ಸೂಕ್ತ ಕೌಶಲ ಮತ್ತು ಸಾಮರ್ಥ್ಯ ಹೊಂದಿದ ಅಭ್ಯರ್ಥಿಗಳನ್ನು ಉದ್ಯೋಗಕ್ಕೆ ನೇಮಕ ಮಾಡಿಕೊಳ್ಳುವಾಗ ಹಲವು ಕಂಪನಿಗಳು ವಿವಿಧ ಪರಿಕರಗಳನ್ನು ಬಳಸುತ್ತವೆ. ಅದರಲ್ಲಿ ಗುಂಪು ಚರ್ಚೆಯೂ ಒಂದು. ವೈಯಕ್ತಿಕ ಸಂದರ್ಶನಕ್ಕಿಂತ ಹೆಚ್ಚು ನಿಖರವಾಗಿ ಅಭ್ಯರ್ಥಿಯ ಸಂವಹನ, ಬುದ್ಧಿವಂತಿಕೆ, ಸಮಸ್ಯೆಗಳ ನಿರ್ವಹಣೆಯ ಚಾಕಚಕ್ಯತೆ, ಹಾಗೂ ನಾಯಕತ್ವದ ಗುಣಗಳನ್ನು ಮೌಲ್ಯಮಾಪನ ಮಾಡಲು ಗುಂಪು ಚರ್ಚೆ(Group Discussion) ಸಹಕಾರಿ. ಹಾಗಾಗಿ, ಈ ಪರಿಕರವನ್ನು ವ್ಯಾಪಕವಾಗಿ ಬಳಸಲಾಗುತ್ತದೆ.
ಬ್ಯಾಂಕ್‌ಗಳು ಸಿಬ್ಬಂದಿ ನೇಮಕಾತಿಯ ವೇಳೆ ಅಭ್ಯರ್ಥಿಗಳಿಗೆ ಗುಂಪು ಚರ್ಚೆ ಏರ್ಪಡಿಸುತ್ತೇವೆ. ಸರ್ಕಾರಿ ಸಂಸ್ಥೆಗಳು ಹಾಗೂ ಬಹುರಾಷ್ಟ್ರೀಯ ಕಂಪನಿಗಳು ಸಹ ಉದ್ಯೋಗಕ್ಕೆ ಅಭ್ಯರ್ಥಿಗಳನ್ನು ನೇಮಿಸಿಕೊಳ್ಳುವಾಗ, ಸಂದರ್ಶನಕ್ಕೆ ಪೂರ್ವಭಾವಿಯಾಗಿ ಗುಂಪು ಚರ್ಚೆಗೆ ಆಹ್ವಾನಿಸುತ್ತವೆ. ಕ್ಯಾಟ್ (CAT)ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ಎಂಬಿಎ ಕಾಲೇಜುಗಳಲ್ಲಿ ಪ್ರವೇಶ ಪಡೆಯಲಿಕ್ಕೂ ಗುಂಪು ಚರ್ಚೆಯಲ್ಲಿ ಆಯ್ಕೆಯಾಗುವುದು ಅನಿವಾರ್ಯ.
ಸುಮಾರು ಅರ್ಧ ಗಂಟೆ ಅವಧಿಯಲ್ಲಿ ನಡೆಯುವ ಗುಂಪು ಚರ್ಚೆಯಲ್ಲಿ, ನೀಡಲಾದ ವಿಷಯ ಅಥವಾ ಸಮಸ್ಯೆಯನ್ನು ಪರಿಹರಿಸಲು ಅಭ್ಯರ್ಥಿಗಳಿಗೆ ಅವಕಾಶ ನೀಡಲಾಗುತ್ತದೆ. ಕಂಪನಿಗೆ ಇದು ಸಮಯ ಮತ್ತು ಸಂಪನ್ಮೂಲಗಳನ್ನು ಉಳಿಸಿದರೆ, ಅಭ್ಯರ್ಥಿಗೆ ತನ್ನ ವಿಭಿನ್ನ ದೃಷ್ಟಿಕೋನ, ಇತರರೊಂದಿಗೆ ಹೊಂದಾಣಿಕೆ, ಗುಂಪಿನಲ್ಲಿ ಕಾರ್ಯ ನಿರ್ವಹಣೆಯ ವೈಖರಿ ಹಾಗೂ ನಾಯಕತ್ವದ ಗುಣಗಳನ್ನು ಪ್ರದರ್ಶಿಸಲು ಅನುವು ಮಾಡಿಕೊಡುತ್ತದೆ.
ಏಕಕಾಲದಲ್ಲಿ ಅಭ್ಯರ್ಥಿಗಳ ಸಂವಹನ ವಿಧಾನ, ಸೃಜನಶೀಲತೆ, ಇತರರನ್ನು ಆಲಿಸುವ ಮತ್ತು ಪ್ರೋತ್ಸಾಹಿ ಸುವ ರೀತಿ, ತಂಡದೊಡನೆ ಸಹಕರಿಸುವ ಹಾಗೂ ಅದನ್ನು ಮುನ್ನಡೆಸುವ ನಾಯಕತ್ವ, ನಿರ್ಧಾರ ತೆಗೆದುಕೊ ಳ್ಳುವ ಸಾಮರ್ಥ್ಯವನ್ನು ಅಳೆಯುವಲ್ಲಿ ಆಯ್ಕೆ ಸಮಿತಿಯ ಗಮನವಿರುತ್ತದೆ. ಈ ಗುಣಲಕ್ಷಣಗಳಿಂದ ಅಭ್ಯರ್ಥಿಯು ಆಯ್ಕೆ ಸಮಿತಿಯ ಗಮನ ಸೆಳೆಯಬೇಕಾಗುತ್ತದೆ. ಇದರಲ್ಲಿ ಯಶಸ್ವಿಯಾ ಗಲು ಕೆಲವು ತಂತ್ರಗಳಿವೆ. ಅವುಗಳು ಹೀಗಿವೆ.
ಸೂಕ್ತ ತಯಾರಿ: ಗುಂಪು ಚರ್ಚೆಗೆ ಹಾಜರಾಗುವಾಗ ಅಭ್ಯರ್ಥಿಗಳು (ಕಂಪನಿಯ ಉದ್ಯೋಗಕ್ಕೆ ಅಥವಾ ಸರ್ಕಾರಿ ಸಂಸ್ಥೆಗೆ ಸೇರುವವರು) ಕಂಪನಿ ಅಥವಾ ಸರ್ಕಾರಿ ಸಂಸ್ಥೆಗಳ ವಿವರ ಹಾಗೂ ಹುದ್ದೆಯ ಜವಾಬ್ದಾರಿಗಳ ಬಗ್ಗೆ ತಿಳಿದುಕೊಳ್ಳುವುದು ಅತ್ಯವಶ್ಯಕ. ಇಂಥ ವಿವರಗಳು ಸಂಬಂ ಧಿಸಿದ ಸರ್ಕಾರಿ ಸಂಸ್ಥೆ ಅಥವಾ ಕಂಪನಿಯ ಜಾಲತಾಣಗಳಲ್ಲಿ ಲಭ್ಯವಿರುತ್ತವೆ. ಗುಂಪು ಚರ್ಚೆಯಲ್ಲಿ ಕೊಡುವ ವಿಷಯವೂ, ಆ ಇಲಾಖೆ ಅಥವಾ ಕಂಪನಿಗೆ ಸಂಬಂಧಿಸಿದ್ದೇ ಆಗಿರುವ ಸಾಧ್ಯತೆಯೂ ಹೆಚ್ಚು. ಹಾಗಾಗಿ, ಈ ಮಾಹಿತಿಯ ಜೊತೆಗೆ, ನಿಮ್ಮ ವೈಯಕ್ತಿಕ ವಿವರಗಳನ್ನೂ ಮನನ ಮಾಡಿಕೊಳ್ಳಿ.
ಧ್ಯಾನವಿರಲಿ: ಗುಂಪು ಚರ್ಚೆಯ ಆರಂಭದಲ್ಲಿ ನಿಯಮಾವಳಿ ತಿಳಿಸಲಾಗುತ್ತದೆ. ವಿಷಯ ನೀಡಲಾಗುತ್ತದೆ. ಆಯ್ಕೆ ಸಮಿತಿ ನೀಡುವ ನಿರ್ದೇಶನದತ್ತ ಸಂಪೂರ್ಣ ಧ್ಯಾನವಿರಲಿ. ಯಾವುದೇ ಸಂದೇಹವಿದ್ದರೆ, ಮುಕ್ತವಾಗಿ ಪ್ರಶ್ನಿಸಿ ತಿಳಿದುಕೊಳ್ಳಿ. ಕೊಟ್ಟ ವಿಷಯವನ್ನು ಮನನ ಮಾಡಲು ಐದು ನಿಮಿಷ ಸಮಯ ನೀಡಲಾಗುತ್ತದೆ. ನಿಮಗೆ ಹೊಳೆದ ವಿಚಾರಗಳನ್ನು ಹಾಳೆಯಲ್ಲಿ ಬರೆದುಕೊಳ್ಳಿ. ಎಲ್ಲಿಂದ ಆರಂಭಿಸಬೇಕು ಹಾಗೂ ಏನನ್ನು ಹೇಳಬೇಕು ಎನ್ನುವುದನ್ನು ನಿರ್ಧರಿಸಿಕೊಳ್ಳಿ. ಕೊಟ್ಟಿರುವ ವಿಷಯದ ಬಗ್ಗೆ ಮಾಹಿತಿ ಇಲ್ಲದಿದ್ದರೆ ಒತ್ತಡಕ್ಕೆ ಒಳಗಾಗಬೇಡಿ. ಇತರರು ಹೇಳುವುದನ್ನು ಕೇಳಿಸಿಕೊಳ್ಳಿ. ಕೆಲವು ಅಂಶಗಳು ದೊರೆಯುತ್ತವೆ. ಅದನ್ನು ಮುಂದುವರಿಸಿ.
ಅವಕಾಶಕ್ಕೆ ಕಾಯಿರಿ: ಗುಂಪು ಚರ್ಚೆಯಲ್ಲಿ ಎಲ್ಲರಿಗೂ ಅವಕಾಶ ಸಿಗುತ್ತದೆ. ಅದರಲ್ಲಿ ಆಸಕ್ತಿಯಿಂದ ಭಾಗವಹಿಸುವುದು ಮುಖ್ಯ. ಕೆಲವು ಕಂಪನಿಗಳು ಸರದಿಯಲ್ಲಿ ಮಾತನಾಡಲು ಅವಕಾಶ ನೀಡಿದರೆ, ಕೆಲವೆಡೆ ಮುಕ್ತ ಅವಕಾಶವನ್ನು ನೀಡಲಾಗುತ್ತದೆ. ಸರದಿಯ ಪದ್ಧತಿ ಇದ್ದಲ್ಲಿ, ನಿಮ್ಮ ಸರದಿಗಾಗಿ ಕಾಯಿರಿ. ಚರ್ಚೆಯ ನಡುವೆ ಇತರರು ಮಾತನಾಡಲು ಹಿಂಜರಿದರೆ, ಆ ಅವಕಾಶವನ್ನು ಉಪಯೋಗಿಸಿಕೊಳ್ಳಿ. ಅಂತರ್ಮುಖಿಯಾಗಿರುವುದನ್ನು ಆಯ್ಕೆ ಸಮಿತಿಯವರು ಇಷ್ಟಪಡುವುದಿಲ್ಲ. ಆದರೆ, ಇತರರ ಅವಕಾಶವನ್ನು ಕಿತ್ತುಕೊಳ್ಳುವುದು ಮತ್ತು ನೀಡಲಾದ ಸಮಯಕ್ಕಿಂತ ಹೆಚ್ಚು ಮಾತನಾಡುವುದನ್ನು ದಾರ್ಷ್ಟ್ಯವೆಂದು ಪರಿಗಣಿಸಲಾಗುತ್ತದೆ.
ಸಂವಹನದ ರೀತಿ: ನಿಮ್ಮ ಮಾತುಗಳು ಸ್ಪಷ್ಟ ಹಾಗೂ ಸಂಕ್ಷಿಪ್ತವಾಗಿರಲಿ. ಆತ್ಮವಿಶ್ವಾಸದಿಂದ ಕೂಡಿರಲಿ. ನಿಮ್ಮ ಮಾತಿನಲ್ಲಿ ಹೊಸತನ ಹಾಗೂ ಸೃಜನಶೀಲತೆಯಿರಲಿ. ನಿಮ್ಮ ಆಲೋಚನೆಗಳನ್ನು ಬಲವಾಗಿ ಸಮರ್ಥಿಸಿಕೊಳ್ಳಿ. ಮಾತನಾಡುವಾಗ ನಿಮ್ಮ ಭಂಗಿಯ ಬಗ್ಗೆಯೂ ಲಕ್ಷ್ಯವಿರಲಿ.
ಇತರನ್ನು ಆಲಿಸಿ: ಇತರರು ಮಾತನಾಡುವಾಗ ಎಚ್ಚರಿಕೆಯಿಂದ ಆಲಿಸಿ. ಬೇರೆ ಅಭ್ಯರ್ಥಿಗಳು ಮಾತನಾಡುವಾಗ, ಮಧ್ಯ ಪ್ರವೇಶಿಸಬೇಡಿ. ಇತರರು ಬಳಸಿದ ಸಂಗತಿಗಳನ್ನು ಅನಗತ್ಯವಾಗಿ ಪುನರಾವರ್ತಿಸಬೇಡಿ.
ಪ್ರೋತ್ಸಾಹಿಸಿ: ಚರ್ಚೆಯುದ್ದಕ್ಕೂ ಇತರರೊಂದಿಗೆ ಗೌರವಯುತ ವಾಗಿ ವರ್ತಿಸಿ. ಯಾರೊಬ್ಬರ ವಾದ, ಪ್ರತಿವಾದ ನಿಮಗೆ ಇಷ್ಟವಾಗದಿದ್ದರೆ, ಅದು ಚರ್ಚೆಗೆ ಮಾತ್ರ ಸೀಮಿತವಾಗಿರಲಿ. ವೈಯಕ್ತಿಕವಾಗಿ ಯಾರ ವಿರುದ್ಧವೂ ಮಾತನಾಡದಿರಿ. ನಿಮ್ಮ ನಡೆಯಲ್ಲಿ ಸ್ನೇಹಪರತೆ ಎದ್ದು ಕಾಣಲಿ. ಉಳಿದವರನ್ನೂ ಅಭಿವ್ಯಕ್ತಿಸಲು ಪ್ರೋತ್ಸಾಹಿಸಿ. ಪ್ರತಿಯೊಬ್ಬ ಅಭ್ಯರ್ಥಿಯನ್ನೂ ಹೆಸರಿಂದ ಕರೆಯಿರಿ.
ಮಾತನಾಡಲು ಹಿಂಜರಿಯುವವರಿಗೆ, ಮಾತನಾಡುವಂತೆ ಪ್ರೋತ್ಸಾಹಿಸಿ. ಸಮಯ ಮೀರಿ ಮಾತನಾಡುವವರಿಗೆ ಅದನ್ನು ನೆನಪಿಸಿ, ಸಮಯಪ್ರಜ್ಞೆಯನ್ನು ತೋರಿಸಿ. ಒಳ್ಳೆಯ ರೀತಿಯಲ್ಲಿ ಚರ್ಚೆ ಮಾಡುತ್ತಿರುವವರನ್ನು ಅಭಿನಂದಿಸಿ. ಚರ್ಚೆ ಮುಕ್ತಾಯವಾಗುವಾಗ, ಇಡೀ ಚರ್ಚೆಯನ್ನು ವಿಶ್ಲೇಷಿಸಿ, ತಿರುಳನ್ನು ಸಂಕ್ಷಿಪ್ತವಾಗಿ ಹೇಳಿ, ಭಾಗವಹಿಸಿದ ಎಲ್ಲರಿಗೆ ಹಾಗೂ ಆಯ್ಕೆ ಸಮಿತಿಗೆ ವಂದನೆ ತಿಳಿಸಿ. ಹಾಗೆ ಮಾಡುವುದರಿಂದ ನೀವು ಸಂಸ್ಥೆಯನ್ನು ಮುನ್ನಡೆಸುವ ಸಾಮರ್ಥ್ಯವನ್ನು ಪ್ರದರ್ಶಿಸುತ್ತೀರಿ ಹಾಗೂ ಚರ್ಚೆಯಲ್ಲಿ ನಾಯಕರಾಗಿ ಹೊರಹೊಮ್ಮುತ್ತೀರಿ.
ಕೇಂದ್ರ ಬಿಂದುವಾಗಿ: ಚರ್ಚೆಯಲ್ಲಿ ನಿಮ್ಮ ಉಪಸ್ಥಿತಿಯು ಎದ್ದು ಕಾಣುವಂತೆ ನೋಡಿಕೊಳ್ಳುವುದು ಮತ್ತು ನಿಮ್ಮ ಕಡೆಗೆ ಗಮನವನ್ನು ಸೆಳೆಯುವುದು ಬಹಳ ಮುಖ್ಯ. ಆದರೂ, ಇತರ ಅಭ್ಯರ್ಥಿಗಳ ಮೇಲೆ ನಿಮ್ಮ ವಾದವನ್ನು ಹೇರಲು ಹೋಗಬೇಡಿ.
ನೀವು ನೀವಾಗಿರಿ: ಚರ್ಚೆಯುದ್ದಕ್ಕೂ ಗುಂಪಿನಲ್ಲಿ ಸಹಜವಾ ಗಿರಿ. ನಿಮ್ಮ ಸಂವಹನ ಪ್ರಾಮಾಣಿಕವಾಗಿರಲಿ. ಸಭ್ಯ, ಸೌಹಾರ್ದಯುತವಾದ ವರ್ತನೆಯಿರಲಿ. ಆಯ್ಕೆ ಸಮಿತಿಯ ಗಮನ ಸೆಳೆಯಲು, ನಿಮ್ಮದಲ್ಲದ ನಡವಳಿಕೆಯನ್ನು ಪ್ರದರ್ಶಿಸುವುದು ಹಾನಿಯನ್ನುಂಟುಮಾಡುತ್ತದೆ ಎನ್ನುವುದು ನೆನಪಿರಲಿ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.