ADVERTISEMENT

‘ನವೋದಯ’ ಪ್ರವೇಶ ಪರೀಕ್ಷೆ; ಗಣಿತದ ಸಮಸ್ಯೆ ಬಿಡಿಸಲು ಸರಳ ತಂತ್ರಗಳು

ವೆಂಕಟ ಸುಬ್ಬರಾವ್ ವಿ.
Published 23 ಅಕ್ಟೋಬರ್ 2022, 19:30 IST
Last Updated 23 ಅಕ್ಟೋಬರ್ 2022, 19:30 IST
   

ನವೋದಯ ವಿದ್ಯಾಲಯದ 6ನೇ ತರಗತಿ ಪ್ರವೇಶ ಪರೀಕ್ಷೆ ಪ್ರಶ್ನೆ ಪತ್ರಿಕೆಯಲ್ಲಿರುವ ‘ಮಾನಸಿಕ ಸಾಮರ್ಥ್ಯ‘ ವಿಷಯದ ಹತ್ತು ವಿಭಾಗಗಳ ಬಗ್ಗೆ ಕಳೆದ ಸಂಚಿಕೆಯವರೆಗೂ ಚರ್ಚಿಸಲಾಗಿತ್ತು. ಈ ಲೇಖನದಲ್ಲಿ, ಅಂಕಗಣಿತ ವಿಭಾಗದ ಪ್ರಶ್ನೆಗಳ ಸ್ವರೂಪ ತಿಳಿಯೋಣ..

***

6ನೆಯ ತರಗತಿಯ ಪ್ರವೇಶ ಪರೀಕ್ಷೆಯ ಅಂಕಗಣಿತ ವಿಭಾಗದಲ್ಲಿ 20 ಪ್ರಶ್ನೆಗಳಿರುತ್ತವೆ. ಗರಿಷ್ಠ ಅಂಕಗಳು 25. ಈ ಅಂಕಗಣಿತ ವಿಭಾಗದಲ್ಲೂ ಎಲ್ಲ ಪ್ರಶ್ನೆಗಳೂ ವಸ್ತುನಿಷ್ಠ ಮಾದರಿ ಪ್ರಶ್ನೆಗಳೇ (Objective Type Questions) ಆಗಿರುತ್ತವೆ. ಪ್ರತಿ ಪ್ರಶ್ನೆಗೂ A,B,C,D ಎಂಬ ನಾಲ್ಕು ಆಯ್ಕೆಗಳಿರುತ್ತವೆ. ವಿದ್ಯಾರ್ಥಿಗಳು ಆ ನಾಲ್ಕು ಆಯ್ಕೆಗಳ ಸಂಭವನೀಯ ಉತ್ತರಗಳಲ್ಲಿ ಸರಿಯಾದ ಉತ್ತರವಿರುವ ಆಯ್ಕೆಯನ್ನು ಕಂಡುಹಿಡಿದು ಉತ್ತರಿಸಬೇಕು.

ADVERTISEMENT

ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿನ ಪ್ರಶ್ನೆಗಳಿಗೆ ಸರಿಯಾಗಿ ಹಾಗೂ ವೇಗವಾಗಿ ಉತ್ತರಿಸಬೇಕು. ನಿಗದಿತ 0ಅವಧಿಯಲ್ಲಿ ಎಲ್ಲ ಪ್ರಶ್ನೆಗಳಿಗೂ ಉತ್ತರಿಸಲು ಅಭ್ಯಾಸ ಮಾಡಿಕೊಳ್ಳಬೇಕು. ಈ ವಿಭಾಗವನ್ನು ಗರಿಷ್ಠ 30 ನಿಮಿಷಗಳಲ್ಲಿ ಉತ್ತರಿಸಲು ಸಮರ್ಥವಾಗುವಂತೆ ತಯಾರಿ ನಡೆಸಿ. ಅದಕ್ಕಾಗಿ ಈ ಕೆಳಗಿನ ಕೆಲವು ಸಲಹೆಗಳು ಉಪಯುಕ್ತ.

*ಈ ಪರೀಕ್ಷೆ ತೆಗೆದುಕೊಳ್ಳಬೇಕೆಂದು ನಿರ್ಧರಿಸಿದ ಕ್ಷಣದಿಂದಲೇ ಸರಿಯಾದ ವೇಳಾಪಟ್ಟಿಯನ್ನು ಮಾಡಿ ಅದರಂತೆ ಓದಿ.

*ಅಂಕಗಣಿತದ ಪ್ರಶ್ನೆಗಳನ್ನು ಉತ್ತರಿಸುವಾಗ ಆತಂಕಮಾಡಿಕೊಳ್ಳಬೇಡಿ.ಪಾಠಗಳನ್ನು ಸರಿಯಾಗಿ ಅರ್ಥೈಸಿಕೊಳ್ಳಿ. ಪ್ರಶ್ನೆಗಳನ್ನು ಅರ್ಥ ಮಾಡಿಕೊಂಡೇ ಉತ್ತರಿಸಿ. ಗಣಿತದ ಪಾಠಗಳನ್ನು ಕಂಠಪಾಠ ಮಾಡಬೇಡಿ.

*ಕೇವಲ ಗಣಿತದ ಸಮಸ್ಯೆಗಳನ್ನು ಓದುವುದರಿಂದ ಹೆಚ್ಚಿನ ಪ್ರಯೋಜನವಾಗುವುದಿಲ್ಲ. ಸಮಸ್ಯೆಗಳನ್ನು ಬಿಡಿಸಿ ಅಭ್ಯಾಸ ಮಾಡಿ.

*ಹಿಂದಿನ ವರ್ಷಗಳ ಪ್ರಶ್ನೆ ಪತ್ರಿಕೆಗಳನ್ನು ಬಿಡಿಸಿ.

*ಅಂಕಗಣಿತದ ಸಮಸ್ಯೆಗಳನ್ನು ವೇಗವಾಗಿ ಬಿಡಿಸುವ (short-cut) ಹಲವಾರು ವಿಧಾನಗಳಿವೆ. ಕೆಲವು ವಿಧಾನಗಳನ್ನು ಈ ಸರಣಿಯ ಮುಂದಿನ ಲೇಖನಗಳಲ್ಲಿ ನೀಡುತ್ತಿದ್ದೇನೆ.

*ಅಂಕಗಣಿತದ ಸಮಸ್ಯೆಗಳ ಸರಿ ಉತ್ತರ ಅಂದಾಜಿಸುವುದನ್ನು ಅಭ್ಯಾಸ ಮಾಡಿಕೊಳ್ಳಿ. ಇದು ಬಹಳ ಉಪಯೋಗವಾಗುತ್ತದೆ.

ಉದಾಹರಣೆಗೆ, ಒಂದು ಸರಳ ಪ್ರಶ್ನೆ ಮತ್ತು ನಾಲ್ಕು ಆಯ್ಕೆಗಳನ್ನು ನೋಡೋಣ.

ಶಾಲೆಗಳಲ್ಲಿ, 5ನೆಯ ತರಗತಿಯ ಮಕ್ಕಳಿಗೆ ಗಣಿತದ ಸಮಸ್ಯೆಗಳನ್ನು ಬಿಡಿಸಲು ಹೇಳಿಕೊಡುವಾಗ, ಸಾಮಾನ್ಯ ವಾಗಿ, ಪೂರ್ಣ ವಾಕ್ಯಗಳನ್ನು ಬರೆದು ಉತ್ತರಿಸುವುದನ್ನು ಅಭ್ಯಾಸ ಮಾಡಿಸಿರುತ್ತೇವೆ. ಮೇಲಿನ ಉದಾಹರಣೆ ಯನ್ನು ಬಿಡಿಸುವಾಗ, ಈ ಕೆಳಗಿನಂತೆ ಬರೆಯುವುದನ್ನು ಕಲಿಸಿರುತ್ತೇವೆ;

ಒಂದು ಪೆನ್ನಿನ ಬೆಲೆ = ₹ 12

490 ಪೆನ್ನುಗಳ ಬೆಲೆ ?

₹12 x 490 ಪೆನ್ನುಗಳು = 5880 ಹೀಗೆ !

ಆದರೆ, ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಹೀಗೆ ಬರೆದು, ಸಮಸ್ಯೆಯನ್ನು ಬಿಡಿಸುವಷ್ಟು ಸಮಯವಿರುವುದಿಲ್ಲ. ಆದ್ದರಿಂದ, ಎಷ್ಟು ಅವಶ್ಯಕವೊ ಅಷ್ಟನ್ನು ಮಾತ್ರಾ ಬರೆದು ಸಮಸ್ಯೆಯನ್ನು ಬಿಡಿಸುವುದನ್ನು ಕಲಿಯಬೇಕು. ಅದನ್ನು ಮುಂದಿನ ಸಂಚಿಕೆಯಲ್ಲಿ ಈ ತಂತ್ರದ ಬಗ್ಗೆ ವಿವರವಾಗಿ ತಿಳಿಸುವೆ.

*ಗಣಿತದ ಸಮಸ್ಯೆಗಳನ್ನು ಚಿತ್ರೀಕರಿಸಿಕೊಂಡು ಉತ್ತರಿಸುವುದನ್ನು ಅಭ್ಯಾಸಮಾಡಿಕೊಳ್ಳಿ. ಉದಾಹರಣೆಗೆ ಈ ಸಮಸ್ಯೆಯನ್ನು ನೋಡಿ;

ಒಂದು ಆಯತಾಕಾರದ ಮೈದಾನದ ಉದ್ದ 400 ಮೀ. ಮತ್ತು ಅಗಲ 300 ಮೀ. ಇದೆ. ಒಬ್ಬ ವ್ಯಕ್ತಿಯು ಆ ಮೈದಾನದ ಅಂಚಿನ ಒಂದು ನಿರ್ದಿಷ್ಟ ಬಿಂದುವಿನಿಂದ ನಡೆಯಲು ಪ್ರಾರಂಭಿಸಿ, ಮೈದಾನದ ಅಂಚಿನಲ್ಲೇ ನಡೆದು, ಪೂರ್ಣವಾಗಿ ಮೈದಾನವನ್ನು 5 ಬಾರಿ ಸುತ್ತಿ, ನಡಿಗೆಯನ್ನು ಪ್ರಾರಂಭಿಸಿದ ಬಿಂದುವನ್ನು ತಲುಪಿದರೆ, ಅವನು ಕ್ರಮಿಸಿದ ಒಟ್ಟು ದೂರ ಎಷ್ಟು?

ಈ ರೀತಿಯ ಸಮಸ್ಯೆಗಳನ್ನು ಚಿತ್ರೀಕರಿಸಿಕೊಂಡು ಅಥವಾ ದೃಶ್ಯೀಕರಣದಿಂದ (visualisation) ಸುಲಭವಾಗಿ ಉತ್ತರಿಸಬಹುದಲ್ಲವೇ?

ಮುಂದಿನ ಸಂಚಿಕೆಯಲ್ಲಿ ಅಂಕಗಣಿತದ ಸಮಸ್ಯೆಗಳನ್ನು ಸುಲಭವಾಗಿ ಹಾಗೂ ವೇಗವಾಗಿ ಬಿಡಿಸುವ ಕೆಲವು ಸರಳ ವಿಧಾನಗಳನ್ನು ನೋಡೋಣ.

(ಗಮನಿಸಿ: 2023ನೆಯ ಇಸವಿಯಲ್ಲಿನ9 ನೆಯ ತರಗತಿಯ ಪ್ರವೇಶ ಪರೀಕ್ಷೆಗೆ ಆನ್-ಲೈನ್ ಅರ್ಜಿಹಾಕುವ ದಿನಾಂಕವನ್ನು 25/10/2022 ವರಗೂ ವಿಸ್ತರಿಸಲಾಗಿದೆ).

ಹೆಚ್ಚಿನ ವಿವರಗಳಿಗಾಗಿ ಕೆಳಗಿನ ಜಾಲತಾಣವನ್ನು ನೋಡಿ. https://navodaya.gov.in/nvs/en/Home1

( ಮುಂದುವರಿಯುವುದು.......)
(ಲೇಖಕರು: ನಿರ್ದೇಶಕರು, ಸ್ಮಾರ್ಟ್ ಸೆರೆಬ್ರಮ್ ಪ್ರೈ.ಲಿ)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.