ಕಳೆದ ಸಂಚಿಕೆಯ ಲೇಖನದಲ್ಲಿ ತಜ್ಞರು, ದ್ವಿತೀಯ ಪಿಯುಸಿ– ಎಸ್ಸೆಸ್ಸೆಲ್ಸಿ ಓದುವ ಮಕ್ಕಳು ಓದಿನ ಜೊತೆಗೆ, ಪಠ್ಯೇತರ ಚಟುವಟಿಕೆಗಳಲ್ಲೂ ತೊಡಗಿ ಕೊಳ್ಳಬೇಕು ಎಂದು ಸಲಹೆ ನೀಡಿದ್ದರು. ಅವರು ಹೇಳುವುದೇನೋ ಸರಿ. ಆದರೆ, ಆ ಚಟುವಟಿಕೆಗಳಿಂದ ವಿದ್ಯಾರ್ಥಿ ಗಳ ಕಲಿಕೆಯ ಏಕಾಗ್ರತೆಗೆ ಭಂಗ ಬರುವುದಿಲ್ಲವೇ? ಸಮಯದ ಅಭಾವವಾಗುವುದಿಲ್ಲವೇ’ ಎಂಬುದು ಕೆಲವು ಪೋಷಕರ ಪ್ರಶ್ನೆ.
ಈ ಪ್ರಶ್ನೆಗೆ ಬೆಂಗಳೂರಿನ ಸುರಾನಾ ವಿದ್ಯಾಲಯದ ಪ್ರಾಚಾರ್ಯ ಸಂದೀಪ್ ಪೈ ಹೀಗೆ ಹೇಳುತ್ತಾರೆ; ‘ನೋಡಿ, ಮಕ್ಕಳು ಎಷ್ಟು ಹೊತ್ತು ಓದುತ್ತಾರೆ ಎನ್ನುವುದು ಮುಖ್ಯವಲ್ಲ, ಓದಿದ್ದು ಸಮರ್ಪಕವಾಗಿ ಅರ್ಥವಾಗಿ, ನೆನಪಿನಲ್ಲಿ ಉಳಿಯುವ ಹಾಗೆ ಓದುವಂತೆ ಮಕ್ಕಳಿಗೆ ತಿಳಿವಳಿಕೆ ನೀಡಬೇಕು. ಶಿಕ್ಷಕರು/ಪೋಷಕರು ಆ ಓದುವ ತಂತ್ರ/ವಿಧಾನವನ್ನು ಹೇಳಿಕೊಡಬೇಕು. ಮಕ್ಕಳೂ ಅದನ್ನು ಅನುಸರಿಸಬೇಕು. ವೇಳಾಪಟ್ಟಿಯ ಪ್ರಕಾರ ಓದುತ್ತಾ, ಓದಿದ್ದನ್ನು ಅರ್ಥಮಾಡಿಕೊಳ್ಳುತ್ತಾ, ನೋಟ್ಸ್ ಮಾಡಿಟ್ಟುಕೊಂಡರೆ, ಖಂಡಿತಾ ಸಮಯ ಉಳಿಯುತ್ತದೆ. ಆ ಸಮಯವನ್ನೇ ಜನರೊಟ್ಟಿಗೆ ಬೆರೆಯಲು, ಸಮಾರಂಭಗಳಲ್ಲಿ ಭಾಗವಹಿಸುವುದಕ್ಕೆ ಬಳಸಿ. ಇವೆಲ್ಲ ನಿಮ್ಮ ಕಲಿಕೆಯ ಸಾಮರ್ಥ್ಯವನ್ನು ಹೆಚ್ಚಿಸುತ್ತವೆ. ಯಾವುದೇ ಪಠ್ಯೇತರ ಚಟುವಟಿಕೆಗಳು ತಿಂಗಳಿಗೊಮ್ಮೆ ಇದ್ದರೆ ಸಾಕು’.
ಏಕಾಗ್ರತೆಗೆ ಭಂಗ ತರುವುದು ಜನರೊಡನೆ ಬೆರೆಯುವುದರಿಂದಲ್ಲ, ಸಮಾರಂಭಗಳಲ್ಲಿ ಪಾಲ್ಗೊಳ್ಳುವು ದರಿಂದಲ್ಲ. ಬದಲಿಗೆ ಮೊಬೈಲ್, ಟಿ.ವಿಯಂತಹ ಗ್ಯಾಜೆಟ್ ಗಳ ಬಳಕೆಯಿಂದ. ಈ ದೃಶ್ಯ ಮಾಧ್ಯಮಗಳು ಓದಿದ ವಿಷಯ ಗಳ ಸ್ಥಳವನ್ನು ಆಕ್ರಮಿಸಿ, ವಿಷಯಗಳನ್ನು ಮರೆಯುವಂತೆ ಮಾಡಬಹುದು. ಹಾಗಾಗಿ, ಅವುಗಳಿಂದ ದೂರವಿರಬೇಕು.
‘ಪಠ್ಯೇತರ ಚಟುವಟಿಕೆಗಳು, ತರಗತಿಯಲ್ಲಿ ಕಲಿತ ಪಾಠಗಳನ್ನು ಗಟ್ಟಿಯಾಗಿ ಮನಸ್ಸಿನಲ್ಲಿ ಉಳಿಸಲು ನೆರವು ನೀಡುತ್ತವೆ. ಪ್ರಾಯೋಗಿಕವಾಗಿ ತರಗತಿಯಲ್ಲಿ ಕಲಿತ ವಿಷಯಗಳನ್ನು, ಕೌಶಲಗಳನ್ನು, ವಾಸ್ತವಕ್ಕೆ ಅನ್ವಯಿಸಲು ಅವಕಾಶವನ್ನೂ, ಆತ್ಮವಿಶ್ವಾಸ ವನ್ನೂ ನೀಡುತ್ತವೆ’ ಎನ್ನುತ್ತಾರೆ ವೇದಾಂತ ಪದವಿಪೂರ್ವ ಕಾಲೇಜಿನ ಕಾರ್ಯದರ್ಶಿ ಹಾಗೂ ತರಬೇತುದಾರರಾದ ದಿವಾಕರ್.
ಈ ಕಾರಣಕ್ಕೇ ಪಠ್ಯೇತರ ವಿಷಯಗಳು ಸುಸಜ್ಜಿತ ಶಿಕ್ಷಣದ ಭಾಗವೇ ಆಗಿವೆ. ಇದರಿಂದ ವಿದ್ಯಾರ್ಥಿಗಳಿಗೆ ಸಂಘಟನೆ, ಸಮಯ ನಿರ್ವಹಣೆ, ಟೀಮ್ ವರ್ಕ್‌ನಂತಹ ಜೀವನಾವಶ್ಯಕ ಕೌಶಲಗಳನ್ನು ಕಲಿಯಲು ಸಾಧ್ಯವಾಗುತ್ತದೆ. ಆದರೆ, ಪಠ್ಯ ಮತ್ತು ಪಠ್ಯೇತರ ವಿಷಯಗಳ ಸರಿಯಾದ ಮಿಶ್ರಣವಿರಬೇಕು ಎಂದು ಅವರು ಸಲಹೆ ನೀಡುತ್ತಾರೆ.
ಆಹಾರ, ವ್ಯಾಯಾಮ ‘ಪಠ್ಯೇತರ’ದ ಭಾಗ
ಮಕ್ಕಳು ಓದುವ ಜೊತೆಗೆ, ಏಕಾಗ್ರತೆಗಾಗಿ ಯೋಗ, ಪ್ರಾಣಾಯಾಮ ಅಗತ್ಯ. ನಿಗದಿತವಾಗಿ ಅನುಲೋಮ, ವಿಲೋಮದಂತಹ ಪ್ರಾಣಾಯಾಮಗಳನ್ನು ಮಾಡಿ. ದೀರ್ಘ ಉಸಿರಾಟ ಏಕಾಗ್ರತೆ, ಆತಂಕ ಕಡಿಮೆ ಮಾಡಿ, ಆರೋಗ್ಯವನ್ನು ಕಾಪಾಡುತ್ತದೆ. ಈ ಎಲ್ಲ ಚಟುವಟಿಕೆಗಳು ಪಠ್ಯೇತರದ ಭಾಗವಾಗಿರಲಿ ಎನ್ನುತ್ತಾರೆ ಸಂದೀಪ್ ಪೈ.
ಇಂಥ ಚಟುವಟಿಕೆಗಳ ಜೊತೆಗೆ, ಆಹಾರ ಸೇವನೆ ಬಗ್ಗೆಯೂ ಗಮನಹರಿಸುವುದು ಮುಖ್ಯ. ಬಹಳಷ್ಟು ಮಕ್ಕಳಿಗೆ, ಓದಿನ ನಡುವೆ ಏನಾದರೂ ತಿನ್ನಬೇಕೆನಿಸುತ್ತಿರುತ್ತದೆ. ಪೋಷಕರೂ ಮಕ್ಕಳಿಗೆ ಆಗಾಗೆ ತಿನಿಸುಗಳನ್ನು ನೀಡುತ್ತಾರೆ. ಆದರೆ, ಮಕ್ಕಳಿಗೆ ಕೊಡುವ ಆಹಾರ ಆರೋಗ್ಯಪೂರ್ಣವಾಗಿರಲಿ. ಓದುವುದಕ್ಕೆ ಚೈತನ್ಯ ತುಂಬುವಂತಿರಲಿ. ಪ್ರೊಟೀನ್ ಅಂಶವಿರುವ ಒಣಹಣ್ಣುಗಳು, ನೀರಿನಂಶವಿರುವ ಹಣ್ಣು, ತರಕಾರಿಗಳನ್ನು ನಿಯಮಿತವಾಗಿ ಕೊಡಿ.
ನಿಮಗೆ ಆಸಕ್ತಿಯಿರುವ ಯಾವುದಾದರೂ ಒಂದು ಆಟ ಅಥವಾ ಇನ್ನಾವುದೇ ಚಟುವಟಿಕೆಯನ್ನು ಆರಿಸಿಕೊಳ್ಳಿ. ನಿಮ್ಮ ಓದಿನ ವೇಳಾಪಟ್ಟಿಯಲ್ಲಿ ಅದನ್ನು ಸೇರಿಸಿಕೊಳ್ಳಿ. ಉದಾಹರಣೆಗೆ, ನಿಮಗೆ, ಸಂಗೀತದಲ್ಲಿ ಆಸಕ್ತಿಯಿದ್ದರೆ, ಪ್ರತಿದಿನ ವೇಳಾಪಟ್ಟಿಯಂತೆ, ನಿರ್ದಿಷ್ಟ ಸಮಯವನ್ನು ಸಂಗೀತಕ್ಕೆ ಮೀಸಲಿಡಿ. ಆದರೆ, ಸಮಯದ ಮಿತಿಯ ಅರಿವಿರಲಿ.
ವೈದ್ಯ ಹಾಗೂ ಮನಶಾಸ್ತ್ರಜ್ಞರಾದ ಡಾ. ಅಲ್ಕಾಕಿನ್ರಾ ಹೇಳುತ್ತಾರೆ, ‘ನಿರಂತರವಾಗಿ ಓದಿದ್ದು ನೆನಪಿನಲ್ಲಿ ಉಳಿಯುವುದಿಲ್ಲ. ನಡು ನಡುವೆ ಓದಿಗೆ ಬಿಡುವು ಕೊಟ್ಟು ನಿಮಗೆ ಇಷ್ಟದ ಚಟುವಟಿಕೆಯಲ್ಲಿ ತೊಡಗಿಕೊಳ್ಳಬೇಕು. ಸಣ್ಣ–ಪುಟ್ಟ ವ್ಯಾಯಾಮ ಮಾಡ ಬಹುದು (ನಡಿಗೆ, ವೇಗದ ನಡಿಗೆಯಾದರೂ ಆದೀತು). ಇದರಿಂದ ಮಿದುಳು ಚಟುವಟಿಕೆಯಿಂದ ಇರುತ್ತದೆ. ಸ್ಮರಣಶಕ್ತಿ ಮತ್ತು ಓದುವ ಆಸಕ್ತಿಯೂ ಹೆಚ್ಚುತ್ತದೆ’
ನಾವು ಬಾಲ್ಯದಲ್ಲಿ ಹೀಗೆ ಮಾಡುತ್ತಿದ್ದೆವು. ಸುಮಾರು ಒಂದು ಗಂಟೆಯ ಓದಿನ ನಂತರ, ಮನೆಯಿಂದ ಆಚೆಗೆ ಓಡಿಬಂದು, ಎರಡು ಮೂರು ನಿಮಿಷ ಯಾವುದಾದರೂ (ಕ್ರಿಕೆಟ್, ಲಗೋರಿ ಇತ್ಯಾದಿ) ಆಟವಾಡಿ ಮತ್ತೆ ಓದಲು ತೊಡಗುತ್ತಿದ್ದೆವು. ಇದರಿಂದ ನಾವು ಹೆಚ್ಚು ಹೊತ್ತು ಓದಿನ ಕಡೆಗೆ ಗಮನ ಕೊಡಲು ಆಗುತ್ತಿತ್ತು.
ಎಸ್ಸೆಸ್ಸೆಲ್ಸಿ ಮತ್ತು ದ್ವಿತೀಯ ಪಿಯುಸಿ ಪರೀಕ್ಷೆಗಳು ಜೀವನದ ನಿರ್ಣಾಯಕ ಘಟ್ಟಗಳು, ಹೌದು. ಹೆಚ್ಚು ಓದಲೇಬೇಕು, ನಿಜ. ಆದರೆ ಇದರ ಜೊತೆಯಲ್ಲಿ ಸರಿಯಾದ ರೀತಿಯಲ್ಲಿ ಸಮಯದ ನಿರ್ವಹಣೆಯನ್ನು ಮಾಡುತ್ತಾ, ಆಟ-ಪಾಠ ಎರಡಕ್ಕೂ ಸರಿಯಾಗಿ ಆದ್ಯತೆ ನೀಡಿದರೆ, ಪರೀಕ್ಷೆಯ ಆತಂಕವೂ ಕಡಿಮೆಯಾಗುತ್ತದೆ, ಕಾರ್ಯಕ್ಷಮತೆಯೂ ಹೆಚ್ಚುತ್ತದೆ.
ಅರ್ಥ ಮಾಡಿಕೊಂಡು ಓದುವುದು ಮುಖ್ಯ
ನಾವು ಗಮನಿಸಿದಂತೆ, ಕೆಲವು ಮಕ್ಕಳು ನಿತ್ಯ ದೀರ್ಘಕಾಲ ಓದುತ್ತಾರೆ. ಆದರೆ, ಪರೀಕ್ಷೆಯಲ್ಲಿ ಕಡಿಮೆ ಅಂಕಗಳನ್ನು ಪಡೆಯುತ್ತಾರೆ. ಇದಕ್ಕೆ ಏಕಾಗ್ರತೆ ಕೊರತೆಯೋ, ಪಾಠ ಅರ್ಥವಾಗವುದಿಲ್ಲವೋ ಅಥವಾ ಇನ್ನಾವ ಕಾರಣವೋ ಗೊತ್ತಿಲ್ಲ. ಆದರೆ ಕೆಲವು ಮಕ್ಕಳು, ಕಡಿಮೆ ಸಮಯ ಓದಿದರೂ, ಪಾಠವನ್ನು ಸರಿಯಾಗಿ ಅರ್ಥೈಸಿಕೊಂಡು ಓದುವುದರಿಂದ ಪರೀಕ್ಷೆಯಲ್ಲಿ ಉತ್ತಮ ಅಂಕಗಳನ್ನು ಪಡೆಯತ್ತಾರೆ. ಈ ಅಂಶಗಳನ್ನು ಎಸ್ಸೆಸ್ಸೆಲ್ಸಿ–ದ್ವಿತೀಯ ಪಿಯುಸಿ ಓದುವ ವಿದ್ಯಾರ್ಥಿಗಳು ಸರಿಯಾಗಿ ಅರ್ಥ ಮಾಡಿಕೊಳ್ಳಬೇಕು. ಎಷ್ಟು ಹೊತ್ತು ಓದುತ್ತೇವೆನ್ನುವುದು ಮುಖ್ಯವಲ್ಲ, ಓದಿದ್ದು ಸಮರ್ಪಕವಾಗಿ ಅರ್ಥವಾಗಿ, ನೆನಪಿನಲ್ಲಿ ಉಳಿಯುವಂತೆ ಓದಬೇಕು.
(ಲೇಖಕರು: ನಿರ್ದೇಶಕರು, ಸ್ಮಾರ್ಟ್ ಸೆರಬ್ರಮ್ ಪ್ರೈವೇಟ್ ಲಿಮಿಟೆಡ್, ಬೆಂಗಳೂರು)
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.