಪಷ್ಟವಾದ, ಸಾಧಿಸಬಹುದಾದ ಗುರಿಗಳನ್ನು ನಿಗದಿಪಡಿಸಿ. ಈ ಗುರಿಗಳು ದೃಢವಾಗಿದ್ದರೆ, ಸ್ವಯಂಪ್ರೇರಣೆ ತಾನೇ ತಾನಾಗಿ ಮೂಡುತ್ತದೆ. ಪ್ರೇರಣೆಯೆಂದರೆ, ನಮ್ಮ ಗುರಿಗಳತ್ತ ನಮ್ಮನ್ನು ಕ್ರಿಯಾತ್ಮಕವಾಗಿಸುವ ಚಾಲನಾ ಶಕ್ತಿ. ಏಕೆಂದರೆ, ಅತ್ಯಂತ ಶಕ್ತಿಶಾಲಿಯಾದ ಆಂತರಿಕ ಪ್ರೇರಣೆಯೇ ಸ್ಫೂರ್ತಿಗೂ, ಚೈತನ್ಯಕ್ಕೂ, ಕಾರ್ಯತತ್ಪರತೆಗೂ ಮೂಲ ಪ್ರೇರಣೆ.

ADVERTISEMENT

ಕನಸುಗಳನ್ನು ಕಾಣುವುದರ ಜೊತೆಗೆ ನಮ್ಮಲ್ಲಿ ಅವುಗಳನ್ನು ಸಾಧಿಸುವ ಛಲ ಮತ್ತು ಆತ್ಮವಿಶ್ವಾಸ ಇರಬೇಕು. ಹಾಗಾಗಿ, ಈ ಸ್ವಯಂಪ್ರೇರಣೆಯ ಚಾಲನಾ ಶಕ್ತಿಯಿಂದಲೇ ಓದಿನೆಡೆಗೆ ನಿಮ್ಮ ಏಕಾಗ್ರತೆಯನ್ನು ಬೆಳೆಸಿಕೊಳ್ಳಬಹುದು. ಇದಲ್ಲದೆ, ನಿಮ್ಮ ಓದುವಿಕೆ ಪರಿಣಾಮಕಾರಿಯಾಗಿರಬೇಕು. ಹೆಚ್ಚಿನ ಮಾರ್ಗದರ್ಶನಕ್ಕಾಗಿ ಈ ವಿಡಿಯೊ ವೀಕ್ಷಿಸಿ:https://youtu.be/3PzmKRaJHmk

ನಾನು ನಿವೃತ್ತ ಸರ್ಕಾರಿ ನೌಕರ. ಸಮಯವನ್ನು ಸಾರ್ಥಕವಾಗಿ ಬಳಸಲು ಯಾವ ಕೋರ್ಸ್ ಮಾಡಬಹುದು?

ಹೆಸರು, ಊರು ತಿಳಿಸಿಲ್ಲ.

ಸಾಮಾನ್ಯವಾಗಿ, ವೃತ್ತಿಯಿಂದ ನಿವೃತ್ತರಾದ ಬಳಿಕ, ಮನೆಯಿಂದಲೇ ನಿಮ್ಮ ಸಮಯಕ್ಕೆ ಅನುಗುಣವಾಗಿ ಅರೆಕಾಲಿಕ ಕೆಲಸಗಳನ್ನು ಮಾಡುವ ಅವಕಾಶಗಳು ಈಗ ಲಭ್ಯ. ನಿಮ್ಮ ಸಾಮರ್ಥ್ಯ, ಸ್ವಾಭಾವಿಕ ಪ್ರತಿಭೆ ಮತ್ತು ಆಸಕ್ತಿಯನ್ನು ಪ್ರತಿಬಿಂಬಿಸುವ ಕ್ಷೇತ್ರಗಳ ಬಗ್ಗೆ ಚಿಂತಿಸಿ, ಸರ್ಟಿಫಿಕೆಟ್/ಡಿಪ್ಲೊಮಾ ಕೋರ್ಸ್ ಆಯ್ಕೆ ಮಾಡಿ. ಉದಾಹರಣೆಗೆ ಜಾಲತಾಣಗಳು, ಬ್ಲಾಗ್‌ಗಳು, ವಿಡಿಯೊಗಳಿಗೆ ವಿಷಯಾಭಿವೃದ್ಧಿ, ಅನುವಾದ, ಸಬ್‌ಟೈಟಲ್ಸ್, ಟ್ರಾನ್ಸ್ಕ್ರಿಪ್ಷನ್ ಮತ್ತು ಡಿಜಿಟಲೀಕರಣ, ಬೋಧನೆ, ಗ್ರಾಹಕ ಸಂಬಂಧಿತ ಸಂಶೋಧನೆ ಮತ್ತು ಸೇವೆಗಳು, ಮಾರುಕಟ್ಟೆಯ ಚಟುವಟಿಕೆಗಳು, ದತ್ತಾಂಶ ಪರಿಷ್ಕರಣೆ ಮತ್ತು ನಿರ್ವಹಣೆ ಮುಂತಾದ ಕ್ಷೇತ್ರಗಳನ್ನು ಪರಿಗಣಿಸಬಹುದು. ಕೋರ್ಸ್ ಆಯ್ಕೆಯ ಮಾಹಿತಿಗಾಗಿ ಗಮನಿಸಿ: https://www.mooc.org/

ವಿದ್ಯಾರ್ಥಿಗಳೇ, ನಿಮ್ಮ ಮುಂದಿನ ಕೋರ್ಸ್‌ ಮತ್ತು ಸೂಕ್ತವಾದ ವೃತ್ತಿಯ ಆಯ್ಕೆ ಹಾಗೂ ಭವಿಷ್ಯವನ್ನು ರೂಪಿಸಿಕೊಳ್ಳುವ ಬಗ್ಗೆ ಗೊಂದಲಗಳಿವೆಯೇ? ನಮಗೆ ಬರೆಯಿರಿ. ನಿಮ್ಮ ಪ್ರಶ್ನೆಗಳಿಗೆ ಶಿಕ್ಷಣತಜ್ಞ ಮತ್ತು ವೃತ್ತಿ ಸಲಹೆಗಾರ ವಿ. ಪ್ರದೀಪ್‌ಕುಮಾರ್‌ ಉತ್ತರಿಸಲಿದ್ದಾರೆ. ಪ್ರಶ್ನೆಗಳನ್ನು shikshana@prajavani.co.inಕ್ಕೆ ಕಳಿಸಬಹುದು.

ಕಂಪ್ಯೂಟರ್ ವಿಜ್ಞಾನದಲ್ಲಿ ಡಿಪ್ಲೊಮಾ ಮುಗಿಸಿದ್ದೇನೆ. ಮುಂದೇನು ಮಾಡಬಹುದು?

ಹೆಸರು, ಊರು ತಿಳಿಸಿಲ್ಲ.

ಡಿಪ್ಲೊಮಾ ನಂತರ ಸಿಇಟಿ ಪ್ರವೇಶ ಪರೀಕ್ಷೆಯನ್ನು ಬರೆದು, ಲ್ಯಾಟರಲ್ ಎಂಟ್ರಿ ಮೂಲಕ ಎರಡನೇ ವರ್ಷದ ಬಿ.ಟೆಕ್‌ಗೆ ಸೇರಬಹುದು. ಅಥವಾ, ನಿಮಗೆ ಸೂಕ್ತವೆನಿಸುವ ಕೆಲಸಕ್ಕೆ ಸೇರಿ, ಬಿ.ಟೆಕ್ (ಅರೆಕಾಲಿಕ) ಮಾಡಬಹುದು. ಬಿಟೆಕ್ ಮಾಡುವ ಆಸಕ್ತಿಯಿಲ್ಲದಿದ್ದರೆ, ಹೆಚ್ಚಿನ ತಜ್ಞತೆಗಾಗಿ, ನಿಮ್ಮ ಕ್ಷೇತ್ರಕ್ಕೆ ಸಂಬಂಧಿಸಿದ ವಿಷಯದಲ್ಲಿ ಸರ್ಟಿಫಿಕೆಟ್/ಡಿಪ್ಲೊಮಾ ಕೋರ್ಸ್ ಮಾಡಬಹುದು.  

v

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.