ADVERTISEMENT

ನಿಮ್ಮ ಪ್ರಶ್ನೆಗೆ ತಜ್ಞರ ಉತ್ತರ: ಎಂಬಿಬಿಎಸ್‌ ಸಿಗದೇ ಇದ್ದರೆ ಏನು ಮಾಡಬಹುದು?

ಪ್ರದೀಪ್ ಕುಮಾರ್ ವಿ.
Published 10 ನವೆಂಬರ್ 2024, 20:29 IST
Last Updated 10 ನವೆಂಬರ್ 2024, 20:29 IST
   

ನಾನು ದ್ವಿತೀಯ ಪಿಯು ಓದುತ್ತಿದ್ದು, ಮುಂದೆ ಎಂಬಿಬಿಎಸ್ ಮಾಡುವ ಇಚ್ಛೆಯಿದೆ. ಸರ್ಕಾರಿ ಸೀಟ್ ಸಿಗುವ ಖಾತರಿ ಇಲ್ಲದೇ ಇರುವುದರಿಂದ, ವೈದ್ಯಕೀಯ ಸಂಬಂಧಿತ ಕ್ಷೇತ್ರದ ಬೇರೆ ಯಾವ ಕೋರ್ಸ್ ಮಾಡಬಹುದು?

ಹೆಸರು, ಊರು ತಿಳಿಸಿಲ್ಲ.

ಪಿಯುಸಿ ನಂತರ ವೈದ್ಯಕೀಯ, ಆರೋಗ್ಯ ಮತ್ತು ಸ್ವಾಸ್ಥ್ಯ ಕ್ಷೇತ್ರದಲ್ಲಿ ವೃತ್ತಿಯನ್ನು ಅರಸಲು ಎಂಬಿಬಿಎಸ್ ಅಲ್ಲದೆ ಡೆಂಟಲ್, ಆಯುರ್ವೇದ, ನ್ಯಾಚುರೋಪಥಿ, ಹೋಮಿಯೋಪಥಿ, ಯುನಾನಿ ಸೇರಿ ವೈವಿಧ್ಯಮಯ ಅವಕಾಶಗಳಿವೆ.

ADVERTISEMENT

ಬಿ.ಎಸ್ಸಿ (ಪ್ಯಾರಮೆಡಿಕಲ್): ಮೆಡಿಕಲ್ ಸೈನ್ಸ್, ಲ್ಯಾಬೋರೇಟರಿ ಟೆಕ್ನಾಲಜಿ, ಇಮೇಜಿಂಗ್ ಟೆಕ್ನಾಲಜಿ, ಅನಸ್ತೇಷಿಯಾ ಟೆಕ್ನಾಲಜಿ, ಆಪರೇಷನ್ ಥಿಯೇಟರ್ ಟೆಕ್ನಾಲಜಿ, ಡಯಾಲಿಸಿಸ್ ಟೆಕ್ನಾಲಜಿ, ಹಾಸ್ಪಿಟಲ್ ಮ್ಯಾನೇಜ್‌ಮೆಂಟ್, ರೇಡಿಯಾಲಜಿ, ನ್ಯೂಕ್ಲಿಯರ್ ಮೆಡಿಸಿನ್ ಟೆಕ್ನಾಲಜಿ, ಕಾರ್ಡಿಯಾಕ್ ಟೆಕ್ನಾಲಜಿ, ನರ್ಸಿಂಗ್, ಡಯಟಿಕ್ಸ್, ಫಿಸಿಯೊಥೆರಪಿ, ಸ್ಪೋರ್ಟ್ಸ್ ಸೈನ್ಸ್ ಸೇರಿ 20ಕ್ಕೂ ಹೆಚ್ಚಿನ ಕ್ಷೇತ್ರಗಳಲ್ಲಿ ಬಿ.ಎಸ್ಸಿ (ಪ್ಯಾರಮೆಡಿಕಲ್) ಕೋರ್ಸ್‌ ಮಾಡಬಹುದು.

ಬಿಫಾರ್ಮಾ ಕೋರ್ಸ್: ರಾಸಾಯನಿಕ ವಿಜ್ಞಾನ, ಆರೋಗ್ಯ, ಔಷದೋಪಚಾರ ಮತ್ತು ಸ್ವಾಸ್ಥ್ಯಕ್ಕೆ ಸಂಬಂಧಿಸಿದ ಬೇಡಿಕೆಯಲ್ಲಿರುವ ಕ್ಷೇತ್ರದಲ್ಲಿ ವೃತ್ತಿಯನ್ನು ಅರಸಲು ಬಿಫಾರ್ಮಾ ಮಾಡಬಹುದು.

ವಿಜ್ಞಾನ, ಅನ್ವಯಿಕ ವಿಜ್ಞಾನ ಮತ್ತು ಸಂಶೋಧನೆ: ಈ ಕ್ಷೇತ್ರಗಳಲ್ಲಿ ಆಸಕ್ತಿಯಿದ್ದರೆ ಬಿ.ಎಸ್ಸಿ ಕೋರ್ಸ್‌ ಅನ್ನು ಬಯಾಲಜಿ, ಬಯೋಕೆಮಿಸ್ಟ್ರಿ, ಬಯೋಟೆಕ್ನಾಲಜಿ, ಬಯೋಇನ್‌ಫರ್‌ಮ್ಯಾಟಿಕ್ಸ್‌, ಮೈಕ್ರೊಬಯಾಲಜಿ, ಕ್ಲಿನಿಕಲ್ ರಿಸರ್ಚ್, ಜೆನೆಟಿಕ್ಸ್, ಸೈಕಾಲಜಿ, ಕ್ರಿಮಿನಾಲಜಿ, ಫೊರೆನ್ಸಿಕ್ ಸೈನ್ಸ್, ಕೌನ್ಸೆಲಿಂಗ್, ಪರಿಸರ ವಿಜ್ಞಾನ ಕ್ಷೇತ್ರಗಳಲ್ಲಿ ಮಾಡಿ ವೃತ್ತಿಯನ್ನು ಅರಸಬಹುದು.

2.ನಾನು ಪಿಯು ನಂತರ ಬಿಸಿಎ ಮಾಡಲು ಇಚ್ಛಿಸಿದ್ದೇನೆ. ಈ ಕ್ಷೇತ್ರದ ಬಗ್ಗೆ ಮಾಹಿತಿ ನೀಡಿ.

ಹೆಸರು, ಊರು ತಿಳಿಸಿಲ್ಲ.

ಮಾಹಿತಿ ತಂತ್ರಜ್ಞಾನ ಅಭಿವೃದ್ಧಿಯ ಪಥದಲ್ಲಿರುವ ಕ್ಷೇತ್ರ. ಹಾಗಾಗಿ, ಬಿಸಿಎ ಪದವೀಧರರಿಗೆ ಬೇಡಿಕೆ ಇದೆ. ನಾಲ್ಕು ವರ್ಷದ ಬಿಸಿಎ ಕೋರ್ಸ್‌ನಲ್ಲಿ ವೃತ್ತಿಪರ ಇಂಗ್ಲಿಷ್‌, ಗಣಿತ, ಸಂಖ್ಯಾವಿಜ್ಞಾನ, ಸಂವಹನ ಮತ್ತು  ಮಾಹಿತಿ ತಂತ್ರಜ್ಞಾನ ಸಂಬಂಧಿತ ವಿಷಯಗಳನ್ನು ಕಲಿಸಲಾಗುತ್ತದೆ. ಡೇಟಾ ಸೈನ್ಸ್, ಎಐ, ಎಂಎಲ್, ಸೈಬರ್ ಸೆಕ್ಯುರಿಟಿ, ಕ್ಲೌಡ್ ಕಂಪ್ಯೂಟಿಂಗ್ ಮುಂತಾದ ವಿಷಯಗಳಲ್ಲಿ, ನಿಮ್ಮ ಆಸಕ್ತಿಗೆ ಅನುಗುಣವಾಗಿ ಈ ಕೋರ್ಸ್ ಮಾಡಬಹುದು. ಕ್ಯಾಂಪಸ್ ನೇಮಕಾತಿಯಿರುವ ಕಾಲೇಜಿನಲ್ಲಿ ಬಿಸಿಎ ಮಾಡುವುದರಿಂದ ವೃತ್ತಿಯನ್ನು ಆರಂಭಿಸಲು ಸುಲಭವಾಗುತ್ತದೆ. ನೀವು ಸೇರಬಯಸುವ ಕಾಲೇಜನ್ನು ಅವಲಂಬಿಸಿ ಪ್ರವೇಶ ನೇರವಾಗಿಯೂ ಕೆಲವೊಮ್ಮೆ ಪ್ರವೇಶ ಪರೀಕ್ಷೆಯ ಮುಖಾಂತರವೂ ಆಗುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.