ಹೊಚ್ಚ ಹೊಸ ಕಟ್ಟಡ. ಒಳಹೊಕ್ಕರೆ ವಿಶಾಲವಾದ ಸಭಾಂಗಣ. ಸುಸಜ್ಜಿತ ಕೊಠಡಿಗಳು. ಪ್ರತಿ ಕೊಠಡಿಯಲ್ಲಿ ನುಣುಪಾದ ನೆಲ. ವಿನೂತನ ಪೀಠೋಪಕರಣಗಳು ಹಾಗೂ ಹಸಿರು ಬಣ್ಣದ ಬೋರ್ಡ್. ಒಂದೆಡೆ ಶೌಚಾಲಯ ಹಾಗೂ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ. ದುಬಾರಿ ಖಾಸಗಿ ಶಾಲೆಯ ಚಿತ್ರಣದಂತೆ. ಆದರೆ ಇದು ಅಂಥ ಖಾಸಗಿ ಶಾಲೆಗಳಿಗೂ ಸೆಡ್ಡು ಹೊಡೆದಂತೆ ನಿರ್ಮಾಣವಾಗಿರುವ ಸರ್ಕಾರಿ ಶಾಲೆ!
ಹೆಗಡೆ ನಗರದ ಸರ್ಕಾರಿ ಪ್ರಾಥಮಿಕ ಶಾಲೆಯು ರೂಪಾಂತರಗೊಂಡ ಕತೆಯೇ ರೋಚಕ. ಎಂಬೆಸಿ ಗ್ರೂಪ್, ಎಎನ್‍ಝಡ್ ಸಂಸ್ಥೆಗಳು, ಕಲರ್ಸ್ ಆಫ್ ಲೈವ್ ಎಂಬ ಎನ್‍ಜಿಒ ಜೊತೆಗೂಡಿ ಶಿಥಿಲಾವಸ್ಥೆ ತಲುಪಿದ್ದ ಶಾಲೆಗೆ ಹೈಟೆಕ್ ಸ್ಪರ್ಷ ನೀಡಿವೆ. ಕಾರ್ಪೊರೇಟ್ ಕಂಪನಿಗಳ ಸಾಮಾಜಿಕ ಹೊಣೆಗಾರಿಕೆಯಡಿ ಶಾಲೆಯನ್ನು ದತ್ತು ಪಡೆದು ಆಮೂಲಾಗ್ರವಾಗಿ ಬದಲಾವಣೆ ತರಲಾಗಿದೆ. ₹2.86 ಕೋಟಿ ವೆಚ್ಚದಲ್ಲಿ 10 ತಿಂಗಳ ಅವಧಿಯಲ್ಲಿ ಕಾರ್ಪೊರೇಟ್ ಕಟ್ಟಡ ಹೋಲುವ ಶಾಲಾ ಕಟ್ಟಡ ನಿರ್ಮಿಸಿ ಸರ್ಕಾರಕ್ಕೆ ಹಸ್ತಾಂತರ ಮಾಡಲಾಯಿತು.
ಹೆಗಡೆ ನಗರ ಶಾಲೆ
ಹೆಗಡೆ ನಗರದ ಶಾಲೆಯಲ್ಲಿ ಒಂದರಿಂದ 7ನೇ ತರಗತಿವರೆಗೆ 650 ಮಕ್ಕಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಇಷ್ಟೊಂದು ದೊಡ್ಡ ಸಂಖ್ಯೆ ಮಕ್ಕಳಿರುವ ಸರ್ಕಾರಿ ಶಾಲೆಗಳು ನಗರ ವ್ಯಾಪ್ತಿಯಲ್ಲಿ ಕಡಿಮೆಯೇ ಎನ್ನಬೇಕು. ಆರ್ಥಿಕವಾಗಿ ಸಬಲರಲ್ಲದ ಜನರು ತಮ್ಮ ಮಕ್ಕಳ ವಿದ್ಯಾಭ್ಯಾಸಕ್ಕೆ ಇದೀಗ ಈ ಶಾಲೆಯನ್ನೇ ನೆಚ್ಚಿಕೊಂಡಿದ್ದಾರೆ.
ಶಾಲೆಯ ಸ್ಥಿತಿ ಶೋಚನೀಯವಾಗಿತ್ತು. ನೆಲದಲ್ಲಿ ಕುಳಿತುಕೊಳ್ಳಬೇಕಿದ್ದ ಮಕ್ಕಳು ಕಿರಿಕಿರಿ ಎದುರಿಸುತ್ತಿದ್ದರು. ಶೌಚಾಲಯ, ಕುಡಿಯುವ ನೀರಿನ ವ್ಯವಸ್ಥೆ, ಪೀಠೋಪಕರಣ ಹಾಗೂ ಪಾಠೋಪಕರಣಗಳ ಕೊರತೆ ಇತ್ತು. ಇದನ್ನು ಮನಗಂಡ ಎಂಬೆಸಿ, ಎಎನ್‍ಝಡ್ ಸಂಸ್ಥೆಗಳು ವಿದ್ಯಾಭ್ಯಾಸವನ್ನು ಸಹ್ಯಗೊಳಿಸುವ ಪಣ ತೊಟ್ಟವು.
ದರ ಪರಿಣಾಮವೇ ಮಕ್ಕಳಿಗೆ ವಿನೂತನ ಶಾಲಾ ಕಟ್ಟಡ ಹಾಗೂ ಪೂರಕ ಶೈಕ್ಷಣಿಕ ಸೌಲಭ್ಯಗಳು ಸಿಗುವಂತಾಗಿವೆ. ಒಂದರಿಂದ ಐದರವರೆಗೆ ಕನ್ನಡ ಮಾಧ್ಯಮ ಮತ್ತು ಆರರಿಂದ ಎಂಟನೇ ತರಗತಿವರೆಗೆ ಕಳೆದ ನಾಲ್ಕು ವರ್ಷಗಳಿಂದ ಇಂಗ್ಲಿಷ್ ಮಾಧ್ಯಮದಲ್ಲಿ ಬೋಧನೆ ಮಾಡಲಾಗುತ್ತಿದೆ. ಇದೀಗ ಸರ್ಕಾರವು ಒಂದನೇ ತರಗತಿಯಿಂದ ಇಂಗ್ಲಿಷ್ ಕಲಿಸುವ ಕಾರ್ಯಕ್ರಮಕ್ಕೆ ಈ ಶಾಲೆಯು ಆಯ್ಕೆಯಾಗಿದ್ದು, ಈ ವರ್ಷದಿಂದ ಇಲ್ಲಿ ಒಂದನೇ ತರಗತಿಯಿಂದ ಇಂಗ್ಲಿಷ್ ಮಾಧ್ಯಮ ತರಗತಿಗಳು ಆರಂಭವಾಗಲಿವೆ.
ಶುಭ್ರ ತರಗತಿ ವಾತಾವರಣ
ಭವ್ಯ ಕಟ್ಟಡ ನಿರ್ಮಾಣದ ಜೊತೆಗೆ ಉಳಿದ ಸೌಲಭ್ಯ ಒದಗಿಸುವ ಬದ್ಧತೆಯನ್ನೂ ಸಂಸ್ಥೆ ಪ್ರದರ್ಶಿಸಿದೆ. ಶಾಲೆಗೆ ಬೇಕಾದ ಪೀಠೋಪಕರಣಗಳನ್ನು ನೀಡಲಾಗಿದೆ. ಮಕ್ಕಳು ಕುಳಿತುಕೊಳ್ಳುವ ಉತ್ತಮ ಗುಣಮಟ್ಟದ ಹಾಗೂ ವೈಜ್ಞಾನಿಕ ವಿನ್ಯಾಸ ಮಾಡಲಾದ ಡೆಸ್ಕ್‌ಗಳನ್ನು ಎಲ್ಲ ತರಗತಿ ಕೊಠಡಿಗಳಿಗೆ ಒದಗಿಸಲಾಗಿದೆ. ಒಂದನೇ ತರಗತಿಯ ಮಕ್ಕಳು ಕುಳಿತುಕೊಳ್ಳುವ ಚಿಕ್ಕ ಕುರ್ಚಿ ಹಾಗೂ ಗುಂಪಾಗಿ ಕುಳಿತು ಕಲಿಯಲು ಅನುಕೂಲವಾಗುವ ದುಂಡು ಮೇಜುಗಳನ್ನು ಒದಗಿಸಲಾಗಿದೆ. ಈ ಕೊಠಡಿಗಳನ್ನು ನೋಡುವುದೇ ಒಂದು ಚೆಂದ.
ಪ್ರತಿ ಕೋಣೆಯಲ್ಲೂ ಕಸ ಹಾಕಲು ಡಸ್ಟ್‌ಬಿನ್, ದಾಖಲೆ, ಕಡತಗಳನ್ನು ಇಡಲು ಕಬ್ಬಿಣದ ಕಪಾಟು. ಹಸಿರು ಬಣ್ಣದ ಬೋರ್ಡ್ ಇವೆ. ಕುಡಿಯುವ ನೀರಿನ ಎರಡು ಹೊಸ ಫಿಲ್ಟರ್ ಅಳವಡಿಸಲಾಗಿದೆ. ಸ್ವಚ್ಚಂದ ಗಾಳಿ, ಬೆಳಕು ಇರುವ ತರಗತಿ ಕೋಣೆಗಳಿವೆ.
ಮಕ್ಕಳಿಗೆ ಭರಪೂರ ಸೌಲಭ್ಯ
ಪ್ರತಿ ಮಕ್ಕಳಿಗೆ ಸ್ಕೂಲ್ ಕಿಟ್ ನೀಡಲಾಗುತ್ತಿದೆ. ಇದರಲ್ಲಿ ಸ್ಕೂಲ್ ಬ್ಯಾಗ್, ಯೂನಿಫಾರ್ಮ್, ಪುಸ್ತಕಗಳು, ಶೂ ಹಾಗೂ ಸಾಕ್ಸ್ ಸೇರಿವೆ. ಮಕ್ಕಳು ಅನಾರೋಗ್ಯಕ್ಕೆ ತುತ್ತಾಗಬಾರದು ಎಂಬ ಉದ್ದೇಶದಿಂದ ನಿಯಮಿತವಾಗಿ ವೈದ್ಯಕೀಯ ತಪಾಸಣಾ ಶಿಬಿರ ನಡೆಸಲಾಗುತ್ತಿದೆ. ಶೈಕ್ಷಣಿಕ ಪ್ರವಾಸ ಏರ್ಪಡಿಸುವುದು, ಟ್ಯೂಷನ್ ನಡೆಸುವುದು, ಬೇಸಿಗೆ ಶಿಬಿರ ಆಯೋಜಿಸುವುದು, ಕೌಶಲ ವೃದ್ಧಿ ಕಾರ್ಯಕ್ರಮ ಏರ್ಪಡಿಸುವುದು, ಇಂಗ್ಲಿಷ್ ಮಾತನಾಡುವ ತರಗತಿಗಳನ್ನು ನಡೆಸುವ ಮೂಲಕ ಆರ್ಥಿಕವಾಗಿ ಹಿಂದುಳಿದ ಮಕ್ಕಳ ಶ್ರೇಯೋಭಿವೃದ್ಧಿಗೆ ಸಂಸ್ಥೆ ಶ್ರಮಿಸುತ್ತಿದೆ.
‘ಶಾಲಾ ಕಟ್ಟಡವು ಸಮುದಾಯ ಚಟುವಟಿಕೆಗಳಿಗೆ, ಕೆರಿಯರ್ ಕೌನ್ಸೆಲಿಂಗ್‌ಗೆ ಬಳಕೆಯಾಗಬೇಕು. ಸೌಲಭ್ಯ ಬಳಸಿಕೊಂಡಾಗಲೇ ದುಬಾರಿ ವೆಚ್ಚ ಮಾಡಿದ್ದಕ್ಕೂ ಸಾರ್ಥಕವಾಗುತ್ತದೆ’ ಎಂದು ಮೀನಾಕ್ಷಿ ಕೃಷ್ಣ ಬೈರೇಗೌಡ ಹೇಳುತ್ತಾರೆ.
ಶಾಲಾ ಸೌಲಭ್ಯ
* 15 ಶಾಲಾ ಕೊಠಡಿ
* ಮುಖ್ಯೋಪಾಧ್ಯಾಯರ ಕೊಠಡಿ
* ಶಿಕ್ಷಕ ಸಿಬ್ಬಂದಿ ಕೊಠಡಿ
* ಕಂಪ್ಯೂಟರ್ ಲ್ಯಾಬ್
* ಗ್ರಂಥಾಲಯ
* ಬಹುಪಯೋಗಿ ಸಭಾಂಗಣ
* ಕುಡಿಯುವ ನೀರಿನ ಸೌಲಭ್ಯ
* ಬಾಲಕ, ಬಾಲಕಿಯರಿಗೆ ಪ್ರತ್ಯೇಕ ಶೌಚಾಲಯ
ಎಂಬೆಸಿ ಸಂಸ್ಥೆಯ ಶೈಕ್ಷಣಿಕ ಸೇವಾ ಹಾದಿ
ಸೌಲಭ್ಯ ವಂಚಿತ ಮಕ್ಕಳಿಗೆ ಉತ್ತಮ ಶಿಕ್ಷಣ ದೊರಕಿಸಿಕೊಡುವುದು ಎಂಬೆಸಿ ಸಂಸ್ಥೆಯ ದೊಡ್ಡ ಆಸ್ಥೆ. ಈ ನಿಟ್ಟಿನಲ್ಲಿ ಸರ್ಕಾರಿ ಶಾಲೆಗಳನ್ನು ಆಯ್ಕೆ ಮಾಡಿಕೊಂಡು ಅವುಗಳಲ್ಲಿ ಆಮೂಲಾಗ್ರ ಪರಿವರ್ತನೆ ತರುವ ಕೈಂಕರ್ಯದಲ್ಲಿ ಸಂಸ್ಥೆ ತೊಡಗಿದೆ. ಇದರ ಯಶೋಗಾಥೆಗಳು ಒಂದರೆಡಲ್ಲ. ಹೊಸ ಕಟ್ಟಡ ನಿರ್ಮಾಣ, ಕಟ್ಟಡ ಪುನರುಜ್ಜೀವ, ಪರಿಕರ ಪೂರೈಕೆ, ಶೈಕ್ಷಣಿಕ ಸೌಲಭ್ಯಗಳನ್ನು ಒದಗಿಸುವ ಹತ್ತಾರು ಕೆಲಸಗಳು ಈ ಪಟ್ಟಿಯಲ್ಲಿವೆ.
ತೋರಹುಣಸೆ ಗ್ರಾಮದ ಸ್ಟೋನ್‍ಹಿಲ್ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಇದಕ್ಕೊಂದು ಸ್ಪಷ್ಟ ಇದಾಹರಣೆ.ನಿಜಕ್ಕೂ ಇದು ಸರ್ಕಾರಿ ಶಾಲೆಯೇ ಎಂದು ನಿಬ್ಬೆರಗಾಗುವ ರೀತಿಯಲ್ಲಿ ಶಾಲಾ ಕಟ್ಟಡ ನಿರ್ಮಾಣವಾಗಿದೆ. ಶಾಲಾ ಸಲಕರಣೆ, ಮಕ್ಕಳಿಗೆ ವಿವಿಧ ಶೈಕ್ಷಣಿಕ ಸವಲತ್ತುಗಳನ್ನೂ ಕಲ್ಪಿಸಲಾಗಿದೆ.
ಸ್ವಿಸ್ ರೇ ಫೌಂಡೇಷನ್ ಸಹಯೋಗದಲ್ಲಿ ದೇವನಹಳ್ಳಿಯ ಬಾಲಕಿಯರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ತಲೆ ಎತ್ತಿತ್ತು. ಹೆಣ್ಣುಮಕ್ಕಳ ಶಿಕ್ಷಣಕ್ಕಾಗಿ ನಿರ್ಮಾಣವಾದ ಈ ಶಾಲೆಗೆ ಮೂಲಭೂತ ಸೌಲಭ್ಯಗಳೇ ಇರಲಿಲ್ಲ. ಇವೆಲ್ಲವನ್ನೂ ಕಲ್ಪಿಸುವ ಹೊಣೆ ಹೊತ್ತುಕೊಂಡ ಸಂಸ್ಥೆ ಅದನ್ನು ಸಾಧ್ಯವಾಗಿಸಿತು.
ಸೆರ್ನರ್ ಹೆಲ್ತ್‌ಕೇರ್ ಸಹಯೋಗದಲ್ಲಿ ಕಾಕ್ಸ್ ಟೌನ್‍ನಲ್ಲಿ ಸರ್ಕಾರಿ ತಮಿಳು ಹಿರಿಯ ಪ್ರಾಥಮಿಕ ಶಾಲೆ ಮತ್ತು ಕನ್ನಡ ಹಿರಿಯ ಪ್ರಾಥಮಿಕ ಶಾಲೆ, ರೋಟರಿ ಇನ್ನರ್‌ವ್ಹೀಲ್ ಮತ್ತು ಸಿಕೆಸಿ ಸಹಯೋಗದಲ್ಲಿ ದಾಸರಹಳ್ಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ರೋಟರಿ ಆರ್ಚ್‍ರ್ಡ್ ಸಹಯೋಗದಲ್ಲಿ ವಸಂತನಗರದಲ್ಲಿ ಕನ್ನಡ ಮತ್ತು ತಮಿಳು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗಳು ಹೊಸ ರೂಪು ಪಡೆದಿವೆ. ಇವು ಕೆಲವು ಉದಾಹರಣೆಗಳು ಮಾತ್ರ. ತುರ್ತು ಸೌಲಭ್ಯಗಳು ಅಗತ್ಯವಿದ್ದ ಇಂತಹ 23 ಶಾಲೆಗಳನ್ನು ಕೈಗೆತ್ತಿಕೊಂಡು ಹೊಸದೊಂದು ರೂಪ ಕೊಟ್ಟ ಹೆಗ್ಗಳಿಕೆ ಈ ಸಂಸ್ಥೆಯದ್ದು. ಈವರೆಗೆ ಸುಮಾರು 7 ಸಾವಿರ ಮಕ್ಕಳು ಸಂಸ್ಥೆಯಿಂದ ಪ್ರಯೋಜನ ಪಡೆದಿದ್ದಾರೆ.
ಉರ್ದು ಶಾಲೆಯಲ್ಲೂ ಬದಲಾವಣೆಯ ಹೊಸ ಪರ್ವ
ಹೆಗಡೆ ನಗರದ ಸರ್ಕಾರಿ ಇಂಗ್ಲಿಷ್ ಮಾಧ್ಯಮ ಶಾಲೆಯಲ್ಲಿ ಅಭಿವೃದ್ಧಿ ಪರ್ವ ಶುರುವಾಗಿದೆ. ಇದೇ ಶಾಲೆಗೆ ಹೊಂದಿಕೊಂಡಂತೆ ಇರುವ ಸರ್ಕಾರಿ ಉರ್ದು ಶಾಲೆಯನ್ನು ಆಮೂಲಾಗ್ರವಾಗಿ ಪರಿವರ್ತಿಸುವ ಮತ್ತೊಂದು ಬೃಹತ್ ಯೋಜನೆಗೆ ಸಂಸ್ಥೆ ಕೈಹಾಕಿದೆ. ಉರ್ದು ಶಾಲೆಯ ಕೊಠಡಿಗಳು ಪುನರುಜ್ಜೀವನ ಬಯಸುತ್ತಿವೆ. ಪೀಠೋಪಕರಣ ಮೊದಲಾದ ಪರಿಕರ ಇಲ್ಲ. ಇಂತಹ ಸ್ಥಿತಿ ಇದ್ದರೂ ಇಲ್ಲಿ 600 ಮಕ್ಕಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಸ್ವಲ್ಪ ಸಮಯದಲ್ಲೇ ಉರ್ದು ಶಾಲೆಯಲ್ಲೂ ಹೊಸ ಶೈಕ್ಷಣಿಕ ಪರ್ವ ಶುರುವಾಗಲಿದೆ ಎಂದು ಎಂಬೆಸಿ ಸಮೂಹದ ಸಮುದಾಯ ವಿಭಾಗದ ಮುಖ್ಯಸ್ಥೆ ಶೈನಾ ಗಣಪತಿ ಹೇಳಿದರು.
ಈ ಯೋಜನೆಯೂ ಪೂರ್ಣಗೊಂಡ ಬಳಿಕ ಅಕ್ಕಪಕ್ಕದಲ್ಲಿರುವ ಎರಡು ಶಾಲೆಗಳಿಂದ ಸುಮಾರು 1,200 ಮಕ್ಕಳಿಗೆ ಅತ್ಯುನ್ನತ ಶೈಕ್ಷಣಿಕ ಸೌಲಭ್ಯ ನೀಡಿದಂತಾಗುತ್ತದೆ. ಇನ್ನುಮುಂದೆ ಮಕ್ಕಳ ದಾಖಲಾತಿ ಸಂಖ್ಯೆ ಹೆಚ್ಚಾದಲ್ಲಿ ಈ ಯತ್ನಕ್ಕೆ ಬೆಂಬಲ ಸಿಕ್ಕಂತಾಗುತ್ತದೆ ಎನ್ನುತ್ತಾರೆ.
ಸರ್ಕಾರಿ ಶಾಲೆ ದತ್ತು
ಶಿಕ್ಷಣ ಕ್ಷೇತ್ರದ ಸುಧಾರಣೆಗೆ ದುಡಿಯುತ್ತಿರುವ ಬೆಂಗಳೂರಿನ ಬ್ರಿಕ್‍ವರ್ಕ್ ಫೌಂಡೇಷನ್ ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನ ಸರ್ಕಾರಿ ಶಾಲೆಗಳನ್ನು ದತ್ತು ತೆಗೆದುಕೊಂಡು ಅವುಗಳ ಪರಿವರ್ತನೆಗೆ ಮುಂದಾಗಿದೆ. ಶಿರಾಲಿಯಲ್ಲಿರುವ ಸಾಲೆಮನೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ದತ್ತು ಪಡೆದುಕೊಂಡಿದ್ದು ಸುಸಜ್ಜಿತ ವಿಜ್ಞಾನ ಮತ್ತು ಗಣಿತ ಪ್ರಯೋಗಾಲಯ, ಗ್ರಂಥಾಲಯದ ಜತೆ ಮೂಲಸೌಕರ್ಯ ಕಲ್ಪಿಸಿದೆ.
‘ಸ್ವಚ್ಛ ಶಾಲೆ ಅಭಿಯಾನ’ದ ಮೂಲಕ ಹಳೆ ಮತ್ತು ಮುರಿದ ಪೀಠೋಪಕರಣ, ಅನಗತ್ಯ ದಸ್ತಾವೇಜು ತೆಗೆದುಹಾಕಿ ಸ್ವಚ್ಛಗೊಳಿಸುತ್ತಿದೆ. ಶೌಚಾಲಯಗಳನ್ನು ನವೀಕರಿಸಿ, ಹೊಸ ಪೇಂಟ್ ಮಾಡುವುದಲ್ಲದೇ ಹೊಸ ಪೀಠೋಪಕರಣಗಳನ್ನೂ ಶಾಲೆಗೆ ಒದಗಿಸುತ್ತಿದೆ. ಕಂಪೌಂಡ್‍ನಿಂದ ಹಿಡಿದು ಸಂಪೂರ್ಣ ಶಾಲೆಯನ್ನು ನವೀಕರಿಸಲಾಗುತ್ತಿದೆ.
ಭಟ್ಕಳ ತಾಲ್ಲೂಕಿನ ಸರ್ಕಾರಿ ಅನುದಾನಿತ ಜನತಾ ವಿದ್ಯಾಲಯ ಸಂಸ್ಥೆಯ ಹೈಸ್ಕೂಲಿನಲ್ಲಿಯೂ ಬ್ರಿಕ್‍ವರ್ಕ್ ಫೌಂಡೇಷನ್ ಈ ಅಭಿವೃದ್ಧಿ ಚಟುವಟಿಕೆ ಆರಂಭಿಸಿದೆ. ಹಂತಹಂತವಾಗಿ ಇನ್ನಷ್ಟು ಶಾಲೆಗಳನ್ನು ದತ್ತು ತೆಗೆದುಕೊಳ್ಳಲು ಸಂಸ್ಥೆ ನಿರ್ಧರಿಸಿದೆ ಎನ್ನುತ್ತಾರೆ ಅಧ್ಯಕ್ಷೆಸಂಗೀತ ಕುಲಕರ್ಣಿ ಮತ್ತುಪ್ರೋಗ್ರಾಮ್ ಮ್ಯಾನೇಜರ್ ಅಜಯನ್.
ಸರ್ಕಾರಿ ಶಾಲೆ ದತ್ತು
ಶಿಕ್ಷಣ ಕ್ಷೇತ್ರದ ಸುಧಾರಣೆಗೆ ದುಡಿಯುತ್ತಿರುವ ಬೆಂಗಳೂರಿನ ಬ್ರಿಕ್‍ವರ್ಕ್ ಫೌಂಡೇಷನ್ ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನ ಸರ್ಕಾರಿ ಶಾಲೆಗಳನ್ನು ದತ್ತು ತೆಗೆದುಕೊಂಡು ಅವುಗಳ ಪರಿವರ್ತನೆಗೆ ಮುಂದಾಗಿದೆ. ಶಿರಾಲಿಯಲ್ಲಿರುವ ಸಾಲೆಮನೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ದತ್ತು ಪಡೆದುಕೊಂಡಿದ್ದು ಸುಸಜ್ಜಿತ ವಿಜ್ಞಾನ ಮತ್ತು ಗಣಿತ ಪ್ರಯೋಗಾಲಯ, ಗ್ರಂಥಾಲಯದ ಜತೆ ಮೂಲಸೌಕರ್ಯ ಕಲ್ಪಿಸಿದೆ.‘ಸ್ವಚ್ಛ ಶಾಲೆ ಅಭಿಯಾನ’ದ ಮೂಲಕ ಹಳೆ ಮತ್ತು ಮುರಿದ ಪೀಠೋಪಕರಣ, ಅನಗತ್ಯ ದಸ್ತಾವೇಜು ತೆಗೆದುಹಾಕಿ ಸ್ವಚ್ಛಗೊಳಿಸುತ್ತಿದೆ. ಶೌಚಾಲಯಗಳನ್ನು ನವೀಕರಿಸಿ, ಹೊಸ ಪೇಂಟ್ ಮಾಡುವುದಲ್ಲದೇ ಹೊಸ ಪೀಠೋಪಕರಣಗಳನ್ನೂ ಶಾಲೆಗೆ ಒದಗಿಸುತ್ತಿದೆ. ಕಂಪೌಂಡ್‍ನಿಂದ ಹಿಡಿದು ಸಂಪೂರ್ಣ ಶಾಲೆಯನ್ನು ನವೀಕರಿಸಲಾಗುತ್ತಿದೆ.
ಭಟ್ಕಳ ತಾಲ್ಲೂಕಿನ ಸರ್ಕಾರಿ ಅನುದಾನಿತ ಜನತಾ ವಿದ್ಯಾಲಯ ಸಂಸ್ಥೆಯ ಹೈಸ್ಕೂಲಿನಲ್ಲಿಯೂ ಬ್ರಿಕ್‍ವರ್ಕ್ ಫೌಂಡೇಷನ್ ಈ ಅಭಿವೃದ್ಧಿ ಚಟುವಟಿಕೆ ಆರಂಭಿಸಿದೆ. ಹಂತಹಂತವಾಗಿ ಇನ್ನಷ್ಟು ಶಾಲೆಗಳನ್ನು ದತ್ತು ತೆಗೆದುಕೊಳ್ಳಲು ಸಂಸ್ಥೆ ನಿರ್ಧರಿಸಿದೆ ಎನ್ನುತ್ತಾರೆ ಅಧ್ಯಕ್ಷೆಸಂಗೀತ ಕುಲಕರ್ಣಿ ಮತ್ತುಪ್ರೋಗ್ರಾಮ್ ಮ್ಯಾನೇಜರ್ ಅಜಯನ್.
ಶಿಕ್ಷಣ ಸುಧಾರಣೆಗೆ ಕೈಜೋಡಿಸಿದ ಕಾರ್ಪೊರೇಟ್ ವಲಯ
ಸುತ್ತ ಬಹುತೇಕ ಬಡವರೇ ವಾಸವಾಗಿದ್ದಾರೆ. ಜೋಪಡಿಯಿಂದ ಸಿಮೆಂಟ್ ಶೀಟ್ ಚಾವಣಿಯ ಮನೆಗಳು ಮತ್ತೀಗ ಕಾಂಕ್ರೀಟ್ ಕಟ್ಟಡಗಳು. ಇದಿಷ್ಟೇ ಪ್ರಗತಿಯನ್ನು ಕಳೆದ ಎರಡು ದಶಕಗಳಿಂದ ಕಂಡಿದ್ದ ಹೆಗಡೆ ನಗರಕ್ಕೆ ‘ಪರವಾಗಿಲ್ಲ’ ಎನ್ನಬಹುದಾದ ಸರ್ಕಾರಿ ಕನ್ನಡ ಮತ್ತು ಉರ್ದು ಶಾಲೆಗಳಿದ್ದವು. ಅದರ ಕಾಂಪೌಂಡ್ ಸುತ್ತ ಅಕ್ಕಪಕ್ಕದವರು ಹಾಸಿಗೆ, ಬಟ್ಟೆ ಒಣಗಿಸುವುದು, ಮನೆಯ ಕಸ ಮುಸುರೆ ಎಸೆಯುವುದು ಮಾಡುತ್ತ ತಮ್ಮದೇ ಸ್ವತ್ತಾಗಿಸಿಕೊಂಡಿದ್ದರು. ಕಾಲಿಡುವುದಕ್ಕೂ ಹಿಂದೆ ಮುಂದೆ ನೋಡುವಂಥ ಸ್ಥಿತಿ ಇತ್ತು.
ಆಟೋ ಓಡಿಸುವ, ಕೂಲಿ ಕಾರ್ಮಿಕರು ಮತ್ತು ಬೀದಿ ಬದಿ ವ್ಯಾಪಾರ ಮಾಡುವವರ ಮಕ್ಕಳಿಗೆ ಕಲಿಯಬೇಕು ಎನ್ನುವ ಉಮೇದಿಗೇನೂ ಕೊರತೆ ಇರಲಿಲ್ಲ. ಶಾಲೆಯ ಸಂಖ್ಯಾಬಲ 600 ದಾಟಿತ್ತು. ತಕ್ಕಮಟ್ಟಿನ ಶಿಕ್ಷಕ ಸಿಬ್ಬಂದಿಯೂ ಇದೆ. ಶಿಕ್ಷಣಕ್ಕೆ ಬೇಕಾದ ಪೂರಕ ವಾತಾವರಣದ್ದೇ ದೊಡ್ಡ ಕೊರತೆ ಇತ್ತು. ಕೂಗಳತೆ ದೂರದಲ್ಲಿ ತರಹೇವಾರಿ ಭವ್ಯ ಕಟ್ಟಡಗಳ ಖಾಸಗಿ ಶಾಲೆಗಳು, ವರ್ಣರಂಜಿತ ಯೂನಿಫಾರಂ ಹಾಕಿಕೊಂಡು ಓಡಾಡುವ ಮಕ್ಕಳನ್ನು ಕಂಡು ಈ ಪ್ರದೇಶದ ಮಕ್ಕಳು ಒಂದು ರೀತಿಯ ಹಿಂಸೆ ಅನುಭವಿಸುತ್ತಿದ್ದರು. ಇದೀಗ ಅವರು ತಾವೂ ಯಾರಿಗೇನೂ ಕಮ್ಮಿ ಇಲ್ಲ ಎಂದು ಬೀಗುವಂತಾಗಿದೆ. ಇಂಥ ಮಕ್ಕಳ ಮೊಗದಲ್ಲಿ ಸಾರ್ಥಕ ಭಾವ ತುಂಬಿದ್ದು ಎಂಬೆಸಿ ಗ್ರೂಪ್, ಎಎನ್‌ಝಡ್ ಸಂಸ್ಥೆ, ಕಲರ್ಸ್ ಆಫ್ ಲೈವ್ ಎಂಬ ಎನ್‌ಜಿಒ ಸಹಯೋಗದ ಅಂತಃಕರಣ, ಸೇವಾ ಮನೋಭಾವ.
**
ಒಳ್ಳೆಯ ಕ್ಲಾಸ್‌ರೂಂ, ಕ್ಲೀನ್ ಟಾಯ್ಲೆಟ್ ಮತ್ತು ಕುಡಿಯೋದಕ್ಕೆ ಶುದ್ಧ ನೀರು ಇದೆ. ಫ್ಯಾನ್ ಕೂಡ ಇದೆ. ಈ ಬಿಲ್ಡಿಂಗ್ ಅಂತೂ ಸೂಪರ್ ಆಗಿದೆ. ಈಗ ಇಲ್ಲಿ ಕಲಿಯೋದಕ್ಕೆ ಖುಷಿ ಅನಿಸ್ತಿದೆ.
-ಗಣೇಶ್, 5ನೇ ಕ್ಲಾಸ್ ವಿದ್ಯಾರ್ಥಿ
**
ಕ್ಲಾಸ್‌ರೂಂನಲ್ಲಿ ಫ್ಯಾನ್ ಗಾಳಿ ಬರ್ತದೆ. ಬೆಂಚ್‌ಗಳಿವೆ. ಟಾಯ್ಲೆಟ್, ಕುಡಿಯುವ ನೀರಿನ ವ್ಯವಸ್ಥೆ ಬೊಂಬಾಟ್ ಆಗಿದೆ.
-ನಸೀಬಾ, 5ನೇ ಕ್ಲಾಸ್ ವಿದ್ಯಾರ್ಥಿನಿ
**
ವಾಶ್ ಬೇಸಿನ್ ಇದೆ. ಹ್ಯಾಂಡ್‌ವಾಶ್ ಮಾಡಿಕೋಬಹುದು. ವೆಸ್ಟರ್ನ್ ಟಾಯ್ಲೆಟ್ ಇದೆ. ಕುಡಿಯೋದಕ್ಕೆ ಫಸ್ಟ್‌ಕ್ಲಾಸ್ ನೀರಿನ ವ್ಯವಸ್ಥೆ ಇದೆ. ಕ್ಲಾಸ್‌ರೂಂ ಚೆನ್ನಾಗಿವೆ. ಇಲ್ಲಿ ಓದೋದಕ್ಕೆ ಖುಷಿ ಅನಿಸ್ತಿದೆ.
-ಅಬ್ದುಲ್ ಹಮೀದ್, 8ನೇ ಕ್ಲಾಸ್ ವಿದ್ಯಾರ್ಥಿ
**
ಎಂಬೆಸಿ ಸಂಸ್ಥೆಯ ಸಿಬ್ಬಂದಿ ಶಾಲೆಗೆ ಅಗತ್ಯ ಸವಲತ್ತುಗಳನ್ನು ಬಹಳಷ್ಟು ಮುತುವರ್ಜಿ ವಹಿಸಿ ಪೂರೈಸುತ್ತಿದ್ದಾರೆ.
-ಈರಮುನಿಯಪ್ಪ, ಶಾಲೆಯ ಮುಖ್ಯೋಪಾಧ್ಯಾಯ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.