ADVERTISEMENT

ನಿಮ್ಮ ಪ್ರಶ್ನೆಗೆ ತಜ್ಞರ ಉತ್ತರ: ಯಾವ ವಿಷಯದಲ್ಲಿ ಎಂಬಿಎ ಸೂಕ್ತ?

ಪ್ರದೀಪ್ ಕುಮಾರ್ ವಿ. ಅವರ ಅಂಕಣ

ಪ್ರದೀಪ್ ಕುಮಾರ್ ವಿ.
Published 19 ಮೇ 2024, 20:57 IST
Last Updated 19 ಮೇ 2024, 20:57 IST
ಎಂಬಿಎ (ಪ್ರಾತಿನಿಧಿಕ ಚಿತ್ರ)
ಎಂಬಿಎ (ಪ್ರಾತಿನಿಧಿಕ ಚಿತ್ರ)   

1. ನಾನು ಈಗ ಎಸ್ಸೆಸ್ಸೆಲ್ಸಿ ಪೂರ್ಣಗೊಳಿಸಿದ್ದು, ಮುಂದೆ ಯುಪಿಎಸ್‌ಸಿ ಪರೀಕ್ಷೆ ಬರೆದು ಐಎಎಸ್ ಅಧಿಕಾರಿಯಾಗುವ ಆಸೆಯಿದೆ. ಪಿಯುಸಿ ಮತ್ತು ಪದವಿಯನ್ನು ಯಾವ ವಿಭಾಗದಲ್ಲಿ ಮಾಡಿದರೆ ಒಳ್ಳೆಯದು?
–ಅಭಿಷೇಕ್‌, ಬೆಂಗಳೂರು.


ಉತ್ತರ: ಐಎಎಸ್ ಅಧಿಕಾರಿಯಾಗಲು, ಯುಪಿಎಸ್‌ಸಿ ಆಯೋಜಿಸುವ ಮೂರು ಹಂತಗಳ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಭಾಗವಹಿಸಿ, ಆಯ್ಕೆಯಾಗಬೇಕು


1. ಬಹು ಆಯ್ಕೆ ಮಾದರಿಯ ಪೂರ್ವಭಾವಿ ಪರೀಕ್ಷೆ.
2. ಪ್ರಬಂಧ ರೂಪದ ಮುಖ್ಯ ಪರೀಕ್ಷೆ.
3. ಸಂದರ್ಶನ/ವ್ಯಕ್ತಿತ್ವ ಪರೀಕ್ಷೆ.

ADVERTISEMENT


ಬಿ.ಎ, ಬಿ.ಕಾಂ, ಬಿ.ಎಸ್ಸಿ, ಬಿಟೆಕ್ ಮುಂತಾದ ಯಾವುದಾದರೂ ಪದವಿ ಕೋರ್ಸ್ ಮುಗಿಸಿದ ನಂತರ ಯುಪಿಎಸ್‌ಸಿ ಪರೀಕ್ಷೆಗಳಲ್ಲಿ ಭಾಗವಹಿಸಲು ಅರ್ಹತೆ ಸಿಗುತ್ತದೆ. ಯುಪಿಎಸ್‌ಸಿ ಮುಖ್ಯ ಪರೀಕ್ಷೆಯಲ್ಲಿ ನೀವು ಆಯ್ಕೆ ಮಾಡುವ ಐಚ್ಛಿಕ ವಿಷಯಕ್ಕೆ ಸಂಬಂಧಿಸಿದ ವಿಷಯದಲ್ಲಿ ಪದವಿ ಕೋರ್ಸ್ ಮಾಡುವುದರಿಂದ ಸ್ವಲ್ಪ ಮಟ್ಟಿಗೆ ಸಹಾಯವಾಗುತ್ತದೆ. ನಿಮಗೆ ಹೆಚ್ಚಿನ ಆಸಕ್ತಿ ಮತ್ತು ಪರಿಣತಿಯಿರುವ ವಿಷಯದಲ್ಲಿ ಪದವಿ ಕೋರ್ಸ್ ಮಾಡುವುದು ಸೂಕ್ತ. ಆದರೆ, ಪದವಿ ಕೋರ್ಸ್‌ಗಳಿಗೆ ಮಾಡುವ ಅಧ್ಯಯನಕ್ಕೂ ಯುಪಿಎಸ್‌ಸಿ ಪರೀಕ್ಷೆಗೆ ಮಾಡಬೇಕಾದ ಅಧ್ಯಯನಕ್ಕೂ ಇರುವ ಗಮನಾರ್ಹವಾದ ವ್ಯತ್ಯಾಸಗಳನ್ನು ಗಮನಿಸಿ, ಪರಿಣಾಮಕಾರಿ ಅಧ್ಯಯನದ ಕಾರ್ಯತಂತ್ರವನ್ನು ರೂಪಿಸಬೇಕು.


ಪರೀಕ್ಷೆಗಳ ಮಾದರಿಯನ್ನು ಅರ್ಥೈಸಿಕೊಂಡು, ಅಗತ್ಯವಾದ ಪುಸ್ತಕಗಳನ್ನು ಖರೀದಿಸಿ, ಖುದ್ದಾಗಿ ಅಥವಾ ಕೋಚಿಂಗ್ ಮುಖಾಂತರ ತಯಾರಿ ಮಾಡಬಹುದು. ಈ ಪರೀಕ್ಷೆಗಳಲ್ಲಿ ಯಶಸ್ವಿಯಾಗಲು ಸಮಗ್ರವಾದ ಮತ್ತು ಆಳವಾದ ಓದುವಿಕೆ ಇರಬೇಕು. ಜೊತೆಗೆ, ಸಾಕಷ್ಟು ಪರಿಶ್ರಮ, ದೃಢತೆ, ಗೆಲ್ಲುವ ಆಶಾಭಾವನೆ ಅತ್ಯಗತ್ಯ. ಪರಿಣಾಮಕಾರಿ ಅಧ್ಯಯನ ಕಾರ್ಯತಂತ್ರದ ಮಾರ್ಗದರ್ಶನಕ್ಕಾಗಿ ಈ ವಿಡಿಯೊ ವೀಕ್ಷಿಸಿ: https://www.youtube.com/watch?v=3PzmKRaJHmk

ನನಗೆ ಮುಂದೆ ಎಂಬಿಎ ಮಾಡುವ ಇಚ್ಛೆಯಿದ್ದು, ಯಾವ ವಿಷಯದಲ್ಲಿ ಮಾಡಬಹುದು?
–ಹೆಸರು, ಊರು ತಿಳಿಸಿಲ್ಲ.


ಉದ್ಯಮಗಳ ಅಭಿವೃದ್ಧಿಗಾಗಿ, ಸಂಪನ್ಮೂಲಗಳನ್ನು ವ್ಯವಸ್ಥಿತವಾಗಿ ಉಪಯೋಗಿಸುವ ಯೋಜನೆಗಳನ್ನು ರಚಿಸಿ, ಪರಿಣಾಮಕಾರಿಯಾಗಿ ಕಾರ್ಯಗತಗೊಳಿಸುವುದೇ ಮ್ಯಾನೇಜ್‌ಮೆಂಟ್ ಸಿದ್ಧಾಂತದ ಮೂಲ ಉದ್ದೇಶ. ಈ ಜವಾಬ್ದಾರಿಗಳನ್ನು ನಿರ್ವಹಿಸಲು, ಸಮಗ್ರವಾದ ಜ್ಞಾನ ಮತ್ತು ಕೌಶಲಗಳನ್ನು ಎಂಬಿಎ ಕೋರ್ಸಿನಲ್ಲಿ ನೀಡಲಾಗುತ್ತದೆ. ಹಾಗಾಗಿ, ಈ ಕೋರ್ಸಿನಲ್ಲಿ ಮಾರ್ಕೆಟಿಂಗ್, ಮಾನವ ಸಂಪನ್ಮೂಲ ನಿರ್ವಹಣೆ, ಹಣಕಾಸು, ಲಾಜಿಸ್ಟಿಕ್ಸ್, ಬಿಸಿನೆಸ್ ಅನಾಲಿಟಿಕ್ಸ್, ಉತ್ಪಾದನೆ, ಇಂಟರ್‌ನ್ಯಾಷನಲ್ ಬಿಸಿನೆಸ್ ಮುಂತಾದ ವಿಭಾಗಗಳಿದ್ದು ನಿಮ್ಮ ವೃತ್ತಿಯೋಜನೆಯಂತೆ ಆಯ್ಕೆ ಮಾಡಿಕೊಳ್ಳಬಹುದು. ಮ್ಯಾನೇಜ್‌ಮೆಂಟ್ ತತ್ವ ಮತ್ತು ಸಿದ್ದಾಂತಗಳು, ಕಾನೂನು, ಸಂಖ್ಯಾಶಾಸ್ತ್ರ ಮಾನವ ಸಂಪನ್ಮೂಲ, ಅರ್ಥಶಾಸ್ತç, ಮಾರ್ಕೆಟಿಂಗ್ ನಿರ್ವಹಣೆ, ಬಿಸಿನೆಸ್ ಸಂವಹನ ಇತ್ಯಾದಿ ವಿಷಯಗಳು ಎಲ್ಲಾ ವಿಭಾಗಗಳ ವಿದ್ಯಾರ್ಥಿಗಳಿಗೂ ಇರುತ್ತದೆ. ಎಂಬಿಎ. ಕೋರ್ಸಿನಲ್ಲಿ ವೃತ್ತಿಗೂ, ಜೀವನಕ್ಕೂ ಅಗತ್ಯವಾದ ಅನೇಕ ಮೂಲಭೂತ ತತ್ವಗಳ, ಮೌಲ್ಯಗಳ ಮನದಟ್ಟಾಗುತ್ತದೆ. ಈ ತತ್ವಗಳ ಆಧಾರದ ಮೇಲೆ, ನೀವು ವೃತ್ತಿ ಮತ್ತು ಖಾಸಗೀ ಜೀವನಗಳೆರಡರಲ್ಲೂ ಯಶಸ್ಸು ಸಾಧಿಸಬಹುದು. ಹೆಚ್ಚಿನ ಮಾರ್ಗದರ್ಶನಕ್ಕಾಗಿ, ಈ ವಿಡಿಯೊ ವೀಕ್ಷಿಸಿ:  https://www.youtube.com/watch?v=WHZTFCmu3zg 

***********

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.