ADVERTISEMENT

ಪರೀಕ್ಷೆ; ವಿಶ್ವಾಸವೇ ಶ್ರೀರಕ್ಷೆ

ವೆಂಕಟ ಸುಬ್ಬರಾವ್ ವಿ.
Published 13 ಮಾರ್ಚ್ 2022, 19:30 IST
Last Updated 13 ಮಾರ್ಚ್ 2022, 19:30 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ವರ್ಷವಿಡೀ ಓದಿದ್ದರೂ, ಪರೀಕ್ಷೆ ಸಮೀಪಿಸುತ್ತಿದ್ದಂತೆ ಕೆಲ ವಿದ್ಯಾರ್ಥಿಗಳಲ್ಲಿ ಸಹಜವಾಗಿಯೇ ಸಣ್ಣದೊಂದು ಆತಂಕವಿರುತ್ತದೆ. ‘ಓದಿದ್ದೆಲ್ಲವನ್ನೂ ಇನ್ನೊಂದು ಸಾರಿ ತಿರುವಿ ಹಾಕಿಬಿಡೋಣ’ ಎಂದು ಮನಸ್ಸು ಹೇಳುತ್ತಿರುತ್ತದೆ. ಇಂಥ ಪರಿಸ್ಥಿತಿಯಲ್ಲಿ ಪರೀಕ್ಷೆಗೆ ಅಂತಿಮ ಹಂತದ ಸಿದ್ಧತೆ ಹೇಗೆ ಮಾಡಿಕೊಳ್ಳಬೇಕೆಂಬ ಕುರಿತ ಸಲಹೆಗಳು ಇಲ್ಲಿವೆ.

ನೋಡ ನೋಡುತ್ತಲೇ ಈ ಬಾರಿಯ ಶೈಕ್ಷಣಿಕ ವರ್ಷದ ಅಂತಿಮ ಘಟ್ಟ ತಲುಪಿದ್ದೇವೆ. ಪರೀಕ್ಷೆಗಳು ಸಮೀಪಿಸುತ್ತಿವೆ. ಈ ವಾರಾಂತ್ಯದಿಂದಲೇ ಪ್ರಾಥಮಿಕ, ಮಾಧ್ಯಮಿಕ, ಪ್ರೌಢಶಾಲೆ ಪರೀಕ್ಷೆಗಳು ಸರಣಿಯಾಗಿ ಶುರುವಾಗುತ್ತವೆ. ಮುಂದಿನ ವಾರ ಎಸ್ಸೆಸ್ಸೆಲ್ಸಿ, ಮುಂದಿನ ತಿಂಗಳು ಪಿಯುಸಿಯ ವಾರ್ಷಿಕ ಪರೀಕ್ಷೆಗಳು ಆರಂಭವಾಗುತ್ತವೆ.

‘ಕೊರೊನಾ’ ಕಾರಣ ಬಹುತೇಕ ಮಕ್ಕಳು ಎರಡೂ ವರ್ಷ ಆನ್‌ಲೈನ್‌ನಲ್ಲಿ ಪರೀಕ್ಷೆಗಳನ್ನು ಬರೆದಿದ್ದರು. ಈ ವರ್ಷ ಶಾಲೆಗಳು ತಡವಾಗಿ ಆರಂಭವಾಗಿದ್ದರೂ ಭೌತಿಕವಾಗಿ ಪರೀಕ್ಷೆ ನಡೆಸಲಾಗುತ್ತಿದೆ. ತರಗತಿಗಳು ವಿಳಂಬವಾದ ಕಾರಣ, ಎಸ್‌ಎಸ್‌ಎಲ್‌ಸಿಯ ಪಠ್ಯಗಳನ್ನು ಶೇ 20ರಷ್ಟು ಕಡಿತ ಮಾಡಲಾಗಿದೆ. ಆನ್‌ಲೈನ್ ಪಾಠ–ಪರೀಕ್ಷೆಗಳಿಗೆ ಒಗ್ಗಿದ್ದ ಮಕ್ಕಳು ಈಗ ಭೌತಿಕವಾಗಿ ಪರೀಕ್ಷೆಗೆ ಸಜ್ಜಾಗುತ್ತಿದ್ದೀರಿ.

ADVERTISEMENT

‘ಎಲ್ಲ ಓದಿ ಮುಗಿಸಿದ್ದೀನಪ್ಪಾ‘ ಎಂದುಕೊಂಡರೂ, ಕೆಲವು ಮಕ್ಕಳಿಗೆ ಪರೀಕ್ಷೆ ಸಮೀಪಿಸುತ್ತಿದ್ದಂತೆ ಸ್ವಲ್ಪ ಮಟ್ಟಿನ ಗಾಬರಿ, ಆತಂಕ ಇದ್ದೇ ಇರುತ್ತದೆ. ಅದು ಸಹಜ. ಏನೇ ಓದಿದ್ದರೂ, ಎಷ್ಟೇ ಸಿದ್ಧರಾಗಿದ್ದರೂ, ಕೊನೆ ಗಳಿಗೆಯ ಸಿದ್ಧತೆಗಳೂ ಮಹತ್ವದ್ದಾಗಿರುತ್ತವೆ. ಈ ಸಮಯದಲ್ಲಿ ಏನು ಓದಬೇಕು–ಹೇಗೆ ಓದಬೇಕೆಂಬ ಗೊಂದಲವೂ ಇರುತ್ತದೆ. ಮಕ್ಕಳಲ್ಲಿರುವ ಆತಂಕ ಹೋಗಲಾಡಿಸುವುದಕ್ಕಾಗಿ ಈ ಲೇಖನದಲ್ಲಿ ಕೊನೆ ಹಂತದ ತಯಾರಿ ಕುರಿತು ಕೆಲವೊಂದು ಟಿಪ್ಸ್‌ಗಳನ್ನು ನೀಡಲಾಗಿದೆ.

ಹೀಗೆ ಮಾಡಿ...

ಪರೀಕ್ಷೆ ಸಮೀಪವಿರುವಾಗ ಹೊಸದಾಗಿ ಪಾಠಗಳನ್ನು ಓದಲು ಪ್ರಾರಂಭಿಸುವ ಬದಲು, ಮೊದಲೇ ಓದಿದ ವಿಷಯಗಳ ಪುನರಾವರ್ತನೆ ಮಾಡುವುದು ಉತ್ತಮ. ಈ ಸಮಯದಲ್ಲಿ ನೀವು ಮೊದಲೇ ಸಿದ್ಧಪಡಿಸಿದ ‘ಮೈಂಡ್-ಮ್ಯಾಪ್’ ಗಳು ಸಹಾಯವಾಗುತ್ತವೆ. ‌

ಪರೀಕ್ಷೆಗೆ ಇನ್ನೆಷ್ಟು ಸಮಯವಿದೆ ಎಂದು ನೋಡಿಕೊಂಡು, ಆ ಸಮಯಕ್ಕೆ ತಕ್ಕಂತೆ ವೇಳಾಪಟ್ಟಿ ಸಿದ್ಧಪಡಿಸಿಕೊಳ್ಳಿ. ‘ಇನ್ನೂ ಟೈಮ್‌ ಇದೆಯಲ್ಲಾ, ನಾಳೆ ಓದೋಣ’ ಎಂಬ ನಿರ್ಲಕ್ಷ್ಯದೊಂದಿಗೆ ವೇಳಾಪಟ್ಟಿಯಲ್ಲಿ ನಿಗದಿಪಡಿಸಿದ ಸಮಯವನ್ನು ಮುಂದೂಡಬೇಡಿ. ಕೆಲವು ಬಾರಿ, ಒತ್ತಡದಲ್ಲಿ ಸಿಲುಕಿ, ಯೋಚಿಸುತ್ತಾ ಸಮಯ ಹಾಳಾಗಬಹುದು. ಸಮಯವನ್ನು ಸರಿಯಾಗಿ ಉಪಯೋಗಿಸಿ.

ಹೊಸ ವಿಷಯಗಳನ್ನು ಬಾಯಿಪಾಠ ಅಥವಾ ಕಂಠಪಾಠ ಮಾಡಿ ನೆನಪಿಟ್ಟುಕೊಳ್ಳಲು ಪ್ರಯತ್ನಿಸಬೇಡಿ. ಯಾವಾಗಲೂ ಪರೀಕ್ಷೆಯಲ್ಲಿ ನೀವು ಸರಿಯಾಗಿ ಅರ್ಥೈಸಿಕೊಂಡ ಪಾಠಗಳು ಸಹಜವಾಗಿಯೇ ನೆನಪಿಗೆ ಬರುತ್ತವೆ.

ಎಲ್ಲಾ ಅಧ್ಯಯನ ಸಾಮಗ್ರಿ, ಪರಿಕರಗಳು ಸುಲಭವಾಗಿ ನಿಮ್ಮ ಕೈಗೆಟುಕುವಂತೆ ಇಟ್ಟುಕೊಳ್ಳಿ. ಇವುಗಳಲ್ಲಿ ಮುಖ್ಯವಾಗಿ ಪುನರಾವರ್ತನೆಯ ಟಿಪ್ಪಣಿಗಳು, ಹಿಂದಿನ ವರ್ಷಗಳ ಪ್ರಶ್ನೆಪತ್ರಿಕೆಗಳು, ಉತ್ತರಗಳು ಇರಲಿ.

ಈ ಎರಡು ವರ್ಷಗಳಲ್ಲಿ, ಕೆಲವರಿಗೆ, ಬರೆಯುವ ಅಭ್ಯಾಸ ಕಡಿಮೆಯಾಗಿರಬಹುದು. ಹಾಗೆಯೇ, ಪುನರಾವರ್ತನೆಯ ಪಾಠಗಳು ಅರ್ಥವಾಗಿವೆ ಎಂದೆನ್ನಿಸಿದ್ದರೂ, ಪರೀಕ್ಷೆ ಬರೆಯುವಾಗ ಒಮ್ಮೊಮ್ಮೆ ನೆನಪಿಗೆ ಬರುವುದಿಲ್ಲ. ಆದ್ದರಿಂದ ಓದಿದ್ದನ್ನು ಬರೆದು ಅಭ್ಯಾಸ ಮಾಡಿ. ಇದರಿಂದ ಬರವಣಿಗೆಯೂ ಉತ್ತಮಗೊಳ್ಳುತ್ತದೆ. ಪರೀಕ್ಷೆಯಲ್ಲಿ ಹೇಗೆ ಸಮಯ ನಿರ್ವಹಣೆ ಮಾಡಿಕೊಳ್ಳಬೇಕೆಂದೂ ಅರ್ಥವಾಗುತ್ತದೆ.

ನೀವು ಕಲಿತಿರುವ ವಿಷಯಗಳನ್ನು ಬೇರೆಯವರೊಂದಿಗೆ ಹಂಚಿಕೊಳ್ಳಿ. ಉದಾಹರಣೆಗೆ, ನೀವು ಕಲಿತಿರುವ ಪ್ರಶ್ನೋತ್ತರಗಳನ್ನುನಿಮ್ಮ ಮನೆಯ ಸದಸ್ಯರಿಗೋ, ನಿಮ್ಮ ಗೆಳೆಯರಿಗೋ ವಿವರಿಸಿ. ಬೇಕಾದರೆ, ನಿಮ್ಮ ಗೆಳೆಯರಿಗೆ ಕಲಿಸಿ. ಇದರಿಂದ ನಿಮ್ಮ ಆತ್ಮವಿಶ್ವಾಸವೂ ಹೆಚ್ಚುತ್ತದೆ. ಸಮಯವೂ ಉಳಿಯುತ್ತದೆ. ಆದರೆ, ಈ ಪ್ರಕ್ರಿಯೆಯಲ್ಲಿ ನೀವು ವಿನಾ ಕಾರಣ ಸಮಯ ವ್ಯರ್ಥ ಮಾಡುತ್ತಿಲ್ಲ ಎಂಬುದನ್ನು ಖಾತ್ರಿಪಡಿಸಿಕೊಳ್ಳಿ.

ಓದುವ ಕಡೆಗೆ ಗಮನ ಕೊಟ್ಟು, ಊಟ–ಉಪಾಹಾರವನ್ನು ನಿರ್ಲಕ್ಷಿಸಬೇಡಿ. ನಿದ್ದೆಗೆಟ್ಟು ಓದುವುದೂ ಒಳ್ಳೆಯದಲ್ಲ. ಸರಿಯಾದ ಸಮಯಕ್ಕೆ, ಪೌಷ್ಟಿಕ ಆಹಾರ ಸೇವಿಸಿ, ಆರೋಗ್ಯ ಕಾಪಾಡಿಕೊಳ್ಳಿ. ನಿದ್ದೆ ಮುಂದೂಡಲು ಅತಿಯಾದ ಕಾಫಿ ಅಥವಾ ಟೀ ಕುಡಿಯುವ ಅಭ್ಯಾಸ ಮಾಡಬೇಡಿ. ಇವು ಆ ಕ್ಷಣದಲ್ಲಿ ಸಹಾಯಕವಾಗಿದೆ ಎನಿಸಿದರೂ, ಆರೋಗ್ಯ ಕೆಡಿಸುವ ಹಾಗೂ ಚಟವಾಗುವ ಸಾಧ್ಯತೆ ಹೆಚ್ಚು. ಎಚ್ಚರವಿರಲಿ.

ಕೆಲವರಿಗೆ ಬೆಳಿಗ್ಗೆ ಬೇಗ ಏಳಲು ಸಾಧ್ಯವಾಗದಿರಬಹುದು. ಕೆಲವರಿಗೆ ರಾತ್ರಿ ಬಹಳ ಹೊತ್ತು ಎದ್ದಿರಲು ಸಾಧ್ಯವಾಗದಿರಬಹುದು. ಇದರ ಬಗ್ಗೆ ಚಿಂತಿಸಬೇಡಿ. ಈ ವಿಷಯದಲ್ಲಿ ಬೇರೆಯವರೊಂದಿಗೆ ಹೋಲಿಕೆಯೂ ಬೇಡ. ಮಲಗುವ ಮತ್ತು ಏಳುವ ಸಮಯದ ಆಧಾರದ ಮೇಲೆ ನೀವು ಓದಬೇಕಾದ ವೇಳಾಪಟ್ಟಿ ಮಾಡಿಕೊಳ್ಳಿ.

ಪರೀಕ್ಷೆಗೆ ಕೊಂಡೊಯ್ಯಬೇಕಾದ ಪೆನ್ನುಗಳು, ಪ್ರವೇಶಪತ್ರ ಇತ್ಯಾದಿಗಳನ್ನು ಮೊದಲೇ ಅಣಿಮಾಡಿಟ್ಟುಕೊಳ್ಳಿ. ಇದರಿಂದ ಕೊನೆಯ ಕ್ಷಣದಲ್ಲಿನ ಆತಂಕ ಕಡಿಮೆಯಾಗುತ್ತದೆ.

ಈ ಸಮಯದಲ್ಲಿ, ನಿಮ್ಮ ಸಹಪಾಠಿಗಳೊಂದಿಗೆ ಮತ್ತು ಅವರು ಓದುತ್ತಿರುವ ವಿಧಾನಗಳಿಗೆ ನಿಮ್ಮನ್ನು ಹೋಲಿಸಿಕೊಳ್ಳಬೇಡಿ. ಪ್ರತಿಯೊಬ್ಬರು ಓದುವ ರೀತಿ, ಗ್ರಹಿಸುವ ರೀತಿ ಬೇರೆಯದ್ದಾಗಿರುತ್ತದೆ.

ತರಗತಿಗಳು ಆನ್-ಲೈನ್ ಆಗಿರಲಿ, ಆಫ್-ಲೈನ್ ಆಗಿರಲಿ ಕಲಿಕಾ ಪ್ರಕ್ರಿಯೆ ನಡೆದೇ ಇದೆ. ಆದ್ದರಿಂದ, ಈ ಸಮಯದಲ್ಲಿ ಯಾವುದೇ ಗೊಂದಲಗಳಿಲ್ಲದೆ, ಪರೀಕ್ಷೆಯಲ್ಲಿ ಆತ್ಮವಿಶ್ವಾಸದಿಂದ ಉತ್ತರಿಸಿ. ಶುಭವಾಗಲಿ.

(ಲೇಖಕರು: ನಿರ್ದೇಶಕರು, ಸ್ಮಾರ್ಟ್ ಸೆರೆಬ್ರಮ್ ಪ್ರೈ. ಲಿ.)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.