ಪರೀಕ್ಷೆಯಲ್ಲಿ ಎಲ್ಲ ಉತ್ತರಗಳು ಬರುತ್ತಿದ್ದರೂ ಸಮಯ ಸಾಲಲಿಲ್ಲ ಎಂಬ ಕಾರಣವೊಂದು ವಿದ್ಯಾರ್ಥಿಗಳಲ್ಲಿ ಇದ್ದೇ ಇರುತ್ತದೆ. ಪರೀಕ್ಷೆಯ ಅವಧಿ, ಬರೆಯಬೇಕಾದ ಉತ್ತರಗಳು, ಇವೆಲ್ಲವನ್ನೂ ಯೋಜಿಸಿಯೇ ಪ್ರಶ್ನೆಪತ್ರಿಕೆಯನ್ನು ವಿನ್ಯಾಸಗೊಳಿಸಲಾಗಿರುತ್ತದೆ. ಆದರೂ ಕೆಲವರಿಗೆ ಸಮಯ ಸಾಲದು ಯಾಕೆ?
ನಿರ್ದಿಷ್ಟ ಸಮಯದಲ್ಲಿ ಪ್ರಶ್ನೆಗಳಿಗೆ ಉತ್ತರಿಸಲು ಬೇಕಾದ ವೇಗದ ಕೊರತೆ ಅವರಲ್ಲಿ ಇರುತ್ತದೆ. ಒಂದು ಪ್ರಶ್ನೆಗೆ ಸುದೀರ್ಘವಾಗಿ ಗೊತ್ತಿರುವುದನ್ನೆಲ್ಲ ಬರೆಯುತ್ತ ಸಮಯ ವ್ಯಯ ಮಾಡಿಕೊಳ್ಳುತ್ತಾರೆ. ಗುರುಗಳೊಂದಿಗೆ 5–6 ಹಾಗೂ ಎಂಟು ಮತ್ತು ಹತ್ತು ಅಂಕಗಳ ಪ್ರಶ್ನೆಗಳಿಗೆ ಎಷ್ಟು ಬರೆಯಬೇಕು, ಏನೆಲ್ಲ ಬರೆಯಬೇಕು ಎಂಬುದನ್ನು ಮೊದಲೇ ಚರ್ಚಿಸಿ, ಗುರುತು ಹಾಕಿಕೊಂಡಿರಬೇಕು.
ನಿಮ್ಮ ತರಗತಿಯ ವಿದ್ಯಾರ್ಥಿಗಳಿಗೆ ಅದೆಷ್ಟು ಪ್ರಶ್ನೆಗಳು ವಿವರಣಾತ್ಮಕವಾಗಿ ಬರುತ್ತವೆ ಎಂಬುದನ್ನು ಮೊದಲೇ ಅಭ್ಯಾಸ ಮಾಡಿಕೊಳ್ಳಬೇಕು. ಮಾದರಿ ಪ್ರಶ್ನೆ ಪತ್ರಿಕೆಗಳಿದ್ದರೆ ಆಗಾಗ ಬರೆದು ಅಭ್ಯಾಸ ಮಾಡಿಕೊಳ್ಳಬೇಕು.
ಸಮಯ ಹೊಂದಾಣಿಕೆಗೆ ಪರಿಹಾರ ಏನು?
* ಮಾದರಿ ಪ್ರಶ್ನೆ ಪತ್ರಿಕೆಗಳನ್ನು ಆಗಾಗ ಬಿಡಿಸುತ್ತಿರಿ.
* ಉತ್ತರಗಳನ್ನು ಬರೆದು ಅಭ್ಯಾಸ ಮಾಡಿ
* ಬರೆಯುವಾಗ ಟೈಮರ್ ಒಂದು ಜೊತೆಗಿರಲಿ
* ಯಾವ ಪ್ರಶ್ನೆಗೆ ಎಷ್ಟು ಸಮಯ, ಎಷ್ಟು ಪದಗಳು ಎಂಬ ವಿವೇಚನೆ ಇರಲಿ
* ಯಾವ ಪ್ರಶ್ನೆ ಪತ್ರಿಕೆಯೂ ಅವಧಿ ಮೀರಿ ಬರೆಯುವಂಥದ್ದು ಇರುವುದಿಲ್ಲ ಎಂಬುದು ನೆನಪಿರಲಿ.
ಯೋಜನೆ, ಯೋಚನೆ, ಸ್ಮರಣೆ ಹಾಗೂ ಬರೆಹ ಇವುಗಳ ನಡುವೆ ಸಮತೋಲನ ತಂದರೆ ಎಲ್ಲವೂ ಸುಲಭ ಎನಿಸುವುದು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.