ADVERTISEMENT

ನಿಮ್ಮ ಪ್ರಶ್ನೆಗೆ ತಜ್ಞರ ಉತ್ತರ | ನೀಟ್‌ಗೆ ಸಿದ್ಧತೆ ಹೇಗಿರಬೇಕು?

ಪ್ರದೀಪ್‌ ಕುಮಾರ್‌ ವಿ
Published 17 ಜೂನ್ 2024, 0:07 IST
Last Updated 17 ಜೂನ್ 2024, 0:07 IST
ನೀಟ್‌
ನೀಟ್‌   

ನೀಟ್‌ ಪರೀಕ್ಷೆಗೆ ಸಿದ್ಧತೆ ಹೇಗಿರಬೇಕು ಎನ್ನುವ ಗೊಂದಲಕ್ಕೆ ತಜ್ಞರು ಉತ್ತರಿಸಿದ್ದಾರೆ.

ಸರ್, ನೀಟ್ ಪರೀಕ್ಷೆಗೆ ಸಿದ್ಧತೆ ನಡೆಸುವ ಬಗ್ಗೆ ಮಾಹಿತಿ ಕೊಡಿ- ಹೆಸರು, ಊರು ತಿಳಿಸಿಲ್ಲ.

ನೀಟ್ (ನ್ಯಾಷನಲ್ ಎಲಿಜಿಬಿಲಿಟಿ ಅಂಡ್ ಎಂಟ್ರೆನ್ಸ್ ಟೆಸ್ಟ್) ಪರೀಕ್ಷೆ ಅತ್ಯಂತ ಸ್ಪರ್ಧಾತ್ಮಕವಾಗಿರುತ್ತದೆ. ಈ ಸಲಹೆಗಳನ್ನು ಗಮನಿಸಿ:
• ಹಿಂದಿನ ವರ್ಷಗಳ ಕಟ್‌ಆಫ್ ರ‍್ಯಾಂಕಿಂಗ್ ಮಾಹಿತಿಯನ್ನು ವಿಶ್ಲೇಷಿಸಿ, ನಿಮ್ಮ ಆದ್ಯತೆಯ ಅನುಸಾರ, ನಾನಾ ಕಾಲೇಜುಗಳಿಗೆ ಬೇಕಾಗಬಹುದಾದ ರ‍್ಯಾಂಕ್ ಮತ್ತು ಅಂಕಗಳ ಗುರಿಯನ್ನು ನಿಗದಿಪಡಿಸಿ.
• ನಿಮ್ಮ ಸಾಮರ್ಥ್ಯ ಮತ್ತು ದೌರ್ಬಲ್ಯಗಳನ್ನು ಗಮನದಲ್ಲಿಟ್ಟುಕೊಂಡು, ಖುದ್ದಾಗಿ ಅಥವಾ ಕೋಚಿಂಗ್ ಮೂಲಕ ತಯಾರಾಗಲು, ಸೂಕ್ತವಾದ ಕಾರ್ಯತಂತ್ರವನ್ನು ರೂಪಿಸಿ.
• ವಿಷಯಸೂಚಿಯ ಪ್ರಕಾರ ಮತ್ತು ಕಳೆದ ವರ್ಷಗಳ ಪ್ರಶ್ನೆಪತ್ರಿಕೆಗಳನ್ನು ಗಮನಿಸಿ, ಅಣಕು-ಪರೀಕ್ಷೆ ಆಧಾರಿತ ತಯಾರಿಯನ್ನು, ನಿರಂತರವಾಗಿ ಮಾಡುತ್ತಿರಬೇಕು.
• ಪರೀಕ್ಷೆಯಲ್ಲಿ ಯಶಸ್ವಿಯಾಗಲು, ನಿಗದಿತ ವೇಳಾಪಟ್ಟಿಯಂತೆ ಸಮಗ್ರವಾದ ಓದುವಿಕೆ ಇರಬೇಕು. ಮನೆಯಲ್ಲಿ ಓದುವಾಗ ಕಣ್ಣಿಗೂ, ಮನಸ್ಸಿಗೂ ತರಬೇತಿಯ ಅಗತ್ಯವಿರುತ್ತದೆ.
• ಹಾಗೂ, ಓದಿದ ವಿಷಯಗಳು ದೀರ್ಘಾವಧಿ ಸ್ಮರಣೆಯಲ್ಲಿರಬೇಕಾದರೆ, ಓದುವಿಕೆ ಪರಿಣಾಮಕಾರಿಯಾಗಿರಬೇಕು. ಓದುವಿಕೆಯ ಕಾರ್ಯತಂತ್ರಗಳಲ್ಲಿ ಓದುವ ಪ್ರಕ್ರಿಯೆಯ ಜೊತೆ ಸಮೀಕ್ಷೆ, ಪ್ರಶ್ನಿಸುವಿಕೆ, ಪುನರುಚ್ಛಾರಣೆ ಮತ್ತು ಪುನರಾವರ್ತನೆ ಇರಬೇಕು.
ಈ ಎಲ್ಲಾ ಕಾರ್ಯತಂತ್ರಗಳ ಜೊತೆಗೆ ಸಮಯದ ನಿರ್ವಹಣೆ, ಏಕಾಗ್ರತೆ, ಸಾಕಷ್ಟು ಪರಿಶ್ರಮ, ದೃಢತೆ, ಗೆಲ್ಲುವ ಆಶಾಭಾವನೆ ಅತ್ಯಗತ್ಯ.

ADVERTISEMENT

ಪರಿಣಾಮಕಾರಿ ಓದುವಿಕೆಯ ಮಾರ್ಗದರ್ಶನಕ್ಕಾಗಿ ಈ ವಿಡಿಯೊ ವೀಕ್ಷಿಸಿ:  https://www.youtube.com/watch?v=3PzmKRaJHmk

ಬಿಎಎಂಎಸ್ ಕೋರ್ಸ್‌ಗೆ ಇರುವ ಅವಕಾಶಗಳ ಬಗ್ಗೆ ತಿಳಿಸಿ- ಹೆಸರು,ಊರು ತಿಳಿಸಿಲ್ಲ.

ಹೆಚ್ಚುತ್ತಿರುವ ಪರಿಸರ ಮಾಲಿನ್ಯ, ನೈಸರ್ಗಿಕ ವಿಪತ್ತುಗಳು ಮತ್ತು ಪಿಡುಗುಗಳ ಜೊತೆಗೆ ಜಗತ್ತಿನ ಜನಸಂಖ್ಯೆಯಲ್ಲಿ ವಯಸ್ಸಾದವರ ಪ್ರಮಾಣ ಹೆಚ್ಚುತ್ತಿದ್ದು, ಆರೋಗ್ಯಕ್ಕೆ ಸಂಬಂಧಿಸಿದ ಎಲ್ಲಾ ಕ್ಷೇತ್ರಗಳಿಗೆ ಭವಿಷ್ಯದಲ್ಲಿ ಇನ್ನೂ ಹೆಚ್ಚಿನ ಪ್ರಾಮುಖ್ಯತೆ ಇರುತ್ತದೆ. ಹಾಗಾಗಿ, ಬಿಎಎಂಎಸ್ (ಬ್ಯಾಚಲರ್  ಆಯುರ್ವೇದಿಕ್ ಮೆಡಿಸಿನ್ ಅಂಡ್ ಸರ್ಜರಿ) ಕೋರ್ಸಿಗೆ, ಭವಿಷ್ಯದಲ್ಲಿಯೂ ಬೇಡಿಕೆಯನ್ನು ನಿರೀಕ್ಷಿಸಬಹುದು. ಕೋರ್ಸ್ ನಂತರ, ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ವೈದ್ಯರಾಗಬಹುದು. ಹಲವಾರು ವರ್ಷಗಳ ಅನುಭವದ ನಂತರ ಖುದ್ದಾಗಿ ಪ್ರಾಕ್ಟೀಸ್ ಮಾಡಬಹುದು. ಹೆಚ್ಚಿನ ತಜ್ಞತೆಗಾಗಿ, ಎಂಎಸ್ (ಆಯುರ್ವೇದ) ಮಾಡಬಹುದು.

ಐಟಿಐ ಮುಗಿದ ನಂತರ ಬಿಎ (ರೆಗ್ಯುಲರ್) ಪದವಿಯನ್ನು ಪಡೆದಿದ್ದು ಈಗ 3 ವರ್ಷದ ಎಲ್‌ಎಲ್‌ಬಿ ಕೋರ್ಸ್ಗೆ ಪ್ರವೇಶ ಪಡೆಯಬಹುದೇ?- ದೀಪಕ್, ಊರು ತಿಳಿಸಿಲ್ಲ.

ನೀವು ವಿಶ್ವವಿದ್ಯಾಲಯ ಅನುದಾನ ಆಯೋಗದ (ಯುಜಿಸಿ) ಮಾನ್ಯತೆಯಿರುವ ವಿಶ್ವವಿದ್ಯಾಲಯದಿಂದ ಬಿಎ ಪದವಿಯನ್ನು ಮಾಡಿರುವುದರಿಂದ, ಈಗ ಎಲ್‌ಎಲ್‌ಬಿ ಕೋರ್ಸ್‍ಗೆ ಪ್ರವೇಶವನ್ನು ಪಡೆಯಬಹುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.