ಇತ್ತೀಚೆಗೆ ಜೀನೋಮ್ ತಂತ್ರಜ್ಞಾನ ಅಥವಾ ಜೀನ್ (ವಂಶವಾಹಿ) ಎಂಜಿನಿಯರಿಂಗ್ ಎನ್ನುವುದು ವಿದ್ಯಾರ್ಥಿಗಳಲ್ಲಿ ಅತ್ಯಂತ ಕುತೂಹಲ ಮೂಡಿಸಿದ ಕೋರ್ಸ್. ವಿಜ್ಞಾನದಲ್ಲಿ ಆಸಕ್ತಿಯಿರುವ ವಿದ್ಯಾರ್ಥಿಗಳನ್ನು ಇದು ತನ್ನತ್ತ ಸೆಳೆಯುತ್ತಿರುವುದು ಮಾತ್ರವಲ್ಲ, ಮುಂದೆ ಹೆಚ್ಚಿನ ಸಂಶೋಧನೆ ಮಾಡಲು, ವಿದ್ವತ್ಪೂರ್ಣ ಲೇಖನಗಳನ್ನು ಅಂತರರಾಷ್ಟ್ರೀಯ ಜರ್ನಲ್‌ಗಳಲ್ಲಿ ಪ್ರಕಟಿಸಿ ಪ್ರಸಿದ್ಧಿ ಪಡೆಯಲು ಕೂಡ ಪೂರಕವಾದ ವಿಷಯ ಎಂದೇ ವಿಶ್ಲೇಷಿಸಲಾಗುತ್ತಿದೆ. ಅಷ್ಟಕ್ಕೂ ಈ ಜೀನ್ ಎಂಜಿನಿಯರಿಂಗ್ ಎಂದರೇನು ಎನ್ನುವ ಕುತೂಹಲ ಕೆಲವರಲ್ಲಿರಬಹುದು.
ಜೀವಿಗಳ ಕೋಶದ ಡಿಎನ್‌ಎಯನ್ನು ಕೃತಕವಾಗಿ ಬದಲಿಸುವ ವಿಧಾನಕ್ಕೆ ಜೀನ್ ಎಡಿಟಿಂಗ್ ಎಂಬ ವ್ಯಾಖ್ಯಾನವಿದೆ. ಇದನ್ನು ತಂತ್ರಜ್ಞಾನ (ಜೆನೆಟಿಕ್ ಎಂಜಿನಿಯರಿಂಗ್ ಟೆಕ್ನಾಲಜಿ) ಗಳ ಮೂಲಕ ಬದಲಾಯಿಸುವ ವಿಧಾನ ಚಾಲ್ತಿಯಲ್ಲಿದೆ. ಒಂದು ಜೀವಿಯ ವಂಶವಾಹಿಯನ್ನು ತೆಗೆದು ಅದನ್ನು ಇನ್ನೊಂದು ಜೀವಿ, ಅದು ಪ್ರಾಣಿ ಅಥವಾ ಸಸ್ಯ ಅಥವಾ ಸೂಕ್ಷ್ಮಾಣು.. ಹೀಗೆ ಯಾವುದೇ ಜೀವಿಗೆ ಸೇರಿಸಿ ಅವುಗಳ ದೈಹಿಕ ಗುಣಲಕ್ಷಣಗಳಲ್ಲಿ ಬದಲಾವಣೆ ತರಬಹುದು. ಜೆನೆಟಿಕ್ ಎಂಜಿನಿಯರಿಂಗ್ ತಂತ್ರಜ್ಞಾನ ಬಳಸಿ ಬದಲಾವಣೆ ಮಾಡಿದ ಜೀವಿಗಳಿಗೆ ‘ಜಿಎಂಒ’ ಎಂದು ಕರೆಯಲಾಗುವುದು. ವೇಗವಾಗಿ ಬೆಳೆಯುವಂತಹ ಮರಗಳು, ದೀರ್ಘಕಾಲ ಇರುವಂತಹ ಟೊಮೆಟೊ ಇದಕ್ಕೆ ಕೆಲವು ಉದಾಹರಣೆಗಳು.
ಔಷಧ ಕ್ಷೇತ್ರದಲ್ಲಿ...
ಹಾಗೆಯೇ ಜೀವಿಗಳನ್ನು ಬಾಧಿಸುವ ಕಾಯಿಲೆಗಳನ್ನು ಈ ತಂತ್ರಜ್ಞಾನದ ಮೂಲಕ ಕಡಿಮೆ ಮಾಡಬಹುದು. ಇಂದಿಗೂ ಕೂಡ ಅಲ್ಝೈಮೇರ್, ಸ್ಕಿಝೋಫ್ರೇನಿಯ, ಆಟಿಸಂನಂತಹ ಕಾಯಿಲೆಗಳು, ಕ್ಯಾನ್ಸರ್‌ನ ಕೆಲವು ವಿಧಗಳಿಗೆ ಚಿಕಿತ್ಸೆಯಿಲ್ಲ. ಏಕೆಂದರೆ ಈ ಕಾಯಿಲೆಗಳಿಗೆ ನಿಖರವಾದ ಕಾರಣಗಳು ತಿಳಿದುಬಂದಿಲ್ಲ. ಅಂದರೆ ಈ ಕೋಶಗಳಲ್ಲಿರುವ ವಂಶವಾಹಿಗಳ ಬಗ್ಗೆ ಇನ್ನೂ ಅಧ್ಯಯನ ನಡೆಸಿ ಒಂದು ನಿರ್ಧಾರಕ್ಕೆ ಬರುವುದು ಸವಾಲಿನ ವಿಷಯವಾಗಿದೆ. ಮನುಷ್ಯ ದೇಹದಲ್ಲಿರುವ 6000ಕ್ಕಿಂತ ಅಧಿಕ ವಂಶವಾಹಿಗಳ ಕಾರ್ಯವೈಖರಿ ಬಗ್ಗೆಯೂ ಅಧ್ಯಯನ ನಡೆಸಲು ಇನ್ನೂ ಸಾಧ್ಯವಾಗಿಲ್ಲ. ಕೆಲವು ಕಾಯಿಲೆಗಳಲ್ಲಿ ಜೆನೆಟಿಕ್ ಬದಲಾವಣೆಗಳ ಪಾತ್ರ ಶೇ 90ರಷ್ಟು ಎಂಬ ನಿರ್ಧಾರಕ್ಕೆ ಬರಲಾಗಿದ್ದು, ವಂಶವಾಹಿಗಳ ಸಂಪೂರ್ಣ ಅಧ್ಯಯನದಿಂದ ಇಂತಹ ಕಾಯಿಲೆಗಳು ಬರದಂತೆ ತಡೆಯಬಹುದು ಅಥವಾ ಬಂದ ನಂತರ ಗುಣಪಡಿಸುವಂತಹ ಔಷಧ ತಯಾರಿಸಬಹುದು.
ಸೂಕ್ಷ್ಮಾಣು ಸೇರಿದಂತೆ ವಿವಿಧ ಜೀವಿಗಳಲ್ಲಿ ಕೃತಕವಾಗಿ ವಂಶವಾಹಿ ಬದಲಾವಣೆ ಮಾಡಿ ಅವುಗಳ ರೂಪಾಂತರಕ್ಕೆ ಪ್ರೇರೇಪಿಸುವುದು ಈ ಜೀನ್ ಎಡಿಟಿಂಗ್ ಅಥವಾ ಎಂಜಿನಿಯರಿಂಗ್‌ನ ಮೂಲತತ್ವ. ಇದು ಆರೋಗ್ಯ, ಔಷಧ ಕ್ಷೇತ್ರವಲ್ಲದೇ ಕೃಷಿ ವಲಯದಲ್ಲೂ ಬಹಳಷ್ಟು ಉಪಯುಕ್ತವಾಗಿದೆ. ಹಾಗೆಯೇ ಕೈಗಾರಿಕಾ ಜೈವಿಕ ತಂತ್ರಜ್ಞಾನದಲ್ಲೂ ಇದನ್ನು ಅನ್ವಯಿಸಲಾಗುತ್ತಿದ್ದು, ಇತ್ತೀಚೆಗೆ ಅತ್ಯಂತ ಜನಪ್ರಿಯವಾಗಿದೆ. ಬಯೊಕೆಮೆಸ್ಟ್ರಿ, ಸೆಲ್‌ಬಯಾಲಜಿ, ಮಾಲಿಕ್ಯೂಲರ್ ಬಯಾಲಜಿ, ಎವಲ್ಯೂಶನರಿ ಬಯಾಲಜಿ ಮೊದಲಾದವುಗಳ ಮೇಲೆ ಜೆನೆಟಿಕ್ ಎಂಜಿನಿಯರಿಂಗ್ ಹೆಚ್ಚು ಒತ್ತು ನೀಡುತ್ತದೆ. ಈ ಎಲ್ಲಾ ಕಾರಣಗಳಿಂದ ಈ ಕೋರ್ಸ್‌ಗೆ ಸಹಜವಾಗಿಯೇ ಬೇಡಿಕೆ ಹೆಚ್ಚಿದೆ.
ಕೋರ್ಸ್‌ಗಳು
ಜೈವಿಕ ತಂತ್ರಜ್ಞಾನ ಕೋರ್ಸ್‌ನಲ್ಲಿ ಈ ಜೆನೆಟಿಕ್ ಎಂಜಿನಿಯರಿಂಗ್ ಎಂಬುದು ವಿಶೇಷ ವಿಭಾಗವಾಗಿದೆ. ಹಾಗೆಯೇ ಇದನ್ನು ಪ್ರತ್ಯೇಕವಾಗಿಯೂ ಅಧ್ಯಯನ ಮಾಡಬಹುದು. ಈ ಕ್ಷೇತ್ರದಲ್ಲಿ ಬಹಳಷ್ಟು ಪದವಿ ಹಾಗೂ ಸ್ನಾತಕೋತ್ತರ ಕೋರ್ಸ್‌ಗಳಿವೆ. ಪಿಯುಸಿ ನಂತರ ಬಿಇ, ಬಿಟೆಕ್ ಮಾಡಬಹುದು. ಹಾಗೆಯೇ ಬಿ.ಎಸ್‌ಸಿ. ಕೂಡ ಓದಬಹುದು. ಪದವಿ ಕೋರ್ಸ್ ನಂತರ ಎಂ.ಟೆಕ್., ಎಂ.ಎಸ್‌ಸಿ. ಮಾಡಬಹುದು.
ಇದರಲ್ಲಿ ವಿಶೇಷ ವಿಭಾಗಗಳಿದ್ದು, ಕ್ಲಿನಿಕಲ್ ಜೆನೆಟಿಕ್ಸ್, ಬಿಹೇವಿಯರಲ್, ಕ್ಲಾಸಿಕಲ್, ಜೀನೋಮಿಕ್ಸ್, ಮಾಲಿಕ್ಯೂಲರ್ ಜೆನೆಟಿಕ್ಸ್, ಜೆನೆಟಿಕ್ ಅಲ್ಗಾರ್ಥಮ್ಸ್ ಮೊದಲಾದವುಗಳನ್ನು ಇಲ್ಲಿ ಹೆಸರಿಸಬಹುದು. ಐಐಟಿಯಲ್ಲಿ ಪ್ರವೇಶ ಪಡೆಯಬೇಕಾದರೆ ಪಿಯುಸಿಯಲ್ಲಿ ವಿಜ್ಞಾನ ಓದಿದ ನಂತರ ಜೆಇಇ ಮೇನ್ಸ್‌ನಲ್ಲಿ ಉತ್ತೀರ್ಣರಾಗಬೇಕು. ಕೆಲವು ಸಂಸ್ಥೆಗಳು ಮೆರಿಟ್ ಮೇಲೆ ನೇರವಾಗಿ ಪ್ರವೇಶ ನೀಡುತ್ತವೆ.
ಕೋರ್ಸ್ ಓದಿದವರಿಗೆ ಬೇಕಾದಷ್ಟು ಉದ್ಯೋಗಾವಕಾಶಗಳಿವೆ. ವೈದ್ಯಕೀಯ, ಔಷಧ ಕ್ಷೇತ್ರ, ಸಂಶೋಧನ ಮತ್ತು ಅಭಿವೃದ್ಧಿ ಸಂಸ್ಥೆಗಳು, ಕೃಷಿ ವಲಯ, ರಾಸಾಯನಿಕ ಕಂಪನಿಗಳಲ್ಲಿ ಉದ್ಯೋಗಕ್ಕೆ ಸೇರಬಹುದು. ಭಾರತದಲ್ಲಿ ಮಾತ್ರವಲ್ಲದೇ, ವಿದೇಶಗಳಲ್ಲೂ ಸಾಕಷ್ಟು ಬೇಡಿಕೆಯಿದೆ. ಸಂಶೋಧನ ವಿಜ್ಞಾನಿಯಾಗಿ ಕೆಲಸ ಮಾಡಬಹುದು. ಇದಕ್ಕೆ ಪಿಎಚ್‌ಡಿ ಮಾಡಿರಬೇಕು. ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಇಮ್ಯುನೋಲಜಿ, ಇನ್‌ಸ್ಟಿಟ್ಯೂಟ್ ಆಫ್ ಜೀನೋಮಿಕ್ ಆ್ಯಂಡ್ ಇಂಟಿಗ್ರೇಟಿವ್ ಬಯಾಲಜಿ ಮೊದಲಾದ ಉನ್ನತ ಸಂಸ್ಥೆಗಳಲ್ಲಿ ಉದ್ಯೋಗಕ್ಕೆ ಸೇರಬಹುದು.
ಐಐಟಿ ಖರಗ್‌ಪುರ, ಐಐಎಸ್‌ಸಿ ಬೆಂಗಳೂರು, ಐಐಟಿ ದೆಹಲಿ, ಐಐಟಿ ಮದ್ರಾಸ್, ಎಐಐಎಂಎಸ್ ದೆಹಲಿ ಮೊದಲಾದ ಕಡೆ ಜೆನೆಟಿಕ್ ಎಂಜಿನಿಯರಿಂಗ್‌ನಲ್ಲಿ ವಿವಿಧ ಕೋರ್ಸ್‌ಗಳು ಲಭ್ಯ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.