1. ನಾನು ವಾಣಿಜ್ಯ ವಿಭಾಗದ ವಿದ್ಯಾರ್ಥಿನಿ. ಸಿಎ ಕೋರ್ಸ್ ಮಾಡಬೇಕೆಂದುಕೊಂಡಿದ್ದೆ. ಆದರೆ, ಆರ್ಥಿಕ ಪರಿಸ್ಥಿತಿಯಿಂದಾಗಿ ಸೇರಲು ಆಗಲಿಲ್ಲ. ಹಾಗಾಗಿ, ವಾಣಿಜ್ಯ ವಿಭಾಗದಲ್ಲಿ ಜೀವನವನ್ನು ರೂಪಿಸಿಕೊಳ್ಳಲು ಕಡಿಮೆ ಶುಲ್ಕದೊಂದಿಗೆ ಓದಲು ಯಾವ ಕೋರ್ಸ್ ಸೂಕ್ತ? ಅಥವಾ, ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಿ ನಡೆಸುವುದು ಉತ್ತಮವೇ?
ಹೆಸರು, ಊರು ತಿಳಿಸಿಲ್ಲ.
ಸಿಎ ಕೋರ್ಸ್ ಮಾಡಲು ಹೆಚ್ಚಿನ ಹಣದ ಅವಶ್ಯಕತೆ ಇರುವುದಿಲ್ಲ. ಜೊತೆಗೆ, ಸಿಎ ಮಧ್ಯಂತರ (ಇಂಟರ್‌ಮೀಡಿಯೆಟ್) ಪರೀಕ್ಷೆಯ ನಂತರ ಮೂರು ವರ್ಷದ ಆರ್ಟಿಕಲ್‌ಶಿಪ್ ಮಾಡುವಾಗ ತರಬೇತಿ ಭತ್ಯ ಸಿಗುತ್ತದೆ. ಈ ವೃತ್ತಿಯಲ್ಲಿ ಯಶಸ್ವಿಯಾಗಲು ನಿಷ್ಠೆ, ಪ್ರಾಮಾಣಿಕತೆಯ ಜೊತೆಗೆ ಸಂಖ್ಯಾ ಕೌಶಲ, ವಿಶ್ಲೇಷಾತ್ಮಕ ಕೌಶಲ, ಆರ್ಥಿಕ ನಿರ್ವಹಣೆ ಮತ್ತು ವ್ಯಾಪಾರೋದ್ಯಮ ಕೌಶಲಗಳ ಅಗತ್ಯವಿರುತ್ತದೆ. ಕಾರ್ಪೊರೇಟ್ ಸಂಸ್ಥೆಗಳಲ್ಲಿ ಚಾರ್ಟರ್ಡ್ ಅಕೌಂಟೆಂಟ್ಸ್‌ಗಳಿಗೆ ಹೆಚ್ಚಿನ ಬೇಡಿಕೆಯಿರುವುದರಿಂದ, ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳಿಗೆ ಸಿಎ ಕೋರ್ಸ್ ಮಾಡುವುದು ಮೊದಲ ಆದ್ಯತೆಯಾಗಿರುತ್ತದೆ. ನಿಮಗೆ ಸಿಎ ಮಾಡಲಾಗದಿದ್ದರೆ, ಬಿಕಾಂ ಪದವಿಯನ್ನು ಮುಗಿಸಿ ಬ್ಯಾಂಕಿಂಗ್, ಫೈನಾನ್ಸ್, ಇನ್ವೆಸ್ಟ್‌ಮೆಂಟ್, ಇನ್‌ಶ್ಯೂರೆನ್ಸ್, ರೀಟೇಲ್, ಮಾರ್ಕೆಟಿಂಗ್, ಎಫ್‌ಎಂಜಿಸಿ ಸೇರಿದಂತೆ ಅನೇಕ ಕ್ಷೇತ್ರಗಳಲ್ಲಿ ವೃತ್ತಿಯನ್ನು ಅರಸಬಹುದು. ಅಥವಾ ಸ್ಪರ್ಧಾತ್ಮಕ ಪರೀಕ್ಷೆಗಳ ಮೂಲಕ ಸರ್ಕಾರಿ ಹುದ್ದೆಗಳನ್ನೂ ಪಡೆದುಕೊಳ್ಳಬಹುದು. ಅಂತಿಮ ಆಯ್ಕೆಯ ಮುನ್ನ ನಿಮ್ಮ ಆಸಕ್ತಿ, ಅಭಿರುಚಿ, ಕೌಶಲಗಳನ್ನು ಗುರುತಿಸಿ, ವೃತ್ತಿ ಯೋಜನೆಯನ್ನು ಮಾಡಿದರೆ, ಮುಂದಿನ ಹಾದಿ ಸ್ಪಷ್ಟವಾಗುತ್ತದೆ. ಹೆಚ್ಚಿನ ಮಾರ್ಗದರ್ಶನಕ್ಕಾಗಿ ಈ ವಿಡಿಯೊಗಳನ್ನು ವೀಕ್ಷಿಸಿ:
https://www.youtube.com/@ExpertCareerConsultantAuthor
****
2. ನಾನು ಎಲೆಕ್ಟ್ರಿಕಲ್ ಮತ್ತು ಎಲೆಕ್ಟ್ರಾನಿಕ್ಸ್ ಎಂಜಿನಿಯರಿಂಗ್ ಮುಗಿಸಿ, ಯುಪಿಎಸ್‌ಸಿ ಪರೀಕ್ಷೆಗೆ ತಯಾರಾಗುತ್ತಿದ್ದು, ಕನ್ನಡ ಸಾಹಿತ್ಯವನ್ನು ಐಚ್ಛಿಕ ವಿಷಯವಾಗಿ ತೆಗೆದುಕೊಂಡಿದ್ದೇನೆ. ಈಗ, ದೂರ ಶಿಕ್ಷಣದ ಮುಖಾಂತರ ಮೈಸೂರು ವಿಶ್ವವಿದ್ಯಾಲಯದ ಎಂಎ(ಕನ್ನಡ) ಮಾಡಬೇಕೆಂದುಕೊಂಡಿದ್ದೇನೆ. ಇದರಿಂದ, ಯುಪಿಎಸ್‌ಸಿ ಪರೀಕ್ಷೆಗೆ ಅನುಕೂಲವಾದರೂ, ಮುಂದೆ ಎಂಎ (ಕನ್ನಡ) ಪದವಿಗೆ ಇರುವ ಅವಕಾಶಗಳೇನು?
ಅಶೋಕ್, ಚಿತ್ರದುರ್ಗ
ಎಂಎ (ಕನ್ನಡ) ಪದವಿಯ ನಂತರ, ಪ್ರಿಂಟ್ ಮತ್ತು ಎಲೆಕ್ಟ್ರಾನಿಕ್ ಮಾಧ್ಯಮಗಳು ಸೇರಿದಂತೆ ಪ್ರಕಾಶನ ಸಂಸ್ಥೆಗಳು, ಚಿತ್ರೋದ್ಯಮ, ಸರ್ಕಾರಿ ಇಲಾಖೆಗಳು ಮತ್ತು ಸಂಸ್ಥೆಗಳು, ಖಾಸಗಿ ಸಂಸ್ಥೆಗಳು, ಇ-ಕಾಮರ್ಸ್, ಕೋಚಿಂಗ್ ತರಗತಿಗಳು, ಶಿಕ್ಷಣ ಸೇರಿದಂತೆ ಅನೇಕ ವಲಯಗಳಲ್ಲಿ ವೃತ್ತಿಯ ಅವಕಾಶಗಳಿವೆ.
ಇನ್ನಷ್ಟು ಪ್ರಶ್ನೋತ್ತರಕ್ಕೆ www.prajavani.net/education ನೋಡಿ
****
ನಿಮ್ಮ ಪ್ರಶ್ನೆಗೆ ತಜ್ಞರ ಉತ್ತರ:
ವಿದ್ಯಾರ್ಥಿಗಳೇ, ನಿಮ್ಮ ಮುಂದಿನ ಕೋರ್ಸ್ ಮತ್ತು ಸೂಕ್ತವಾದ ವೃತ್ತಿಯ ಆಯ್ಕೆ ಹಾಗೂ ಭವಿಷ್ಯವನ್ನು ರೂಪಿಸಿಕೊಳ್ಳುವ ಬಗ್ಗೆ ಗೊಂದಲಗಳಿವೆಯೇ? ಹಾಗಿದ್ದರೆ ನಮಗೆ ಬರೆಯಿರಿ. ನಿಮ್ಮ ಪ್ರಶ್ನೆಗಳಿಗೆ ಶಿಕ್ಷಣತಜ್ಞ ಮತ್ತು ವೃತ್ತಿ ಸಲಹೆಗಾರ ವಿ. ಪ್ರದೀಪ್ ಕುಮಾರ್ ಉತ್ತರಿಸಲಿದ್ದಾರೆ. ಪ್ರಶ್ನೆಗಳನ್ನು
shikshana@prajavani.co.in ಗೆ ಕಳಿಸಬಹುದು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.