ADVERTISEMENT

ವಸತಿ ಸಹಿತ ಬಿ.ಟೆಕ್‌.ಗೆ ಉತ್ತಮ ಪ್ರತಿಕ್ರಿಯೆ

ಔದ್ಯೋಗಿಕ ಜಗತ್ತಿಗೆ ಬೇಕಾಗುವ ಕೌಶಲ ರೂಪಿಸುವ ಕೋರ್ಸ್‌

ಎಂ.ಮಹೇಶ
Published 25 ಫೆಬ್ರುವರಿ 2021, 7:31 IST
Last Updated 25 ಫೆಬ್ರುವರಿ 2021, 7:31 IST
ಪ್ರೊ.ಕೆ. ಕರಿಸಿದ್ದಪ್ಪ
ಪ್ರೊ.ಕೆ. ಕರಿಸಿದ್ದಪ್ಪ   

ಬೆಳಗಾವಿ: ಇಲ್ಲಿನ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ (ವಿಟಿಯು) ತನ್ನ ಕ್ಯಾಂಪಸ್‌ನಲ್ಲೇ ಇದೇ ಮೊದಲಿಗೆ ಆರಂಭಿಸಿರುವ ವಸತಿಸಹಿತ ನಾಲ್ಕು ವರ್ಷಗಳ ಬಿ.ಟೆಕ್. ಕೋರ್ಸ್‌ಗಳಿಗೆ ವಿದ್ಯಾರ್ಥಿಗಳಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.

ವಿಶ್ವವಿದ್ಯಾಲಯದ ಕೇಂದ್ರ ಸ್ಥಾನವಾದ ‘ಜ್ಞಾನಸಂಗಮ’ ಕ್ಯಾಂಪಸ್‌ನಲ್ಲಿ ಕಂಪ್ಯೂಟರ್ ಸೈನ್ಸ್ ಅಂಡ್ ಬಿಸಿನೆಸ್ ಸಿಸ್ಟಮ್, ರೊಬೊಟಿಕ್ಸ್ ಆಂಡ್ ಆಟೊಮೇಷನ್ ಹಾಗೂ ಚಿಕ್ಕಬಳ್ಳಾಪುರದ ಜಿಲ್ಲೆಯ ಮುದ್ದೇನಹಳ್ಳಿ ಪ್ರಾದೇಶಿಕ ಕೇಂದ್ರದಲ್ಲಿ ಮೆಕ್ಯಾನಿಕಲ್ ಆಂಡ್ ಸ್ಮಾರ್ಟ್ ಮ್ಯಾನುಫ್ಯಾಕ್ಚರಿಂಗ್ ಕೋರ್ಸ್‌ಗಳನ್ನು ಪರಿಚಯಿಸಲಾಗಿದೆ. ಇದಕ್ಕೆ ಎಐಸಿಟಿಇ (ಅಖಿಲ ಭಾರತ ತಾಂತ್ರಿಕ ಶಿಕ್ಷಣ ಪರಿಷತ್ತು)ಯಿಂದ ಅನುಮೋದನೆ ದೊರೆತಿದೆ.

ಇಂದಿನ ಔದ್ಯೋಗಿಕ ಜಗತ್ತಿಗೆ ತಕ್ಕಂತೆ ಹಾಗೂ ಕೈಗಾರಿಕೆಗಳಿಗೆ ಬೇಕಾದ ಕೌಶಲವನ್ನು ರೂಪಿಸುವ ಉದ್ದೇಶದಿಂದ ಕೈಗಾರಿಕಾ ವಲಯದವರೊಂದಿಗೆ ಸಹಯೋಗದಲ್ಲಿ ಪಠ್ಯಕ್ರಮ ರೂಪಿಸಲಾಗಿದೆ. ಕಂಪ್ಯೂಟರ್ ಸೈನ್ಸ್ ಅಂಡ್ ಬಿಸಿನೆಸ್ ಸಿಸ್ಟಮ್ ಕೋರ್ಸ್‌ಗೆ ಟಿಸಿಎಸ್ (ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್) ಕಂಪನಿಯು ಪಠ್ಯಕ್ರಮವನ್ನು ಸಿದ್ಧಪಡಿಸಿಕೊಟ್ಟಿದೆ. ಉಳಿದೆರಡು ಕೋರ್ಸ್‌ಗಳಿಗೆ ಸಿಎಂಐಟಿ (ಸೆಂಟ್ರಲ್ ಮ್ಯಾನುಫಾಕ್ಚರಿಂಗ್ ಟೆಕ್ನಾಲಜಿ ಸಂಸ್ಥೆ) ಹಾಗೂ ಎಂ–ಟ್ಯಾಬ್ ಕಂಪನಿಗಳು ಸಹಯೋಗ ನೀಡಿವೆ. ಅವುಗಳೊಂದಿಗೆ ವಿಟಿಯು ಶೈಕ್ಷಣಿಕ ಮತ್ತು ಸಂಶೋಧನಾ ಒಪ್ಪಂದ ಮಾಡಿಕೊಂಡಿದೆ.

ADVERTISEMENT

ಹಾಸ್ಟೆಲ್ ಸೌಲಭ್ಯ:

ತಲಾ 30 ಸೀಟುಗಳ ಈ ಕೋರ್ಸ್‌ಗಳು ಬಹುತೇಕ ಭರ್ತಿಯಾಗಿವೆ. ವಿದ್ಯಾರ್ಥಿಗಳಿಗೆ ಕ್ಯಾಂಪಸ್‌ನಲ್ಲೇ ವಸತಿಸಹಿತ ಕಲಿಕೆಗೆ ವ್ಯವಸ್ಥೆ ಕಲ್ಪಿಸಲಾಗಿದೆ. ಸರ್ಕಾರಿ ಕಾಲೇಜುಗಳ ರೀತಿಯಲ್ಲೇ ಅತ್ಯಂತ ಕಡಿಮೆ ಶುಲ್ಕದಲ್ಲಿ ಗುಣಮಟ್ಟದ ಶಿಕ್ಷಣವನ್ನು ಇಲ್ಲಿ ಒದಗಿಸಲಾಗುತ್ತಿದೆ. ಸಿಇಟಿ ಮೂಲಕ ಮೆರಿಟ್ ಆಧರಿಸಿ ವಿದ್ಯಾರ್ಥಿಗಳ ಆಯ್ಕೆ ಪ್ರಕ್ರಿಯೆ ನಡೆದಿದೆ. ವಿದ್ಯಾರ್ಥಿಯು ಬೆಳಗಾವಿಯವರೇ ಆದರೂ ಹಾಸ್ಟೆಲ್‌ನಲ್ಲಿದ್ದುಕೊಂಡೇ ವ್ಯಾಸಂಗ ಮಾಡಬೇಕಾಗುತ್ತದೆ.

‘ಔದ್ಯೋಗಿಕ ರಂಗದ ಕ್ಷಿಪ್ರ ಬೆಳವಣಿಗೆಗೆ ತಕ್ಕಂತೆ ಅವಶ್ಯ ಕೌಶಲದೊಂದಿಗೆ ಎಂಜಿನಿಯರಿಂಗ್ ಪ್ರತಿಭೆಗಳನ್ನು ಸಮಾಜಕ್ಕೆ ನೀಡುವ ಮಹತ್ವಾಕಾಂಕ್ಷೆಯೊಂದಿಗೆ ಪ್ರಥಮ ಬಾರಿಗೆ ಈ ಕೋರ್ಸ್‌ಗಳನ್ನು ಆವರಣದಲ್ಲೇ ಆರಂಭಿಸಲಾಗಿದೆ. ದೇಶದ ಪ್ರಮುಖ ಔದ್ಯೋಗಿಕ ರಂಗದ ದಿಗ್ಗಜರೊಂದಿಗೆ ಮತ್ತು ಕೇಂದ್ರ ಸರ್ಕಾರದ ಆರ್ ಅಂಡ್‌ ಸಂಸ್ಥೆಗಳ ಸಹಭಾಗಿತ್ವ ಪಡೆಯಲಾಗಿದೆ. ಪ್ರಸ್ತುತ ಅವಶ್ಯವಿರುವ ಈ ತಾಂತ್ರಿಕ ವಿಷಯಗಳ ಕಲಿಕೆಯನ್ನು ಕ್ಯಾಂಪಸ್‌ನಲ್ಲೇ ನಡೆಸಲಾಗುತ್ತಿದೆ’ ಎನ್ನುತ್ತಾರೆ ಕುಲಪತಿ ಪ್ರೊ.ಕರಿಸಿದ್ದಪ್ಪ.

ಪರಿಣತ ಕಂಪನಿಗಳೊಂದಿಗೆ ಮಾಡಿಕೊಂಡಿರುವ ಒಪ್ಪಂದದ ಪ್ರಕಾರ ವಿಷಯ ಪರಿಣಿತರು ವಿಶ್ವವಿದ್ಯಾಲಯದ ಅಧ್ಯಾಪಕರಿಗೆ ತರಬೇತಿ ನೀಡುತ್ತಾರೆ. ಅತಿಥಿ ಉಪನ್ಯಾಸಗಳನ್ನು ಆಯೋಜಿಸಿ ಮಾರ್ಗದರ್ಶನ ಮಾಡುತ್ತಿದ್ದಾರೆ. ಇಂಟರ್ನ್‌ಶಿಪ್ ಮತ್ತು ವಿದ್ಯಾರ್ಥಿಗಳ ನಿರಂತರ ಮೌಲ್ಯಮಾಪನಕ್ಕಾಗಿ ವಿಟಿಯು ಜೊತೆ ತೊಡಗಿಸಿಕೊಳ್ಳಲಿವೆ.

ಈ ಸಹಭಾಗಿತ್ವದ ಕೋರ್ಸ್‌ಗಳ ಪಠ್ಯಕ್ರಮವು ವಿದ್ಯಾರ್ಥಿಗಳಿಗೆ ಪ್ರಮುಖ ವಿಷಯಗಳನ್ನು ತಿಳಿಸುವುದಲ್ಲದೆ, ವ್ಯವಸ್ಥಾಪನೆ, ನಿರ್ವಹಣಾ ವಿಜ್ಞಾನ ಮತ್ತು ಮಾನವೀಯ ಮೌಲ್ಯಗಳ ಜ್ಞಾನವನ್ನೂ ನೀಡುವಂತೆ ಕ್ರಮ ಕೈಗೊಳ್ಳಲಾಗಿದೆ. ಸುಸಜ್ಜಿತ ವಸತಿನಿಲಯಗಳ ವ್ಯವಸ್ಥೆ ಇದೆ. ಈ ಮೂರೂ ಕೋರ್ಸ್‌ಗಳಿಗೆ ಸಿಇಟಿ ಮೂಲಕ ಮಾತ್ರ ಪ್ರವೇಶವಿದೆ. ಸರ್ಕಾರಿ ಎಂಜಿನಿಯರಿಂಗ್ ಕಾಲೇಜುಗಳಿಗೆ ನಿಗದಿಪಡಿಸಿದ ಅತ್ಯಂತ ಕಡಿಮೆ ಶುಲ್ಕ ಇರುತ್ತದೆ ಎನ್ನುತ್ತಾರೆ ಅವರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.